ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾಗಿದೆ. ಕೊಲೆ ಆರೋಪ ಎದುರಿಸುತ್ತಿರುವ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪಿಯಾಗಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ವಿರುದ್ಧ ಸಿಬಿಐ ಎರಡು ಕೇಸ್ ದಾಖಲಿಸಿತ್ತು. ಇದೀಗ ಸಾಕ್ಷ್ಯನಾಶ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನಯ್ ಕುಲಕರ್ಣಿ ಈಗಾಗಲೇ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದಿದ್ದರು. ನ್ಯಾ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿ ಸಿಬಿಐ ಆಕ್ಷೇಪಣೆಯ ನಡುವೆಯೂ ವಿನಯ್ ಕುಲಕರ್ಣಿಗೆ ಜಾಮೀನು ಆದೇಶ ನೀಡಿದ್ದರು.
ವಿನಯ್ ಕುಲಕರ್ಣಿ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಜೈಲಿನಿಂದ ಬಿಡುಗಡೆಯಾದರೂ ಧಾರವಾಡ ಪ್ರವೇಶಿಸುವಂತಿಲ್ಲ. ಸುಪ್ರೀಂಕೋರ್ಟ್ ಜಾಮೀನು ನೀಡುವಾಗ ಈ ಷರತ್ತು ವಿಧಿಸಿತ್ತು. ಪ್ರಕರಣದ ಮತ್ತೋರ್ವ ಆರೋಪಿಗೂ ಚಂದ್ರಶೇಖರ ಇಂಡಿಗೂ ಜಾಮೀನು ಸಿಕ್ಕಿದೆ.
ಹತ್ಯೆ ಸಂಬಂಧ ವಿನಯ್ ಕುಲಕರ್ಣಿ ಯನ್ನು ಸಿಬಿಐ 2020ರ ನವೆಂಬರ್ 05 ರಂದು ಬಂಧಿಸಿತ್ತು. ವಿನಯ್ ಕುಲಕರ್ಣಿ ಹಾಗೂ ಯೋಗೀಶ್ ಗೌಡ ನಡುವೆ ವೈಷಮ್ಯವಿದ್ದವು. ಭೂ ವಿವಾದದದಿಂದಾಗಿ ಕೊಲೆಯಾಗಿದೆ ಎಂದು ಬಿಂಬಿಸುವ ಯತ್ನ ಮಾಡಲಾಗಿತ್ತು. ಸಿಬಿಐ ತನಿಖೆ ನಡೆಸಿದ ಬಳಿಕ ದೊಡ್ಡ ಷಡ್ಯಂತ್ರ ಬೆಳಕಿಗೆ ಬಂದಿದೆ. ವಿನಯ್ ಕುಲಕರ್ಣಿ ಕೊನೆಯಲ್ಲಿ ಪ್ರಮುಖ ಪಾತ್ರವಾಗಿದ್ದು, ಸಾಕ್ಷ್ಯವನ್ನು ತಿರುಚಲಾಗಿದೆ. ಪೊಲೀಸ್ ತನಿಖೆಯಲ್ಲಿ ಕೊಲೆ, ಸಣ್ಣ ಷಡ್ಯಂತ್ರ ಮಾತ್ರ ಪ್ರಸ್ತಾಪವಾಗಿದೆ.