“ಪ್ರತಿ ಪೀಳಿಗೆಯೂ ತನ್ನದೇ ಆದ ತುರ್ತು ಪರಿಸ್ಥಿತಿಯನ್ನು ಎದುರಿಸಲೇಬೇಕೆ?”: ಪ್ರಬೀರ್ ಪುರಕಾಯಸ್ತ

ಪ್ರಶ್ನೆಯನ್ನು 1975 ಮತ್ತು 2014 ನಂತರದ ಎರಡೂ ತುರ್ತುಪರಿಸ್ಥಿತಿಗಳಲ್ಲಿ ಬಂಧಿತರಾದ ಪ್ರಬೀರ್ ಪುರಕಾಯಸ್ತ ಕೇಳುತ್ತಾರೆ.  ಇದು ಅವರ Keeping Up the Good Fight: From the Emergency to the Present Day” ಎಂಬ ಆತ್ಮಕಥಾತ್ಮಕ ಪುಸ್ತಕದ ಕನ್ನಡ ಅನುವಾದದ ಮೊದಲ ಅಧ್ಯಾಯದ ತಲೆಬರಹ. ಇಂಜಿನಿಯರ್, ಅಖಿಲ ಭಾರತ ಜನ ವಿಜ್ಞಾನ ಚಳುವಳಿಯ ಸಂಸ್ಥಾಪಕರಲ್ಲೊಬ್ಬ, ವಿಜ್ಞಾನತಂತ್ರಜ್ಞಾನ ನೀತಿ ಪರಿಣತ, ರಾಜಕೀಯ ಆಕ್ಟಿವಿಸ್ಟ್, ಚಿಂತಕ, ಲೇಖಕ, ಜನತಾ ಮಾಧ್ಯಮದ ಸಂಸ್ಥಾಪಕರಲ್ಲೊಬ್ಬಪ್ರಬೀರ್ ಇವೆಲ್ಲವೂ ಆಗಿದ್ದರು. ಪುಸ್ತಕ ಇವೆರಡು ತುರ್ತುಪರಿಸ್ಥಿತಿಗಳ ನಡುವಿನ ದಶಕಗಳ ಅವರ ವಿಶಿಷ್ಟ ಬದುಕಿನ ನೆನಪುಗಳು. ಕನ್ನಡ ಅನುವಾದದ ಹೆಸರುಆರದ ಹೋರಾಟದ ಕಿಚ್ಚು’. ಇದನ್ನು ಸದಾನಂದ ಆರ್ ಅನುವಾದಿಸಿದ್ದು ಅಭಿರುಚಿ ಪ್ರಕಾಶನ ಪ್ರಕಟಿಸಿದೆ. ಇದರ ಬಿಡುಗಡೆ ಸಮಾರಂಭ ಕ್ರಿಯಾ ಮಾಧ್ಯಮದ ಜತೆ ಸಹಯೋಗದಲ್ಲಿ ಜೂನ್ 21ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ. ಸಂದರ್ಭದಲ್ಲಿ ಪುಸ್ತಕದ ಝಲಕ್ ಕೊಡುವ ಮೊದಲ ಅಧ್ಯಾಯದ ಆಯ್ದ ಭಾಗಗಳು. ತುರ್ತು ಪರಿಸ್ಥಿತಿ

1

1975, ಸೆಪ್ಟೆಂಬರ್ 25 ಮುಂಜಾನೆ.

ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆ.ಎನ್.ಯು) ಆ ಮುಂಜಾನೆ ಎಂದಿನ ಮುಂಜಾನೆಯಂತೆ ಇರಲಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿತ್ತು.  ವಿದ್ಯಾರ್ಥಿ ಸಂಘದ ಚುನಾಯಿತ ಸದಸ್ಯರಾದ ಕು. ಅಶೋಕಲತ ಜೈನ್ ಅವರ ಉಚ್ಚಾಟನೆಯನ್ನು ವಿರೋಧಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕರೆ ನೀಡಿದ್ದ ಪ್ರತಿಭಟನೆ ಇದಾಗಿತ್ತು. ಸ್ವಲ್ಪ ಬಿಗುವಿನ ವಾತಾವರಣ ಕ್ಯಾಂಪಸ್‌ನಲ್ಲಿತ್ತು. ಈ ಹೊತ್ತಿಗೆ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಮೂರು ತಿಂಗಳು ಕಳೆದಿತ್ತು.

ನಾನಂದು ಭಾಷಾ ವಿಭಾಗದ (School of Languages) ಮುಂದಿದ್ದ ಹುಲ್ಲು ಹಾಸಿನ ಮೇಲೆ ಕೆಲವು ಎಸ್‌ಎಫ್‌ಐ ಗೆಳೆಯರೊಂದಿಗೆ ಕುಳಿತಿದ್ದೆ. ಅಲ್ಲಿಗೆ ದಿಢೀರನೆ ಬಂದ ಕಪ್ಪು ಬಣ್ಣದ ಅಂಬಾಸಿಡರ್ ಕಾರಿನಿಂದ ಓರ್ವ ದಪ್ಪಗಿನ ವ್ಯಕ್ತಿ ಇಳಿದರು. ಇಳಿದವರೆ ನೇರವಾಗಿ ನನ್ನ ಬಳಿ ಬಂದು “ನೀನು ಡಿ.ಪಿ.ತ್ರಿಪಾಠಿಯೇ?” ಎಂದು ಕೇಳಿದರು. ನಾನು “ಇಲ್ಲ” ಎಂದೆ. ಡಿ.ಪಿ.ತ್ರಿಪಾಠಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದವರು. ಆದರೆ ನನ್ನನ್ನು ನಂಬಲು ಡಿಐಜಿ ಪಿ.ಎಸ್. ಬಿಂದರ್ ಸಿದ್ಧರಿರಲಿಲ್ಲ. ಮಫ್ತಿಯಲ್ಲಿದ್ದ ಅವರು ಮತ್ತವರ ಕಡೆಯವರು ನನ್ನನ್ನು ಹಾಡು ಹಗಲೇ ಅಪಹರಿಸಿಯೇಬಿಟ್ಟರು. ಹೀಗೆ ಅಪಹೃತನಾದ ಮೇಲೆ ನಾನು ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ (MISA-Maintenance of Internal Security Act) – ಮೀಸಾದಡಿಯಲ್ಲಿ ಒಂದು ವರ್ಷ ಜೈಲಿನಲ್ಲಿರಬೇಕಾಯಿತು.

ನಾವೀಗ ಐದು ದಶಕಗಳನ್ನು ದಾಟಿ ಮುಂದೆ ಬರೋಣ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿಯಲ್ಲಿ ಬಿಜೆಪಿ ಸರ್ಕಾರ 2014ರಿಂದ ಅಧಿಕಾರದಲ್ಲಿದೆ. ಎರಡನೇ ಅವಧಿಗೆ 2019ರಲ್ಲಿ ಚುನಾಯಿತವಾಯಿತು. ನಮಗೆಲ್ಲಾ ಚಿರಪರಿಚಿತವಾಗಿದ್ದ ಭಾರತವು ಈಗ ಬದಲಾಗುತ್ತಿದೆ.

2021 ಫೆಬ್ರವರಿ 9 ಮುಂಜಾನೆ

ಮತ್ತದೇ ಮುಂಜಾನೆ. ಆದರೆ ನಾನು ಈ ಬಾರಿ ಮನೆಯಲ್ಲಿದ್ದೆ. ಬೆಳಗಿನ ಉಪಹಾರವನ್ನು ಸೇವಿಸಿ, ದಿನಪತ್ರಿಕೆಗಳನ್ನು ಓದುತ್ತಾ ಕುಳಿತಿದ್ದೆ. ಮನೆಯ ಡೋರ್‌ಬೆಲ್ ಸದ್ದು ಮಾಡಿತು. ಬಾಗಿಲು ತೆರೆದು ನೋಡಿದರೆ, ಬಾಗಿಲ ಬಳಿ ಒಂದಷ್ಟು ಜನರ ಗುಂಪು. ಒಬ್ಬಾತನ ಕೈಯಲ್ಲಿ ಸರ್ಕಾರದ ಅಧಿಕೃತ ಪತ್ರದಂತೆ ಕಾಣುವ ಪತ್ರವೊಂದಿತ್ತು. ನಾವು ಜಾರಿ ನಿರ್ದೇಶನಾಲಯದವರು (ಇ.ಡಿ)  ಎಂದಾತ ಘೋಷಿಸಿದ. ಇ.ಡಿ ದಾಳಿ ನಡೆಸಲು ಸಿದ್ಧವಾಗಿ ಬಂದಿತ್ತು. ನಾನು ನ್ಯೂಸ್ ಕ್ಲಿಕ್ ಅನ್ನೋ ಡಿಜಿಟಲ್ ಸುದ್ದಿತಾಣವನ್ನು 2009ರಲ್ಲಿ ಸ್ಥಾಪಿಸಿದ್ದೆ. ಇ.ಡಿ ದಾಳಿಯ ಗುರಿ ಅದೇ ಆಗಿತ್ತು. ನ್ಯೂಸ್‌ಕ್ಲಿಕ್ ಸ್ಥಾಪನೆಯಾದ ಮೇಲೆ ಸಾಕಷ್ಟು ಕೆಲಸವನ್ನು ಮಾಡುವುದರ ಜೊತೆಗೆ ಸಾಕಷ್ಟು ಓದುಗರನ್ನು ಅದು ಗಳಿಸಿಕೊಂಡಿತ್ತು.

ಈ ದಾಳಿ ಐದು ದಿನಗಳವರೆಗೆ ನಿರಂತರವಾಗಿ ಸಾಗಿತು – ಒಟ್ಟು 113 ಗಂಟೆಗಳ ದಾಳಿ. ಇದು ಖಾಸಗಿ ನಿವಾಸದ ಮೇಲೆ ನಡೆದ ಅತ್ಯಂತ ದೀರ್ಘವಾದ ದಾಳಿಗಳಲ್ಲಿ ಒಂದಾಗಿದೆ ಎಂದು ದಾಖಲೆಗಳು ತಿಳಿಸುತ್ತವೆ. .. ..ಇ.ಡಿಯವರಿಗೆ ನನ್ನ ಮನೆಯ ಹುಡುಕಾಟ ನಡೆಸಲು ಅಷ್ಟು ಸಮಯ ಬೇಕಿರಲಿಲ್ಲ. ನನ್ನ ಮನೆ ಜಾಲಾಡಲು ಅವರಿಗೆ ಒಂದರೆಡು ಗಂಟೆಗಳು ಸಾಕಾಗಿತ್ತು. ಆದರೆ ಅವರ ಮುಂದೊಂದು ಹೈಟೆಕ್ ಸಮಸ್ಯೆ ಇತ್ತು: ಗೂಗಲ್‌ನಿಂದ ನನ್ನ ಬೃಹತ್ ಪ್ರಮಾಣದ ಡೇಟಾವನ್ನು ಸಂಪೂರ್ಣವಾಗಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಏಕೆಂದರೆ ಒಂದು ಹಂತದ ನಂತರ ಗೂಗಲ್ ಡೌನ್‌ಲೋಡ್ ವೇಗವನ್ನು ತಾನಾಗಿಯೇ ಕಡಿಮೆ ಮಾಡುತ್ತದೆ. ಹಾಗಾಗಿ ಡೌನ್‌ಲೋಡಿಂಗ್ ಕೆಲಸ ಅನೇಕ ಗಂಟೆಗಳವರೆಗೆ ಸಾಗುತ್ತದೆ. ನಾನು ಡೇಟಾ ನಿರ್ವಹಣೆಯಲ್ಲಿ ತೋರಿಸಿದ್ದ ಅಸಡ್ಡೆ ಇ.ಡಿಯವರಿಗೂ ತೊಡಕಾಯಿತು ಮತ್ತು ನನಗಂತೂ ಮಾರಕವಾಯಿತು. ಅಲ್ಲ ನೀವೇ ಹೇಳಿ -ಐದು ದಿನಗಳವರೆಗೆ ಒಂದು ಇಲಾಖೆಗೆ-ಅದರಲ್ಲೂ ಇ.ಡಿಗೆ-ಆತಿಥ್ಯ ನೀಡುವುದು ಎಂದರೆ? ನನ್ನ ಶಕ್ತಿಯನ್ನು ಮೀರಿದ ಕೆಲಸ. ನಾನಂತು ಸುಸ್ತಾದೆ.

ಇದನ್ನೂ ಓದಿ : ಯಾಂತ್ರೀಕರಣ ಮತ್ತು ನಿರುದ್ಯೋಗ ತುರ್ತು ಪರಿಸ್ಥಿತಿ

ನಾನು ಜೆ.ಎನ್.ಯು ನ ವಿದ್ಯಾರ್ಥಿ ಸಂಘದ ಪ್ರತಿಭಟನೆಯ ಭಾಗವಾಗಿ “ಅಂದಿನ ತುರ್ತು ಪರಿಸ್ಥಿತಿಗೆ” ಮುಖಾಮುಖಿಯಾಗಿದ್ದೆನು. ಡಿ.ಪಿ.ತ್ರಿಪಾಠಿ, ಅಶೋಕಲತಾ (ನಾವೆಲ್ಲ ಕೇವಲ ಅಶೋಕ ಎನ್ನುತ್ತಿದ್ದೆವು), ಸೀತಾರಾಮ (ಯಚೂರಿ) ಮತ್ತಿತರರು ಈ ಪ್ರತಿಭಟನೆಯ ಮುಂದಾಳುಗಳಾಗಿದ್ದರು. ನಾನು ಈಗ ಮುಖಾಮುಖಿಯಾಗಿರುವ ಇಂದಿನ ತುರ್ತು ಪರಿಸ್ಥಿತಿ, ಅಂದಿನ ತುರ್ತು ಪರಿಸ್ಥಿತಿಗಿಂತ ಭಿನ್ನವಾದ ಪರಿಸರ ಹಾಗೂ ಭಿನ್ನವಾದ ಕಾರಣಗಳಿಂದಾಗಿದೆ. ನಾನು ಆರಂಭಸಿದ್ದ ನ್ಯೂಸ್‌ಕ್ಲಿಕ್ ಅನ್ನೋ ಮುಷ್ಟಿ ಗಾತ್ರದ ಸುದ್ದಿ ಸಂಸ್ಥೆಯನ್ನು ಅದೇಕೋ ಕಾಣೆ ಸಮಸ್ಯೆ ಅಂತ ಪ್ರಭುತ್ವ ಗುರುತಿಸಿ ಬಿಟ್ಟಿದೆ. ನ್ಯೂಸ್‌ಕ್ಲಿಕ್ ಅನೇಕ ವಿದ್ಯಮಾನಗಳನ್ನು ವರದಿ ಮಾಡಿದೆ. ಸರ್ಕಾರದ ಕೆಂಗಣ್ಣಿಗೆ ಬೀಳುವ ತುಸು ಮೊದಲು ರೈತರ ಚಳುವಳಿಯನ್ನು ವಿವರವಾಗಿ ವರದಿಸಿತ್ತು. ರೈತ ಚಳುವಳಿಯನ್ನು ಸೂಕ್ಷö್ಮವಾಗಿ ಮತ್ತು ವಿವರಬದ್ಧವಾಗಿ ನ್ಯೂಸ್‌ಕ್ಲಿಕ್ ವರದಿ ಮಾಡಿದಾಗ, ಅದರ ಓದುಗರು ಭಾರತ ದೇಶಕ್ಕೆ ಮಾತ್ರ ಸೀಮಿತಗೊಳ್ಳದೇ, ಹೊರ ದೇಶಗಳಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಆದರೆ ನ್ಯೂಸ್‌ಕ್ಲಿನಿಕ್‌ನಲ್ಲಿ ಈ ವರದಿಗಳು ಬಂದ ಮೇಲೂ ಅಂತಹ ವಿಶೇಷವೇನು ನಡೆದಿರಲಿಲ್ಲ. ನಮ್ಮಂತಹ ಅನೇಕ ಡಿಜಿಟಲ್ ಸಂಸ್ಥೆಗಳು ಮತ್ತು ಕೆಲವು ಮುಖ್ಯವಾಹಿನಿಗೆ ಸೇರಿದ ಚಾನೆಲ್‌ಗಳು ಜನರ ಮೇಲೆ ನಡೆಯುತ್ತಿದ್ದ ಹಲ್ಲೆಗಳನ್ನು, ಜನರ ಜೀವನದ ಅವಕಾಶಗಳನ್ನು ಕಸಿಯುವ ಯತ್ನಗಳನ್ನು ಮತ್ತು ಇವುಗಳ ಕಾರಣದಿಂದಾಗಿ ನಡೆಯುತ್ತಿರುವ ಸಾರ್ವಜನಿಕ ಪ್ರತಿಭಟನೆಗಳನ್ನು ನಮ್ಮಂತೆಯೇ ವರದಿ ಮಾಡುತ್ತಿದ್ದವು. ನಮ್ಮ ರೀತಿಯೇ ಇನ್ನೂ ಕೆಲವು ಸುದ್ದಿ ಸಂಸ್ಥೆಗಳು ಸರ್ಕಾರದ ನಿಗಾದಲ್ಲಿದ್ದವು.

ನಾನಾಗಲಿ ಇಲ್ಲವೇ ನನ್ನ ಸಂಸ್ಥೆಯಾದ ನ್ಯೂಸ್‌ಕ್ಲಿಕ್ ಆಗಲಿ ಎದುರಿಸುತ್ತಿರುವ ಪ್ರಕರಣಗಳ ಕುರಿತಾಗಲಿ ಇಲ್ಲವೇ ವಿವಿಧ ಸುದ್ದಿ ಸಂಸ್ಥೆಗಳು ಈ ಕುರಿತು ನಡೆಸಿದ ತೀವ್ರವಾದ ಪ್ರಚಾರ ಹಲ್ಲೆಯ ಕುರಿತಾಗಲಿ ಹೆಚ್ಚಿನ ವಿವರಗಳನ್ನು ನಾನಿಲ್ಲಿ ಚರ್ಚಿಸುವುದಿಲ್ಲ. ಪ್ರಕರಣಗಳು ಕೋರ್ಟಿನಲ್ಲಿವೆ ಮತ್ತು ಅವುಗಳನ್ನು ಅಲ್ಲಿಯೇ ನಿಭಾಯಿಸಿಕೊಳ್ಳುತ್ತೇನೆ. ನನಗೆ ಸುದ್ದಿಯಾಗುವ ಯಾವ ಆಸೆಯೂ ಇಲ್ಲ. ಅದೇ ರೀತಿಯಲ್ಲಿ ನ್ಯೂಸ್‌ಕ್ಲಿಕ್‌ಗೂ ಸಹಾ ಅಷ್ಟೆ. ನ್ಯೂಸ್‌ಕ್ಲಿಕ್‌ನ ಕೆಲಸ ಸುದ್ದಿ ನೀಡುವುದು ಮಾತ್ರ; ಸುದ್ದಿಯಾಗುವುದು ಅಲ್ಲ. ನ್ಯೂಸ್‌ಕ್ಲಿಕ್ ಸ್ಥಾಪನೆಯಾದಗಿನಿಂದ ಮಾಡುತ್ತಿರುವ ಕೆಲಸವನ್ನೇ ಮುಂದೆಯೂ ಸಹಾ ಮಾಡಿಕೊಂಡು ಹೋಗಲಿದೆ. ಅದರ ಕೆಲಸ ಇಷ್ಟೆ; ತಳಮಟ್ಟದಲ್ಲಿ ನಡೆಯುವ ಜನರ ಆಂದೋಲನಗಳನ್ನು ಅರಿಯುವುದು ಮತ್ತು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾಗುವ ಅವರ ಧ್ವನಿಗಳಿಗೊಂದು ವೇದಿಕೆಯಾಗುವುದು.

2

ನಾನೊಂದು ವೈಯಕ್ತಿಕ ಮಾಹಿತಿಯನ್ನು ಇಲ್ಲಿ ಹೇಳಬೇಕಿದೆ. 2015ರಲ್ಲಿ ಪ್ರಧಾನಮಂತ್ರಿಗಳಿಂದ ನನಗೊಂದು ಆಮಂತ್ರಣ ಬಂದಿತ್ತು. 1975ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಹೋರಾಡಿದವರನ್ನು ಗೌರವಿಸುವ ಕಾರ್ಯಕ್ರಮವಿದಾಗಿತ್ತು. ಇದೊಂದು ವಿಡಂಬನೆಯಾಗಿ ನನಗೆ ತೋರಿತು. 1975ರ ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿಯನ್ನು ಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿರುವ ಸರ್ಕಾರ, ಅಂದಿನ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಿಗೆ ಸನ್ಮಾನಿಸುವುದು ಸೋಜಿಗದ ವಿಚಾರವೆಂದು ನನಗೆ ಕಂಡಿತು. ಇಂದಿರಾ ಗಾಂಧಿಯವರು ಜಾರಿಗೆ ತಂದ ತುರ್ತು ಪರಿಸ್ಥಿತಿಯಲ್ಲಿ ಅನೇಕ ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಬಂಧನಕ್ಕೆ ಒಳಗಾಗಿದ್ದರು. ಅವರು ಅಂದು ಅನುಭವಿಸಿದ ಅನುಭವಗಳ ಆಧಾರದ ಮೇಲೆ ಇಂದಿನ ತುರ್ತು ಪರಿಸ್ಥಿತಿಯನ್ನು ಕಟ್ಟುತ್ತಿರಬಹುದು ಅನ್ನೋ ಸಂಶಯ ನನ್ನಲ್ಲಿ ಮೂಡಿತು. ಅಥವಾ ಇಂತಹ ತಂತ್ರಗಳನ್ನು ರೂಪಿಸುವ ಮತ್ತು ಬಳಸುವ ತರಬೇತಿಯನ್ನು ಅಂದಿನ ಕಾಲದಲ್ಲೇ ಪೂರ್ಣವಾಗಿ ಇವರು ಪಡೆದುಕೊಂಡಿದ್ದರೋ ಏನೋ! ಒಟ್ಟಿನಲ್ಲಿ ನನಗಿದೊಂದು ಸೋಜಿಗದ ಅಂಶವಾಯಿತು.

ಜೂನ್‌ 21 ರ ಪುಸ್ತಬ ಬಿಡುಗಡೆಯ ಆಹ್ವಾನ ಪತ್ರಿಕೆ
ಜೂನ್‌ 21 ರ ಪುಸ್ತಬ ಬಿಡುಗಡೆಯ ಆಹ್ವಾನ ಪತ್ರಿಕೆ

ಆಮಂತ್ರಣಕ್ಕೆ ನಾನು ನೀಡಿದ ಲಿಖಿತ ರೂಪದ ಉತ್ತರ ಹೀಗಿತ್ತು:

ಅಕ್ಟೋಬರ್ 15, 2015ರಂದು ಆಯೋಜಿತವಾಗಿರುವ ‘ಲೋಕತಂತ್ರ ಪ್ರಹಾರ್ ಅಭಿನಂದನ್’ ಕಾರ್ಯಕ್ರಮದ ಆಮಂತ್ರಣ ನನಗೆ ತಲುಪಿದೆ. ಅಂದು ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರ ದಿವ್ಯ ಉಪಸ್ಥಿತಿಯಲ್ಲಿ ತುರ್ತು ಪರಿಸ್ಥಿಯ ವಿರುದ್ಧ ಹೋರಾಡಿದ್ದವರಲ್ಲಿ ಕೆಲವರಿಗೆ ಸನ್ಮಾನಿಸುತ್ತಿರುವುದು ನನಗೆ ವೇದ್ಯವಾಗಿದೆ.

ಬಹುಶಃ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಒಂದು ವರ್ಷದ ಕಾಲ ಬಂಧಿತನಾಗಿದ್ದವನು ಎನ್ನುವ ಕಾರಣಕ್ಕೆ ಸಭೆಯಲ್ಲಿ ಸಭಿಕನಾಗಿ ಹಾಜರಿರಲು ನನಗೆ ಆಮಂತ್ರಣ ನೀಡಲಾಗಿದೆಯೆಂದು ನಾನು ಗ್ರಹಿಸಿದ್ದೇನೆ.

ಅಧಿಕಾರಕ್ಕೆ ಅಧೀನವಾಗಿ ಬದುಕುವ ಪರಿಸ್ಥಿತಿಯನ್ನು ತುರ್ತು ಪರಿಸ್ಥಿತಿ ನಿರ್ಮಿಸಿತ್ತು. ಆಡಳಿತಯಂತ್ರದ ಬೆಂಬಲ ಪಡೆದ ರಾಜಕೀಯ ದಗಾಕೋರರು ಅಂದು ಅಧಿಕಾರವನ್ನು ನಡೆಸಿದ್ದರು. ಸರ್ವಾಧಿಕಾರಿ ಸರ್ಕಾರ ಹೇಗಿರುತ್ತೆ ಎನ್ನುವುದು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ ನಮ್ಮಂತಹವರಿಗೆ ಚೆನ್ನಾಗಿ ತಿಳಿದಿದೆ. ಸ್ವತಂತ್ರ ಅಭಿವ್ಯಕ್ತಿ ಹಕ್ಕಿನ ಮಹತ್ವ ಏನು ಅನ್ನುವುದು ನಮಗೆ ತಿಳಿದಿದೆ. ಸರ್ವಾಧಿಕಾರಿ ಧೋರಣೆಯ ಸರ್ಕಾರಗಳನ್ನು ಹೇಗೆ ಪ್ರತಿರೋಧಿಸಬೇಕೆಂಬ ರೀತಿಗಳು ನಮ್ಮಂತಹವರಿಗೆ ತಿಳಿದಿವೆ. ತುರ್ತು ಪರಿಸ್ಥಿತಿಯನ್ನು ಹಿಂಪಡೆದಾಗ ಜೈಲಿನಿಂದ ಹೊರಬಂದ ನಾವು ಇನ್ನೆಂದಿಗೂ ಭಾರತದಲ್ಲಿ ಸರ್ವಾಧಿಕಾರಿ ಸರ್ಕಾರ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲವೆಂದು ಗ್ರಹಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ.

ಅಂದಿನ ತುರ್ತು ಪರಿಸ್ಥಿಯನ್ನು ಜೀವಿಸಿದ್ದ ನಾನು, ನನ್ನ ಕಿರಿ ವಯಸ್ಸಿನ ಸಹದ್ಯೋಗಿಗಳೊಂದಿಗೆ, ಸ್ನೇಹಿತರು ಮತ್ತು ಕಾಮ್ರೇಡ್‌ಗಳೊಂದಿಗೆ ಮತ್ತೇನು ಹಂಚಿಕೊಳ್ಳಲು ಸಾಧ್ಯವಿದೆ? 1975ರ ತುರ್ತು ಪರಿಸ್ಥಿತಿಯನ್ನು ಇಡಿಯಾಗಿ ನೋಡಿದರೂ ಇಲ್ಲವೇ ಆ ಒಂದು ದಿನಕ್ಕೆ ಸೀಮಿತವಾಗಿ ನೋಡಿದರೂ ಸರಿಯೇ, ನಾನದರ ಬಲಿಪಶುವೆಂದು ನಾನು ಒಪ್ಪಿಕೊಳ್ಳುವುದಿಲ್ಲ. ನಮ್ಮನ್ನು ನಾವು ಬಲಿಪಶುವೆಂದು ಗ್ರಹಿಸಿಕೊಂಡಾಗ, ಇತಿಹಾಸ ಸೃಷ್ಟಿಗೊಂಡ ಪ್ರಕ್ರಿಯೆಯಿಂದ ದೂರವಾಗಿ ಬಿಡುತ್ತೇವೆ. ಬದಲಿಗೆ ಜನರು ಇತಿಹಾಸದ ಸೃಷ್ಟಿಕಾರರು ಎನ್ನುವ ನೆಲೆಯಲ್ಲಿ ನಿಂತು ನಾನು ಇಡೀ ಪ್ರಕ್ರಿಯೆಯನ್ನು ಗ್ರಹಿಸುತ್ತೇನೆ. ಯಾವುದೇ ಸರ್ಕಾರ ಜನರ ಮೇಲೆ ಮತ್ತು ವಿವಿಧ ಸಂಸ್ಥೆಗಳ ಮೇಲೆ ಹಿಡಿತವನ್ನು ಹೊಂದುವ ಅಧಿಕಾರವನ್ನು ಹೊಂದಿರುತ್ತದೆ. ಅದರೆ ಜನ ತಮ್ಮ ಕೆಲಸ ಮತ್ತು ವರ್ತನೆಯ ಮೂಲಕ ಇತಿಹಾಸವನ್ನು ನಿರ್ಮಿಸುತ್ತಾರೆ. ನಮಗೆ ಸೃಷ್ಟಿಯಾದ ಇತಿಹಾಸವು ಸಹ್ಯವೋ ಅಸಹ್ಯವೋ ಅನ್ನುವುದು ಬೇರೆ ವಿಚಾರವಾಗುತ್ತದೆ. ಹೀಗೆ ಸೃಷ್ಟಿಯಾಗುವ ಇತಿಹಾಸವನ್ನು ಜನರಾಗಲೀ ಸರ್ಕಾರವಾಗಲೀ ಊಹಿಸಲು ಅಸಾಧ್ಯವಾಗಿರುತ್ತದೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಅಂತಿಮವಾಗಿ 1977ರಲ್ಲಿ ಅಂತ್ಯವಾದಾಗ, ಇಂತಹದೊದು ಅಂತ್ಯ ಕಾಣಬಹುದೆಂಬ ಕಲ್ಪನೆಯು ವಿರೋಧ ಪಕ್ಷಗಳಿಗೂ ಇರಲಿಲ್ಲ. ತುರ್ತು ಪರಿಸ್ಥಿಯ ಹೇರಿಕೆಯಿಂದ ಬೇಸತ್ತಿದ್ದ ಪ್ರಜೆಗಳು ತುಸು ಹಿಂಜರಿತದಲ್ಲೇ ಇದ್ದ ವಿರೋಧ ಪಕ್ಷಗಳನ್ನು ಅಧಿಕಾರಕ್ಕೆ ಕೂರಿಸಿದರು. ಒಂದೆಡೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಶಾಕ್‌ಗೆ ಒಳಗಾದರೆ, ಇನ್ನೊಂದೆಡೆ ಅಧಿಕಾರಕ್ಕೆ ಬಂದ ವಿರೋಧ ಪಕ್ಷಗಳು ಸಹಾ ಶಾಕ್‌ಗೆ ಒಳಗಾದವು. ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ರಂಗಮಂಚವನ್ನು ಪೂರ್ಣವಾಗಿ ಆಕ್ರಮಿಸಿಕೊಂಡಿದ್ದರೆ, ಅದನ್ನು ಉಚ್ಛಾಟಿಸುವ ಕ್ರಿಯೆಯಲ್ಲಿ ಪ್ರಜೆಗಳು ರಂಗಮಂಚವನ್ನು ಪೂರ್ಣವಾಗಿ ಆಕ್ರಮಿಸಿಬಿಟ್ಟರು.

ಎಂದಿಗೂ ಜನರ ಮೌನವನ್ನು ಒಪ್ಪಿಗೆಯೆಂದು ತಿಳಿಯಬಾರದು. ನಮ್ಮ ತಲೆಮಾರಿನವರು ತುರ್ತು ಪರಿಸ್ಥಿತಿಯಿಂದ ಕಲಿತ ಪಾಠವಿದು. ಶ್ರೀಮತಿ ಗಾಂಧಿಯವರಿಗೆ ಪ್ರಜೆಗಳು ಸ್ವತಂತ್ರರಾಗಿ ಚುನಾವಣೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಿಪಡಿಸುವ ಅವಕಾಶ ಇರಬೇಕೆಂದು ತಿಳಿದಿತ್ತು. ಆದರೆ ಈಗಿರುವ ಸರ್ಕಾರ ಸ್ವತಂತ್ರವಾಗಿದ್ದೇವೆಂಬ ತೋರಿಕೆಯ ಆಟವನ್ನು ಸೃಷ್ಟಿಸಿದರೆ ಸಾಕೆಂಬ ನಂಬಿಕೆಯನ್ನು ಹೊಂದಿದೆ. ಇಂತಹ ತೋರಿಕೆಯ ಆಟದ ಮೂಲಕ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾಗಳ ಪೂರ್ಣ ಹಿಡಿತ ಸಾಧಿಸಿ ತನಗೆ ಬೇಕಾದಂತೆ ಅವುಗಳನ್ನು ನಿಯಂತ್ರಿಸಬಹುದೆಂದು ನಂಬಿದೆ. ಇಂತಹ ಪರಿಸ್ಥಿತಿ ಅಲ್ಪಕಾಲದವರೆಗೆ ಇರಲು ಅವಕಾಶವಿದೆ. ಕೆಲವು ಸೀಮಿತ ರಾಜ್ಯಗಳಲ್ಲಿ “ನಿಮ್ಮ ನೆರೆಯವರೊಂದಿಗೆ ಯುದ್ಧ ಮಾಡುತ್ತಿದ್ದೀರಿ ಎಂದು ನಂಬಿಸಿ, ದೇಶದ ಉಳಿವಿಗೆ ಮಹಾನಾಯಕ ಬೆನ್ನಿಗೆ ನಿಲ್ಲಿರಿ” ಎಂದು ಕರೆ ನೀಡಬಹುದಾಗಿದೆ. ಆದರೆ ಇದನ್ನೂ ದೀÃರ್ಘಕಾಲದವರೆಗೆ, ದೇಶದಾದ್ಯಂತ ಸಾಧಿಸಲು ಸಾಧ್ಯವಿರುವುದಿಲ್ಲ. ಇಂಗ್ಲಿಷ್ ಕವಿ ಶೆಲ್ಲಿ ಹೇಳಿದ ಅಮರ ಸಾಲು ಹೀಗಿದೆ: ನೀವು ಬಹು ಸಂಖ್ಯೆಯವರು; ಅವರು ಅಲ್ಪ ಸಂಖ್ಯೆಯವರು.

1975ರ ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ತುರ್ತು ಪರಿಸ್ಥಿತಿಯನ್ನು ಸೃಜಿಸುತ್ತಿರುವ ಸರ್ಕಾರದ ಆಶ್ರಯದಲ್ಲಿ ಅಂದಿನ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಕ್ಷಣವನ್ನು ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸುವುದು ಒಂದು ಲೇವಡಿಯ ಕಾರ್ಯವೇ ಸರಿ. ಅಂದಿನ ತುರ್ತು ಪರಿಸ್ಥಿತಿಯನ್ನು ಸೋಲಿಸಿದ ಪ್ರತಿರೋಧವನ್ನು ಇಂದು ಮರು ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ. ಅಂದು ನಯನತಾರ ಸಹಗಲ್ ಹೇಳಿದಂತೆ, “ಭಾರತವನ್ನು ಹಾಳು ಮಾಡಲು ಹೊರಟಿರುವ ಶಕ್ತಿಗಳ” ವಿರುದ್ಧ ನಮ್ಮ ಹೋರಾಟ ತೀವ್ರವಾಗಬೇಕಿದೆ.

************

ಈ ವಿಡಿಯೋ ನೋಡಿ : POSH ಕಾಯ್ದೆ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?Janashakthi Media ತುರ್ತು ಪರಿಸ್ಥಿತಿ

 

Donate Janashakthi Media

Leave a Reply

Your email address will not be published. Required fields are marked *