ಹರಿಯಾಣದಲ್ಲಿ ಇತ್ತೀಚೆಗೆ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಹಲವಾರು ವಿಡಿಯೊಗಳು ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಆಗುತ್ತಿವೆ ಫ್ಯಾಕ್ಟ್‌ಚೆಕ್
“ವ್ಯಕ್ತಿಯೊಬ್ಬನಿಗೆ ತೀವ್ರವಾಗಿ ಥಳಿಸಿ ಆತ ಜೀವಂತ ಇರುವಾಗಲೆ ಕೈ ಉಗುರುಗಳನ್ನು ಕಿತ್ತು ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ ದೃಶ್ಯ” ಎಂದು ಪ್ರತಿಪಾದಿಸಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಮಾನವೀಯ ವಿಡಿಯೊ ಗಲಭೆ ಪೀಡಿತ ಹರಿಯಾಣದ್ದಾಗಿದೆ ಎಂದು ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಪ್ರತಿಪಾದಿಸಿವೆ. ಫ್ಯಾಕ್ಟ್‌ಚೆಕ್
ಹರಿಯಾಣದಲ್ಲಿ ಇತ್ತೀಚೆಗೆ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಹಲವಾರು ವಿಡಿಯೊಗಳು ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಆಗುತ್ತಿವೆ. ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬನಿಗೆ ಥಳಿಸಿ ಪೊಲೀಸರ ಮುಂದೆಯೆ ಆತನ ಶರೀರದ ಮೇಲೆ ಕಾಲಿಟ್ಟು, ಪೊಲೀಸರ ನೆರವಿನೊಂದಿಗೆ ಆತನ ಕೈ ಉಗುರನ್ನು ಕಿತ್ತು ಹಾಕುವ ದೃಶ್ಯವಿದೆ. ಸಾಮಾಜಿಕ ಮಾಧ್ಯಮದ ಬಳಕೆದಾರರು ಇದು ಹರಿಯಾಣದ ದೃಶ್ಯ ಎಂಬಂತೆ ವೈರಲ್ ಮಾಡುತ್ತಿದ್ದಾರೆ.
ಫೇಸ್‌ಬುಕ್‌ನಲ್ಲಿ ಹಂಚಲಾದ ಈ ವಿಡಿಯೊವನ್ನು ಒಂದು ದಿನದಲ್ಲಿ 230ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ:ಫ್ಯಾಕ್ಟ್ ಚೆಕ್; ಚಾಂಗ್ಶಾ ನಗರದ ಬಹುಮಹಡಿ ಕಟ್ಟಡಕ್ಕೆ ಬೆಂಕಿ : ವಿರಲ್ ಆದ ಫೇಕ್ ವೀಡಿಯೋ
ಫ್ಯಾಕ್ಟ್‌ಚೆಕ್:
ವಾಸ್ತವದಲ್ಲಿ ಇದು ನೈಜ ಘಟನೆಯಲ್ಲ. Vipin Pandey Entertainment Production ಎಂಬ ಯೂಟ್ಯೂಬ್ ಚಾನೆಲ್ ರಚಿಸಿರುವ “ದೋಸ್ತಿ ಕಿ ಸಜಾ” ಎಂಬ ಕಿರು ಚಿತ್ರದ ನಿರ್ಮಾಣ ಹಂತದ ದೃಶ್ಯವಾಗಿದೆ. ”ದೋಸ್ತಿ ಕಿ ಸಜಾ” ಕಿರು ಚಿತ್ರವನ್ನು 2023ರ ಜುಲೈ 31ರಂದು ವಿಪಿನ್ ಪಾಂಡೆ ಎಂಟಟೈನ್‌ಮೆಂಟ್ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಬಿಡುಗಡೆಗೆ ಮುಂಚೆ ಅದರ ಪ್ರೊಮೋಷನ್‌ಗಾಗಿ ಚಿತ್ರದ ಮೇಕಿಂಗ್ ವಿಡಿಯವನ್ನು ವಿಪಿನ್ ಪಾಂಡೆ ಚಾನೆಲ್ ಜುಲೈ 28ರಂದು ಅಪ್‌ಲೋಡ್ ಮಾಡಿತ್ತು. ಇದೇ ವಿಡಿಯೊವನ್ನು ಹರಿಯಾಣ ಹಿಂಸಾಚಾರದ ವಿಡಿಯೊ ಎಂದು ವೈರಲ್ ಮಾಡಲಾಗಿದೆ.
ಉತ್ತರ ಪ್ರದೇಶದ ಲಕ್ನೋ ನಿವಾಸಿ ಹಾಗೂ ‘ಆರ್ಟಿಸ್ಟ್’ ಎಂದು ಬರೆದುಕೊಂಡಿರುವ ವಿಪಿನ್ ಪಾಂಡೆ ಆಗಸ್ಟ್ 6ರಂದು ಫೇಸ್‌ಬುಕ್‌ನಲ್ಲಿ ಕೂಡಾ ಈ ವಿಡಿಯೊವನ್ನು ಅಪ್‌ಲೋಡ್ ಮಾಡಿ ತಮ್ಮ ಯೂಟ್ಯೂಬ್ ಚಾನೆಲ್ ಸಬ್ಸ್‌ಕ್ರೈಬ್ ಮಾಡುವಂತೆ ಕೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಹರಿಯಾಣದ ಹಿಂಸಾಚಾರದಲ್ಲಿ ವ್ಯಕ್ತಿಯೊಬ್ಬನಿಗೆ ತೀವ್ರವಾಗಿ ಥಳಿಸಿ ಆತ ಜೀವಂತ ಇರುವಾಗಲೆ ಕೈ ಉಗುರುಗಳನ್ನು ಕಿತ್ತು ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ ದೃಶ್ಯ ಎಂದು ವೈರಲ್ ಆಗಿರುವ ಈ ವಿಡಿಯೊಗೂ, ಹರಿಯಾಣ ಹಿಂಸಾಚಾರಕ್ಕೂ ಯಾವುದೆ ಸಂಬಂಧವಿಲ್ಲ. ಈ ವಿಡಿಯೊ ”ದೋಸ್ತಿ ಕಿ ಸಜಾ” ಕಿರು ಚಿತ್ರದ ಮೇಕಿಂಗ್ ವಿಡಿಯೊವಾಗಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಧರ್ಮಸ್ಥಳ, ಉಜಿರೆಯಲ್ಲಿ 463 ಅಸಹಜ ಸಾವು – ಖಾವಂದರಿಂದ ಮಾನವ ಹಕ್ಕುಗಳ ಉಲ್ಲಂಘನೆ – ನರೇಂದ್ರ ನಾಯಕ್ ನೇರ ಆರೋಪ