ಪಾಟ್ನಾ: ಗಂಡು ಮಗುವಾಗಲು ಮಂತ್ರವಾದಿಯ ಸಲಹೆ ಮೇರೆಗೆ ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಬಿಹಾರದ ಬಕ್ಸಾರ್ನಲ್ಲಿ ನಡೆದಿದೆ. ಮಂತ್ರವಾದಿ ಅಜಯ್ ಕುಮಾರ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಲೈಂಗಿಕ ಶೋಷಣೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಾಲಕಿಯರ ತಾಯಿ ಮತ್ತು ಆಕೆಯ ಸಹೋದರಿಗೆ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2012 ರಲ್ಲಿ 14 ಮತ್ತು 16 ವರ್ಷ ವಯಸ್ಸಿನವರಾಗಿದ್ದ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ಪ್ರಾರಂಭವಾಗಿತ್ತು. ಬಾಲಕಿಯರು ಬೆಳೆದ ನಂತರ ತಮ್ಮ ಮೇಲೆ ನಡೆದ ಅತ್ಯಾಚಾರವನ್ನು ಪೊಲೀಸರಿಗೆ ಬಹಿರಂಗಪಡಿಸಿದ್ದಾರೆ. ಬಾಲಕಿಯರ ಪೋಷಕರು ಗಂಡು ಮಗುವಿಗಾಗಿ ಮಂತ್ರವಾದಿಯ ಸಹಾಯವನ್ನು ಕೋರಿದ್ದರು. 2012 ರಲ್ಲಿ ಮಂತ್ರವಾದಿಯ ಸಲಹೆಯಂತೆ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದರು ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಎಂಎಲ್ಎ ಟಿಕೆಟ್ ಕೊಡಿಸೋದಾಗಿ 7 ಕೋಟಿ ರೂಪಾಯಿ ವಂಚನೆ, ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ
ಈ ನಡುವೆ ದಂಪತಿಗೆ ಗಂಡು ಮಗು ಜನನವಾಗಿದೆ. ಇದರ ನಂತರ ವಿಶೇಷ ಧಾರ್ಮಿಕ ಆಚರಣೆಯ ನೆಪದಲ್ಲಿ ಮಂತ್ರವಾದಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಐಪಿಸಿ ಸೆಕ್ಷನ್ 376, 34 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಆರೋಪಿಯನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ್ದು, ದಂಡ ವಿಧಿಸಲಾಗಿದೆ.
ಪ್ರಕರಣವು 2022ರ ಏಪ್ರಿಲ್ 28ರಂದು ದಾಖಲಾಗಿತ್ತು ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. POCSO ನ್ಯಾಯಾಲಯದ ನ್ಯಾಯಾಧೀಶರಾದ ಮಂಕಮೇಶ್ವರ್ ಪ್ರಸಾದ್ ಚೌಬೆ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ಘೋಷಿಸಿದ್ದಾರೆ. ಸಂತ್ರಸ್ತ ಬಾಲಕಿಯರು ತಮ್ಮ ತಂದೆ, ತಾಯಿ ಮತ್ತು ಚಿಕ್ಕಮ್ಮ ಸೇರಿದಂತೆ ಐದು ಜನರ ಮೇಲೆ ಆರೋಪ ಹೊರಿಸಿದ್ದರು.
2011 ರ ಜನಗಣತಿಯ ಮಾಹಿತಿಯ ಪ್ರಕಾರ, ಬಿಹಾರದಲ್ಲಿ ಹೆಣ್ಣು ಮತ್ತು ಗಂಡು ಮಗುವಿನ ಅನುಪಾತವು ಪ್ರತಿ 1000 ಗಂಡುಮಕ್ಕಳಿಗೆ 916 ಹುಡುಗಿಯರು ಇದ್ದಾರೆ.
ವಿಡಿಯೊ ನೋಡಿ: “ಸಾರ್ವಜನಿಕ ಆರೋಗ್ಯ ವ್ಯವಸ್ಥೆ” ಬಲಗೊಂಡಿದ್ದರಿಂದ ಕೇರಳ ಕೋವಿಡ್ ವಿರುದ್ದ ಗೆಲ್ಲಲು ಸಾಧ್ಯವಾಯಿತು – ಶೈಲಜಾ ಟೀಚರ್