–ನಾ ದಿವಾಕರ
ಸ್ವತಂತ್ರ ಭಾರತದ ಆಳ್ವಿಕೆಯಲ್ಲಿ ಸರ್ಕಾರಗಳು ಜಾರಿಗೊಳಿಸಿದ ಪ್ರಮುಖ ಆಡಳಿತ ನೀತಿಗಳಲ್ಲಿ ಹಲವು ಪ್ರಮಾದಗಳಾಗಿವೆ. ಇದು ನೆಹರೂ ಯುಗದಿಂದ ವರ್ತಮಾನದ ಮೋದಿ ಕಾಲದವರೆಗೂ ಸತ್ಯ. ಭಾರತದಂತಹ ವೈವಿಧ್ಯಮಯ ದೇಶವನ್ನು ಆಳುವಾಗ ಅಥವಾ ನಿರ್ವಹಿಸುವಾಗ ಈ ರೀತಿಯ ಪ್ರಮಾದಗಳಾಗುವುದು ಸಹಜವೂ ಹೌದು. ಹಾವಳಿ
ಏಕೆಂದರೆ ತಮ್ಮದೇ ಸೈದ್ಧಾಂತಿಕ ನೆಲೆಯಲ್ಲಿ ದೇಶದ ಸಮಸ್ತ ಜನತೆಗೂ ಅನ್ವಯಿಸುವ ಮತ್ತು ಎಲ್ಲ ವರ್ಗಗಳನ್ನೂ ಬಾಧಿಸುವ ಯೋಜನೆಗಳನ್ನು, ನೀತಿಗಳನ್ನು ಜಾರಿಗೊಳಿಸುವಾಗ, ಸರ್ಕಾರಗಳಿಗೆ ನೆಲದ ವಾಸ್ತವಗಳು ಅರಿವಾಗದೆ ಹೋಗಬಹುದು. ಬಹುಮತದ ಸರ್ಕಾರಗಳಿದ್ದಾಗ ಈ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳನ್ನೂ ಮಾಡುವುದಿಲ್ಲ. ತಮಗೆ ನೀಡಿರುವ ಪ್ರಾತಿನಿಧಿಕ ಅಧಿಕಾರವನ್ನು Absolute ಅಂದರೆ ಪರಮಾಧಿಕಾರ ಎಂದೇ ಭಾವಿಸಿ ಕೆಲವು ನಿರ್ಣಾಯಕ ನೀತಿಗಳನ್ನು ಜಾರಿಗೊಳಿಸಲಾಗುತ್ತದೆ. ಹಾವಳಿ
ಸಾಮಾನ್ಯವಾಗಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವಾಗ ಸರ್ಕಾರಗಳು ಅಧಿಕಾರಶಾಹಿಯಲ್ಲಿರುವ ಮತ್ತು ಬೌದ್ಧಿಕ ವಲಯದ ಅರ್ಥಶಾಸ್ತ್ರಜ್ಞರೊಡನೆ ಸಮಾಲೋಚನೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳುತ್ತವೆ. ಭಾರತೀಯ ಸಮಾಜದ ಸಂಕೀರ್ಣತೆಗಳನ್ನು ಮತ್ತು ತಳಸಮಾಜದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಆರ್ಥಿಕ ನೀತಿಗಳನ್ನು ರೂಪಿಸಲಾಗುತ್ತದೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕತೆ, ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ವಹಿವಾಟುಗಳನ್ನು ಸಮಗ್ರ ನೆಲೆಯಲ್ಲಿ ಪರಾಮರ್ಶಿಸಿ ನೀತಿಗಳನ್ನು ಪರಿಷ್ಕರಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲೇ 2016ರಲ್ಲಿ ನರೇಂದ್ರ ಮೋದಿ ಸರ್ಕಾರವು ಹಠಾತ್ತನೆ ಜಾರಿಗೊಳಿಸಿದ ನೋಟು ಅಮಾನ್ಯೀಕರಣ ನೀತಿಯನ್ನು ಗಮನಿಸಬೇಕಿದೆ. ಹಾವಳಿ
ಇದನ್ನೂ ಓದಿ: “ಅಕ್ರಮ ಕೂಟ ಸೇರಿದ್ದರು” ಅಂದರೆ ಏನರ್ಥ ಪೊಲೀಸ್ ಕಮೀಷನರ್?: ದಿನೇಶ್ ಹೆಗ್ಡೆ ಪ್ರಶ್ನೆ
ಅಮಾನ್ಯೀಕರಣದ ವ್ಯತಿರಿಕ್ತ ಪರಿಣಾಮಗಳು
ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವ ಸಲುವಾಗಿ, ಮಾರುಕಟ್ಟೆಯಲ್ಲಿ ನಗದು ವಹಿವಾಟುಗಳನ್ನು ಕಡಿಮೆ ಮಾಡುವ ಒಂದು ಉದ್ದೇಶ ನವ ಉದಾರವಾದದ ಮೂಲ ಮಂತ್ರವೇ ಆಗಿದೆ. ಈ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಭಾರತದ ಯುಪಿಐ ನಿರ್ವಹಣೆ ಇತರ ದೇಶಗಳಿಗೂ ಮಾದರಿಯಾಗಿರುವುದು ಹೆಮ್ಮೆಯ ವಿಚಾರ. ಆದರೆ 2016ರ ನೋಟು ಅಮಾನ್ಯೀಕರಣದ ನಿರ್ಧಾರ ದೇಶದ ಮಾರುಕಟ್ಟೆಯಲ್ಲಿ ಮತ್ತು ತಳಸ್ತರದ ಸಮಾಜದಲ್ಲಿ, ಆರ್ಥಿಕತೆಯಲ್ಲಿ ಸೃಷ್ಟಿಸಿದ ತಲ್ಲಣಗಳು ಇಂದಿಗೂ ಭಾರತವನ್ನು ಬಾಧಿಸುತ್ತಿರುವುದೂ ವಾಸ್ತವ. ಕೇಂದ್ರ ಸರ್ಕಾರವು ಒಪ್ಪದೆ ಹೋದರೂ, ದೇಶದ ಅನೇಕ ಅರ್ಥಶಾಸ್ತ್ರಜ್ಞರು ನೋಟು ಅಮಾನ್ಯೀಕರಣ ನೀತಿಯನ್ನು ದೊಡ್ಡ ಪ್ರಮಾದ ಎಂದೇ ವ್ಯಾಖ್ಯಾನಿಸಿದ್ದಾರೆ. ಅಂದು ಭಾರತ ಎದುರಿಸಿದ ತಲ್ಲಣಗಳ ಪರಿಣಾಮ ಇಂದಿಗೂ ಗೋಚರಿಸುತ್ತಿರುವುದು ಈ ಆತಂಕಗಳಿಗೆ ಕಾರಣವಾಗಿವೆ.
ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ತನ್ನ ನಡೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಸರ್ಕಾರ ಈ ಹಠಾತ್ ನಿರ್ಧಾರದ ಹಿಂದಿದ್ದ ಮೂಲ ಉದ್ದೇಶಗಳನ್ನೂ ಸ್ಪಷ್ಟಪಡಿಸಿತ್ತು. ಉನ್ನತ ಮೌಲ್ಯದ ನೋಟುಗಳು ಚಲಾವಣೆಯಲ್ಲಿರುವುದರಿಂದ ಅಕ್ರಮ ಹಣಸಂಗ್ರಹ ಹೆಚ್ಚಾಗುತ್ತದೆ, ಹಾಗಾಗಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವುದು ಒಂದು ಉದ್ದೇಶವಾಗಿತ್ತು. ಕಡಿಮೆ ಸಂಖ್ಯೆಯ ನೋಟುಗಳನ್ನು ಬಳಸಿ ಹೆಚ್ಚಿನ ಮೌಲ್ಯದ ಹಣವನ್ನು ಅಕ್ರಮ ಸಂಗ್ರಹ ಮಾಡುವ, ಕಪ್ಪು ಹಣದ ಸಮಸ್ಯೆಯನ್ನು ನೀಗಿಸಲು ಇದು ಅವಶ್ಯ ಎಂದು ವಾದಿಸಲಾಗಿತ್ತು. ಹಾಗೆಯೇ ದೇಶದಲ್ಲಿ ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆ ಗಂಭೀರ ಸಮಸ್ಯೆಯಾಗಿದ್ದುದರಿಂದ, ನಕಲಿ ನೋಟುಗಳನ್ನು ನಿಗ್ರಹಿಸುವ ಒಂದು ವಿಧಾನವಾಗಿ ಉನ್ನತ ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವುದಾಗಿ ಸರ್ಕಾರವು ಹೇಳಿತ್ತು. ಭಾರತದಲ್ಲಿ ನಕಲಿ ನೋಟು ಹಾವಳಿಗೆ ಆಂತರಿಕ ಶಕ್ತಿಗಳಷ್ಟೇ ಅಲ್ಲದೆ ನೆರೆ ರಾಷ್ಟ್ರ ಪಾಕಿಸ್ತಾನವೂ ಕಾರಣವಾಗಿದ್ದುದು ಈ ನೀತಿಗೆ ರಾಜಕೀಯವಾಗಿ ಒಂದು ಸಮರ್ಥನೆಯೂ ಸಿಕ್ಕಿತ್ತು. ಹಾವಳಿ
ಆದರೆ ಕಪ್ಪು ಹಣ ಸಂಗ್ರಹಣೆ ಕೇವಲ ನಗದು ರೂಪದಲ್ಲಿರುವುದಿಲ್ಲ ಎಂಬ ಮೂಲ ಅಂಶವನ್ನು ಸರ್ಕಾರವಾಗಲೀ, ಅಂದಿನ ಆರ್ಥಿಕ ಸಲಹೆಗಾರರಾಗಲೀ ಗಂಭೀರವಾಗಿ ಪರಿಶೀಲಿಸಲಿಲ್ಲ. Black Money ಅಂದರೆ ಕಪ್ಪು ಹಣವನ್ನು ಅಕ್ಷರಶಃ ನಗದು ಸ್ವರೂಪಕ್ಕೆ ಇಳಿಸಿ ನೋಡುವ ವಿಧಾನವೇ ದೋಷಪೂರಿತವಾಗಿದ್ದು, ಸಂಪತ್ತು ಶೇಖರಣೆ ಮಾಡುವ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳು, ಡಿಜಿಟಲ್ ಯುಗದ ತಂತ್ರಜ್ಞಾನೋದ್ಯಮಿಗಳು ತಮ್ಮ ಅಕ್ರಮ ಗಳಿಕೆಯನ್ನು ಕಾಪಾಡಲು ನಗದು ಹಣಕ್ಕಿಂತಲೂ ಇತರ ಭೌತಿಕ ಸಾಧನಗಳನ್ನು ಬಳಸುತ್ತಾರೆ. ಆರ್ಥಿಕ ಮಾರುಕಟ್ಟೆಯಲ್ಲಿ ನಗದು ಹಣ ಬಳಕೆಯನ್ನು ನಿಯಂತ್ರಿಸಿದರೆ ಕಪ್ಪುಹಣವನ್ನು ನಿಯಂತ್ರಿಸಬಹುದು ಎನ್ನುವುದು ವಾಸ್ತವಿಕ ನೆಲೆಯಲ್ಲಿ ಅತಾರ್ಕಿಕವಾಗುತ್ತದೆ. ಅದರೆ ನೋಟು ಅಮಾನ್ಯೀಕರಣ ನೀತಿಗೆ ಈ ಅತಾರ್ಕಿತೆಯೇ ಆಧಾರವಾಗಿತ್ತು. ಇದರ ವ್ಯತಿರಿಕ್ತ ಪರಿಣಾಮಗಳನ್ನು ಭಾರತ ಇಂದಿಗೂ ಎದುರಿಸುತ್ತಿದೆ. ಹಾವಳಿ
ನೋಟು ಅಮಾನ್ಯೀಕರಣದ ಪರಿಣಾಮವಾಗಿ ಅಕ್ರಮವಾಗಿ ಹುದುಗಿಟ್ಟಿರುವ ಅಕ್ರಮ ಹಣವೆಲ್ಲವೂ ಹೊರಗೆ ಬರುತ್ತದೆ ಎಂಬ ನಂಬಿಕೆ ಹುಸಿಯಾಗಿದ್ದು, ಶೇಕಡಾ 95ಕ್ಕೂ ಹೆಚ್ಚು ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ಹಿಂದಿರುಗಿದ್ದವು. ಮತ್ತೊಂದೆಡೆ 500 ಮತ್ತು 1000 ರೂ ಮುಖಬೆಲೆಯ ಉನ್ನತ ಮೌಲ್ಯದ ನೋಟುಗಳನ್ನು ಈ ಕಾರಣಗಳಿಗಾಗಿ ರದ್ದುಮಾಡಿದ ಸರ್ಕಾರ ಕೂಡಲೇ 2000 ರೂ ಮುಖಬೆಲೆಯ ನೋಟುಗಳನ್ನು ಪರಿಚಯಿಸಿದ್ದು ಏಕೆ ? ಈ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದೆ. ಈಗ ಈ ನೋಟುಗಳನ್ನೂ ಹಂತಹಂತವಾಗಿ ಹಿಂಪಡೆಯಲಾಗುತ್ತಿದೆ. ನೋಟು ಅಮಾನ್ಯೀಕರಣ ನೀತಿಯ ವೈಫಲ್ಯಕ್ಕೆ ಕನ್ನಡಿ ಹಿಡಿಯುವಂತೆ ಭಾರತದಲ್ಲಿ ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆ ಹೆಚ್ಚಾಗುತ್ತಲೇ ಇರುವುದು ವರ್ತಮಾನದ ಜಟಿಲ ಸಮಸ್ಯೆಯಾಗಿದೆ.
ನಕಲಿ ನೋಟುಗಳ ಹಾವಳಿ
ಭಾರತಿಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ 2018-19 ರಿಂದ 2023-24ರ ಹಣಕಾಸು ವರ್ಷಗಳ ವರದಿಯು ಆಘಾತಕಾರಿ ಮಾಹಿತಿಯನ್ನು ಒದಗಿಸಿದ್ದು, 500 ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ ಶೇಕಡಾ 300ರಷ್ಟು ಹೆಚ್ಚಾಗಿರುವುದನ್ನು ದಾಖಲಿಸಿದೆ. ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಈ ಮಾಹಿತಿಯನ್ನು ಸಂಸತ್ತಿನಲ್ಲಿ ಹಂಚಿಕೊಂಡಿದ್ದಾರೆ. ಮಹಾತ್ಮಗಾಂಧಿ ಸರಣಿಯ 500 ರೂ ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ 2018-19ರಲ್ಲಿ 21,865 ದಶಲಕ್ಷ ಇದ್ದುದು 2023-24ರಲ್ಲಿ 85,711 ದಶಲಕ್ಷಕ್ಕೆ ಏರಿದೆ. 2022ರ ಹಣಕಾಸು ವರ್ಷದಲ್ಲಿ ನಕಲಿ ನೋಟುಗಳ ಹೆಚ್ಚಳ ತೀವ್ರವಾಗಿದ್ದು 2021ರಲ್ಲಿ ದಾಖಲಾಗಿದ್ದ 39,453 ದಶಲಕ್ಷ ನೋಟುಗಳು 2022ರಲ್ಲಿ 79,669 ದಶಲಕ್ಷ ನೋಟುಗಳಿಗೆ ಏರಿಕೆಯಾಗಿದೆ. ಸೆಪ್ಟಂಬರ್ 30ರಿಂದ ಹಿಂಪಡೆಯಲಾಗಿರುವ 2000 ರೂ ಮುಖಬೆಲೆಯ ನೋಟುಗಳಲ್ಲಿ ನಕಲಿ ನೋಟುಗಳು 2023ರಲ್ಲಿ 9,806 ದಶಲಕ್ಷ ನೋಟುಗಳಿದ್ದುದು 2024ರಲ್ಲಿ 26,035 ದಶಲಕ್ಷ ನಕಲಿ ನೋಟುಗಳು ದಾಖಲಾಗಿದೆ. ಅಂದರೆ ಒಂದು ವರ್ಷದಲ್ಲಿ ಶೇಕಡಾ 166ರಷ್ಟು ನಕಲಿ ನೋಟುಗಳ ಹೆಚ್ಚಳವಾಗಿದೆ. ಹಾವಳಿ
2000 ರೂ ಮುಖಬೆಲೆಯ ನಕಲಿ ನೋಟುಗಳ ಪ್ರಮಾಣದಲ್ಲಿ ಏರಿಳಿತ ಕಂಡುಬಂದಿರುವುದನ್ನು ಸಚಿವರು ತಮ್ಮ ವರದಿಯಲ್ಲಿ ಮಂಡಿಸಿದ್ದಾರೆ. 2018-19ರಲ್ಲಿ 21,847 ದಶಲಕ್ಷ ನಕಲಿ ನೋಟುಗಳಿದ್ದುದು 2020-21ರಲ್ಲಿ 8,798 ದಶಲಕ್ಷಕ್ಕೆ ಇಳಿಕೆಯಾಗಿದೆ. ಆದರೆ ಮರುವರ್ಷದಲ್ಲಿ ಅಂದರೆ 2021-22ರಲ್ಲಿ 13,604 ದಶಲಕ್ಷ ನೋಟುಗಳಿದ್ದುದು 2022-23ರಲ್ಲಿ 9,806 ದಶಲಕ್ಷಕ್ಕೆ ಇಳಿಕೆಯಾಗಿತ್ತು. ಆದರೆ 2023-24ರ ಹಣಕಾಸು ವರ್ಷದಲ್ಲಿ ಇದು ಮೂರು ಪಟ್ಟು ಹೆಚ್ಚಾಗಿರುವುದು ಆತಂಕಕಾರಿ ವಿಷಯವಾಗಿದೆ. 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದರಿಂದ ಮಾರುಕಟ್ಟೆಯಲ್ಲಿ ನಗದು ಬಳಕೆಗೆ ಅಡಚಣೆಯನ್ನು ತಪ್ಪಿಸುವ ಸಲುವಾಗಿ 2000 ರೂಗಳ ನೋಟುಗಳನ್ನು ಪರಿಚಯಿಸಲಾಗಿತ್ತು. 2016 ರಿಂದ 2018ರ ವೇಳೆಗೆ ದೇಶದ ಒಟ್ಟು ನಗದು ವ್ಯವಹಾರದಲ್ಲಿ 2000 ರೂ ನೋಟುಗಳ ಪ್ರಮಾಣ ಶೇಕಡಾ 37.3ರಷ್ಟು ದಾಖಲಾಗಿತ್ತು. ಆದರೆ 2018-19ರ ಹಣಕಾಸು ವರ್ಷದಿಂದ ಈ ನೋಟುಗಳ ಮುದ್ರಣವನ್ನು ನಿಯಂತ್ರಿಸಿದ ಪರಿಣಾಮ 2021ರ ವೇಳೆಗೆ ಬಳಕೆಯ ಪ್ರಮಾಣ ಶೇಕಡಾ 17ಕ್ಕೆ ಕುಸಿದಿತ್ತು. ಹಾವಳಿ
ಮುಕ್ತ ಮಾರುಕಟ್ಟೆಯ ಅವಾಂತರಗಳು
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಹಣಕಾಸು-ಆರ್ಥಿಕ ಭ್ರಷ್ಟಾಚಾರ ಒಂದು ಸಹಜ ಪ್ರಕ್ರಿಯೆಯಾಗಿ ಚಾಲ್ತಿಯಲ್ಲಿರುವಂತೆಯೇ, ಮುಕ್ತ ಮಾರುಕಟ್ಟೆಯ ವಾತಾವರಣದಲ್ಲಿ ನಕಲಿ ನೋಟುಗಳ ಮುದ್ರಣ, ಸಂಗ್ರಹ ಮತ್ತು ವಿತರಣೆ ಸಹಜವಾಗಿರುತ್ತದೆ. ಏಕೆಂದರೆ ಔದ್ಯಮಿಕ ಮಾರುಕಟ್ಟೆಯ ಮೂಲ ಉದ್ದೇಶ ಹೂಡಿಕೆಗೆ ಪೂರಕವಾದ ಲಾಭ ಗಳಿಸುವುದಕ್ಕಿಂತಲೂ, ಅತಿ ಹೆಚ್ಚಿನ ಲಾಭ ಗಳಿಸುವುದಾಗಿರುತ್ತದೆ. ನಗದು ಚಲಾವಣೆಯೇ ಪ್ರಧಾನವಾಗಿರುವಂತಹ ಭಾರತದ ಮಾರುಕಟ್ಟೆಗಳಲ್ಲಿ ನಕಲಿ ನೋಟುಗಳನ್ನು ಪಸರಿಸುವ ಮೂಲಕ, ಸಾಮಾನ್ಯ ಜನರನ್ನು ವಂಚಿಸುವ ಒಂದು ಜಾಲ ವ್ಯವಸ್ಥಿತವಾಗಿ ಚಾಲ್ತಿಯಲ್ಲಿರುತ್ತದೆ. ನಕಲಿ ನೋಟುಗಳ ದಂಧೆಗೆ ಮೂಲತಃ ಬಲಿಯಾಗುವುದು ತಳಸಮಾಜದ ಸಾಮಾನ್ಯ ಜನತೆಯೇ ಆಗಿರುತ್ತಾರೆ. ತಮ್ಮ ಬಳಿ ಇರುವ ನೋಟುಗಳ ಅಸಲಿಯೋ ನಕಲಿಯೋ ಎಂಬ ಅರಿವು ಸಾಮಾನ್ಯವಾಗಿ ಇರಲಾರದು. ಇದನ್ನು ಬ್ಯಾಂಕುಗಳಲ್ಲಿ ಯಂತ್ರಗಳ ಸಹಾಯದಿಂದ ಮಾತ್ರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಈ ದೌರ್ಬಲ್ಯವನ್ನೇ ನಕಲಿ ನೋಟು ದಂಧೆಕೋರರು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ.
ಡಿಜಿಟಲ್ ಪೇಮೆಂಟ್ ಪ್ರಮಾಣವು ಎಷ್ಟೆ ಏರಿಕೆಯನ್ನು ಕಾಣುತ್ತಿದ್ದರೂ ಭಾರತದ ತಳಸ್ತರದ ಆರ್ಥಿಕತೆಯಲ್ಲಿ (Micro Economy) ನಗದು ಬಳಕೆಯೇ ಹೆಚ್ಚಾಗಿದೆ. ಇಲ್ಲಿ ಹಣಬಳಕೆಯಲ್ಲಿ ತೊಡಗುವವರ ಪೈಕಿ ಕೆಳಮಧ್ಯಮ ವರ್ಗಗಳು, ಬಡಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ದೃಷ್ಟಿಯಿಂದಲೇ ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆ ಮೂರು ಪಟ್ಟು ಹೆಚ್ಚಾಗಿರುವುದು ಅರ್ಥವ್ಯವಸ್ಥೆಯಲ್ಲಿ ಕಂಪನ ಮೂಡಿಸುತ್ತದೆ. ಇದನ್ನು ನಿಯಂತ್ರಿಸುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಸಾರ್ವಜನಿಕ ವಲಯದಲ್ಲೂ ಸಹ ನಕಲಿ ನೋಟುಗಳಿಂದಾಗುವ ನಷ್ಟ ಮತ್ತು ಹಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಿದೆ. ಇದು ದೇಶದ ಆರ್ಥಿಕತೆಯ ದೃಷ್ಟಿಯಿಂದ ತುರ್ತು ಆಗಬೇಕಾದ ಕೆಲಸ.
( ಈ ಲೇಖನದ ದತ್ತಾಂಶ-ಅಂಕಿಅಂಶಗಳಿಗೆ ಆಧಾರ ಬ್ಯುಸಿನೆಸ್ ಸ್ಟ್ಟಾಂಡರ್ಸ್ ಪತ್ರಿಕೆಯ ವರದಿ17 ನವಂಬರ್ 2024 ಮತ್ತು ಮನಿ ಕಂಟ್ರೋಲ್ ಬ್ಯಾಗ್ ಪತ್ರಿಕೆಯ ವರದಿ)
ಇದನ್ನೂ ನೋಡಿ: ನಿರಂಜನ 100 | ದೇಶ -ವಿದೇಶದಲ್ಲಿ ಹೆಸರಾದ ನಿರಂಜನ – ವಿಶ್ಲೇಷಣೆ – ಜಿ.ಎನ್. ನಾಗರಾಜ Janashakthi Media