ಆಶ್ಚರ್ಯ ಆದರೂ ಸತ್ಯ; 8 ತಿಂಗಳು ಕಾರ್ಯನಿರ್ವಹಿಸಿದ ಪೊಲೀಸ್‌ ಠಾಣೆಯೇ ನಕಲಿ!

ನವದೆಹಲಿ: ದೇಶದಲ್ಲಿ ಒಂದಲ್ಲ ಒಂದು ಕಡೆಗಳಲ್ಲಿ ನಕಲಿಗೆ ಸಂಬಂಧಿಸಿದ ಸುದ್ದಿಗಳು ಜರುಗುತ್ತಲೇ ಇರುತ್ತವೆ. ಇದರಿಂದ ಮೋಸ ಹೋಗುವವರು ಮಾತ್ರ ಸಾಮಾನ್ಯ ಜನತೆ. ನಕಲಿ ವಸ್ತುಗಳಿಂದ ಹಿಡಿದು ನಕಲಿ ವೇಷಧಾರಿಗಳು, ಅಧಿಕಾರಿಗಳು, ಸಿಕ್ಕಿ ಬಿದ್ದಿದ್ದಾರೆ. ನಕಲಿ ನೋಟು ವ್ಯವಹಾರವಂತೂ ಇಡೀ ಅರ್ಥ ವ್ಯವಸ್ಥೆಗೆ ಒಂದು ದೊಡ್ಡ ತಲೆನೋವು.  ಇದೀಗ ನಕಲಿ ಎಂಬುದು ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಅದು ಅಸಲಿ ಎಂಬಂತೆ ಬಿಂಬಿಸಿ ಮೋಸ ಹೋಗಿದ್ದೇವೆ ಎನ್ನುವುದನ್ನೆ ಮರೆ ಮಾಚುವಷ್ಟು ಮಟ್ಟಕ್ಕೆ ಇಳಿದಿದೆ.

ಈ ನಕಲಿಗಳ ಹಾವಳಿಯಲ್ಲಿ ಒಂದು ವಿಶೇಷತೆಗೆ ಬಿಹಾರದ ಬಂಕಾ ಜಿಲ್ಲೆಯೊಂದು ಸಾಕ್ಷಿಯಾಗಿದೆ. ನಕಲಿ ಎಂಬುದು ಈ ಮಟ್ಟಕ್ಕೆ ಇಳಿಯಬಾರದಿತ್ತು. ಆದರೂ ವಿಪರ್ಯಾಸವೆಂದರೆ ಜನತೆಯನ್ನು ಮರಳು ಮಾಡುವ ಕೈಚಳಕ ಗೊತ್ತಿರುವವರಿಗೆ ಯಾವುದೂ ಕಷ್ಟವಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಬಿಹಾರದ ಬಂಕಾ ಜಿಲ್ಲೆಯೊಂದರಲ್ಲಿ ಇಡೀ ಪೊಲೀಸ್‌ ಠಾಣೆಯೇ ನಕಲಿ ಎಂಬುದು ಜಗಜ್ಜಾಹೀರಾಗಿದೆ.

ಬಿಹಾರದ ಬಂಕಾ ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ನಕಲಿ ಪೊಲೀಸ್‌ ಠಾಣೆಯೊಂದು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಬೆಳಕಿಗೆ ಬಂದಿದೆ. ಇಷ್ಟು ದಿನಗಳು ಇದರ ಕಾರ್ಯಾಚರಣೆ ನಡೆದಿದ್ದರೂ, ಊರಿನ ಯಾರೊಬ್ಬರಿಗೂ ಇದರ ಬಗ್ಗೆ ಅನುಮಾನ ಬಂದಿರಲಿಲ್ಲ. ಬಂಕಾದ ಅತಿಥಿ ಗೃಹವೊಂದನ್ನು ಇವರು ಪೊಲೀಸ್‌ ಠಾಣೆಯನ್ನಾಗಿ ಬದಲಿಸಿರುವುದು ಮತ್ತೊಂದು ಆಚ್ಚರಿಗಳಲ್ಲಿ ಒಂದು.

ನಕಲಿ ಪೊಲೀಸ್‌ ಠಾಣೆಯಲ್ಲಿನ ಮಂದಿ ಸ್ಥಳೀಯ ಬಡ ಜನರಿಂದ ಹಣ ವಸೂಲಿ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಕಾನ್ಸ್‌ಟೇಬಲ್‌ನಿಂದ ಹಿಡಿದು ಇನ್‌ಸ್ಪೆಕ್ಟರ್‌ವರೆಗೆ ಎಲ್ಲರೂ ಸಹ ಪೊಲೀಸ್‌ ಇಲಾಖೆಯಿಂದ ನೇಮಕಗೊಂಡವರಲ್ಲ. ಯಾರೇ ನೋಡಿದರೂ, ನಿಜವಾದ ಪೊಲೀಸ್‌ ಅಧಿಕಾರಿಗಳೇ  ಎನ್ನುವಷ್ಟು ಅದ್ಭುತವಾಗಿ ಇವರೆಲ್ಲಾ ಕಾರ್ಯನಿರ್ವಹಿಸಿದ್ದಾರೆ.

ಬಂಕಾ ಎಸ್‌ಎಚ್‌ಓ ಶಂಭು ಪ್ರಸಾದ್‌ ಯಾದವ್‌ ಅವರಿಂದ ನಕಲಿ ಪೊಲೀಸ್‌ ಠಾಣೆ ಕಾರ್ಯನಿರ್ವಹಣೆ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಮಿನಲ್‌ ಒಬ್ಬನನ್ನು ಬಂಧಿಸಿ ಠಾಣೆಗೆ ಹಿಂತಿರುಗುತ್ತಿದ್ದ ವೇಳೆ, ಈ ಕುರಿತಾಗಿ ನನಗೆ ಗುಪ್ತ ಮಾಹಿತಿ ಸಿಕ್ಕಿತ್ತು ಎಂದಿರುವ ಅವರು, ಪೊಲೀಸ್‌ ಠಾಣೆಯ ರೀತಿಯದ್ದ ಬಂಕಾ ಅತಿಥಿ ಗೃಹಕ್ಕೆ ಹೋದಾಗ, ಅನಾಮಿಕ ಮಹಿಳೆ ಹಾಗೂ ಯುವಕನೊಬ್ಬ ಪೊಲೀಸ್‌ ಸಮವಸ್ತ್ರದೊಂದಿಗೆ ರಸ್ತೆಯ ಮೇಲೆ ನಿಂತಿದ್ದರು. ಅನುಮಾನ ಬಂದು ಇವರನ್ನು ವಿಚಾರಣೆ ಮಾಡಿದಾಗ ಸಂಪೂರ್ಣ ಮಾಹಿತಿ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಬಂಧಿತ ಐವರಲ್ಲಿ ಮಹಿಳಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಸೋಗಿನಲ್ಲಿದ್ದಳು. ಬಿಹಾರ ಪೊಲೀಸ್‌ನ ಸಮವಸ್ತ್ರವನ್ನು ಆಕೆ ಧರಿಸಿದ್ದಳು ಮತ್ತು ಪಿಸ್ತೂಲ್‌ ಹೊಂದಿದ್ದರು. ಇನ್ನೊಂದೆಡೆ, ಆಕಾಶ್‌ ಕುಮಾರ್‌ ಎನ್ನುವ ವ್ಯಕ್ತಿ ಈ ನಕಲಿ ಪೊಲೀಸ್‌ ಠಾಣೆಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ.

ಫುಲ್ಲಿದುಮಾರ್‌ನ ಲೋಧಿಯಾ ಗ್ರಾಮದ ರಮೇಶ್ ಕುಮಾರ್ ಅವರನ್ನು ಬಂಧಿಸಲಾಗಿದ್ದು, ಭಾಗಲ್ಪುರ್ ಜಿಲ್ಲೆಯ ಖಾನ್ಪುರ ಮೂಲದ ಆಕಾಶ್ ಕುಮಾರ್ ಎಂಬಾತನನ್ನು ಹಲವು ದಾಖಲೆಗಳು ಮತ್ತು ಪೊಲೀಸ್ ಸಮವಸ್ತ್ರದೊಂದಿಗೆ ಬಂಧಿಸಲಾಗಿದೆ. ಭದ್ರತಾ ಕೆಲಸದ ಕಾರ್ಯದಲ್ಲಿದ್ದ ಆಕಾಶ್‌ ಕುಮಾರ್‌, ನಕಲಿ ಪೊಲೀಸ್‌ ಭೋಲಾ ಯಾದವ್‌ಗೆ 70 ಸಾವಿರ ರೂಪಾಯಿಯನ್ನೂ ನೀಡಿದ್ದ.  ಕಚೇರಿಯ ಕಾರ್ಯಾಚರಣೆಯಿಂದ ಹಿಡಿದು ಎಲ್ಲ ಸಿಬ್ಬಂದಿಗಳ ಮರುಸ್ಥಾಪನೆ, ಪೊಲೀಸ್ ಸಮವಸ್ತ್ರ, ಅಕ್ರಮ ಪಿಸ್ತೂಲ್ ಒದಗಿಸುವಲ್ಲಿ ಪ್ರಮುಖ ದರೋಡೆಕೋರನಾಗಿ ಫುಲಿದುಮರ್ ನಿವಾಸಿ ಭೋಲಾ ಯಾದವ್ ಹೆಸರು ಹೊರ ಬರುತ್ತಿದೆ.

ಪ್ರಮುಖ ಆರೋಪಿ ಭೋಲಾ ಯಾದವ್ ಫುಲಿದುಮರ್ ನೆರೆಹೊರೆಯಲ್ಲಿ ವಾಸವಾಗಿದ್ದಾನೆ. ಪೊಲೀಸ್‌ ಠಾಣೆಯಲ್ಲಿ ಕೆಲಸ ಮಾಡಿದ್ದಕ್ಕೆ 500 ರೂಪಾಯಿ ದಿನಗೂಲಿ ಪಡೆಯುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಅದರೊಂದಿಗೆ ಅವರ ವೈಯಕ್ತಿಕ ಬಾಣಸಿಗನನ್ನು ಪೊಲೀಸರು ಅತಿಥಿಗೃಹದಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *