1921ರ ಮಲಬಾರ್ ಬಂಡಾಯದ ಹುತಾತ್ಮರ ಹೆಸರುಗಳನ್ನು ತೆಗೆದಿರುವುದು ಒಂದು ಗಂಭೀರ ಅನ್ಯಾಯ, ಇತಿಹಾಸವನ್ನು ತಿರುಚುವ ಪ್ರಯತ್ನ- 33 ಗಣ್ಯರ ಖಂಡನೆ

ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ(ಐಸಿಹೆಚ್‌ಆರ್) ಹುತಾತ್ಮರ ವಿಶ್ವಕೋಶದ ಐದನೇ ಸಂಪುಟದಿಂದ 387 ಮಾಪ್ಪಿಳ ಬಂಡಾಯಗಾರರ ಹೆಸರುಗಳನ್ನು ತೆಗೆದಿರುವುದು ಒಂದು ದುರದೃಷ್ಟಕರ ಕೃತ್ಯ ಎಂದು 33 ಹಿರಿಯ ಇತಿಹಾಸಕಾರರು ಮತ್ತು ಇತರ ಅಧ್ಯಯನಕಾರರು ಖಂಡಿಸಿದ್ದಾರೆ, ಇವರ ಹೆಸರುಗಳನ್ನು ಮತ್ತೆ ಹುತಾತ್ಮರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ನಾವು ಬ್ರಿಟಿಶ್ ಸಾಮ್ರಾಜ್ಯಶಾಹಿಯಿಂದ ಸ್ವಾತಂತ್ರ್ಯದ ಭಾರತೀಯ ಹೋರಾಟ ಒಂದು ಬಹುಆಯಾಮಗಳ ಹೋರಾಟ ಎಂದು ಭಾವಿಸುತ್ತೇವೆ. ಇದರಲ್ಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗಗಳವರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು ಮತ್ತು ಆಧಿವಾಸಿಗಳು ಸೇರಿದಂತೆ ಜೀವನದ ಎಲ್ಲ ರಂಗಗಳ ಜನವಿಭಾಗಗಳೂ ಸೇರಿವೆ. ಇವರೆಲ್ಲ ಪ್ರತಿಭಟನೆ ಮತ್ತು ಹೋರಾಟಗಳ ಬಹುವಿಧ ಸ್ವರೂಪಗಳನ್ನು ಬಳಸಿದರು. ಸ್ವಾತಂತ್ರ್ಯವನ್ನು ಗೆದ್ದುಕೊಂಡಿರುವುದು ಜನತೆಯ ಹೋರಾಟಗಳು ಮೇಲೆದ್ದು ಬಂದುದರಿಂದ, ಅದರ ಗಳಿಕೆಗಳನ್ನು ಯಾವುದೇ ಸಾಮಾಜಿಕ ಗುಂಪು, ಜಾತಿ ಅಥವ ಮತಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. 1921ರ ಮಲಬಾರ್ ಬಂಡಾಯ ಮಲಬಾರಿನಲ್ಲಿ ದಮನದಿಂದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಶ್ ವಸಾಹತುಶಾಹೀ ಪ್ರಭುತ್ವ ಮತ್ತು ಭೂಮಾಲಕರ ವಿರುದ್ಧ ಒಂದು ಬಂಡಾಯವಾಗಿತ್ತು. ಅದು ಭಾರತದಾದ್ಯಂತ ತುಳಿತಕ್ಕೊಳಗಾದ ಜನಗಳ ಹೋರಾಟಗಳ ಅಲೆಯ ಹರಿಕಾರನಾಯಿತು ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ಜನತಾ ಪ್ರತಿರೋಧಕ್ಕೆ ಬುನಾದಿ ಒದಗಿಸಿತು” ಎಂದು ಈ ಗಣ್ಯವಕ್ತಿಗಳು ಮಾರ್ಚ್ 31ರಂದು ನೀಡಿರುವ ಹೇಳಿಕೆ ತಿಳಿಸುತ್ತದೆ.

“ಈ ಹೋರಾಟಗಳಲ್ಲಿ ಪ್ರಾಣಾರ್ಪಣೆ ಮಾಡಿದ ಒಂದು ಜನವಿಭಾಗದ ಹೆಸರುಗಳನ್ನು ತೆಗೆಯುವ ಐಸಿಹೆಚ್‌ಆರ್ ನ ಈ ಕೃತ್ಯ ಮಲಬಾರಿನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಬ್ರಿಟಿಶ್ ಸಾಮ್ರಾಜ್ಯಶಾಹಿಯ ವಿರುದ್ಧ ಜನತೆಯ ಹೋರಾಟಗಳಲ್ಲಿ ಪ್ರಾಣಾರ್ಪಣೆ ಮಾಡಿದ ಜನಗಳ ವಿರುದ್ಧ ಒಂದು ಗಂಭೀರ ಅನ್ಯಾಯ. ಐಸಿಹೆಚ್‌ಆರ್‌ನ ಈ ಕೃತ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಅಲ್ಪಸಂಖ್ಯಾತರು ಮತ್ತು ಅಂಚಿಗೆ ತಳ್ಳಲ್ಪಟ್ಟವರ ಪಾತ್ರವನ್ನು ನಗಣ್ಯಗೊಳಿಸುವ ಮತ್ತು ಆಳುವ ಹಿಂದುತ್ವ ಶಕ್ತಿಗಳು ಸ್ವಾತಂತ್ರ್ಯದ ಹೋರಾಟದಲ್ಲಿ ಹುತಾತ್ಮರಾದವರ ನಿಜವಾದ ವಾರಸುದಾರರು ಎಂಬ ಹುಸಿದಾವೆಯನ್ನು ನ್ಯಾಯಬದ್ಧಗೊಳಿಸಲು ಇತಿಹಾಸವನ್ನು ತಿರುಚುವ ಒಂದು ಉದ್ದೇಶಪೂರ್ವಕ ಪ್ರಯತ್ನ ಎಂದು ನಾವು ಭಾವಿಸುತ್ತೇವೆ” ಎಂದು ಹೇಳುತ್ತ ಈ ಗಣ್ಯರು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಪ್ರಸ್ತಾವಿತ ವಿಶ್ವಕೋಶದ ಸಂಪುಟದಲ್ಲಿ ಹುತಾತ್ಮರ ಪಟ್ಟಿಯಲ್ಲಿ ಈ 387 ಹೆಸರುಗಳನ್ನು ಮತ್ತೆ ಸೇರಿಸಬೇಕು ಎಂದು ಐಸಿಹೆಚ್‌ಆರ್‌ಗೆ ಮನವಿ ಮಾಡಿದ್ದಾರೆ.

ಪ್ರೊ.ಇರ್ಫಾನ್ ಹಬೀಬ್, ಡಾ. ಕೆ ಎನ್ ಪಣಿಕ್ಕರ್ ಮುಂತಾದ ಹಿರಿಯ ಇತಿಹಾಸಕಾರರಲ್ಲದೆ ಡಾ.ಕೆ.ಸಚ್ಚಿದಾನಂದನ್, ಅಶೋಕ ವಾಜಪೇಯಿ, ಎನ್.ಎಸ್. ಮಾಧವನ್, ಟಿ,ಎಂ.ಕೃಷ್ಣ, ಶಶಿ ಕುಮಾರ್ ಮುಂತಾದ ಇತರ ರಂಗಗಳ ಒಟ್ಟು 33 ಗಣ್ಯರು ಈ ಮನವಿಗೆ ಸಹಿ ಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *