ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರ ‘ರಫ್ತು’ | ಕಾರ್ಮಿಕ ಸಂಘಟನೆಗಳ ವಿರೋಧ

ನವದೆಹಲಿ: ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಭಾರತೀಯ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸುವ ಕೇಂದ್ರ ಸರ್ಕಾರದ ಕ್ರಮವನ್ನು ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ವಿರೋಧಿಸಿದ್ದು, ಇಸ್ರೇಲ್ ಜೊತೆಗಿನ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಗುರುವಾರ ಒತ್ತಾಯಿಸಿವೆ. ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳಾದ INTUC, AITUC, HMS, CITU, AIUTUC, TUCC, SEWA, AICCTU, LPF, UTUC ಸೇರಿದಂತೆ ಹಲವಾರು ಸ್ವತಂತ್ರ ವಲಯದ ಒಕ್ಕೂಟಗಳು ಹಾಗೂ ಸಂಘಟನೆಗಳು ಈ ಬಗ್ಗೆ ಜಂಟಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

“ಇಸ್ರೇಲ್ ನಾಚಿಕೆಯಿಲ್ಲದೆ ಪ್ಯಾಲೆಸ್ತೀನಿಯನ್ನರ ನರಮೇಧದ ದಾಳಿಯನ್ನು ಹೆಚ್ಚಿಸುತ್ತಿದೆ. ವಿಶ್ವಸಂಸ್ಥೆಯಾಗಲಿ ಅಥವಾ ತನ್ನ ಯಜಮಾನ ದೇಶವಾದ ಅಮೆರಿಕಾದ ಕದನ ವಿರಾಮ ಮನವಿಗಳನ್ನು ಕೂಡಾ ತಿರಸ್ಕರಿಸುತ್ತಿದೆ.” ಎಂದು ಕಾರ್ಮಿಕ ಸಂಘಟನೆಗಳು ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ; ರೆವಿನ್ಯೂ ಇನ್ಸ್‌ಪೆಕ್ಟರ್ ವಸಂತ್ ಬಂಧನ

“ಈ ವಿಷಯದ ಬಗ್ಗೆ ಮೋದಿ ಸರ್ಕಾರದ ಅನೈತಿಕ ಮತ್ತು ದ್ವಂದ್ವ ನಿಲುವು ಕೂಡ ಬಹಿರಂಗವಾಗಿದೆ. ಕೇಂದ್ರ ಸರ್ಕಾರ ಮೊದಲು ತ್ವರಿತವಾಗಿ ಇಸ್ರೇಲ್‌ಗೆ ಬೆಂಬಲ ನೀಡಿತು. ನಂತರ ವಿದೇಶಾಂಗ ಸಚಿವಾಲಯ ಅದರಿಂದ ಹಿಂದಡಿಯಿಟ್ಟಿರುವುದನ್ನು ಅಧ್ಯಯನ ಮಾಡಿ, ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳುಹಿಸಿತು. ಆದರೆ ಅಂತಿಮವಾಗಿ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ನಿರ್ಣಯವನ್ನು ಬೆಂಬಲಿಸುವುದರಿಂದ ದೂರ ನಿಂತಿತು” ಎಂದು ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ.

ಮೇ, 2023 ರಲ್ಲಿ ಇಸ್ರೇಲ್ ವಿದೇಶಾಂಗ ಸಚಿವ ಎಲಿ ಕೊಹೆನ್ ನವದೆಹಲಿಗೆ ಭೇಟಿಯ ವೇಳೆ, ಎರಡೂ ದೇಶಗಳು 42,000 ಭಾರತೀಯ ಉದ್ಯೋಗಿಗಳನ್ನು ಇಸ್ರೇಲ್‌ಗೆ ಕಳುಹಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಅದರಲ್ಲಿ 34,000 ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಅಲ್ಲಿ ಭಾರತೀಯ ಕಾರ್ಮಿಕರನ್ನು ನಿರ್ಮಾಣ ಉದ್ಯಮಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಇದೀಗ ಭಾರತ ಸರ್ಕಾರವು ಬೇಡಿಕೆಯಂತೆ ಸುಮಾರು 90,000 ಕಟ್ಟಡ ಕಾರ್ಮಿಕರನ್ನು ಇಸ್ರೇಲ್‌ಗೆ ಕಳುಹಿಸಲು ಯೋಜಿಸುತ್ತಿದೆ.

ಸರ್ಕಾರದ ಈ ನಿರ್ಧಾರವನ್ನು “ಅಘಾತಕಾರಿ” ಎಂದು ಬಣ್ಣಿಸಿರುವ ಕಾರ್ಮಿಕ ಸಂಘಟನೆಗಳು, “ಹಮಾಸ್ ದಾಳಿಯ ಪ್ರತೀಕಾರದ ಹೆಸರಿನಲ್ಲಿ ಪ್ಯಾಲೆಸ್ತೀನ್‌ ಕಾರ್ಮಿಕರನ್ನು ಹೊರಹಾಕುವ ಇಸ್ರೇಲ್ ಯೋಜನೆಗಳನ್ನು ಬೆಂಬಲಿಸುವ ಹೇಯ ಪಾತ್ರವನ್ನು ಭಾರತ ಸರ್ಕಾರ ನಿರ್ವಹಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ತಿಂದು ತೇಗಿದ್ದು ನೀವು, ರಾಜೀನಾಮೆ ನಾನು ಕೊಡ್ಬೇಕಾ?: ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

“ಪ್ಯಾಲೆಸ್ತೀನ್‌ ಅನ್ನು ಆಕ್ರಮಿಸಿರುವ ವಸಾಹತುಶಾಹಿ ಇಸ್ರೇಲ್‌ ಅಲ್ಲಿನ ಆರ್ಥಿಕತೆಯನ್ನು ನಾಶಮಾಡಿದೆ. ಇದು ಹೆಚ್ಚಿನ ಬಡತನ ಮತ್ತು ನಿರುದ್ಯೋಗ ಉಂಟುಮಾಡಿದೆ. ಹೀಗಾಗಿ ಪ್ಯಾಲೆಸ್ತೀನಿಯನ್ನರು ಉದ್ಯೋಗಕ್ಕಾಗಿ ಇಸ್ರೇಲ್‌ನ ಮೇಲೆ ಅವಲಂಬಿತರಾಗಿದ್ದಾರೆ. ಕಾಲಾನಂತರದಲ್ಲಿ ಸಂಖ್ಯೆಗಳು ಏರುಪೇರಾಗಿದ್ದರೂ, ಇಸ್ರೇಲ್‌ನಲ್ಲಿ ಸರಾಸರಿ 1.3 ಲಕ್ಷ ಪ್ಯಾಲೆಸ್ತೀನಿಯನ್ನರು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ನಿರ್ಮಾಣ ವಲಯದಲ್ಲಿ ಪ್ಯಾಲೆಸ್ತೀನಿಯನ್ ಕಾರ್ಮಿಕರು ಅತಿ ಹೆಚ್ಚಾಗಿದ್ದು, ಸುಮಾರು 65-70% ರಷ್ಟಿದ್ದಾರೆ” ಎಂದು ಕಾರ್ಮಿಕ ಸಂಘಟನೆಗಳು ಹೇಳಿದೆ.

ಇಸ್ರೇಲ್‌ಗೆ ಕೆಲಸಗಾರರನ್ನು ರಫ್ತು ಮಾಡುವುದು ಭಾರತದ ”ಅನೈತಿಕ” ಮತ್ತು ”ವಿನಾಶಕಾರಿ” ನಡೆಯಾಗಿದೆ ಎಂದು ಪ್ರತಿಪಾದಿಸಿರುವ ಕಾರ್ಮಿಕ ಸಂಘಟನೆಗಳು, ಭಾರತವು ಕಾರ್ಮಿಕರ “ರಫ್ತು” ಎಂದು ಹೇಳುತ್ತಾ, ಕಾರ್ಮಿಕರನ್ನು ರಫ್ತು ಮಾಡುವ ವಸ್ತುಗಳೆಂಬಂತೆ ಪರಿಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ಸರ್ಕಾರವು ಭಾರತೀಯ ಕಾರ್ಮಿಕರನ್ನು ಅಮಾನವೀಯಗೊಳಿಸಿದ್ದು, ಕಾರ್ಮಿಕರ ‘ರಫ್ತು’ ಎಂಬ ಪದ ಬಳಸಿ ಕಾರ್ಮಿಕರನ್ನು ಸರಕುಗಳು ಎಂಬಂತೆ ನಡೆದುಕೊಳ್ಳುತ್ತಿದೆ. ಸರ್ಕಾರದ ಇಂತಹ ಕ್ರಮವು ಪ್ಯಾಲೆಸ್ಟೀನಿಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಭಾರತವು ಜೊತೆಯಾದಂತೆ ಆಗುತ್ತದೆ. ಇದು ಸ್ವಾಭಾವಿಕವಾಗಿ ಇಡೀ ಪ್ರದೇಶದಲ್ಲಿ ಭಾರತೀಯ ಕಾರ್ಮಿಕರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ” ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.

ಇದನ್ನೂ ಓದಿ: ಕೇರಳ ಸ್ಫೋಟ | ‘ರೀಚ್‌ಸ್ಟ್ಯಾಗ್ ಬೆಂಕಿ’ಯನ್ನಾಗಿ ಮಾಡಲು ಆರೆಸ್ಸೆಸ್‌ ಪಟ್ಟ ಶ್ರಮ

ಭಾರತೀಯ ಕಾರ್ಮಿಕ ಆಂದೋಲನವು ಪ್ಯಾಲೇಸ್ಟಿನಿಯನ್ ಕಾರ್ಮಿಕ ಬೆಂಬಲಕ್ಕೆ ನಿಲ್ಲಬೇಕು ಮತ್ತು ಸರ್ಕಾರದ ವಿನಾಶಕಾರಿ ಕಲ್ಪನೆಯನ್ನು ತಿರಸ್ಕರಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಕಾರ್ಮಿಕ ಸಮುದಾಯಕ್ಕೆ ಮನವಿ ಮಾಡಿವೆ. “ಇಸ್ರೇಲ್‌ನಲ್ಲಿ ಪ್ಯಾಲೇಸ್ಟಿನಿಯನ್ ಕಾರ್ಮಿಕರನ್ನು ಬದಲಿಗೆ ನಾವು ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸೋಣ. ಭಾರತ ಮತ್ತು ಭಾರತೀಯ ಕಾರ್ಮಿಕರು ಇಸ್ರೇಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಭಾರತೀಯ ಕಾರ್ಮಿಕರು, ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ಸಹವರ್ತಿಗಳಾಗಿ, ಇಸ್ರೇಲ್ ಸರಕುಗಳನ್ನು ನಿರ್ವಹಿಸಲು ನಿರಾಕರಿಸಬೇಕು” ಎಂದು ಸಂಘಟನೆಗಳು ಮನವಿ ಮಾಡಿವೆ.

ಭಾರತೀಯ ಕಾರ್ಮಿಕರನ್ನು ರಫ್ತು ಮಾಡಲು ಇಸ್ರೇಲ್ ಜೊತೆಗಿನ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿರುವ ಕಾರ್ಮಿಕ ಸಂಘಟನೆಗಳು, “ಪ್ಯಾಲೆಸ್ತೀನ್‌ ವಿರುದ್ಧ ಇಸ್ರೇಲಿ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಬೇಕು. ಆಕ್ರಮಣವನ್ನು ನಿಲ್ಲಿಸಿ, ಸಾರ್ವಭೌಮ ತಾಯ್ನಾಡಿಗೆ ಪ್ಯಾಲೇಸ್ಟಿನಿಯನ್ ಹಕ್ಕನ್ನು ಎತ್ತಿಹಿಡಿಯಬೇಕು. ಶಾಂತಿಗೆ ಇರುವ ಏಕೈಕ ಸಂಭವನೀಯ ಮಾರ್ಗ ಇದು ಮಾತ್ರವಾಗಿದೆ” ಎಂದು ಹೇಳಿದೆ.

ವಿಡಿಯೊ ನೋಡಿ: ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಪ್ಯಾಲಿಸ್ಟೈನ್ ಕಾರ್ಮಿಕರನ್ನು ಹೊರದಬ್ಬಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *