ನವದೆಹಲಿ : ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಲು ಹೊರಟಿರುವ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ನವೆಂಬರ್ 26ರಿಂದ ಆರಂಭವಾದ ಪ್ರತಿಭಟನಾ ಧರಣಿ ಇಂದಿಗೆ 100ನೇ ದಿನಕ್ಕೆ ಕಾಲಿಟ್ಟಿದೆ.
ರೈತರು ಚಳಿ, ಮಳೆ ಎನ್ನದೆ ಸತತವಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ ಕೇಂದ್ರ ಸರಕಾರ ಬೆಲೆ ನೀಡದೆ ಇರುವುದು ರೈತರು ಮತ್ತಷ್ಟು ಆಕ್ರೋಶಕ್ಕೆ ಕಾರಣರಾಗಿ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದುವರೆಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನಾ ಆಂದೋಲನವನ್ನು ತೀವ್ರಗೊಳಿಸಿದ್ದು ʻಕಪ್ಪು ದಿನʼವನ್ನಾಗಿ ಆಚರಿಸಿತು. ಇಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕುಂಡ್ಲಿ-ಮನೇಸರ್-ಪಾಲ್ವಾಲ್ (ಕೆಎಂಪಿ) ಎಕ್ಸ್ಪ್ರೆಸ್ ಹೆದ್ದಾರಿಯನ್ನು ತಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಾವಿರಾರು ಸಂಖ್ಯೆ ರೈತರು ತಮ್ಮ ಟ್ರ್ಯಾಕ್ಟರ್ ಮತ್ತು ಇತರೆ ವಾಹನಗಳನ್ನು ಏಕ್ಸ್ಪ್ರೆಸ್ವೇ ನಲ್ಲಿ ಅಡ್ಡಗಟ್ಟಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಹರಿಯಾಣದ ಸೋನಿಪತ್ನ ಕುಂಡ್ಲಿಯಲ್ಲಿ ವೆಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇಯನ್ನು ರೈತರು ನಿರ್ಬಂಧಿಸಿದ್ದಾರೆ.
ಉಪವಾಸ ಸತ್ಯಾಗ್ರಹದಲ್ಲಿ ಕುಳಿತಿರುವ ರೈತರು ಮತ್ತು ಗುರುಗ್ರಾಮ್ ಸಂಯುಕ್ತ ಕಿಸಾಸ್ ಮೋರ್ಚಾದ ಕಾರ್ಯಕರ್ತರು ಕಪ್ಪು ಪಟ್ಟಿಗಳನ್ನು ಧರಿಸಿ ಪ್ರತಿಭಟನೆ ತೀವ್ರಗೊಳಿಸಿದರು.ನಮ್ಮ ಪ್ರತಿಭಟನೆ ಶಾಂತಿಯುವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಆಯೋಜಿಸಲಾಗಿದೆ. ನಮ್ಮದು ರೈತ ವಿರೋಧಿ ಸರ್ಕಾರದ ವಿರುದ್ಧ ಪ್ರತಿಭಟನೆಯಾಗಿದೆ ಎಂದು ರೈತರ ಹೋರಾಟದಲ್ಲಿ ಭಾಗವಹಿಸಿರುವ ಹಲವು ಸಂಘಟನೆಗಳ ಮುಖಂಡರು ತಿಳಿಸಿದರು.
ರೈತರ ಪ್ರತಿಭಟನಾ ಆಂದೋಲನ ಪ್ರಾರಂಭವಾದಾಗಿನಿಂದಲೂ ಗುರುಗ್ರಾಮ ಜಿಲ್ಲೆಯು ಶಾಂತಿಯುತವಾಗಿದೆ. ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿ ಮಾಡುವುದಲ್ಲ. ಇದುವರೆಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ರೈತರ ಬೇಡಿಕೆಗಳು ಪರಿಹಾರ ಆಗುವವರೆಗೂ ನಮ್ಮ ಬೃಹತ್ ಪ್ರತಿಭಟನಾ ಪ್ರದರ್ಶನ ಮುಂದುವರೆಯಲಿದೆ ಎಂದು ಎಸ್ಕೆಎಂ ಅಧ್ಯಕ್ಷ ಚೌಧರಿ ಸಂತೋಖ್ ಸಿಂಗ್ ಹೇಳಿದರು.
ರೈತರು ಮತ್ತು ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಮೂಲ ಪ್ರಶ್ನೆಯ ಬಗ್ಗೆ ಸರಕಾರದಿಂದ ಯಾವುದೇ ಪರಿಹಾರ ದೊರಕದಿಂದಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ದೆಹಲಿ ಸುತ್ತಲಿನ ಗಡಿಗಳಲ್ಲಿ ಪ್ರತಿಭಟನೆಯೊಂದಿಗೆ ವಿವಿಧ ಶಿಬಿರಗಳನ್ನು ಸಹ ನಡೆಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಗೆ ಕಾನೂನಾತ್ಮಕವಾದ ಶಾಸನ ರೂಪಿಸುವಂತೆ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ತಿಂಗಳಿನಿಂದ ದೆಹಲಿ ಗಡಿಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರದ ಮೂರು ಭಾಗಗಳಿಂದ ಪ್ರತಿಭಟನಾ ಧರಣಿಗೆ ಸಾವಿರಾರು ಸಂಖ್ಯೆ ರೈತರು ಜಮಾವಣೆಗೊಂಡಿದ್ದು, ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಅದರಲ್ಲೂ ದೆಹಲಿಯ ಅಕ್ಕಪಕ್ಕದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರು ಆಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದಾರೆ.
ಕೇಂದ್ರ ಸರ್ಕಾರ ಎಲ್ಲಿಯತನಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಹೋರಾಟವನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ರೈತರು ಕೂಡ ಪಟ್ಟು ಹಿಡಿದಿದ್ದಾರೆ.
ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರು ರೈತರ ಬೇಡಿಕೆ ಈಡೇರುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಸರಕಾರವು ನಮ್ಮ ಮಾತುಗಳನ್ನು ಆಲಿಸಲೇಬೇಕು. ಇಲ್ಲದಿದ್ದರೆ ನಾವು ಈ ಸ್ಥಳದಿಂದ ಕದಲುವುದಿಲ್ಲ ಎಂದು ಹೇಳಿದರು.
ಕೆಎಂಪಿ ಎಕ್ಸ್ಪ್ರೆಸ್ ವೇ ನಿರ್ಬಂಧಿಸುವ ರೈತರ ಪ್ರತಿಭಟನೆಯ ತೀವ್ರತೆಯಿಂದಾಗಿ ಗುರುಗ್ರಾಮ್ ಪೊಲೀಸರು ತಮ್ಮ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿದರಲ್ಲದೆ, ಪೊಲೀಸ್ ಸಹಾಯಕ ಆಯುಕ್ತರು (ಎಸಿಪಿಗಳು), ಪೊಲೀಸ್ ಉಪ ಆಯುಕ್ತರು (ಡಿಸಿಪಿಗಳು) ಪ್ರತಿಭಟನೆ ಸುತ್ತಲಿನ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗುವುದು ತೀವ್ರಗೊಳಿಸಿದ್ದಾರೆ. ಎಕ್ಸ್ಪ್ರೆಸ್ ವೇ ಬಳಿ ನೂರಾರು ಪೊಲೀಸ್ ಸಿಬ್ಬಂದಿಗಳು ಲಾಠಿಗಳಿಂದ ಶಸ್ತ್ರಸಜ್ಜಿತರಾಗಿದ್ದಾರೆ. ಅಲ್ಲದೇ ಅಗ್ನಿಶಾಮಕ ವಾಹನಗಳು, ಅಂಬೂಲೆನ್ಸ್ ವಾಹನಗಳು ಸಹ ನಿಯೋಜನೆಯಾಗಿದ್ದವು.