ಬೆಂಗಳೂರು :ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಕಾಯ್ದೆ ಪರಿಶೀಲನೆ ನಡೆಸಿದ ಬಳಿಕ ಕಾರ್ಮಿಕರು 12 ಗಂಟೆ ಕೆಲಸ ಮಾಡುವ ಬದಲಾಗಿ ಮೊದಲಿನಂತೆ 8 ಗಂಟೆಗಳಿಗೆ ಇಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕಾರ್ಖಾನೆ
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯೋಜನಾ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದ ಸಂಯುಕ್ತ ಹೋರಾಟ ವೇದಿಕೆಯ ಪದಾಧಿಕಾರಿಗಳು ಮತ್ತು ಮುಖಂಡರ ನಿಯೋಗದ ಜತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ 2023 ರಡಿಯಲ್ಲಿ 12 ಗಂಟೆ ಕೆಲಸ ಮಾಡುವ ಕಾಯ್ದೆ ಕಡ್ಡಾಯವಾಗಿ ಆಗಬೇಕೆಂದು ಇಲ್ಲ. ಈ ಬಗ್ಗೆ ಪರಿಶೀಲಿಸಿ ಅದನ್ನು ವಾಪಸ್ಸು ಪಡೆದು ಮೊದಲಿನಂತೆ 8 ಗಂಟೆಗಳಿಗೆ ಇಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
‘ರೈತರಿಂದ ಬಲವಂತವಾಗಿ ಸಾಲ ವಸೂಲು ಮಾಡಬಾರದೆಂದು ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಸೂಚಿಸಲಾಗುವುದು. ಬಗರ್ ಹುಕುಂ, ಅಕ್ರಮ – ಸಕ್ರಮ, ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಉಪ ಮುಖ್ಯಮಂತ್ರಿ, ಕಂದಾಯ, ಅರಣ್ಯ ಮತ್ತು ಕೃಷಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಶೀಘ್ರ ಕರೆಯಲಾಗುವುದು’ ಎಂದರು.
ಇದನ್ನೂ ಓದಿ : ದುಡಿಯುವ ಜನರ ಮಹಾಧರಣಿಯ ಮಹಾ ನಿರ್ಣಯ | ಕೇಂದ್ರಕ್ಕೆ ಛೀಮಾರಿ, ರಾಜ್ಯಕ್ಕೆ ಎಚ್ಚರಿಕೆ!
‘ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿಧಾನ ಪರಿಷತ್‌ನ ಅನುಮೋದನೆ ಸಿಕ್ಕಿಲ್ಲ. ಜಂಟಿ ಸಮಿತಿಯಲ್ಲಿ ಇದಕ್ಕೆ ಅನುಮೋದನೆ ಪಡೆಯಲು ಕ್ರಮ ವಹಿಸಲಾಗುವುದು. ಭೂ ಸುಧಾರಣಾ ಕಾಯ್ದೆ 79 ಎ ಹಾಗೂ ಬಿ ಪರಿಚ್ಛೇದಕ್ಕೆ ತಂದಿರುವ ತಿದ್ದುಪಡಿ ಸರಿಪಡಿಸಲಾಗುವುದು’ ಎಂದೂ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯ ಸಲಹೆಗಾರ ಬಿ.ಆರ್.ಪಾಟೀಲ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಜ್, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬು ಕುಮಾರ್, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಮುಖ್ಯಮಂತ್ರಿಯ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ ಇದ್ದರು.
ನಿಯೋಗದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕರಾದ ಜಿ.ಸಿ. ಬಯ್ಯಾರೆಡ್ಡಿ, ಬಡಗಲಪುರ ನಾಗೇಂದ್ರ, ನೂರ್‌ಶ್ರೀಧರ್, ಎಸ್ ವರಲಕ್ಷ್ಮೀ, ಮೀನಾಕ್ಷಿಸುಂದರಂ, ಜೆ ಎಂ ವೀರಸಂಗಯ್ಯ, ಪುಟ್ಟಮಾಧು, ಕೆ.ವಿ ಭಟ್ ಡಿ ಎಚ್ ಪೂಜಾರ್, ವಿಜಯ್ ಭಾಸ್ಕರ್ ಸೇರಿದಂತೆ ಹೋರಾಟ ವೇದಿಕೆಯ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ನಾಯಕರು ಇದ್ದರು.
ವಿಡಿಯೋ ನೋಡಿ: ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media