ಎಲ್ಒಸಿ ಹೊರಡಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಇಲ್ಲ: ಹೈಕೋರ್ಟ್

ಬೆಂಗಳೂರು: ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಜೀವನಾಂಶ ನೀಡಬೇಕೆಂಬ ಆದೇಶ ಪಾಲನೆ ಮಾಡದ ಪತಿಯ ವಿರುದ್ಧ ಹೊರಡಿಸಿದ್ದ ಲುಕ್‌ ಔಟ್‌ ಸರ್ಕ್ಯುಲರ್‌ (ಎಲ್ಒಸಿ) ರನ್ನು ಹೈಕೋರ್ಟ್ ರದ್ದುಗೊಳಿಸಿ, ‘ಕೌಟುಂಬಿಕ ನ್ಯಾಯಾಲಯಕ್ಕೆ ಈ ರೀತಿಯ ಎಲ್ಒಸಿ ಹೊರಡಿಸುವಂತಹ ಯಾವುದೇ ಅಧಿಕಾರ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

ಮಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ‌ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಕುವೈತ್ ನಲ್ಲಿರುವ ಪತಿ (53) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ₹2 ಲಕ್ಷ ಠೇವಣಿ ಇರಿಸಬೇಕು’ ಎಂಬ ಷರತ್ತು ವಿಧಿಸಿರುವ ನ್ಯಾಯಪೀಠ,’ ಎಲ್‌ಒಸಿ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿದೆ.

ಇದನ್ನೂ ಓದಿ: ಹಾಸನ | ಧರ್ಮವನ್ನು ತೋರಿಸಿ ಒಡೆದಾಳುವ ನೀತಿ ಅನುಸರಿಸುತ್ತಿರುವ ಬಿಜೆಪಿ – ಕೆ ಹೇಮಲತಾ ಆರೋಪ

‘ಯಾವುದೇ ಪ್ರಕರಣಗಳಲ್ಲಿ ನ್ಯಾಯಾಲಯ ಎಲ್‌ಒಸಿ ರದ್ದುಗೊಳಿಸಿದರೆ ಅಂತಹ ಸಂದರ್ಭಗಳಲ್ಲಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಅದರ ಬಗ್ಗೆ ಬ್ಯೂರೊ ಆಫ್‌ ಇಮಿಗ್ರೇಷನ್‌ಗೆ ಮಾಹಿತಿ ನೀಡಬೇಕು ಮತ್ತು ಯಾವ ಅಧಿಕಾರಿ ಎಲ್‌ಒಸಿ ಜಾರಿಗೊಳಿಸುತ್ತಾರೋ ಅಂತಹವರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು’ ಎಂದು ನ್ಯಾಯಪೀಠ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ತಾಕೀತು ಮಾಡಿದೆ.

‘ಒಂದು ವೇಳೆ ಆ ಅಧಿಕಾರಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದೇ ಇದ್ದರೆ ಅಂತಹ ಅಧಿಕಾರಿಯ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಬೇಕು’ ಎಂದೂ ಅದೇಶಿಸಿದೆ.

‘ದಂಡ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 125ರಡಿ ಕೌಟುಂಬಿಕ ನ್ಯಾಯಾಲಯಕ್ಕೆ ಎಲ್‌ಒಸಿ ಹೊರಡಿಸಿರುವ ಯಾವುದೇ ಅಧಿಕಾರವಿಲ್ಲ. ಜೀವನಾಂಶ ನೀಡುವ ಕುರಿತಾದ ಕಲಂ 125 ಅನ್ನು ನ್ಯಾಯಾಲಯ ಇತರೆ ಆದೇಶಗಳ ಮೂಲಕ ಜಾರಿಗೊಳಿಸಬಹುದು. ಒಂದು ವೇಳೆ ಪತಿ ಜೀವನಾಂಶ ನೀಡಲು ವಿಫಲವಾದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಬಂಧನಕ್ಕೆ ಆದೇಶ ಹೊರಡಿಸಬಹುದು. ಆದರೆ, ಜೀವನಾಂಶ ವಸೂಲು ಮಾಡುವುದಕ್ಕಾಗಿ ಎಲ್ಒಸಿ ಹೊರಡಿಸಲು ಆಗದು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಸಿಆರ್‌ಪಿಸಿ ಕಲಂ 125ರ ಆದೇಶಗಳನ್ನು ಜಾರಿ ಮಾಡುವಾಗ ಈ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಸೂಕ್ತ ಸುತ್ತೋಲೆ ಹೊರಡಿಸಬೇಕು’ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಇದನ್ನೂ ನೋಡಿ: CITU ರಾಜ್ಯ ಸಮ್ಮೇಳನ | ಕೇಂದ್ರದ ಶ್ರಮಿಕ ನೀತಿಯಲ್ಲಿ ಮನುಸ್ಮೃತಿ – ಐಕ್ಯ ಹೋರಾಟದ ಮೂಲಕ ಹಿಮ್ಮೆಟ್ಟಿಸಿ

Donate Janashakthi Media

Leave a Reply

Your email address will not be published. Required fields are marked *