ಎಲ್ಲ ಆಧುನಿಕ ಸಮಾಜಗಳಲ್ಲೂ ಫ್ಯಾಸಿಸ್ಟ್-ತೆರನ ಗುಂಪುಗಳು ಅಸ್ತಿತ್ವದಲ್ಲಿವೆ ಮತ್ತು ಅವು ಅಂಚಿನಲ್ಲಿರುವ ಗುಂಪುಗಳಾಗಿ ಉಳಿದಿರುತ್ತವೆ. ಅವುಗಳಿಗೆ ಏಕಸ್ವಾಮ್ಯ ಬಂಡವಾಳವು ಹಣಕಾಸಿನ ನೆರವು ಮತ್ತು ಮಾಧ್ಯಮಗಳ ಬೆಂಬಲವನ್ನು ನೀಡಿದಾಗ ಮಾತ್ರ ಅವು ರಂಗ-ಕೇಂದ್ರದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಈ ವಿದ್ಯಮಾನವು ದೊಡ್ಡ ಬಂಡವಾಳಗಾರರಿಗೆ ಅಗತ್ಯ ಬಂದಾಗ ಮಾತ್ರ ಸಾಧ್ಯವಾಗುತ್ತದೆ. ಫ್ಯಾಸಿಸ್ಟರ ಬೆಳವಣಿಗೆಯನ್ನು “ಅತ್ಯಾಧುನಿಕ” ಏಕಸ್ವಾಮ್ಯ ಬಂಡವಾಳವು ತನ್ನ ಸ್ವಂತ ಲಾಭಕ್ಕಾಗಿ ಒಂದು ಆಧುನಿಕ-ಪೂರ್ವ ಸಾಧನವನ್ನು ಬಳಸಿಕೊಳ್ಳುವ ಸಂಗತಿಯಾಗಿ ನೋಡಬೇಕಾಗುತ್ತದೆ. ಸ್ವತಃ ಭಾರತದಲ್ಲಿಯೇ, ನೂರು ವರ್ಷಗಳಿಂದಲೂ ಆರ್‌ಎಸ್‌ಎಸ್ ಅಸ್ತಿತ್ವ ಹೊಂದಿದ್ದರೂ ಸಹ, ಅದರ ರಾಜಕೀಯ ಮುಖವಾಡವಾದ ಬಿಜೆಪಿಯು 2014ರಲ್ಲಷ್ಟೇ ಕೇಂದ್ರದಲ್ಲಿ ಅಧಿಕಾರಕ್ಕೆ ಏರಲು ಸಾಧ್ಯವಾದದ್ದು, ಅದೂ ಸಹ ದೇಶದ ಅತಿ ದೊಡ್ಡ ಉದ್ಯಮಿಗಳ ಬೆಂಬಲವನ್ನು ಪಡೆದ ನಂತರ ಮಾತ್ರವೇ. ಫ್ಯಾಸಿಸ್ಟ್-ತೆರನ ಮಂದಿಯ ಉದಯವನ್ನು ಒಂದು ಆಧುನಿಕ ವಿದ್ಯಮಾನವಾಗಿ ನೋಡುವ ಕ್ರಮವು ಅದರ ವಿರುದ್ಧವಾಗಿ ನಡೆಸುವ ಹೋರಾಟದ ಯಶಸ್ಸಿನ ದೃಷ್ಟಿಯಿಂದಲೂ ಬಹಳ ಮುಖ್ಯವಾಗುತ್ತದೆ. ಫ್ಯಾಸಿಸಂ
-ಪ್ರೊ. ಪ್ರಭಾತ್ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಫ್ಯಾಸಿಸ್ಟ್ ಶಕ್ತಿಗಳು ವಿಶ್ವಾದ್ಯಂತವೂ ಬೆಳೆಯುತ್ತಿವೆ. ಭಾರತದಲ್ಲಿ ಈ ಫ್ಯಾಸಿಸ್ಟ್ ಶಕ್ತಿಗಳು ಬೆಳೆಯುತ್ತಿವೆ ಮಾತ್ರವಲ್ಲ, ಫ್ಯಾಸಿಸ್ಟ್ ತೆರನ ಹಿಂದುತ್ವವಾದಿಗಳು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳನ್ನು “ಅನ್ಯರು” ಎಂದು ಪರಿಗಣಿಸುವ, ಅವರ ವಿರುದ್ಧ ದ್ವೇಷವನ್ನು ಬಹುಸಂಖ್ಯಾತ ಸಮುದಾಯದಲ್ಲಿ ಹುಟ್ಟುಹಾಕುವ ಮತ್ತು ಸಂವಿಧಾನದಲ್ಲಿ ಕಲ್ಪಿಸಲಾದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಸಮಾಜ ವ್ಯವಸ್ಥೆಯ ಸ್ವರೂಪವನ್ನು ನಾಶಮಾಡಲು ಪ್ರಯತ್ನಿಸುವ ಈ ಹಿಂದೂ-ಪಾರಮ್ಯವಾದದ ಬೆಳವಣಿಗೆಯ ಕಾರಣಗಳನ್ನು ವಿಶ್ಲೇಷಿಸುವಲ್ಲಿ ದೇಶದ ಉದಾರವಾದಿ ಮತ್ತು ಪ್ರಗತಿಪರ ಚಿಂತನೆಯು ಬಹಳಷ್ಟು ಕಾಳಜಿ ವಹಿಸಿದೆ. ಫ್ಯಾಸಿಸಂ
ಈ ವಿದ್ಯಮಾನವು ಬೆಳೆದು ಬಂದ ಬಗ್ಗೆ ಹಲವಾರು ಕಾರಣಗಳನ್ನು ಮಂಡಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಮಕ್ಕಳ ನಡುವೆ ಒಂದು ದ್ವೇಷಭರಿತ ಕೋಮುವಾದಿ ಸಿದ್ಧಾಂತವನ್ನು ಹರಡುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಆರ್‌ಎಸ್‌ಎಸ್ ವಹಿಸಿದ ಬಹು ದೊಡ್ಡ ಮತ್ತು ಅವಿರತ ಶ್ರಮ; ದೇಶದಲ್ಲಿ ಕೋಮು ವಿಭಜನೆಯನ್ನು ಜೀವಂತವಾಗಿಡಲು ನೆರವಾದ ದೇಶ-ವಿಭಜನೆಯ ಪರಂಪರೆ; ವಸಾಹತುಶಾಹಿ ವಿರೋಧಿ ಹೋರಾಟವು ಎತ್ತಿಹಿಡಿದ ಜಾತ್ಯತೀತ ಮನೋಭಾವದ ಶಿಥಿಲತೆ; 400 ವರ್ಷಗಳಷ್ಟು ಹಳೆಯ ಮಸೀದಿಯನ್ನು ಮೊದಲು ಕೆಡವಿ ನಂತರ ಅದೇ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಿದ ಬಾಬ್ರಿ ಮಸೀದಿ ಚಳುವಳಿ; ಮುಂತಾದವುಗಳು. ಫ್ಯಾಸಿಸಂ
ಇದನ್ನೂ ಓದಿ: ರಮೇಶ್ ಕತ್ತಿಯ ಬಂಧನಕ್ಕೆ ಆಗ್ರಹ; ಇಲ್ಲದಿದ್ದರೆ ಅಕ್ಟೋಬರ್ 24ರಂದು ಬೆಳಗಾವಿ ಬಂದ್!
ಈ ಇಡೀ ಚರ್ಚೆಯ ವಿಷಯವೆಂದರೆ ಅದು ಭಾರತದಲ್ಲಿ ಸಮನ್ವಯ ಸಂಸ್ಕೃತಿ ಮತ್ತು ಸಂಪ್ರದಾಯಗಳು ಜನರಲ್ಲಿ ಧಾರ್ಮಿಕ-ಕೋಮು ವಿಭಜನೆಯನ್ನು ಸಂಪೂರ್ಣವಾಗಿ ತೊಡೆದುಹಾಕುವಷ್ಟು ಮಟ್ಟಿಗೆ ಬೆಳೆದಿಲ್ಲ ಎಂಬುದು, ಮತ್ತುವಸಾಹತುಶಾಹಿ ವಿರೋಧಿ ಹೋರಾಟವು ಎತ್ತಿಹಿಡಿದ ಧಾರ್ಮಿಕ-ಕೋಮು ಸಮನ್ವಯ ಹಾಗೂ ಸ್ವಾತಂತ್ರ್ಯದ ನಂತರ ರಚಿಸಿದ ಸಂವಿಧಾನವು ಸಮನ್ವಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅಭಿವ್ಯಕ್ತಪಡಿಸಿದ್ದರೂ ಸಹ, ಜನರಲ್ಲಿ ಇನ್ನೂ ಜೀವಂತವಾಗಿರುವ ಧಾರ್ಮಿಕ-ಕೋಮು ವಿಭಜನೆಯ ಭಾವನೆಗಳನ್ನು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಲು ಹಿಂದುತ್ವವಾದಿಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ,ಈ ಚರ್ಚೆಯು, ಹಿಂದುತ್ವವನ್ನು ಇತಿಹಾಸದಲ್ಲಿ ನೆಲೆಗೊಳಿಸುತ್ತಇದು ಭಾರತದಚಾರಿತ್ರಿಕ ವಿಕಾಸದ ತಳದಲ್ಲಿರುವಒಂದುಪ್ರವೃತ್ತಿಯತ್ತಹಿಂದಕ್ಕೆಧಾವಿಸುತ್ತಿರುವವಿದ್ಯಮಾನ ಎಂದು ನೋಡುತ್ತದೆ.
ಫ್ಯಾಸಿಸಂ ನ ಅಪೂರ್ಣ ವಿವರಣೆ
ಈ ವಿಶ್ಲೇಷಣೆಯು ಒಳನೋಟವುಳ್ಳ ಹಲವು ವಿಷಯಗಳಿಂದ ಕೂಡಿದ್ದರೂ ಸಹ, ಬಹುಮುಖ್ಯವಾಗಿ ಇದು ಅಪೂರ್ಣವೇ. ಮೊಟ್ಟಮೊದಲಿಗೆ, ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ಹಿಂದುತ್ವದ ಉದಯವು ಜಾಗತಿಕ ಫ್ಯಾಸಿಸಂನತ್ತ ಪ್ರವೃತ್ತಿಯ ಭಾಗವಾಗಿದೆ ಎಂಬ ಅಂಶವನ್ನು ಈ ವಿಶ್ಲೇಷಣೆಯು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅರ್ಜೆಂಟೀನಾದಲ್ಲಿ ಮಿಲೇ, ಇಟಲಿಯಲ್ಲಿ ಮೆಲೋನಿ, ಹಂಗೇರಿಯಲ್ಲಿ ಓರ್ಬನ್, ಅಮೆರಿಕದಲ್ಲಿ ಟ್ರಂಪ್, ಭಾರತದಲ್ಲಿ ಮೋದಿ, ಟರ್ಕಿಯಲ್ಲಿ ಎರ್ಡೋಗನ್ ಮತ್ತು ಇಸ್ರೇಲ್‌ನಲ್ಲಿ ನೆತನ್ಯಾಹು (ಈತ ತನ್ನದೇ ಆದ ಒಂದು ಅಸಹ್ಯಕರ ವರ್ಗದಲ್ಲಿದ್ದಾರೆಬುದುಬೇರೆಮಾತು), ಇವರೆಲ್ಲರೂ ಒಂದು ಅಂಶವನ್ನು ಸಮಾನವಾಗಿ ಹೊಂದಿದ್ದಾರೆ ಎಂಬುದು ಮತ್ತು ಜಗತ್ತು ಫ್ಯಾಸಿಸಂನತ್ತ ಆರೋಹಣವಾಗುತ್ತಿರುವ ಒಂದು ಪ್ರವೃತ್ತಿಯ ಭಾಗವಾಗಿದ್ದಾರೆ ಎಂಬುದು ನಿಜ. ಮತ್ತು, ಎಲ್ಲಿ ಫ್ಯಾಸಿಸ್ಟ್‌ರು ಇನ್ನೂ ಅಧಿಕಾರ ಹಿಡಿದಿಲ್ಲವೋ ಅಲ್ಲಿ, ಉದಾ; ಫ್ರಾನ್ಸ್‌ನಲ್ಲಿ ಮರೀನ್ ಲೆ ಪೆನ್ ಮತ್ತು ಜರ್ಮನಿಯಲ್ಲಿ ಎಎಫ್‌ಡಿ, ಅಧಿಕಾರದ ಬಾಗಿಲನ್ನು ತಟ್ಟುವಷ್ಟು ಅಭೂತಪೂರ್ವ ಮಟ್ಟದಲ್ಲಿ ಶಕ್ತಿಶಾಲಿಯಾಗಿದ್ದಾರೆ. ಹಾಗಾಗಿ, ಹಿಂದುತ್ವದ ಇಂದಿನ ಬೆಳವಣಿಗೆಗೆ ಕೇವಲ ಭಾರತಕ್ಕೇನಿರ್ದಿಷ್ಟವಾದ ವಿವರಣೆಯು ನಿಜಕ್ಕೂ ಅಸಮರ್ಪಕವೇ.
ಹಿಂದುತ್ವದ ಬಗೆಗಿನ ಚರ್ಚೆಯು ಎರಡನೆಯ ಅರ್ಥದಲ್ಲಿಯೂ, ಅಂದರೆ, ಹಿಂದುತ್ವವನ್ನು ಯಾವುದೇ ವರ್ಗ ವಿಶ್ಲೇಷಣೆಯಲ್ಲಿ ನೆಲೆಗೊಳಿಸುವುದು ಕಷ್ಟಕರವೇ ಎಂಬ ಅರ್ಥದಲ್ಲಿ, ಅಪೂರ್ಣವೇ. ಸಣ್ಣ ಬೂರ್ಜ್ವಾ ಎಂದು ನಿರೂಪಿಸಲ್ಪಡುವ ಅಂಗಡಿ ಮುಂಗಟ್ಟುಗಳು, ಸಣ್ಣ ಪುಟ್ಟ ವ್ಯಾಪಾರಿಗಳು ಮತ್ತು ಅಂತಹವರು ಒಂದು ಗಮನಾರ್ಹ ಮಟ್ಟದಲ್ಲಿ ಸಾಂಪ್ರದಾಯಿಕವಾಗಿ ಹಿಂದುತ್ವವನ್ನು ಬೆಂಬಲಿಸುವುದು ಕಂಡುಬರುತ್ತದೆ. ಆದ್ದರಿಂದ, ಹಿಂದುತ್ವವಾದಿಗಳು ಅಧಿಕಾರಕ್ಕೆ ಬಂದಾಗ ಅದು ಸಣ್ಣ ಬೂರ್ಜ್ವಾಗಳು ಅಧಿಕಾರವನ್ನು ಹಿಡಿದಿವೆ ಎಂಬುದನ್ನು ಸೂಚಿಸುತ್ತದೆಯೇ? ಹಿಂದುತ್ವವಾದಿಗಳ ಆರೋಹಣವನ್ನು ವರ್ಗ ಪರಿಭಾಷೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸಬಹುದಾದರೂ ಹೇಗೆ?
ಆಧುನಿಕ – ಪೂರ್ವ ದೃಷ್ಟಿ ಕೋನ- ಆಧುನಿಕವರ್ಗದ ನೆರವು
ಈ ಎರಡೂ ಅಪೂರ್ಣ ಅಂಶಗಳನ್ನೂ ನಾವು ಹಿಂದುತ್ವವನ್ನು ಒಂದು ಪಕ್ಕಾ ಆಧುನಿಕ ವಿದ್ಯಮಾನವೆಂದು ಗುರುತಿಸಿದಾಗ ಮಾತ್ರ ತೃಪ್ತಿಕರವಾಗಿ ಪೂರ್ಣಗೊಳಿಸಬಹುದು. ಹಾಗೆ ನೋಡಿದರೆ ನಾವು ಹಿಂದುತ್ವವನ್ನು ಒಂದು ಪಕ್ಕಾ ಆಧುನಿಕ ವಿದ್ಯಮಾನವಾಗಿರುವ ಫ್ಯಾಸಿಸ್ಟ್-ತೆರನ ಆರೋಹಣದ ಭಾರತೀಯ ಆವೃತ್ತಿ ಎಂದು ಗುರುತಿಸಬೇಕಾಗುತ್ತದೆ. ಖಚಿತವಾಗಿ ಹೇಳುವುದಾದರೆ, ಸ್ವತಃ ಈ ಫ್ಯಾಸಿಸ್ಟರು ಖಂಡಿತವಾಗಿಯೂಒಂದು ಆಧುನಿಕ-ಪೂರ್ವ ದೃಷ್ಟಿಕೋನವನ್ನು ಹೊಂದಿರುತ್ತಾರೆ. ತಾರ್ಕಿಕತೆಯ ನಿರಾಕರಣೆ ಮತ್ತು ಸಾಕ್ಷಿ-ಪುರಾವೆಗಳಿಲ್ಲದ ಅಥವಾ ನಿಜಕ್ಕೂ ಸಾಕ್ಷಿ-ಪುರಾವೆಗಳಿಗೆ ವಿರುದ್ಧವಾಗಿರುವ ಕೆಲವು ಚಾರಿತ್ರಿಕ ಎಂದು ಹೇಳಲಾದ ವಿಷಯಗಳಲ್ಲಿ ಅವರ ಅಂಧಶ್ರದ್ಧಾಪೂರ್ವಕ ನಂಬಿಕೆ, ಇವು ಅವರನ್ನು ಆಧುನಿಕ-ಪೂರ್ವ, ವೈಜ್ಞಾನಿಕ-ಪೂರ್ವ ಮನೋಭಾವವವು ಆವರಿಸಿದೆ ಎಂಬುದನ್ನು ಗುರುತಿಸುತ್ತವೆ.
ಇಂತಹ ಎಲ್ಲ ಚಳುವಳಿಗಳನ್ನೂ ಅತ್ಯಂತ ಶಕ್ತಿಶಾಲಿ ಬೂರ್ಜ್ವಾ ವರ್ಗ, ಅಂದರೆ, ಏಕಸ್ವಾಮ್ಯ ಬೂರ್ಜ್ವಾ ವರ್ಗವು ಈಗ ಬೆಂಬಲಿಸುತ್ತಿದೆ ಎಂಬ ಅಂಶವನ್ನು ನಾವು ಗಣನೆಗೆ ತೆಗೆದುಕೊಳ್ಳದ ಹೊರತು, ಬೇರೆ ಯಾವ ಅಂಶವೂ ವಿಶ್ವಾದ್ಯಂತ ಫ್ಯಾಸಿಸ್ಟ್ ಚಳುವಳಿಗಳ ಹಠಾತ್ ಬೆಳವಣಿಗೆಯನ್ನು ವಿವರಿಸುವುದಿಲ್ಲ. ಏಕಸ್ವಾಮ್ಯ ಬಂಡವಾಳದ ಉದಯ ಮತ್ತು ಅದರ ಪ್ರಾಬಲ್ಯವೇ ಒಂದು ಆಧುನಿಕ ವಿದ್ಯಮಾನವೇ ಸರಿ (ಸ್ಪರ್ಧಾಶೀಲ ಬಂಡವಾಳಶಾಹಿಯು ಏಕಸ್ವಾಮ್ಯ ಬಂಡವಾಳಶಾಹಿಯಾಗಿ ಪರಿವರ್ತನೆ ಹೊಂದಿದ ಅವಧಿಯನ್ನು ಇಪ್ಪತ್ತನೇ ಶತಮಾನದ ಆದಿ ಭಾಗವೆಂದು ಲೆನಿನ್ ಗುರುತಿಸಿದ್ದರು). ಏಕಸ್ವಾಮ್ಯ ಬಂಡವಾಳದ ಬೆಂಬಲದಿಂದ ಆರೋಹಣಗೊಳ್ಳುತ್ತಿರುವ ಫ್ಯಾಸಿಸಂನ್ನುಸಹ ಒಂದು ಆಧುನಿಕ ವಿದ್ಯಮಾನವೆಂದೇ ನೋಡಬೇಕಾಗುತ್ತದೆ.
ಇದನ್ನೂ ನೋಡಿ: ಧರ್ಮಸ್ಥಳ | ‘ಒಂದೇ ದಿನ 72 ಶವಗಳ ದಫನ್ ʼ – ಪಂಚಾಯತ್ ದಾಖಲೆಗಳಿಂದ ಬಹಿರಂಗ Janashakthi Media #Dharmasthala
ಎಲ್ಲ ಆಧುನಿಕ ಸಮಾಜಗಳಲ್ಲೂ ಫ್ಯಾಸಿಸ್ಟ್-ತೆರನ ಗುಂಪುಗಳು ಅಸ್ತಿತ್ವದಲ್ಲಿವೆ ಮತ್ತು ಅವು ಅಂಚಿನಲ್ಲಿರುವ ಗುಂಪುಗಳಾಗಿ ಉಳಿದಿವೆ. ಅವುಗಳಿಗೆ ಏಕಸ್ವಾಮ್ಯ ಬಂಡವಾಳವು ಹಣಕಾಸಿನ ನೆರವು ಮತ್ತು ಮಾಧ್ಯಮಗಳ ಬೆಂಬಲವನ್ನು ನೀಡಿದಾಗ ಮಾತ್ರ ಅವು ರಂಗ-ಕೇಂದ್ರದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಈ ವಿದ್ಯಮಾನವು ದೊಡ್ಡ ದೊಡ್ಡ ಬಂಡವಾಳಗಾರರಿಗೆ ಅಗತ್ಯ ಬಂದಾಗ ಮಾತ್ರ ಸಾಧ್ಯವಾಗುತ್ತದೆ. ಆದ್ದರಿಂದ ಫ್ಯಾಸಿಸ್ಟ್-ತೆರನ ಗುಂಪುಗಳನ್ನು ತನ್ನದೇ ಆದ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಏಕಸ್ವಾಮ್ಯ ಬಂಡವಾಳವು ಅವುಗಳೊಂದಿಗೆ ಒಂದು ಪಾಲುದಾರಿಕೆಯನ್ನು ರೂಪಿಸುತ್ತದೆ.
ವರ್ಗ ಪರಿಭಾಷೆಯಲ್ಲಿ ಹೇಳುವುದಾದರೆ, ಫ್ಯಾಸಿಸ್ಟರ ಆಳ್ವಿಕೆಯು, ಏಕಸ್ವಾಮ್ಯ ಬಂಡವಾಳದ, ವಿಶೇಷವಾಗಿ ಏಕಸ್ವಾಮ್ಯ ಬಂಡವಾಳದ ಮುನ್ನುಗ್ಗುವ ಭಂಡ ವಿಭಾಗದ ಒಂದು ನಿರ್ದಿಷ್ಟ ಪ್ರತಿಗಾಮಿ, ಕ್ರೂರ ಮತ್ತು ದಮನಕಾರಿ ಆಳ್ವಿಕೆಯಾಗಿರುತ್ತದೆ. ಕಮ್ಯುನಿಸ್ಟ್ ಅಂತಾರಾಷ್ಟ್ರೀಯದ ಅಧ್ಯಕ್ಷ ಜಾರ್ಜಿ ಡಿಮಿತ್ರೊವ್, ಕಾಮಿಂಟರ್ನ್ ನ ಏಳನೇ ಮಹಾಧಿವೇಶನದಲ್ಲಿ ವ್ಯಕ್ತಪಡಿಸಿದ್ದ ಹಾಗೆ, ಫ್ಯಾಸಿಸ್ಟ್ ಪ್ರಭುತ್ವವು ಹಣಕಾಸು ಬಂಡವಾಳದ ಅತ್ಯಂತ ಪ್ರತಿಗಾಮಿ ವಿಭಾಗಗಳ “ಮುಚ್ಚುಮರೆಯಿಲ್ಲದ, ಭಯೋತ್ಪಾದಕ ಸರ್ವಾಧಿಕಾರ”. ಇದೇ ಧಾಟಿಯಲ್ಲಿ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮಿಕೆಲ್ ಕಲೆಕಿ, ಫ್ಯಾಸಿಸ್ಟ್ ಆಳ್ವಿಕೆಯನ್ನು “ದೊಡ್ಡ ದೊಡ್ಡ ಉದ್ದಿಮೆಗಳು ಮತ್ತು ದುರಹಂಕಾರಿ ಫ್ಯಾಸಿಸ್ಟ್ ವ್ಯಕ್ತಿಗಳ” ನಡುವಿನ ಪಾಲುದಾರಿಕೆಯನ್ನು ಆಧರಿಸಿದ ಒಂದು ಏರ್ಪಾಟು ಎಂದು ಉಲ್ಲೇಖಿಸಿದ್ದರು.
ಏಕಕಾಲದಲ್ಲಿ ಉದಯಿಸಿರುವುದು ಏಕೆ
ಒಂದು ಬಿಕ್ಕಟ್ಟಿನ ಅವಧಿಯಲ್ಲಿ ಬಂಡವಾಳಶಾಹಿಯ ಪ್ರಾಬಲ್ಯವು ಬೆದರಿಕೆಗೆ ಒಳಗಾದಾಗ ದೊಡ್ಡ ದೊಡ್ಡ ಬಂಡವಾಳಗಾರರಿಗೆ ಅಂತಹ ಪಾಲುದಾರಿಕೆಯ ಅಗತ್ಯ ಬರುತ್ತದೆ. ಆಗ ಅವರಿಗೆ ಜನರನ್ನು ವಿಚಲಿತಗೊಳಿಸುವ ಮತ್ತು ತಮಗೆ “ಅನುಕೂಲಕರ”ವಾಗಿರುವ ಒಂದು ಕಥನದ ಅಗತ್ಯವಿರುತ್ತದೆ. ಈ ಕಥನವು ದುಡಿಯುವ ಜನರನ್ನು ವಿಭಜಿಸುತ್ತದೆ. ಹಾಗಾಗಿ, ಅವರು ವ್ಯವಸ್ಥೆಯ ಪ್ರಾಬಲ್ಯಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಲು ಅಸಮರ್ಥರಾಗುತ್ತಾರೆ. ಈ ಫ್ಯಾಸಿಸ್ಟ್ ಗುಂಪುಗಳು ದಮನವನ್ನು ಇಷ್ಟಪಡುವುದು ಮಾತ್ರವಲ್ಲದೆ ಜನರನ್ನು ವಿಚಲಿತಗೊಳಿಸುವ ಮತ್ತು ದುಡಿಯುವ ಜನರನ್ನು ವಿಭಜಿಸುವ ಒಂದು ಕಥನವನ್ನು ಸಮರ್ಥವಾಗಿ ಒದಗಿಸುತ್ತವೆ. ಆದ್ದರಿಂದ, ವ್ಯವಸ್ಥೆಯ ಬಿಕ್ಕಟ್ಟಿನ ಅವಧಿಯಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳು ಅವರೊಂದಿಗೆ ಪಾಲುಗಾರಿಕೆಗೆ ಮುಂದಾಗುತ್ತವೆ.

ಫ್ಯಾಸಿಸಂ 1930ರ ದಶಕದ ಮಹಾ ಕುಸಿತದ ಸಮಯದಲ್ಲಿ ಉತ್ತುಂಗಕ್ಕೇರಿತ್ತು. 2008ರಲ್ಲಿ ಯುಎಸ್‌ನಲ್ಲಿ ವಸತಿ ಗುಳ್ಳೆ ಸಿಡಿದ ನಂತರದ ಅವಧಿಯಲ್ಲಿ ನವ-ಉದಾರವಾದಿ ಬಂಡವಾಳಶಾಹಿಯು ಒಳಗಾಗಿರುವ ಒಂದು ದೀರ್ಘಕಾಲೀನ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಥಗಿತತೆ ಮತ್ತು ಹೆಚ್ಚಿದ ನಿರುದ್ಯೋಗದ ಸನ್ನಿವೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಆರೋಹಣವು ಈಗ ಸಂಭವಿಸುತ್ತಿದೆ. ಈ ಅಂಶವು ವಿಶ್ವದ ಹಲವು ಭಾಗಗಳಲ್ಲಿ ಫ್ಯಾಸಿಸಂಏಕಕಾಲದಲ್ಲಿ ಉದಯಿಸಿರುವುದುಏಕೆಎಂಬುದನ್ನು ವಿವರಿಸುತ್ತದೆ.
ಒಂದು ಮಾದರಿ ಎನಿಸಿದ್ದ ಅಂದಿನ ಫ್ಯಾಸಿಸಂ ಇರಲಿ ಅಥವಾ ಅದರ ಇಂದಿನ ಅವತಾರವೇ ಇರಲಿ, ಅದು ಆಧುನಿಕ-ಪೂರ್ವ ಮನೋಭಾವವನ್ನು ಆವಾಹಿಸುವ ಒಂದು ಆಧುನಿಕ ವಿದ್ಯಮಾನವೇ ಸರಿ. ಈ ಆಧುನಿಕ-ಪೂರ್ವ ಮನೋಭಾವವನ್ನು ಸ್ವತಃ ಫ್ಯಾಸಿಸ್ಟರು ಮೈಗೂಡಿಸಿಕೊಳ್ಳುತ್ತಾರೆ ಮಾತ್ರವಲ್ಲದೆ ಅದನ್ನು ಪ್ರದರ್ಶಿಸುತ್ತಾರೆ ಕೂಡ.ಈ ಮನೋಭಾವವು ವ್ಯಾಪಕವಾಗಿ ಹರಡುತ್ತಿರುವ ದೃಷ್ಟಿಯಿಂದ ಮಾತ್ರವೇ ಫ್ಯಾಸಿಸ್ಟರ ಬೆಳೆವಣಿಗೆಯನ್ನು ಕಾಣುವ ಕ್ರಮವು, ಫ್ಯಾಸಿಸಂ ಬಂಡವಾಳಶಾಹಿಯೊಂದಿಗೆ, ಅದರಲ್ಲೂ ವಿಶೇಷವಾಗಿ ಏಕಸ್ವಾಮ್ಯ ಬಂಡವಾಳದೊಂದಿಗೆ, ಮತ್ತು ಅದೇ ಕಾರಣದಿಂದ ರಾಜಕೀಯ ಅರ್ಥವ್ಯವಸ್ಥೆಯೊಂದಿಗೆ ಹೊಂದಿರುವ ಸಂಬಂಧವನ್ನು ಮರೆತುಬಿಟ್ಟಂತಾಗುತ್ತದೆ. ಆದ್ದರಿಂದ, ಈ ಬೆಳವಣಿಗೆಯನ್ನು “ಅತ್ಯಾಧುನಿಕ” ಏಕಸ್ವಾಮ್ಯ ಬಂಡವಾಳವು ತನ್ನ ಸ್ವಂತ ಲಾಭಕ್ಕಾಗಿ ಒಂದು ಆಧುನಿಕ-ಪೂರ್ವ ಸಾಧನವನ್ನು ಬಳಸಿಕೊಳ್ಳುವ ಸಂಗತಿಯಾಗಿ ನೋಡಬೇಕಾಗುತ್ತದೆ.
ಸ್ವತಃ ಭಾರತದಲ್ಲಿಯೇ, ನೂರು ವರ್ಷಗಳಿಂದಲೂ ಆರ್‌ಎಸ್‌ಎಸ್ ಅಸ್ತಿತ್ವ ಹೊಂದಿದ್ದರೂ ಸಹ, ಅದರ ರಾಜಕೀಯ ಮುಖವಾಡವಾದ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ್ದುದು 2014ರಲ್ಲಿ. ಅದು ಸಾಧ್ಯವಾದದ್ದೂ ಸಹ ದೇಶದ ಅತಿ ದೊಡ್ಡ ಉದ್ಯಮಿಗಳ ಬೆಂಬಲವನ್ನು ಪಡೆದ ನಂತರ ಮಾತ್ರವೇ. ಈ ಫ್ಯಾಸಿಸ್ಟ್ ಸಂಘಟನೆ ಮತ್ತು ಅತಿ ದೊಡ್ಡ ಉದ್ಯಮಿಗಳ ನಡುವಿನ ಈ ಮೈತ್ರಿಯನ್ನು ಆಗುಮಾಡುವಲ್ಲಿ ನರೇಂದ್ರ ಮೋದಿ ವಹಿಸಿದ್ದ ಪಾತ್ರ ಪ್ರಧಾನವಾಗಿತ್ತು. ಪ್ರಧಾನಿ ಹುದ್ದೆಗೆ ಮೋದಿಯವರ ಹೆಸರನ್ನು ಮೊಟ್ಟಮೊದಲಿಗೆ ದೇಶದ ಎಲ್ಲ ದೊಡ್ಡ ದೊಡ್ಡ ಬಂಡವಾಳಗಾರರು ಭಾಗವಹಿಸಿದ ಹೂಡಿಕೆದಾರರ ಒಂದು ಶೃಂಗಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಶೃಂಗಸಭೆಯನ್ನು ಗುಜರಾತ್ ಸರ್ಕಾರವು ಮೋದಿಯವರು ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆಯೋಜಿಸಿತ್ತು.
ಹೋರಾಟದಯಶಸ್ಸಿನದೃಷ್ಟಿಯಿಂದಲೂಮುಖ್ಯ
ಫ್ಯಾಸಿಸ್ಟ್-ತೆರನಮಂದಿಯಉದಯವನ್ನು ಒಂದು ಆಧುನಿಕ ವಿದ್ಯಮಾನವಾಗಿ ನೋಡುವ ಕ್ರಮವು ಅದರ ವಿರುದ್ಧವಾಗಿ ನಡೆಸುವ ಹೋರಾಟದ ಯಶಸ್ಸಿನ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ. ಫ್ಯಾಸಿಸಂನ ಈ ಬೆಳವಣಿಗೆಯು ಒಂದು ವೇಳೆ ಆಧುನಿಕ-ಪೂರ್ವ ಮನೋಭಾವವು ಬದುಕುಳಿದ ಮತ್ತು ಆನಂತರದಲ್ಲಿ ಅದು ಬಲವರ್ಧನೆಗೊಂಡುದರ ಫಲಿತಾಂಶವೇ ಆಗಿದ್ದರೆ, ಆಗ, ಅದರ ವಿರುದ್ಧ ನಡೆಸುವ ರಾಜಕೀಯ ಹೋರಾಟದ ಜೊತೆಯಲ್ಲೇ “ಆಧುನೀಕರಣ”ದತ್ತ ಸಾಗುವ ಚಲನೆಯನ್ನು ನವೀಕರಿಸಬೇಕಾಗುತ್ತದೆ. ಅದಕ್ಕಾಗಿ ನವ-ಉದಾರವಾದವನ್ನು ಹುರುಪಿನಿಂದ ಅನುಸರಿಸಬೇಕಾಗುತ್ತದೆ. ಮತ್ತೊಂದೆಡೆ, ಫ್ಯಾಸಿಸ್ಟ್ ಆರೋಹಣವನ್ನು ಅದು ನವ-ಉದಾರವಾದದ ಬಿಕ್ಕಟ್ಟನ್ನು ನವ-ಉದಾರವಾದಿ ಚೌಕಟ್ಟಿನೊಳಗೆ ಜಯಿಸಲಾಗದ ಅವಧಿಯಲ್ಲಿ ತನ್ನ ಪ್ರಾಬಲ್ಯವನ್ನು ಬಲಪಡಿಸಿಕೊಳ್ಳುವ ಏಕಸ್ವಾಮ್ಯ ಬಂಡವಾಳದಿಂದ ಬೆಂಬಲಿತವಾಗಿದೆ ಎಂಬುದನ್ನು ಪರಿಗಣಿಸಿದರೆ, ಆಗ ಅದರ ವಿರುದ್ಧದ ರಾಜಕೀಯ ಹೋರಾಟವನ್ನು ನವ-ಉದಾರವಾದವನ್ನು ಮೀರುವ ಆರ್ಥಿಕ ಕಾರ್ಯಸೂಚಿಯೊಂದಿಗೆ ನಡೆಸಬೇಕಾಗುತ್ತದೆ.
ನವ-ಉದಾರವಾದವೇ ಸೃಷ್ಟಿಸಿದ ಬಿಕ್ಕಟ್ಟನ್ನು ನಿವಾರಿಸುವ ಒಂದು ಅಗತ್ಯವಾಗಿ ನವ-ಉದಾರವಾದವನ್ನು ಮೀರಿ ಹೋಗದ ಹೊರತು, ಫ್ಯಾಸಿಸ್ಟ್ ಶಕ್ತಿಗಳಿಗೆ ಚುನಾವಣೆಗಳಲ್ಲಿ ಎದುರಾಗುವ ರಾಜಕೀಯ ಸೋಲು ಕೂಡ ಅವರಿಗೆ ಒಂದು ತಾತ್ಕಾಲಿಕ ಹಿನ್ನಡೆಯಾಗಬಹುದಷ್ಟೇ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಮರಳಿದ ರೀತಿಯಲ್ಲಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಏಕೆಂದರೆ, ಫ್ಯಾಸಿಸ್ಟ್‌ರ ಆರೋಹಣಕ್ಕೆ ಕಾರಣವಾದ ಇಕ್ಕಟ್ಟಿನ ಸನ್ನಿವೇಶವನ್ನು ಇನ್ನೂ ಜಯಿಸಲಾಗಿಲ್ಲ. ಆದ್ದರಿಂದ, ಫ್ಯಾಸಿಸ್ಟ್ ಶಕ್ತಿಗಳ ಆರೋಹಣದ ವಿರುದ್ಧದ ಒಂದು ಯಶಸ್ವೀ ಹೋರಾಟಕ್ಕಾಗಿ ಜಾತ್ಯತೀತ, ಪ್ರಜಾಪ್ರಭುತ್ವವಾದೀ ಮತ್ತು ಫ್ಯಾಸಿಸ್ಟ್ ವಿರೋಧೀ ಶಕ್ತಿಗಳ ರಾಜಕೀಯ ಒಗ್ಗೂಡುವಿಕೆ ಮಾತ್ರವೇ ಸಾಕಾಗುವುದಿಲ್ಲ. ನವ-ಉದಾರವಾದವನ್ನು ಮೀರಿ ಹೋಗುವುದನ್ನು ಒಳಗೊಂಡಿರುವ ಒಂದು ಕನಿಷ್ಠ ಆರ್ಥಿಕ ಕಾರ್ಯಕ್ರಮವೂ ಅಗತ್ಯವಾಗುತ್ತದೆ. ಈ ಹೋರಾಟವನ್ನು ಕೆಲವು ನಿರ್ಣಾಯಕ ಅಂಶಗಳೊಂದಿಗಾದರೂ ಆರಂಭಿಸಬೇಕಾಗುತ್ತದೆ.
