ಹರ್ಷ ಕೊಲೆ: ಸಚಿವ ಈಶ್ವರಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

ಬೆಂಗಳೂರು: ಹರ್ಷ ಕೊಲೆಯ ನಂತರ ಸಚಿವ ಈಶ್ವರಪ್ಪ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್‌ ಎನ್‌  ಚನ್ನಬಸಪ್ಪ ಅವರು ನೀಡಿರುವ ಹೇಳಿಕೆ ಕೋಮುದ್ವೇಷ ಕೆರಳಿಸುವಂತಹುದು ಎಂದು ಅವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ.

ಬೆಂಗಳೂರಿನ  ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಬ್ಬರು ನಾಯಕರ ವಿರುದ್ದ ಶಿವಮೊಗ್ಗದ ಪೀಸ್ ಸಂಘಟನೆಯ ಕಾರ್ಯಕರ್ತ ಹಾಗೂ ನಿವಾಸಿ ರಿಯಾಜ್‌ ಅಹ್ಮದ್‌ ಎಂಬವರು, ನಿನ್ನೆ(ಮಾ.30) ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಹರ್ಷ ಕೊಲೆಯ ಪ್ರಕರಣದ ನಂತರದ ಬೆಳವಣಿಗೆಯನ್ನು ಉಲ್ಲೇಖಿಸಲಾಗಿದೆ.

ಇದನ್ನು ಓದಿ: ‘ನಮ್ಮೆಲ್ಲರ ರಕ್ತ ಒಂದೇ’ ದ್ವೇಷ ಬಿಡಿ, ಸಾಮರಸ್ಯ ಕಾಪಾಡಿ

ಪೊಲೀಸ್‌ ಇಲಾಖೆಯ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದ ಈಶ್ವರಪ್ಪ ಹಾಗೂ ಚನ್ನಬಸಪ್ಪ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರಿಗೆ ನಿರ್ದೇಶಿಸಿದೆ.

42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಮತ್ತು ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ್‌ ಜೆ ಅವರು ಸೆಕ್ಷನ್‌ 156(3) ಅಡಿ ಪೊಲೀಸರಿಗೆ ಆದೇಶ ಮಾಡಿದ್ದು, ಪ್ರಕರಣವನ್ನು ಮೇ 5ಕ್ಕೆ ಮುಂದೂಡಿದ್ದಾರೆ.

ಫೆಬ್ರವರಿ 20ರಂದು ರಾತ್ರಿ 9 ಗಂಟೆ ಸುಮಾರಿಗೆ ಹರ್ಷ ಕೊಲೆಯಾದ ಮರುದಿನ, ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಗೆ ಮುಸ್ಲಿಮ್‌ ಗೂಂಡಾಗಳೇ ಕಾರಣ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ, ಮುಸಲ್ಮಾನ ಗೂಂಡಾಗಳು ಹರ್ಷ ಎಂಬ ಯುವಕನನ್ನು ಕೊಲೆ ಮಾಡಿದ್ದು, ಈ ಹಿಂದೆ ಮುಸಲ್ಮಾನರು ಶಿವಮೊಗ್ಗದಲ್ಲಿ ಎಂದೂ ಕೂಡ ಈ ರೀತಿ ಬಾಲ ಬಿಚ್ಚಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

ಇದನ್ನು ಓದಿ: ಶಿವಮೊಗ್ಗದಲ್ಲಿ ಹರ್ಷ ಕೊಲೆ: ವಾರದ ಬಳಿಕ ಶಾಲಾ-ಕಾಲೇಜು ಪುನಾರಂಭ; ನಿಷೇಧಾಜ್ಷೆ ಮುಂದುವರಿಕೆ

ಚನ್ನಬಸಪ್ಪ “ಪೊಲೀಸರಿಗೆ ಈ ಜನ್ಮದಲ್ಲಿ ಬುದ್ದಿ ಬರುವುದಿಲ್ಲ. ಪೊಲೀಸ್‌ ಹೆಣ ಬಿದ್ದಾಗ ನೆಟ್ಟಗೆ ಆಗುತ್ತಾರೆ. ಪೊಲೀಸರ ಹೆಣ ಬೀಳಬೇಕು. ಪ್ರತಿ ಸಲವೂ ಅವರನ್ನು ಕಳಕೋ, ಇವರನ್ನು ಕಳಕೋ ಎಂಬಂತಾಗಿದೆ. ನಾವು ಯಾವತ್ತೂ ಹಿಂದೂಗಳನ್ನೇ ಕಳೆದುಕೊಂಡಿರುವುದು. ಪೊಲೀಸ್‌ ನಾಮರ್ದ ಇಲಾಖೆ. ಇಲ್ಲಿ ಆರಕ್ಷಕ ಇಲಾಖೆಯ ವೈಫಲ್ಯ, ದೌರ್ಬಲ್ಯ ಇದೆ. ಆರಕ್ಷಕರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಪೊಲೀಸ್‌ ಇಲಾಖೆ ವಿರುದ್ಧ ಹರಿಹಾಯ್ದಿದ್ದರು.

ಉಭಯ ನಾಯಕರ ಪ್ರಚೋದನಾಕಾರಿ ಹೇಳಿಕೆಯ ಬೆನ್ನಲ್ಲೇ ಮುಸ್ಲಿಮ್‌ ಸಮುದಾಯದವರ ಮನೆ, ಅಂಗಡಿಗಳ ಮೇಲೆ ದಾಳಿ ನಡೆದಿತ್ತು. ಆಗ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದರು. ನಿಷೇಧಾಜ್ಞೆ ಜಾರಿಯಿದ್ದರೂ ಸಹ ಇಂತಹ ಘಟನೆ ಸಂಭವಿಸಿದೆ. ಜನಪ್ರತಿನಿಧಿಗಳಾಗಿದ್ದುಕೊಂಡು ಪ್ರಚೋದನಾಕಾರಿಯಾಗಿ ಮಾತನಾಡಿದ ಉಭಯ ನಾಯಕರ ವಿರುದ್ದ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಪ್ರಕರಣ ದಾಖಲಿಸಿಲ್ಲ. ಪೊಲೀಸ್‌ ವರಿಷ್ಠಾಧಿಕಾರಿಯೂ ದೂರಿಗೆ ಪ್ರತಿಕ್ರಿಯಿಸಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಕೆಯಾದ ಮನವಿಯಲ್ಲಿ ಆಕ್ಷೇಪಿಸಲಾಗಿದೆ.

ಆರೋಪಿಗಳಾದ ಈಶ್ವರಪ್ಪ ಮತ್ತು ಚೆನ್ನಬಸಪ್ಪ ಅವರ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 124(ಎ), 153(ಎ), 153(ಬಿ), 295(ಎ), 295(ಬಿ), 505(2) ಮತ್ತು 504 ಜೊತೆಗೆ ಸೆಕ್ಷನ್‌ 34ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ದೊಡ್ಡಪೇಟೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಮಾರ್ಚ್‌ 24ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿ ರಿಯಾಜ್‌ ಅಹ್ಮದ್‌ ಮನವಿ ಮಾಡಿದ್ದರು. ವಕೀಲ ಹರಿರಾಮ್‌ ಅವರು ದೂರುದಾರರನ್ನು ಪ್ರತಿನಿಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *