ಬೆಂಗಳೂರು : ಬಿಜೆಪಿಯವರ ಸಂವಿಧಾನ ಸಮ್ಮಾನ್ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಂದಿಗೂ ಅಂಬೇಡ್ಕರ್ ವಿರೋಧಿಯಾಗಿಲ್ಲ. ನಾನು ಯಾವುದೇ ಕಾರಣಕ್ಕೂ ಮನಸ್ಮೃತಿಯನ್ನು ಒಪ್ಪಿಲ್ಲ. ಆದರೆ ಇದೀಗ ಬಿಜೆಪಿಯವರ ಸಂವಿಧಾನ ಸಮ್ಮಾನ್ ಎನ್ನುವ ಸುಳ್ಳು ಕಾರ್ಯಕ್ರಮ ಆಯೋಜಿಸಿ, ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದ ಜನ ಬಿಜೆಪಿಯವರಿಗೆ ಉಗಿದು ಮನೆಗೆ ಕಳಿಸಿದ್ದಾರೆ. ಅದಕ್ಕೆ ತಮ್ಮ ಮಾನ ಉಳಿಸಿಕೊಳ್ಳಲು ಮಾತುಗಳನ್ನು ಆಡುತ್ತಿದ್ದಾರೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾಗಪುರದಲ್ಲಿ ಪಡೆದ ಸುಳ್ಳಿನ ತರಬೇತಿಯನ್ನು ಇಲ್ಲಿ ಅವರು ಪ್ರಯೋಗಿಸಿದ್ದಾರೆ. ಅಂಬೇಡ್ಕರವರನ್ನು ದ್ವೇಷ ಮಾಡುವ ದ್ರೋಹಿಗಳು ಸಂವಿಧಾನ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸಂಸತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹರಿಹಯ್ದಿದ್ದಾರೆ.
ಇದನ್ನೂ ಓದಿ : ಇಂದು ಕೊಪ್ಪಳ ಬಂದ್; ಅಮಿತ್ ಶಾ ರಾಜೀನಾಮೆಗೆ ದಲಿತ ಸಂಘಟನೆಗಳ ಆಗ್ರಹ
ಅಂಬೇಡ್ಕರ್ ಬಗ್ಗೆ ಗೌರವ ಇದ್ದಿದ್ದರೆ ಅಮಿತ್ ಶಾ ಈ ರೀತಿಯ ಎಳಸು ಹೇಳಿಕೆ ಹೇಳುತ್ತಿರಲಿಲ್ಲ. ಸಂಘಪರಿವಾರದ ಗುಪ್ತ ಕಾರ್ಯಸೂಚಿಗಳನ್ನು ಜಾರಿಗೆ ತರುವ ಉದ್ದೇಶದಿಂದಲೆ ಈ ರೀತಿಯ ಪೂರ್ವ ನಿಯೋಜಿತ, ಉದ್ದೇಶ ಪೂರ್ವಕ ಮಾತಾಡಿದ್ದಾರೆ ಎಂದು ಟಾಂಗ್ ನೀಡಿದ್ರು.
ಆದರೆ ಇದೀಗ ಸಂವಿಧಾನ ವಿರೋಧಿಗಳು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಹಾಗೂ ಅವರ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್ ಜಾಗ ನೀಡಲಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ನೆಹರು ಅವರು ಹಾಗೂ ಅಂಬೇಡ್ಕರ್ ಅವರು 1952 ರಲ್ಲಿ ಹಿಂದೂ ಕೋಡ್ ಬಿಲ್ ಜಾರಿಗೆ ತಂದಾಗ ಹಿಂದೂ ಮಹಾಸಭಾ ಸೇರಿದಂತೆ ಆರ್ ಎಸ್ ಎಸ್ ಇದನ್ನು ವಿರೋಧ ಮಾಡಿತ್ತು. ಈ ಬಿಲ್ ಅಲ್ಲಿ ಮಹಿಳೆಯರಿಗೆ ತಂದೆ ಆಸ್ತಿಯಲ್ಲಿ ಸಮಾನ ಹಕ್ಕು ವಿರುದ್ದ ಮಾತನಾಡಿದ್ದರು. ಅಂದು ರಾಮ್ ಲೀಲಾ ಮೈದಾನದಲ್ಲಿ ದೊಡ್ಡ ಸಮಾವೇಶ ನಡೆಸಿ ಸಂವಿಧಾನವನ್ನು ಸುಡುವ ಕೆಲಸ ಮಾಡಿದ್ದರು ಎಂದು ಕಿಡಿಕಾರಿದರು.
ಈ ವೇಳೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರಪ್ಪ, ಶ್ರೀನಿವಾಸಮೂರ್ತಿ, ಬೆಂಗಳೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಶೇ.60 ಕಮಿಷನ್ ಆರೋಪ ಸಾಬೀತು ಮಾಡಲಿ: ಎಚ್‌ಡಿಕೆಗೆ ಸಿಎಂ ಸಿದ್ದರಾಮಯ್ಯ ಸವಾಲು Janashakthi Media