ಮೇ 26 ಕ್ಕೆ ಕರಾಳ ದಿನ : ದೆಹಲಿಯತ್ತ ಹೊರಟ ಸಾವಿರಾರು ರೈತರು

ನವದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಮತ್ತೊಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹೌದು ಕೃಷಿ ಕಾನೂನು ವಿರೋಧಿ ಹೋರಾಟ ಆರು ತಿಂಗಳು ಪೂರೈಸುತ್ತಿರುವ ಹಿನ್ನೆಲೆ ರೈತರು ಮೇ 26ರನ್ನು ಕರಾಳ ದಿನವನ್ನಾಗಿ ಆಚರಿಸಲಿದ್ದಾರೆ. ಹೀಗಾಗಿ ಭಾನುವಾರ ಹರ್ಯಾಣದ ಕರ್ನಾಲ್‌ ಮತ್ತು ಪಂಜಾಬ್ ನಿಂದ ಸಾವಿರಾರು ರೈತರು ದೆಹಲಿ ಬಳಿಯ ಸಿಂಘು ಬಾರ್ಡರ್‌ನತ್ತ ಹೊರಟಿದ್ದಾರೆ.

ಬಿಕೆಯು ನಾಯಕ ಗುರ್ನಾಮ್‌ ಸಿಂಗ್ ಚಠೂನಿ ನೇತೃತ್ವದಲ್ಲಿ ರೈತರು ಸಾವಿರಾರು ವಾಹನಗಳಲ್ಲಿ ಕರ್ನಾಲ್‌ನಿಂದ ಹೊರಟಿದ್ದಾರೆ. ತಾವು ದೆಹಲಿ ಗಡಿಗೆ ತಲುಪಿದ ಬಳಿಕ ಅಲ್ಲಿ ಒಂದು ವಾರ ಲಂಗರ್‌ ಸೇವೆ(ಉಚಿತ ಊಟ) ನೀಡಲಿದ್ದೇವೆ ಎಂದು ಚಠೂನಿ ತಿಳಿಸಿದ್ದಾರೆ.

ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಸೂಕ್ತವಾದ ನೇತೃತ್ವ ಸಿಗಲಿ ಎಂಬ ನಿಟ್ಟಿನಲ್ಲಿ ರೈತರು ಈಗಾಗಲೇ ದೆಹಲಿಯತ್ತ ಹೊರಟಿದ್ದಾರೆ ಎಂದೂ ತಿಳಿಸಿದ್ದಾರೆ.

ಕೊರೋನಾ ವೈರಸ್ ಪ್ರಕರಣಗಳು ಏರುತ್ತಿರುವ ಹಿನ್ನೆಲೆ ಹರ್ಯಾಣದಲ್ಲಿ ಸದ್ಯ ಲಾಕ್‌ಡೌನ್ ಹೇರಲಾಗಿದೆ. ಇನ್ನು ಇಲ್ಲಿನ ಸರ್ಕಾರ, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಏರುತ್ತಿರುವ ಕೊರೋನಾ ಪ್ರಕರಣಗಳಿಗೆ ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೇ ಕಾರಣ ಎಂದು ಆರೋಪಿಸಿದೆ. ಸರಕಾರ ರೈತರ ಬೇಡಿಕೆ ಈಡೇರಿಸಿದ್ದರೆ ರೈತರು ಪ್ರತಿಭಟನೆ ಮಾಡುತ್ತಿರಲಿಲ್ಲ. ರೈತರು ಹೋರಾಟ ಬಲಗೊಂಡಿದ್ದು, ಜಾಗತಿಕ ಮಟ್ಟದಲ್ಲಿ ಸರಕಾರಕ್ಕೆ ಅವಮಾನವಾಗಿದೆ. ಪ್ರತಿಭಟನೆ ಹತ್ತಿಕ್ಕಲು ಕೋವಿಡ್ ಹರಡಲು ರೈತರ ಕಾರಣ ಎಂಬೆಲ್ಲ ಅಪಪ್ರಚಾರ ಮಾಡುತ್ತಿದೆ ಎಂದರು.

ಕೆಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ರೈತರು ಕಳೆದ ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ MSP ಗ್ಯಾರೆಂಟಿ ಬಗ್ಗೆಯೂ ಹೊಸ ಕಾನೂನು ರೂಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವಾಗಿ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದಿದೆ. ರೈತರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮನಸ್ಸು ಮಾಡದ ಕಾರಣ ಪ್ರತಿಭಟನೆ ಮುಂದುವರೆದಿದೆ.

ಸರಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ರೈತರ ಜೊತೆ ಮಾತುಕತೆ ನಡೆಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿದೆ. ಕರ್ನಾಟಕದಲ್ಲೂ 26 ರಂದು ಕರಾಳದಿನ ಆಚರಿಸಲು ರೈತ ಸಂಘಟನೆಗಳು ನಿರ್ಧರಿಸಿವೆ.

Donate Janashakthi Media

Leave a Reply

Your email address will not be published. Required fields are marked *