ಸೂರತ್: ತಾನು ಇಸ್ರೋ ಸಂಸ್ಥೆಯ ವಿಜ್ಞಾನಿ ಎಂದು ಹೇಳಿಕೊಂಡು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ಖಾಸಗಿ ಅಧ್ಯಾಪಕರೊಬ್ಬರನ್ನು ಮಂಗಳವಾರ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಹಲವು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದ ಆರೋಪಿಯು, ತಾನು ‘ಚಂದ್ರಯಾನ -3’ ಮಿಷನ್‌ಗಾಗಿ ಲ್ಯಾಂಡರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಿದ್ದಾಗಿ ಹೇಳಿಕೆ ನೀಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಕಾಂ ಮತ್ತು ಎಂಕಾಂ ಪದವಿಗಳನ್ನು ಹೊಂದಿದ್ದ ಆರೋಪಿಯನ್ನು ಮಿಥುಲ್ ತ್ರಿವೇದಿ (30) ಎಂದು ಗುರುತಿಸಲಾಗಿದೆ. ಸೂರತ್ ನಗರದಲ್ಲಿನ ತನ್ನ ಟ್ಯೂಷನ್ ತರಗತಿಗಳಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯಲು ತಾನು ಇಸ್ರೊ ವಿಜ್ಞಾನಿ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆಗಸ್ಟ್ 23 ರಂದು ಚಂದ್ರಯಾನ-3 ರ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಿದ್ದೇನೆ ಎಂದು ಹೇಳಿಕೊಂಡಿದ್ದನು.
ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ, ಆಮ್ಲಜನಕ ಇರುವುದನ್ನು ಖಚಿತಪಡಿಸಿದ ಪ್ರಗ್ಯಾನ್ ರೋವರ್
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿ ಹಗುರ ಸ್ಪರ್ಶ ಮಾಡಿದ ನಂತರ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದನ್ನು ಗಮನಿಸಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತ್ರಿವೇದಿ ಅವರು ಇಸ್ರೋದ “ಪ್ರಾಚೀನ ವಿಜ್ಞಾನ ಅಪ್ಲಿಕೇಶನ್ ವಿಭಾಗ” ದ “ಸಹಾಯಕ ಅಧ್ಯಕ್ಷ” ಎಂದು ಹೇಳಿಕೊಂಡಿದ್ದಾನೆ. ಜೊತೆಗೆ ಅದಕ್ಕಾಗಿ 2022ರ ಫೆಬ್ರವರಿ 26ರ ನಕಲಿ ನೇಮಕಾತಿ ಪತ್ರವನ್ನು ಸಹ ತಯಾರಿಸಿ ನಕಲಿ ಆಧಾರಗಳನ್ನು ಸಹ ಸೃಷ್ಟಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಯು ಇಸ್ರೋದ ಚಂದ್ರಯಾನ-3 ಮಿಷನ್ ಜೊತೆಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ. ಆದರೆ ತಾನು ಇಸ್ರೊ ಉದ್ಯೋಗಿ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ್ದಾನೆ ಎಂದು ಸಂಪೂರ್ಣ ತನಿಖೆಯಿಂದ ತಿಳಿದುಬಂದಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಪಿಯು ಇಸ್ರೊದ ಮುಂದಿನ ಯೋಜನೆಯಾದ “ಮರ್ಕುರಿ ಫೋರ್ಸ್ ಇನ್ ಸ್ಪೇಸ್”ನಲ್ಲಿ ಬಾಹ್ಯಾಕಾಶ ಸಂಶೋಧನಾ ಸದಸ್ಯ ಎಂಬ ನಕಲಿ ಪತ್ರವನ್ನು ಸಹ ತಯಾರಿಸಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚಂದ್ರಯಾನ ಯೋಜನೆಯನ್ನು ಸಾಧ್ಯಗೊಳಿಸಿದ ಹೆಚ್‍ಇಸಿ ನೌಕರರಿಗೆ ಬಾಕಿಗಳ ಪಾವತಿ ಮತ್ತು ಇಸ್ರೊ ಸಿಬ್ಬಂದಿಯ ಬಡ್ತಿ ತಕ್ಷಣವೇ ಆಗಬೇಕು
ಚಂದ್ರಯಾನ ವಿಚಾರವಾಗಿ ಇಸ್ರೊ ಬಗ್ಗೆ ನಕಲಿ ಸಂದೇಶಗಳನ್ನು ಹರಡಿದ್ದ ಕಾರಣಕ್ಕೆ ಹಾಗೂ ಇಸ್ರೋ ಸಂಸ್ಥೆಯ ಪ್ರತಿಷ್ಠೆಗೆ ಹಾನಿ ಮಾಡಿದ್ದಕ್ಕೆ ಸೂರತ್ ನಗರ ಅಪರಾಧ ವಿಭಾಗವು ಆರೋಪಿಯ ವಿರುದ್ಧ 419, 465, 468 ಮತ್ತು 471 ಎಫ್‌ಐಆರ್ ದಾಖಲಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್ ಮಾತನಾಡಿ, ”ಆರೋಪಿ ತ್ರಿವೇದಿ ಅವರು ಖಾಸಗಿ ಬೋಧಕರಾಗಿದ್ದು, ತಮ್ಮ ಟ್ಯೂಷನ್ ತರಗತಿಗಳಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಾಧ್ಯಮಗಳ ಮುಂದೆ ಇಸ್ರೋ ಇಸ್ರೊ ವಿಜ್ಞಾನಿಯಾಗಿ ಪೋಸ್ ನೀಡಿದ್ದಾರೆ. ಈ ಬಗ್ಗೆ ನಾವು ಇಸ್ರೊವನ್ನು ಸಂಪರ್ಕಿಸಿದ್ದು, ನಮ್ಮ ತನಿಖೆಯಲ್ಲಿ ಪ್ರಾಥಮಿಕವಾಗಿ ಆರೋಪಿಯು ತೋರಿಸಿದ ಪತ್ರವನ್ನು ತಾನು ನೀಡಿಲ್ಲ ಎಂದು ಇಸ್ರೊ ಹೇಳಿದೆ. ಸಂಸ್ಥೆ ಶೀಘ್ರದಲ್ಲೇ ವಿವರವಾದ ಉತ್ತರವನ್ನು ಕಳುಹಿಸುತ್ತದೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: “ಮುಗಿದ ಅಧ್ಯಾಯ” ಎಂದು ಸರ್ಕಾರ ಕೈ ತೊಳದುಕೊಳ್ಳಬಾರದು – ಒಡನಾಡಿ ಸ್ಟ್ಯಾನ್ಲಿ Janashakthi Media