ರೈತರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ಭೇಟಿ

ಧಾರವಾಡ: ಮೆಕ್ಕೆಜೋಳ ಖರೀದಿಗೆ ಸರ್ಕಾರದ ಬೆಂಬಲ ಬೆಲೆ ಯೋಜನೆಗೆ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ರೈತರು ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.

ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಸ್ವಲ್ಪ ದಿನಗಳ ಕಾಲಾವಕಾಶ ನೀಡಿ, ಉಪವಾಸ ಸತ್ಯಾಗ್ರಹ, ಧರಣಿ ಹಿಂಪಡೆಯುವಂತೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಮಾಡಿದ ಮನವಿ ಪರಿಗಣಿಸಿ, ರೈತರು ಎಳನೀರು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ, ಧರಣಿ ಹಿಂಪಡೆದರು.

ಶಾಸಕರಾದ ಎನ್.ಎಚ್. ಕೋನರಡ್ಡಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೊತೆಗೆ ಗೋವಿನ ಜೋಳದ ಖರೀದಿ ಬಗ್ಗೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಅನುಮತಿ ಕೊಡಲಿ ಬಿಡಲಿ ಗೋವಿನಜೋಳ ಖರೀದಿಗೆ ಸರಕಾರ ಬದ್ಧವಾಗಿದೆ. ತಾಂತ್ರಿಕ ಕಾರಣದಿಂದ ತಡವಾಗಿದೆ. ಸಚಿವರಾದ ಎಚ್. ಕೆ. ಪಾಟೀಲ ಹಾಗೂ ಚಲವರಾಯಸ್ವಾಮಿ ಅವರನ್ನು ದೆಹಲಿಗೆ ಕಳುಹಿಸಿ, ಗೊಂದಲಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಶೀಘ್ರದಲ್ಲಿ ಖರೀದಿ ಕೇಂದ್ರ ಸ್ಥಾಪಿಸುವ ಭರವಸೆಯನ್ನು ಅವರು ನೀಡಿ ರೈತ ಹೋರಾಟಗಾರರಿಗೆ ಸತ್ಯಾಗ್ರಹ ನಿಲ್ಲಿಸುಂತೆ ಶಾಸಕರು ಮನವಿ ಮಾಡಿದರು.

ಇದನ್ನೂ ಓದಿ : ಆನೇಕಲ್| ಸೊಳ್ಳೆಪುರದಲ್ಲಿ ರೈತರ ಸಭೆ : ಕೆಐಎಡಿಬಿ ಭೂಸ್ವಾಧೀನ ಹೋರಾಟಕ್ಕೆ 138 ಪೂರ್ಣ

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ರಾಜ್ಯ ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್​ ಹಾಗೂ ಸರ್ಕಾರದ ಮಟ್ಟದ ಅಧಿಕಾರಗಳು, ಸರ್ಕಾರದಿಂದ ಮೆಕ್ಕೆಜೋಳ ಖರೀದಿಗೆ ಅಗತ್ಯವಿರುವ ಕ್ರಮಕೈಗೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದು, ಈ ವಿಷಯದ ಗಂಭೀರತೆಯ ಅರಿವು ಇದೆ. ಸಕಾಲಕ್ಕೆ ಸರಿಪಡಿಸಲಾಗುವುದು. ರಾಜ್ಯದಲ್ಲಿ ಮೊದಲಿಗರಾಗಿ ಧಾರವಾಡ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಿ ನವಲಗುಂದ ತಾಲೂಕಿಗೆ ಪ್ರಥಮದಲ್ಲಿ ಪರಿಹಾರ ನೀಡಿದ್ದು, ಇನ್ನೊಂದು ಹಂತದಲ್ಲಿ ಪರಿಹಾರ ಸಿಗಲಿದೆ ಎಂದು ತಿಳಿಸಿದರು.

ರೈತರಿಗೆ ಸಂಬಂಧಿಸಿದ ವಿಷಯಗಳಲ್ಲಿ ಸುಮಾರು ವರ್ಷಗಳ ಹಿಂದೆಯಿಂದಲೂ ಹೋರಾಟ ಮಾಡುತ್ತಾ ಬಂದಿದ್ದೀರಿ. ಅದರಲ್ಲೂ ಧಾರವಾಡ ಜಿಲ್ಲೆ ನವಲಗುಂದ ತಾಲೂಕು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ರೈತರಿಗೆ ಹಲವಾರು ಯೋಜನೆಗಳು ಜಾರಿಯಾಗಿವೆ ಎಂದರೆ ಅದಕ್ಕೆ ನಿಮ್ಮ ಕೊಡುಗೆ ಅಪಾರ. ಅದಕ್ಕಾಗಿ ನಿಮ್ಮ ಯಾವುದೇ ಒಂದು ವಿಷಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸತ್ತವೆ ಎಂದು ಹೇಳಿದರು.

ಈಗಾಗಲೇ ರೂ. 65 ಕೋಟಿ ಮೊತ್ತವನ್ನು ರೈತರಿಗೆ ಜಮಾ ಮಾಡಲಾಗಿದೆ. ರಾಜ್ಯದಲ್ಲಿಯೇ ರೈತರಿಗೆ ಮೊಟ್ಟಮೊದಲು ಹಣ ಜಮಾ ಮಾಡಿದ ಹೆಮ್ಮೆ ನಮ್ಮ ಜಿಲ್ಲಾಡಳಿತಕ್ಕೆ ಇದೆ. ಇನ್ನೂ ಅನುದಾನ ಬರುವುದು ಇದೆ. ನಂತರ ಅದನ್ನು ಸಹ ತಕ್ಷಣವೇ ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತೇವೆ. ಕೆಲವು ರೈತರಿಗೆ ಹಣ ಜಮಾ ಆಗಿಲ್ಲ ಎಂಬುದು ತಿಳಿದಿದೆ. ಅದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಆಗಿರುವುದರಿಂದ ಎಲ್ಲ ತಾಲೂಕುಗಳ ತಹಶೀಲ್ದಾರರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇವೆ. ರೈತರಿಗೆ ಯಾವುದಾದರೂ ಸಮಸ್ಯೆಗಳು ಇದ್ದರೆ, ನೀವು ತಹಶೀಲ್ದಾರ್ ಕಚೇರಿಗೆ ಹೋಗಿ ಅಥವಾ ಜಿಲ್ಲಾಡಳಿತಕ್ಕೆ ಟೋಲ್ ಫ್ರೀ ನಂಬರ್​ಗೆ ಕರೆ ಮಾಡಿ. ರೈತರ ಸಮಸ್ಯೆಗಳು ಏನೇ ಇದ್ದರೂ ಜಿಲ್ಲಾಡಳಿತ ಆದಷ್ಟು ಬೇಗನೆ ಬಗೆಹರಿಸುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು ಒಂಬತ್ತು ಸಾವಿರ ರೈತರು ಹೆಸರು ಕಾಳು ಮಾರಾಟಕ್ಕೆ ನೋಂದಣಿ ಮಾಡಿದ್ದಾರೆ. ಅದರಲ್ಲಿ ಕೇವಲ 76 ರೈತರಿಂದ ಮಾತ್ರ ಖರೀದಿಯಾಗಿದೆ. ಕಾರಣ ಏನೆಂದರೆ ಗುಣಮಟ್ಟದಲ್ಲಿ ಅತಿಯಾದ ಸಮಸ್ಯೆ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರು ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೂ ತಂದಿದ್ದೇವೆ. ಮತ್ತು ಸಂಬಂಧಪಟ್ಟ ಅಧಿಕಾರಿಯವರ ಗಮನಕ್ಕೂ ತೆಗೆದುಕೊಂಡು ಬಂದಿದ್ದೇವೆ. ಆದಷ್ಟು ಬೇಗನೆ ರೈತರ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್ ಹೆಸರು ಬೆಳೆ ಹಾನಿಯಾಗಿದೆ. ಪ್ರತ್ಯಕ್ಷವಾಗಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತ ಎಲ್ಲರೂ ರೈತರ ಹೊಲಗಳಿಗೆ ಹೋಗಿ ನೋಡಿದ್ದೇವೆ. ಆದ್ದರಿಂದ ಪ್ರತಿವರ್ಷದಂತೆ ಈ ವರ್ಷವೂ ಎಫ್‍ಎಕ್ಯೂ ಗುಣಮಟ್ಟದ ಹೆಸರು ಕಾಳು ಉತ್ಪನ್ನ ಖರೀದಿ ಮಾಡುವುದರಿಂದ ರೈತರಿಗೆ ಸಮಸ್ಯೆ ಆಗುತ್ತದೆ. ಏಕೆಂದರೆ ಅತಿ ಹೆಚ್ಚು ಮಳೆಯಾಗಿರುವುದರಿಂದ ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು, ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.

ಇದನ್ನೂ ನೋಡಿ : ದಣಿವರಿಯದೆ ದುಡಿಯುವ ಮಹಿಳೆಗೆ ಕನಿಷ್ಠ ಕೂಲಿ ಯಾಕಿಲ್ಲ? Janashakthi Media

Donate Janashakthi Media

Leave a Reply

Your email address will not be published. Required fields are marked *