ಪಿರಿಯಾಪಟ್ಟಣ: ಮಾರ್ಚ್ 7ರಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ಸ್ಥಾಪಿಸಿರುವ ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ಖಂಡಿಸಿ ಖರೀದಿ ಕೇಂದ್ರದ ಟೋಕನ್ ನೀಡುವ ಕಚೇರಿಯ ಬಳಿ ರೈತರು ಜಮಾಯಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದೂ, ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರಲ್ಲದೆ, ಅವ್ಯವಸ್ಥೆ ಸರಿಪಡಿಸುವವರೆಗೂ ಖರೀದಿ ನಿಲ್ಲಿಸುವಂತೆ ಪಟ್ಟುಹಿಡಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ನಿಸರ್ಗ ಪ್ರಿಯ ಮತ್ತು ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ ರೈತರ ಮನವಿ ಆಲಿಸಿದರು.
‘ಖರೀದಿ ಕೇಂದ್ರದಲ್ಲಿ ಕ್ವಿಂಟಲ್‌ಗೆ 2-4 ಕೆಜಿ ರಾಗಿಯನ್ನು ರೈತರಿಂದ ಕಡಿತ ಮಾಡುತ್ತಿದ್ದುದ್ದಾರೆ ಎಂದು ಆರೋಪಿಸಿದ ರೈತರು, ಎಪಿಎಂಸಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿಲ್ಲದಿರುವುದು, ಶೌಚಾಲಯ ಅಶುಚಿತ್ವ, ವೇಬ್ರಿಡ್ಜ್ ಇಲ್ಲದಿರುವುದು, ಮನಬಂದಂತೆ ರೈತರಿಗೆ ಟೋಕನ್ ನೀಡುವುದರಿಂದ ಹೆಚ್ಚಿನ ರೈತರು ಒಟ್ಟಿಗೆ ರಾಗಿಯನ್ನು ಮಾರುಕಟ್ಟೆಗೆ ತಂದಿದ್ದು, ಇದರಿಂದ ರೈತರು ಎರಡು ಮೂರು ದಿನ ಟ್ರ್ಯಾಕ್ಟರ್ ಮತ್ತು ಗೂಡ್ಸ್ ವಾಹನಗಳಿಗೆ ಬಾಡಿಗೆತೆತ್ತು ಇಲ್ಲೇ ಕಾಯುವಂತಾಗಿದೆ’ ಎಂದು ದೂರಿದರು.
ಇದನ್ನೂ ಓದಿ: ದ್ವೇಷ ರಾಜಕೀಯದ ವಿರುದ್ಧ ಮಹಿಳಾ ಚಳುವಳಿಗಳು ಬಲಗೊಳ್ಳಬೇಕು: ತೀಸ್ತಾ ಸೆಟಲ್ವಾಡ್
‘ಮೂಟೆ ಹೊರುವ ಕಾರ್ಮಿಕರು ಪ್ರತಿ ಮೂಟೆಗೆ ₹ 30 ಅನ್ನು ರೈತರಿಂದ ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ. ಟೋಕನ್ ನೀಡುವುದಾಗಿ ನಮ್ಮನ್ನು ಕರೆಸಿಕೊಂಡಿ ಆದರೆ ಟೋಕನ್ ನೀಡದೆ ಸತಾಯಿಸಲಾಗುತ್ತಿದೆ, ಕಳೆದ ಒಂದು ವಾರದಿಂದ ಟೋಕನ್ ನೀಡಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.
‘ಮೊದಲು ಇಲ್ಲಿರುವ ರಾಗಿ ಖರೀದಿಸಿ ನಂತರ ರೈತರಿಗೆ ಟೋಕನ್ ನೀಡಿ, ನಾಳೆ ರೈತರು ರಾಗಿ ತರುವುದು ಬೇಡ ಎಂದಾದರೆ ಮೊದಲೇ ಸೂಚಿಸಿ’ ಎಂದರು.
ಸ್ಥಳದಲ್ಲಿದ್ದ ರೈತರೊಬ್ಬರು ‘ಟೋಕನ್ ನೀಡಿರುವ ರೈತರ ಮೊಬೈಲ್ ನಂಬರ್ ಸಹಿತ ಮಾಹಿತಿ ಅಧಿಕಾರಿಗಳ ಬಳಿ ಇಲ್ಲ, ಇವರು ಹೇಗೆ ರೈತರಿಗೆ ಮಾಹಿತಿ ನೀಡುತ್ತಾರೆ’ ಎಂದು ಪ್ರಶ್ನಿಸಿದರು.
ತಹಶೀಲ್ದಾರ್ ಮನವಿಯ ನಂತರ ರೈತರು ಪ್ರತಿಭಟನೆ ಸ್ಥಗಿತಗೊಳಿಸಿದರು.
ಪ್ರತಿಭಟನೆಯಲ್ಲಿ ಕಗ್ಗುಂಡಿರಾಜು, ಕೃಷ್ಣೆಗೌಡ, ಮಂಜುನಾಥ್, ಕೃಷ್ಣ, ರಮೇಶ್, ಕೃಷ್ಣ, ಮಂಜುನಾಥ್, ನಂದೀಶ್ ಭಾಗವಹಿಸಿದ್ದರು.
ಖರೀದಿ ಅಧಿಕಾರಿ ಶಾಂತಾ ಮಾತನಾಡಿ ‘ರೈತರು ಸರ್ಕಾರ ನಿಗದಿಪಡಿಸಿರುವ ಮಾನದಂಡದಂತೆ ರಾಗಿಯನ್ನು ತರುತ್ತಿಲ್ಲ. ಆದ್ದರಿಂದ ಕ್ವಿಂಟಲ್‌ಗೆ 4 ಕೆಜಿ ಕಡಿತ ಮಾಡುತ್ತಿದ್ದೇವೆ. ಇಲ್ಲಿ ಮಾತ್ರವಲ್ಲದೇ ತಾಲ್ಲೂಕಿನಲ್ಲಿರುವ ಎಲ್ಲಾ ಖರೀದಿ ಕೇಂದ್ರಗಳಲ್ಲಿಯೂ ಕಡಿತ ಮಾಡಲಾಗುತ್ತಿದೆ. ಹಿಂದೆ ಟೋಕನ್ ನೀಡುತ್ತಿದ್ದ ಸಿಬ್ಬಂದಿ ಬೇಕಾಬಿಟ್ಟಿ ಟೋಕನ್ ನೀಡಿದ್ದರಿಂದ ಈ ರೀತಿ ಅವ್ಯವಸ್ಥೆಯಾಗಿದೆ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ’ ಎಂದು ಸಮಜಾಯಿಷಿ ನೀಡಿದರು.
‘ಸರ್ಕಾರದ ಮಾನದಂಡ ಅನುಸರಿಸದೇ ನೀವು ಯಾವುದೇ ಕಾರಣಕ್ಕೂ ಖರೀದಿಸಬೇಡಿ ರೈತರಿಗೆ ಸಹಾಯ ಮಾಡುವ ನೆಪದಲ್ಲಿ ನಾಲ್ಕು ಕೆಜಿಯನ್ನು ಕಡಿತ ಮಾಡುವುದು ರೈತರನ್ನು ಶೋಷಣೆ ಮಾಡಿದಂತೆ’ ಎಂದು ತಹಶೀಲ್ದಾರ್ ಸೂಚಿಸಿದರು.
ಇದನ್ನೂ ನೋಡಿ: ಮನರೇಗಾ ಗ್ರಾಮೀಣ ಮಹಿಳೆಯರ ಜೀವನಾಡಿ; ಯೋಜನೆ ದುರ್ಬಲಗೊಳಿಸಬೇಡಿ – ದೇವಿ Janashakthi Media
