ಬೆಂಗಳೂರು: ತುಮಕೂರು ಮಾಜಿ ಶಾಸಕ ಸೊಗಡು ಶಿವಣ್ಣ ಇತ್ತೀಚಿಗೆ ಪತ್ರಿಕಾಗೋಷ್ಠಿಯೊಂದರಲ್ಲಿ ತುಮಕೂರಲ್ಲಿ ತಾಲಿಬಾನಿಗಳಿದ್ದಾರೆ ಎಂದು ಹೇಳುವಾಗ ಇತರೆ ಅಲ್ಪಸಂಖ್ಯಾತ ಮತೀಯವಾದಿ ಸಂಘಟನೆಗಳ ಜೊತೆಗೆ ಸೇರಿಸಿ ಎಸ್ಎಫ್ಐ ಸಂಘಟನೆಯವರು ಸಹ ತಾಲಿಬಾನ್ ಬೆಂಬಲಿಗರು ಎಂಬ ಅರ್ಥ ಬರುವ ರೀತಿಯಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ), ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಸೊಗಡು ಶಿವಣ್ಣ ಈ ಕೂಡಲೇ ಬೇಷರತ್ತಾಗಿ ದೇಶಪ್ರೇಮಿ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನ ಕ್ಷಮೆಯಾಚಿಸಬೇಕು ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ಆಗ್ರಹಿಸಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ, ಮಾಜಿ ಸಚಿವರಾಗಿ ಜವಾಬ್ದಾರಿ ಜನಪ್ರತಿನಿಧಿಯಾಗಿರುವ ಸೊಗಡು ಶಿವಣ್ಣ ತುಮಕೂರಿನಲ್ಲಿ ತಾಲಿಬಾನಿಗಳು ಇದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೊಗಡು ಶಿವಣ್ಣ ಅವರನ್ನು ಕೂಡಲೇ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಬೇಕು ಹಾಗೂ ಅವರಿಂದ ತುಮಕೂರಿನಲ್ಲಿರುವ ತಾಲಿಬಾನ್ ಗಳ ಕುರಿತು ತಮಗಿರುವ ಮಾಹಿತಿಯನ್ನು ಪೊಲೀಸರು ಪಡೆದುಕೊಂಡು ತನಿಖೆಯನ್ನು ಕೈಗೊಳ್ಳಬೇಕೆಂದು ಎಸ್‌ಎಫ್‌ಐ ಸಂಘಟನೆಯು ಆಗ್ರಹಿಸಿದೆ.
ಒಂದು ವೇಳೆ ಸೊಗಡು ಶಿವಣ್ಣ ಅವರ ಹೇಳಿಕೆ ಸುಳ್ಳಾಗಿದ್ದರೆ ಅವರ ವಿರುದ್ಧ ಸಮಾಜದ ಶಾಂತಿ, ಐಕ್ಯತೆಗೆ ಭಂಗ ತರುವ ಸಮಾಜಘಾತುಕ ವ್ಯಕ್ತಿ ಎಂದು ಪರಿಗಣಿಸಿ ಅವರ ವಿರುದ್ಧ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳು ದೂರು ದಾಖಲಿಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.
ಸೊಗಡು ಶಿವಣ್ಣ ಕಳೆದ ಚುನಾವಣೆಯಲ್ಲಿ ಸೋತ ನಂತರ ಜನತೆಯಿಂದ ತಿರಸ್ಕರಿಸಲ್ಪಟ್ಟು ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ. ಆದ್ದರಿಂದ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಬಿಜೆಪಿಯ ಇತರೆ ನಾಯಕರ ರೀತಿ ಸದಾ ಸುದ್ದಿಯಲ್ಲಿರಬೇಕೆಂಬ ಪ್ರಚಾರ ತೆವಲಿಗಾಗಿ ಆಗಾಗ ಪತ್ರಿಕಾಗೋಷ್ಠಿಗಳನ್ನು ನಡೆಸಿ ತಳಬುಡವಿಲ್ಲದ ವಿವಾದ ಸೃಷ್ಟಿಸುವ, ಸಮಾಜದ ಶಾಂತಿಯನ್ನು ಕದಡಿ ಸಮಾಜದಲ್ಲಿ ಕೋಮು ವಿಭಜನೆ ಸೃಷ್ಟಿಸಲು ಮುಂದಿನ ಚುನಾವಣೆಯಲ್ಲಿ ಅಧಿಕಾರ ಲಾಲಸೆಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷರು ಅಮರೇಶ ಕಡಗದ ತಿರುಗೇಟು ನೀಡಿದ್ದಾರೆ.
ಇವರು ಇಂತಹ ಹುಚ್ಚು ಪ್ರಚಾರದ ತೆವಲನ್ನು ಬಿಟ್ಟು ಯೋಗ್ಯತೆ ಇದ್ದರೆ ತುಮಕೂರಿನ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳು, ವಿದ್ಯಾರ್ಥಿಗಳ ಸಮಸ್ಯೆಗಳ ಶೈಕ್ಷಣಿಕ ಸಮಸ್ಯೆಗಳು, ಯುವಜನರ ನಿರುದ್ಯೋಗದ ಸಮಸ್ಯೆ, ರೈತರ ಕಾರ್ಮಿಕರ ಪ್ರಶ್ನೆಗಳು, ತುಮಕೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ವಿಚಾರಗಳ ಕುರಿತು ಮಾತನಾಡಲಿ ಅದು ಬಿಟ್ಟು ದೇಶಪ್ರೇಮಿ ಭಗತ್‌ಸಿಂಗ್ ಆಶಯಗಳ ಈಡೇರಿಕೆಗಾಗಿ ಸರ್ವರಿಗೂ ಶಿಕ್ಷಣ ಸರ್ವರಿಗೂ ಉದ್ಯೋಗ, ಜಾತ್ಯತೀತತೆ, ದೇಶದ ಐಕ್ಯತೆ, ಉತ್ತಮ ಸಮಾಜಕ್ಕಾಗಿ ದೇಶ ಕಟ್ಟುವ ಕೆಲಸ ನಿರ್ವಹಿಸುತ್ತಿರುವ ಜನಪರ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ವಿರುದ್ಧ ಅಪಪ್ರಚಾರ ನಡೆಸಿದರೆ ಜನರೇ ಪಾಠ ಕಲಿಸಲಿದ್ದಾರೆ ಎಂದು ತುಮಕೂರು ಜಿಲ್ಲಾ ಅಧ್ಯಕ್ಷರಾದ ಇ.ಶಿವಣ್ಣ ತಿಳಿಸಿದ್ದಾರೆ.
ಆದ್ದರಿಂದ ಕೂಡಲೇ ತನ್ನ ಬೇಜವಾಬ್ದಾರಿ, ಅಸಂಬದ್ಧ ಹೇಳಿಕೆ ನೀಡಿದ ಸೊಗಡು ಶಿವಣ್ಣ ಎಸ್ಎಫ್ಐ ಸಂಘಟನೆಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಅವರ ವಿರುದ್ಧ ದೂರು ನೀಡಿ ಅವರು ಪ್ರತಿನಿಧಿಸುವ ಬಿಜೆಪಿ ಪಕ್ಷದ ವಿರುದ್ಧ ಹೋರಾಟ ನಡೆಸಲಾಗುವುದೆಂದು ಸಂಘಟನೆಯು ಎಚ್ಚರಿಕೆ ನೀಡಿದೆ.