ರೈತರ ಭೂಮಿ ಕಿತ್ತು ರಿಯಲ್ ಎಸ್ಟೇಟ್ ದಂಧೆ!: ನೈಸ್ ಸಂಸ್ಥೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜು

ಬೆಂಗಳೂರು: ನೈಸ್ ಸಂಸ್ಥೆ, ಕಾನೂನು ಉಲ್ಲಂಘಿಸಿ ರೈತರಿಂದ ಪಡೆದಿರುವ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಯನ್ನಾಗಿಸಿ ಮಾರಾಟ ಮಾಡುತ್ತಿದೆ. ನೈಸ್ ಕಂಪನಿಗೆ ಸ್ವಾಧೀನಕ್ಕೆ ಒಳಪಟ್ಟಿದೆ ಎಂದು ತನ್ನ ಗೂಂಡಾಪಡೆ ಮತ್ತು ಪೊಲೀಸರನ್ನು ಬಳಸಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು ಪ್ರಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ KPRS ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಮುಖಂಡರು ನೈಸ್ ಸಂಸ್ಥೆಯ ಭ್ರಷ್ಟಾಚಾರ ಹಾಗೂ ರೈತರ ಮೇಲಿನ ದೌರ್ಜನ್ಯ ವಿರೋಧಿಸಿ ಜೂನ್ 28ರ ಬುಧವಾರದಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನೈಸ್ ಭೂ ಸಂತ್ರಸ್ಥ ರೈತರ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

“ನೈಸ್ ಕಂಪನಿಯು ಹಗರಣಗಳ ಸರಮಾಲೆಯನ್ನೇ ನಡೆಸಿದೆ. ಬಿಎಂಐಸಿಪಿ ( ಬೆಂಗಳೂರು-ಮೈಸೂರು ಇನ್ಪಾಸ್ಟ್ರಕ್ಚರ್ ಕಾರಿಡಾರ್ ಯೋಜನೆ) ಯೋಜನೆಯನ್ನು ರದ್ದುಪಡಿಸಬೇಕು. ನೈಸ್ ಕಂಪನಿಯ ಭೂ ಸ್ವಾಧೀನ ಮತ್ತು ರಸ್ತೆ ನಿರ್ಮಾಣ ಹಗರಣಗಳನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಬೇಕು. ರೈತರ ಒಪ್ಪಿಗೆ ಇಲ್ಲದೇ, ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನಕ್ಕೆ ಒಳಪಡಿಸಿರುವ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು” ಎಂದು ಹೋರಾಟ ಸಮಿತಿ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿತು.

ಇದನ್ನೂ ಓದಿ: ಜಾನುವಾರು ಹತ್ಯೆ ನಿಷೇದ ಸುಗ್ರೀವಾಜ್ಞೆ ಜಾರಿಗೊಳಿಸುವ ದುರ್ನಡೆಯನ್ನು ನಿಲ್ಲಿಸಿ ! – KPRS ಒತ್ತಾಯ

ರೈತರಿಂದ ಭೂ ಸ್ವಾಧೀನದ ಮೂಲಕ ಪಡೆದು ನೈಸ್ ಕಂಪನಿಗೆ ಹಸ್ತಾಂತರಿಸಿರುವ ಭೂಮಿಯನ್ನು ಖಾಸಗಿಯವರಿಗೆ ನೈಸ್ ಕಂಪನಿ ಮಾರಾಟ ಮಾಡಿರುವ ಎಲ್ಲಾ ಕ್ರಯ ಕರಾರನ್ನು ರದ್ದುಪಡಿಸಬೇಕು ಎಂದು ಹೇಳಿರುವ ಹೋರಾಟ ಸಮಿತಿ, “ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಈ ಹಿಂದೆ ಆದ ಒಪ್ಪಂದದಂತೆ ನಿವೇಶನ ಮತ್ತು ಹೆಚ್ಚಿನ ಪರಿಹಾರ ನೀಡಬೇಕು. ಸದನ ಸಮಿತಿ ಮತ್ತು ಕ್ಯಾಬಿನೆಟ್ ಉಪ ಸಮಿತಿಗಳು ನೀಡಿರುವ ವರದಿಗಳನ್ನು ಜಾರಿಗೊಳಿಸಬೇಕು” ಎಂದು ಪ್ರತಿಭಟನಾ ಧರಣಿಯಲ್ಲಿ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ನೀಡಲಿದ್ದೇವೆ ಎಂದು ಹೇಳಿದರು.

“ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಬಿಎಂಐಸಿಪಿ ಯೋಜನೆಗಾಗಿ ಬಲವಂತದ ಭೂ ಸ್ವಾಧೀನ ಮಾಡಿಕೊಂಡ 27 ವರ್ಷ ಕಳೆದರೂ ಬಿಎಂಐಸಿ ಯೋಜನೆ ಕಾರ್ಯಗತಗೊಂಡಿಲ್ಲ. ಮೂಲ ಒಪ್ಪಂದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿರುವ ನೈಸ್ ಕಂಪನಿ ಬಿಎಂಐಸಿ ಯೋಜನೆಯನ್ನು ರದ್ದುಪಡಿಸಬೇಕು. ಬೆಂಗಳೂರಿನಿಂದ ಮೈಸೂರುವರೆಗೆ ರೈತರ ಪಹಣಿಯಲ್ಲಿರುವ ನೈಸ್ ಹೆಸರನ್ನು ತೆಗೆಯಬೇಕು. ಈ ಮೂಲಕ ದಶಕಗಳ ನೈಸ್ ದೌರ್ಜನ್ಯವನ್ನು ಕೊನೆಗಾಣಿಸಬೇಕು” ಎಂದು ಕೆಪಿಆರ್‌ಎಸ್‌ ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನೈಸ್ ಸಂಸ್ಥೆ, ಕಾನೂನು ಉಲ್ಲಂಘಿಸಿ ರೈತರಿಂದ ಪಡೆದಿರುವ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಯನ್ನಾಗಿಸಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ ಹೋರಾಟಗಾರರು, “ನೈಸ್ ಕಂಪನಿಗೆ ಸ್ವಾಧೀನಕ್ಕೆ ಒಳಪಟ್ಟಿದೆ ಎಂದು ತನ್ನ ಗೂಂಡಾಪಡೆ ಮತ್ತು ಪೊಲೀಸರನ್ನು ಬಳಸಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಇತ್ತೀಚೆಗೆ ಸುಮಾರು ಒಂದು ವಾರದ ಹಿಂದೆ ಕೆಂಗೇರಿ ಸಮೀಪದ ವರಾಹಸಂದ್ರ ದಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಪೊಲೀಸರ ನೆರವಿನೊಂದಿಗೆ ಬಂದಿದ್ದ ಘಟನೆ ನಡೆದಿದೆ. ಬೈರಸಂದ್ರ, ಗಂಗಸಂದ್ರ ಮುಂತಾದ ಗ್ರಾಮಗಳಲ್ಲಿ ನೈಸ್‌ಗೆ ಸ್ವಾಧೀನ ವಾಗಿದೆ ಎಂದು ಹೇಳಿ ಆಕ್ರಮವಾಗಿ ಗೋಡೆ ನಿರ್ಮಿಸಿ ಭೂಮಿ ಕಿತ್ತುಕೊಳ್ಳಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ವಿದ್ಯುತ್ ಮೀಟರೀಕರಣದ ಸುತ್ತೋಲೆ ವಿರೋಧಿಸಲು ಪ್ರಾಂತ ರೈತ ಸಂಘ ಕರೆ

“ಇಂತಹ ಎಷ್ಟೋ ಪ್ರಕರಣಗಳಲ್ಲಿ ರೈತರಿಗೆ ಪರಿಹಾರವೂ ಸಹ ವಿತರಣೆ ಆಗಿಲ್ಲ. ನೈಸ್ ಕಂಪನಿಯ ದೌರ್ಜನ್ಯದಿಂದ ನೊಂದ ರೈತರು ಕೋರ್ಟ್ – ಕಛೇರಿಗಳಲ್ಲಿ ಅಲೆದಾಡಿ ಲಕ್ಷಾಂತರ ರೂಗಳನ್ನು ಕಳೆದುಕೊಂಡಿದ್ದಾರೆ. ಈ ಆನ್ಯಾಯದಿಂದ ರೈತರಿಗೆ ರಕ್ಷಣೆ ನೀಡಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಆಗ್ರಹಿಸಿದೆ.

ಸದನ ಸಮಿತಿ ತನಿಖಾ ವರದಿಯಲ್ಲಿ, ಹಲವಾರು ಸುಪ್ರೀಂ ಕೋರ್ಟ್, ಹೈ ಕೋರ್ಟ್ ತೀರ್ಪುಗಳಲ್ಲಿ, ಸಂಪುಟ ಉಪ ಸಮಿತಿ ಸಭೆಗಳ ನಡಾವಳಿಯಲ್ಲಿ ನೈಸ್ ಸಂಸ್ಥೆ, ಮೂಲ ಒಪ್ಪಂದ ಚೌಕಟ್ಟು ( FWA) ಅನ್ನು ಉಲ್ಲಂಘಿಸಿರುವುದು, ಮೂಲ ಒಪ್ಪಂದ ಚೌಕಟ್ಟಿಗೆ ಸಂಬಂದಿಸದೇ ಇರುವ ಭೂಮಿಗಳನ್ನು ಅಕ್ರಮವಾಗಿ ಕಬಳಿಸಿರುವುದು, ಟೋಲ್ ರಸ್ತೆಯನ್ನು ಒಪ್ಪಂದದಂತೆ ಅಭಿವೃದ್ಧಿ ಪಡಿಸದೇ, ಒಪ್ಪಂದ ಉಲ್ಲಂಘಿಸಿರುವುದು, ಟೋಲ್ ದರವನ್ನು ಕಾನೂನುಬಾಹಿರವಾಗಿ ಹೆಚ್ಚಳ ಮಾಡಿರುವುದು ಸಾಬೀತಾಗಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.

“ಯೋಜನೆಯನ್ನು ಪೂರ್ಣಗೊಳಿಸದೇ ಇದ್ದರೂ, ಕಾನೂನು ಉಲ್ಲಂಘನೆ-ಆಕ್ರಮಗಳನ್ನು ನಡೆಸಿದ್ದರೂ ನೈಸ್ ಸಂಸ್ಥೆಯನ್ನು ರಕ್ಷಿಸುತ್ತಿರುವುದು ಯಾವ ಕಾರಣಕ್ಕಾಗಿ” ಎಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ರಾಜ್ಯ ಉಪಾಧ್ಯಕ್ಷ ಎನ್ ವೆಂಕಟಾಚಲಯ್ಯ, ರಾಜ್ಯ ಹಣಕಾಸು ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್ ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿಯ ಕಾರ್ಯದರ್ಶಿ ಸಾದಪ್ಪ,  ಖಜಾಂಚಿ ಹನುಮಯ್ಯ ಹಾಗೂ ಉಪಾಧ್ಯಕ್ಷರಾದ ಜಯರಾಮಣ್ಣ ಇದ್ದರು.

Donate Janashakthi Media

Leave a Reply

Your email address will not be published. Required fields are marked *