ಕೋಲ್ಕತ್ತಾ : ಇಂದು ಪಶ್ಚಿಮ ಬಂಗಾಳ ಒಳಗೊಂಡು 5 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನದಲ್ಲಿ ಇಂದು 3ನೇ ಹಂತದ ಮತದಾನ ನಡೆಯುತ್ತಿದೆ. ಈ ನಡುವೆಯೇ ಅಲ್ಲಿ ಚುನಾವಣಾಧಿಕಾರಿ ಮತಯಂತ್ರದೊಂದಿಗೆ ಟಿಎಂಸಿ ನಾಯಕನ ಮನೆಯಲ್ಲಿ ನೆನ್ನೆ ರಾತ್ರಿ ವಿಶ್ರಾಂತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಿದೆ.
ಅಮಾನತುಗೊಂಡ ವಲಯ ಅಧಿಕಾರಿ ತಪನ್ ಸರ್ಕಾರ್, ಮತದಾನಕ್ಕಾಗಿ ಬಳಕೆಯಾಗಬೇಕಿದ್ದ ನಾಲ್ಕು ಇವಿಎಂ ಯಂತ್ರಗಳನ್ನು ಪಶ್ಚಿಮ ಬಂಗಾಳದ ಉಲುಬೆರಿಯಾದಲ್ಲಿರುವ ಟಿಎಂಸಿ ನಾಯಕ ಗೌತಮ್ ಘೋಷ್ ಅವರ ಮನೆಗೆ ನೆನ್ನೆ ತೆಗೆದುಕೊಂಡು ಹೋಗಿದ್ದರು. ಇಡೀ ರಾತ್ರಿ ಅಲ್ಲಿಯೇ ಮಲಗಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೇಂದ್ರೀಯ ಪೊಲೀಸ್ ಸಿಬ್ಬಂದಿ ಇವಿಎಂಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : 14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?
ಟಿಎಂಸಿ ನಾಯಕ ಗೌತಮ್ ಘೋಷ್ ಚುನಾವಣಾಧಿಕಾರಿ ತಪನ್ ಸರ್ಕಾರ್ಗೆ ಸಂಬಂಧಿಕನೆಂದು ತಿಳಿದುಬಂದಿದೆ. ಚುನಾವಣಾಧಿಕಾರಿ ನಿಯಮ ಉಲ್ಲಂಘಿಸಿದಕ್ಕಾಗಿ ಈಗ ಅಮಾನತುಗೊಂಡಿದ್ದಾರೆ. ಜೊತೆಗೆ ಮತದಾನಕ್ಕಾಗಿ ಕಾಯ್ದಿರಿಸಿದ್ದ ಇವಿಎಂ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ.
ಈ ಕೃತ್ಯದಲ್ಲಿ ಭಾಗಿಯಾಗಿರುವ ಚುನಾವಣಾಧಿಕಾರಿ ಹಾಗೂ ಇನ್ನಿತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.
“ಇದು ದೇಶದ ಚುನಾವಣಾ ಆಯೋಗದ ಸೂಚನೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಇದಕ್ಕಾಗಿ ವಲಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಆರೋಪಿಗೆ ಸೂಕ್ತ ಶಿಕ್ಷೆ ನೀಡಲಾಗುತ್ತದೆ. ಅಧಿಕಾರಿಗೆ ಒದಗಿಸಲಾಗಿದ್ದ ಭದ್ರತಾ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸುವಂತೆ ನಿರ್ದೇಶಿಸಲಾಗಿದೆ ” ಎಂದು ಚುನಾವಣಾ ಆಯೋಗ ಹೇಳಿದೆ.
ಇದನ್ನು ಓದಿ : ಪಶ್ಚಿಮ ಬಂಗಾಳದ ಚುನಾವಣೆ ಹೇಗಿದೆ ಆಡಳಿತ ವಿರೋಧಿ ಅಲೆ ಎಡಪಕ್ಷಕ್ಕೆ, ಬಿಜೆಪಿಗೆ ಲಾಭವಾಗುತ್ತಾ?
ಆದರೆ ವಲಯ ಅಧಿಕಾರಿ ಸರ್ಕಾರ್ ನಾನು ವಿಶ್ರಾಂತಿ ತೆಗೆದುಕೊಳ್ಳಲಷ್ಟೇ ಅವರ ಮನೆಗೆ ಹೋಗಿದ್ದೆ. ಇವಿಎಂಗಳನ್ನು ಕಾರಿನಲ್ಲೇ ಇರಿಸಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಇಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಇಂದು ಒಟ್ಟು 31 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 205 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಇತ್ತೀಚೆಗೆ ಅಸ್ಸಾಂನ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪೌಲ್ ಕಾರಿನಲ್ಲಿ ಇವಿಎಂ ಪತ್ತೆಯಾಗಿತ್ತು. ಎರಡನೇ ಹಂತದ ಮತದಾನದ ವೇಳೆ ಈ ಘಟನೆ ಸಂಭವಿಸಿತ್ತು. ಆಗ ಚುನಾವಣಾ ಆಯೋಗವು 4 ಮಂದಿ ಚುನಾವಣಾಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಜೊತೆಗೆ ವಿಧಾನಸಭಾ ಕ್ಷೇತ್ರ ಪತರ್ಕಂಡಿಯ ರಾತಬರಿ ಮತಗಟ್ಟೆಯಲ್ಲಿ ಮರು ಮತದಾನ ಮಾಡುವಂತೆ ಆದೇಶಿಸಿತ್ತು.