ಬೆಳಗಾವಿ: ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅನೇಕ ಯುವಕರನ್ನು ಯಾಮಾರಿಸಿ 19 ಲಕ್ಷ ರೂ. ನುಂಗಿದ ಖದೀಮನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ತಾಲೂಕಿನ ನಾಯಿಂಗ್ಲಜ್ ಗ್ರಾಮದ ಮಹಾಂತೇಶ ಮುಡಸೆ ಎಂಬಾತನನ್ನು ಪೊಲೀಸರು ಬಲೆಗೆ ಬೀಳಿಸಿದ್ದಾರೆ.
ದುಬೈನಲ್ಲಿರುವ ಬೆಳಗಾವಿಯ ಯುವತಿಯ ಫೋಟೊ ಕದ್ದುಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅನೇಕ ಯುವಕರನ್ನು ಯಾಮಾರಿಸಿ ಹಣ ದೋಚಿದ್ದನು. ಯುವತಿ ನೀಡಿದ ದೂರಿನ ಮೇರೆಗೆ ಮಹಾಂತೇಶನನ್ನು ಪೊಲೀಸರು ಬಂಧಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಎಂ. ಸ್ನೇಹಾ ಎಂಬ ಹೆಸರಿನಲ್ಲಿ ಮಹಾಂತೇಶ ಖಾತೆ ತೆರೆದು ಯುವತಿಯ ಫೋಟೊ ಅಪ್ ಲೋಡ್ ಮಾಡಿದ್ದಾನೆ. ನಂತರ ಅನೇಕರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸ್ನೇಹ ಬೆಳೆಸಿದ್ದಾನೆ. ಫೇಸ್‌ಬುಕ್‌ನಲ್ಲಿ ತಹರೇವಾರಿ ಫೋಟೊಗಳನ್ನು ಅಪ್‌ಲೋಡ್ ಮಾಡಿ ಯುವಕರನ್ನು ಸೆಳೆಯುತ್ತಿದ್ದನು. ಹುಡುಗಿಯ ಫೋಟೊಗಳನ್ನು ನಂಬಿ ಅನೇಕರು ಯುವಕನ ಬಲೆಗೆ ಬಿದ್ದಿದ್ದಾರೆ.
ನಂತರ ತಂದೆ, ತಾಯಿಗೆ ಹುಷಾರಿಲ್ಲ. ಆಸ್ಪತ್ರೆಗೆ ಬಂದಿದ್ದೇನೆ. ಹಣ ಕಡಿಮೆ ಇದೆ ಎಂದು ಹೇಳಿದಾಗ ಯುವಕರು ಅಕೌಂಟ್‌ಗೆ ದುಡ್ಡು ಹಾಕಿದ್ದಾರೆ. ನಿತ್ಯವೂ ಅನೇಕ ಜನರೊಂದಿಗೆ ಚಾಟ್ ಮಾಡಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು. ಹೀಗೆ 50ಕ್ಕೂ ಹೆಚ್ಚು ಯುವಕರಿಂದ 19 ಲಕ್ಷ ರೂ. ವರೆಗೆ ಬಾಚಿಕೊಂಡಿದ್ದಾನೆ. ಮಹಾಂತೇಶ ಮುಡಸೆ ಪಿಎಸ್‌ಐ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ದೈಹಿಕ ಪರೀಕ್ಷೆ ಮುಗಿಸಿ ಲಿಖೀತ ಪರೀಕ್ಷೆ ಬರೆಯುವವನಿದ್ದನು.
ತನ್ನ ಫೋಟೊ ಅಪ್‌ಲೋಡ್ ಆಗಿರುವುದನ್ನು ಗಮನಿಸಿದ ದುಬೈನಲ್ಲಿದ್ದ ಯುವತಿ ಬೆಳಗಾವಿಗೆ ಬಂದು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಮೊಬೈಲ್ ಲೋಕೇಶನ್ ಮೂಲಕ ಮಹಾಂತೇಶ ಮುಡಸೆ ಪತ್ತೆ ಹಚ್ಚಿದ್ದಾರೆ.