ಪ್ರಕಾಶ್ ಕಾರಟ್
ಬೆಂಜಮಿನ್ ನೇತ್ಯಾನಹು ಕಳೆದ ವರ್ಷದ ಕೊನೆಯಲ್ಲಿ ತೀವ್ರ-ಬಲಪಂಥೀಯ ಹಾಗೂ ಅತಿಸಂಪ್ರದಾಯವಾದಿ ಧಾರ್ಮಿಕ ಪಕ್ಷಗಳನ್ನು ಒಳಗೊಂಡ ಸಮ್ಮಿಶ್ರ ಸರಕಾರವನ್ನು ರಚಿಸಿದ್ದಾರೆ. ಅಂದಿನಿಂದ ಇಸ್ರೇಲಿ ಭದ್ರತಾ ಪಡೆಗಳು ಮತ್ತು ಯೆಹೂದಿ ವಸಾಹತುವಾದಿಗಳು(ಸೆಟ್ಲರ್‌ಗಳು) ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರ ವಿರುದ್ಧದ ಆಕ್ರಮಣಗಳನ್ನು ಸತತವಾಗಿ ಹೆಚ್ಚಿಸಿದ್ದಾರೆ.
ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ಪಶ್ಚಿಮ ದಂಡೆಯನ್ನು ಇಸ್ರೇಲ್‌ನಲ್ಲಿ ವಿಲೀನಗೊಳಿಸುವುದಾಗಿ ನೇತ್ಯಾನಹು ಸರಕಾರ ಘೋಷಿಸಿದೆ. ಪಶ್ಚಿಮ ದಂಡೆಯು 1967ರಿಂದಲೂ ಇಸ್ರೇಲ್ ಆಕ್ರಮಿಸಿರುವ ಪ್ರದೇಶ ಎಂದು ಅಂತರರಾಷ್ಟ್ರೀಯ ಕಾನೂನು ಪರಿಗಣಿಸಿದೆ.
ಇಸ್ರೇಲ್ ಸರಕಾರ ಫೆಬ್ರವರಿ ಮಧ್ಯ ಭಾಗದಲ್ಲಿ ಪಶ್ಚಿಮ ದಂಡೆಯ ಹಿಂದಿನ ಒಂಬತ್ತು ಅಕ್ರಮ ವಸಾಹತುಗಳನ್ನು ಅಧಿಕೃತಗೊಳಿಸಿದೆ. ಈ ವಸಾಹತುಗಳಲ್ಲಿ 10,000 ಹೊಸ ಮನೆಗಳೂ ಇರಲಿವೆ.
ಇಸ್ರೇಲ್ 1967ರ ಅತಿಕ್ರಮಣದ ನಂತರದಿಂದ, ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ 140 ವಸಾಹತುಗಳನ್ನು ಕಟ್ಟಿದ್ದು ಆರು ಲಕ್ಷ ಯೆಹೂದಿ ಸೆಟ್ಲರ್‌ಗಳು ಅಲ್ಲಿ ನೆಲೆಸಿದ್ದಾರೆ. ಯೆಹೂದಿ ಸೆಟ್ಲರ್‌ಗಳ ಅಕ್ರಮ ಒತ್ತುವರಿಯ ನಿರಂತರ ಒತ್ತಡವಲ್ಲದೆ ಪಶ್ಚಿಮ ದಂಡೆಯಲ್ಲಿ ನೆಲೆಸಿದ ಪ್ಯಾಲೆಸ್ತೀನಿಯರನ್ನು ಅವರ ಮನೆಗಳು ಮತ್ತು ಭೂಮಿಯಿಂದ ಒಕ್ಕಲೆಬ್ಬಿಸಲು, ಪ್ಯಾಲೆಸ್ತೀನಿಯರನ್ನು ಓಡಿಸಬೇಕೆಂದು ಬಹಿರಂಗವಾಗಿ ಪ್ರತಿಪಾದಿಸುವ ಕೆಲವು ಧಾರ್ಮಿಕ ಪಕ್ಷಗಳೇ ಇರುವಂಥ ಪ್ರಸಕ್ತ ಸರಕಾರ ಅಧಿಕಾರಕ್ಕೆ ಬರುವುದರೊಂದಿಗೆ ಹಿಂಸಾಚಾರದ ಚಕ್ರದಲ್ಲಿ ನಾಟಕೀಯ ಏರಿಕೆ ಕಂಡುಬಂದಿದೆ. ಇಸ್ರೇಲಿ ರಕ್ಷಣಾ ಪಡೆಗಳು ಮತ್ತು ಇತರ ಅರೆ-ಸೇನಾ ಪಡೆಗಳ ಸಿಬ್ಬಂದಿ, ಭಯೋತ್ಪಾದಕರನ್ನು ಬಂಧಿಸುವ ನೆಪದಲ್ಲಿ ಪಶ್ಚಿಮ ದಂಡೆಯ ನಗರಗಳ ಮೇಲೆ ಸತತವಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ. ಜೆನಿನ್‌ನಲ್ಲಿ ಜನವರಿ ತಿಂಗಳಲ್ಲಿ ಇಂಥ ದಾಳಿಗಳು ನಡೆದಿದ್ದು ಹತ್ತು ಪ್ಯಾಲೆಸ್ತೀನಿಯರ ಮರಣ ಸಂಭವಿಸಿದೆ. ಮೃತರಲ್ಲಿ 61 ವರ್ಷದ ಮಹಿಳೆಯ ಸಹಿತ ಬಹುತೇಕರು ನಾಗರಿಕರೇ ಆಗಿದ್ದರು. ಫೆಬ್ರವರಿ 22ರಂದು ನಬ್ಲಸ್ ಪಟ್ಟಣದಲ್ಲಿ ನಡೆದ ಇದೇ ರೀತಿಯ ಮಾರಣ ಹೋಮದಲ್ಲಿ 11 ಪ್ಯಾಲೆಸ್ತೀನಿಯರು ಮೃತರಾಗಿ 102 ಜನರು ಗಾಯಗೊಂಡಿದ್ದಾರೆ.
2023ರ ಆರಂಭದಿಂದ ಇದುವರೆಗೆ ಒಟ್ಟು 62 ಪ್ಯಾಲೆಸ್ತೀನಿಯರ ಹತ್ಯೆ ನಡೆದಿದೆ. ಅಂದರೆ ಸರಾಸರಿ ಪ್ರತಿ ದಿನ ಒಬ್ಬರಿಗಿಂತ ಹೆಚ್ಚು ಪ್ಯಾಲೆಸ್ತೀನಿಯರ ಹತ್ಯೆ ನಡೆದಂತಾಗಿದೆ.
ಇದನ್ನು ಓದಿ: ಇಸ್ರೇಲ್ ಆಕ್ರಮಣ ಕೊನೆಗೊಳ್ಳಬೇಕು- ಪ್ಯಾಲೆಸ್ಟೀನ್ ವಿಮೋಚನೆಗೊಳ್ಳಬೇಕು
ತಮ್ಮದೇ ಸ್ವಂತ ಮನೆಗಳಲ್ಲಿ ಸುತ್ತುವರಿಯಲ್ಪಟ್ಟು ದಾಳಿಗೊಳಗಾದವರ ಪೈಕಿ ಕೆಲವು ಪ್ಯಾಲೆಸ್ತೀನಿಯರು ಹತಾಶೆಯಿಂದ ಪ್ರತಿ ದಾಳಿ ನಡೆಸಿದ್ದಾರೆ. ನಬ್ಲಸ್ ದಾಳಿಯ ನಂತರ, ಆ ಪಟ್ಟಣದ ಸಮೀಪದ ಹುವಾರಾ ಎಂಬಲ್ಲಿ ಇಬ್ಬರು ಯೆಹೂದಿ ಸೆಟ್ಲರ್ ಸೋದರರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಅದೇ ದಿನ, ಕೆಲವು ಐಡಿಎಫ್ ಸೈನಿಕರ ಜೊತೆಗೂಡಿ 400 ಯೆಹೂದಿ ಸೆಟ್ಲರ್‌ಗಳು ಪ್ಯಾಲೆಸ್ತೀನಿ ಪ್ರದೇಶಗಳ ಮೇಲೆ ಆಕ್ರಮಣ ನಡೆಸಿದ್ದಾರೆ. 30 ಮನೆಗಳನ್ನು ಸುಟ್ಟು ಹಾಕಲಾಗಿದೆ, 40 ಮನೆಗಳು ಹಾನಿಗೊಂಡಿವೆ ಮತ್ತು 100 ಕಾರುಗಳನ್ನು ನಾಶ ಮಾಡಲಾಗಿದೆ. ಒಬ್ಬ ಪ್ಯಾಲೆಸ್ತೀನಿ ವ್ಯಕ್ತಿ ಮೃತಪಟ್ಟು ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಳುವ ಮೈತ್ರಿಕೂಟದ ಪ್ರಮುಖ ಸದಸ್ಯ ಪಕ್ಷವೊಂದು ಈ ಹಿಂಸಾಚಾರವನ್ನು ಸಮರ್ಥಿಸಿಕೊಂಡಿದೆ ಎನ್ನುವುದು ಗಮನಾರ್ಹ. ವಾಸ್ತವವಾಗಿ ಈ ಹಿಂಸಾಚಾರವನ್ನು ಪ್ರೋಗ್ರಾಂ (ವ್ಯವಸ್ಥಿತ ನರಮೇಧ) ಎಂದು ಮಾನವ ಹಕ್ಕುಗಳ ಸಂಸ್ಥೆಗಳು ವರ್ಣಿಸಿವೆ.
ಈ ನಡುವೆ, ಇಸ್ರೇಲ್ ಸುತ್ತುವರಿಸಿರುವ (ಬ್ಲಾಕ್ ಮಾಡಿರುವ) ಗಾಜಾಪಟ್ಟಿಯಲ್ಲಿ ನೆಲೆಸಿರುವ ಪಾಲೆಸ್ತೀನಿಯರ ಮೇಲೆ ನಿಯಮಿತವಾಗಿ ವೈಮಾನಿಕ ಬಾಂಬ್ ದಾಳಿ ನಡೆಸಲಾಗುತ್ತಿದ್ದು ಅಲ್ಲಿನ ಸುಮಾರು 20 ಲಕ್ಷ ಜನರಿಗೆ ಬದುಕು ಅಸಹನೀಯವಾಗಿದೆ.
ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಉಲ್ಲಂಘಿಸಿ ಅಕ್ರಮ ವಸಾಹತುಗಳ ನಿರ್ಮಾಣಕ್ಕೆ ಇಸ್ರೇಲ್ ಸರಕಾರ ಬಹಿರಂಗವಾಗಿ ಆಶ್ರಯ ನೀಡುತ್ತಿರುವುದರಿಂದ ಇಸ್ರೇಲ್‌ನ ವಸಾಹತು ನಿರ್ಮಾಣ ಮತ್ತು ವಿಸ್ತರಣೆಯನ್ನು ಖಂಡಿಸುವ ಸರ್ವಾನುಮತದ ಗೊತ್ತುವಳಿಯನ್ನು ಭದ್ರತಾ ಮಂಡಳಿ ಫೆಬ್ರವರಿ 14ರಂದು ಅಂಗೀಕರಿಸಿದೆ. ಆದರೆ, ಅಮೆರಿಕದ ಮಧ್ಯಪ್ರವೇಶದಿಂದಾಗಿ, ಪ್ಯಾಲೆಸ್ತೀನಿ ಪ್ರತಿನಿಧಿ ಮಂಡಿಸಿದ ಕರಡು ಗೊತ್ತುವಳಿಗೆ ಹೋಲಿಸಿದರೆ ಈ ನಿರ್ಣಯ ತೀರಾ ದುರ್ಬಲವಾಗಿತ್ತು. ಪ್ಯಾಲೆಸ್ತೀನಿ ಪ್ರತಿನಿಧಿ ಮಂಡಿಸಿದ ಗೊತ್ತುವಳಿಯು ಇಸ್ರೇಲಿ ಸೆಟ್ಲ್ ಮೆಂಟ್ ಗಳಲ್ಲಿನ ಚಟುವಟಿಕೆಗಳಿಗೆ ಪೂರ್ಣ ವಿರಾಮ ಹಾಕುವಂತೆ ಒತ್ತಾಯಿಸಿದ್ದು ಕಾನೂನುಬದ್ಧವಾಗಿ ಅದನ್ನು ಪಾಲಿಸುವುದು ಅಗತ್ಯವಾಗುತ್ತಿತ್ತು.
ಇದನ್ನು ಓದಿ: ಇಸ್ರೇಲ್ ನೊಂದಿಗೆ ಯು.ಎ.ಇ ಮತ್ತು ಬಹ್ರೇನ್ ಒಪ್ಪಂದ : ಪ್ಯಾಲೇಸ್ಟಿನಿಯನ್ ಪ್ರತಿಭಟನೆ
ಈ ಹಿಂದಿನ ಒಂದು ಸಂಪಾದಕೀಯದಲ್ಲಿ ಗಮನಿಸಿದಂತೆ, ಪ್ಯಾಲೆಸ್ತೀನಿ ಉದ್ದೇಶಕ್ಕೆ ಬೆಂಬಲ ನೀಡುವ ದೀರ್ಘಕಾಲದ ದೃಢ ನಿಲುವಿನಿಂದ ಭಾರತ ಹಿಂದೆ ಸರಿಯುತ್ತಿದೆ. ಈಗ ನಡೆಯುತ್ತಿರುವ ಹಿಂಸಾಚಾರದ ವೇಳೆಯಲ್ಲಿ ಏಳು ಯೆಹೂದಿಗಳ ಸಾವಿಗೆ ಕಾರಣವಾದ ಜೆರುಸಲೇಂನ ಒಂದು ಯೆಹೂದಿ ಮಂದಿರದ (ಸೈನಾಗಾಗ್) ಮೇಲೆ ನಡೆದ ದಾಳಿಯನ್ನು ವಿದೇಶಾಂಗ ಸಚಿವಾಲಯದ ವಕ್ತಾರರು ಬಲವಾಗಿ ಖಂಡಿಸಿದ್ದಾರೆ. ಆದರೆ ಇಸ್ರೇಲಿ ಭದ್ರತಾ ಪಡೆಗಳು ಜೆನಿನ್ ಮತ್ತು ನಬ್ಲಸ್‌ನಲ್ಲಿ ನಡೆಸಿದ ನರಮೇಧದ ಬಗ್ಗೆ ಸರಕಾರ ದಿವ್ಯ ಮೌನ ತಾಳಿದೆ. ಅಮೆರಿಕ, ಯುಎಇ, ಇಸ್ರೇಲ್ ಮತ್ತು ಭಾರತ ಒಳಗೊಂಡಿರುವ ತಥಾಕಥಿತ ಮಧ್ಯಪ್ರಾಚ್ಯ (ಮಿಡ್ಲ್ ಈಸ್ಟರ್ನ್) ಕ್ವಾಡ್ ಕೂಟವನ್ನು ಭಾರತ ಸೇರಿದೆ. ನೇತ್ಯಾನಹು ಸರಕಾರದ ಅತಿರೇಕದ ಜನಾಂಗವಾದಿ (ಝಿಯೋನಿಸ್ಟ್) ಧೋರಣೆಗೆ ಹಿಂದೂತ್ವ ಶಕ್ತಿಗಳು ಸಂಪೂರ್ಣ ಬೆಂಬಲ ನೀಡುತ್ತಿವೆ.
ಆದ್ದರಿಂದ, ಹೋರಾಟ ನಿರತ ಪ್ಯಾಲೆಸ್ತೀನಿ ಜನರಿಗೆ ಬೆಂಬಲ ಕ್ರೋಡೀಕರಿಸಲು ಭಾರತದ ಜಾತ್ಯತೀತ ಜನತಾಂತ್ರಿಕ ಶಕ್ತಿಗಳನ್ನು ಅಣಿನೆರೆಸಬೇಕಾಗಿದೆ. ಮಾರ್ಚ್ 7 ರಿಂದ 11ರ ವರೆಗೆ ಪ್ಯಾಲೆಸ್ತೀನಿ ಸೌಹಾರ್ದ ಅಭಿಯಾನ ನಡೆಸುವಂತೆ ಅಖಿಲ ಭಾರತ ಶಾಂತಿ ಮತ್ತು ಸೌಹಾರ್ದತೆ ಸಂಸ್ಥೆ (ಎಐಪಿಎಸ್‌ಒ) ಕರೆ ನೀಡಿದೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಸಾಮ್ರಾಜ್ಯಶಾಹಿ-ವಿರೋಧಿ, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಕೆಲಸ ಮಾಡಬೇಕು.
ಅನು: ವಿಶ್ವ
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ