ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ‌ ಸಿಎಂ ನಿವಾಸಕ್ಕೆ ಮುತ್ತಿಗೆ; ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರಾಜ್ಯ ಕಾಂಗ್ರೆಸ್ ನಾಯಕರನ್ನು ಇಂದು ಕುಮಾರಕೃಪ ರಸ್ತೆಯಲ್ಲಿ ಪೊಲೀಸರು ವಶಕ್ಕೆ ಪಡೆದರು.

ಕಾಂಗ್ರೆಸ್‌ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೆಗೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗುತ್ತು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನ ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲು ಪ್ರತಿಭಟನಾ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು.

ಇದನ್ನು ಓದಿ: ಸಚಿವ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ರಾಜಭವನದ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್‌ ಪಕ್ಷದ ವತಿಯಿಂದ ಬೆಳಿಗ್ಗೆ 10ಕ್ಕೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಗೃಹ ಕಚೇರಿ ಕೃಷ್ಣಾಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಮುತ್ತಿಗೆ ಹಾಕಲೆತ್ನಿಸಿದರು. ಆಗ ಪೊಲೀಸರು ಮೆರವಣಿಗೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರಾದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ,  ಮತ್ತು ಇತರರನ್ನು ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡರು.

ಪ್ರತಿಭಟನಾ ರ‍್ಯಾಲಿಯಲ್ಲಿ ಪೊಲೀಸರ ಸರ್ಪಗಾವಲು ಲೆಕ್ಕಿಸದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪೊಲೀಸರ ಮೇಲೆಯೇ ಎಗರಿ ಮುಂದಕ್ಕೆ ಸಾಗಿದರು. ನೋಡು ನೋಡುತ್ತಿದ್ದಂತೆಯೇ ಡಿಕೆ ಶಿವಕುಮಾರ್‌ ಇತರರ ಸಹಾಯದಿಂದ ಅಲ್ಲಿದ್ದ ಬ್ಯಾರಿಕೇಡ್‌ ಮೇಲೆ ಹತ್ತಿದರು. ಬಳಿಕ ಬ್ಯಾರಿಕೇಡ್‌ ನಿಂದ ಪೊಲೀಸರ ಮೇಲೆಯೇ ಜಿಗಿದರು.

ಬೆಂಗಳೂರು ನಗರದ ಆರ್ ಟಿ‌ ನಗರದ ಮುಖ್ಯಮಂತ್ರಿ ನಿವಾಸಕ್ಕೂ ಸಹ ಪೊಲೀಸರು ಹೆಚ್ಚು ಭದ್ರತೆ ಒದಗಿಸಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂತೋಷ್ ಪಾಟೀಲ್ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ಮೃತ ಸಂತೋಷ್ ಪಾಟೀಲ್ ಸ್ಪಷ್ಟವಾಗಿ ಆತ್ಮಹತ್ಯೆಗೂ ಮುನ್ನ ಸ್ಪಷ್ಟವಾಗಿ ತಿಳಿಸಿದಿದಾರೆ. ನಿನ್ನೆ ಸಂತೋಷ್ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಮೃತ ಸಂತೋಷ್ ಕುಟುಂಬಸ್ಥರು ಬಹಳ ದುಃಖದಲ್ಲಿದ್ದಾರೆ.

ಇದನ್ನು ಓದಿ: ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ‘ಹೈ’ ಸೂಚನೆ

ಸಚಿವ ಈಶ್ವರಪ್ಪನವರನ್ನು ಮುಖ್ಯಮಂತ್ರಿ ಬೊಮ್ಮಾಯಿ ರಕ್ಷಿಸುತ್ತಿದ್ದಾರೆ, ಏಕೆಂದರೆ 40% ಕಮಿಷನ್ ಆರೋಪದಲ್ಲಿ ಅವರು ಕೂಡ ಭಾಗಿಯಾಗಿರಬಹುದು. ಹೀಗಾಗಿ ರಕ್ಷಣೆ ನೀಡುತ್ತಿದ್ದಾರೆ. ಕೆ ಎಸ್ ಈಶ್ವರಪ್ಪನವರ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸಿ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಮೃತ ಸಂತೋಷ್ ಪಾಟೀಲ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬಿಜೆಪಿ ಮತ್ತು ಅವರ ಸರ್ಕಾರದ ಮುಖ ಉಳಿಸಲು ಕೆಎಸ್ ಈಶ್ವರಪ್ಪ ಭ್ರಷ್ಟಾಚಾರದ ಕೇಸ್ ದಾಖಲಿಸಿ ಬಂಧಿಸಿ ಎಂದು ಡಿ ಕೆ ಶಿವಕುಮಾರ್ ಒತ್ತಾಯಿಸಿದರು.

ಈ ವೇಳೆ ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಸಲೀಂ ಅಹಮ್ಮದ್‌, ಧೃವನಾರಾಯಣ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್‌, ಮತ್ತಿತರರು ಭಾಗಿಯಾಗಿದ್ದರು.

ಕಾಂಗ್ರೆಸ್ ಪಕ್ಷದಿಂದ ಪಾದಯಾತ್ರೆ:

ಸಚಿವ ಈಶ್ವರಪ್ಪನವರನ್ನು ಬಂಧಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ 8 ತಂಡಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಲು ಕಾಂಗ್ರೆಸ್​ ನಾಯಕರು ತಯಾರಿ ನಡೆಸಿದ್ದಾರೆ.  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಕೆಪಿಸಿಸಿ ಕಾರ್ಯಾಧ್ಯಕ್ಷರರು ಸೇರಿದಂತೆ ಕಾಂಗ್ರೆಸ್ ನಾಯಕರು ಈ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

5 ದಿನ ಕಾಂಗ್ರೆಸ್ ಪ್ರತಿಭಟನೆ

ಮುಂದಿನ 5 ದಿನಗಳ ಕಾಲ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದು, ಪ್ರಮುಖವಾಗಿ ಈಶ್ವರಪ್ಪ ಅವರನ್ನು ಬಂಧಿಸಬೇಕು, ಸಂಪುಣದಿಂದ ಅವರನ್ನು ವಜಾ ಮಾಡಬೇಕು. ಅಲ್ಲದೇ, ಈಶ್ವರಪ್ಪ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಬೇಡಿಕೆ ಇಟ್ಟಿದ್ಧಾರೆ.

Donate Janashakthi Media

Leave a Reply

Your email address will not be published. Required fields are marked *