ಹಾಸನ: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳನ್ನ “ನಗರ ಬಿಸಿ ನಡುಗಡ್ಡೆ”(ರ‍್ಬನ್ ಹೀಟ್ ಐಲ್ಯಾಂಡ್) ಎಂದು ಕರೆಯಲಾಗುತ್ತಿದೆ, ಕಾರಣ ನಗರ ಪ್ರದೇಶದ ಸುತ್ತಮುತ್ತಲಿನ ಹಳ್ಳಿಯ ಪರಿಸರಕ್ಕೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಗಾಳಿಯು ಹೆಚ್ಚು ಬಿಸಿ ಹಾಗೂ ಹೆಚ್ಚು ಮಲಿನಗೊಂಡಿದೆ ಹಾಗಾಗಿ ಹೆಚ್ಚಿನ ತಾಪಮಾನ ಏರಿಕೆಯಿಂದ ನಗರಪ್ರದೇಶಗಳು ಹೆಚ್ಚು ಬಾದಿತವಾಗುತ್ತಿವೆ ಎಂದು ಪರಿಸರ ಚಿಂತಕ ಹಾಗೂ ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್ ವಿವರಿಸಿದರು. ಅವರು ಇತ್ತೀಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯು ನಗರದ ಗ್ರಂಥಾಲಯದ ಆವರಣದಲ್ಲಿ ನಗರ ಗ್ರಂಥಾಲಯ ಇಲಾಖೆ, ಸ್ಕೌಟ್ ಅಂಡ್ ಗೈಡ್ಸ್ನ ತಾಲ್ಲೂಕು ಘಟಕ, ರೆಡ್‌ಕ್ರಾಸ್ ಹಾಗೂ ನಾವು ಪ್ರತಿಷ್ಠಾನಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಉದ್ಯಾನ ನಿರ್ಮಾಣ ಹಾಗೂ ಬಿಜಿವಿಎಸ್ ಸದಸ್ಯತ್ವ ಆಂದೋಲನದಲ್ಲಿ ಮಾನವ ಮತ್ತು ಪರಿಸರ ಸಂಬಧಗಳ ಕುರಿತು ಮಾತನಾಡುತ್ತಿದ್ದರು.
ನಗರದ ತಾಪಮಾನ ಇಳಿಸುವುದು ಪ್ರಮುಖ ಆಧ್ಯತೆಯಾಗಬೇಕಿದ್ದು ಇಂದಿನ ತುರ್ತು ಹಾಗಾಗಿ ನಗರಪ್ರದೇಶದ ಜನ ಅನಿವಾರ್ಯವಾಗಿ ತಮ್ಮ ಜೀವನ ಶೈಲಿಯನ್ನು ಪರಿಸರಪೂರಕ ನೆಲೆಯಲ್ಲಿ ಬದಲಿಸಿಕೊಳ್ಳಲೇ ಬೇಕಿದೆ; ಅದಕ್ಕಾಗಿ ಹೆಚ್ಚು ನಡೆಯುವ, ಕಡಿಮೆ ವಾಹನ ಬಳಸುವ ಮನೋಸ್ಥೈರ್ಯ ರೂಡಿಸಿಕೊಳ್ಳಬೇಕು ಹಾಗೂ ಮಳೆನೀರನ್ನು ಸಂಗ್ರಹಿಸಿ ಬಳಸುವ ಪ್ರಾಯೋಗಿಕ ಚಟುವಟಿಕೆ ಕಡ್ಡಾಯ ಅಳವಡಿಸಕೊಳ್ಳಬೇಕು ಎಂದ ಅವರು ನಗರದ ಶಾಲಾ ಮಕ್ಕಳು ಪರಿಸರದ ಸಾಕ್ಷರತೆಯನ್ನ ಬೇರೆಲ್ಲಾ ಸಾಕ್ಷರತೆ ಜೊತೆ ಹೆಚ್ಚಾಗಿ ಕಲಿಯಲೇ ಬೇಕು ಎಂದರು.
ಬಿಜಿವಿಎಸ್ ಸದಸ್ಯತ್ವ ಪಡೆದು ಸಹಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸ್ಕೌಟ್ ಅಂಡ್ ಗೈಡ್ಸ್ನ ಜಿಲ್ಲಾಯುಕ್ತ ಡಾ. ವೈ ಎಸ್ ವೀರಭದ್ರಪ್ಪ ಮಾತನಾಡಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ಜನತೆಯಲ್ಲಿ ವೈಜ್ಞಾನಿಕ ಜ್ಞಾನ ಮೂಡಿಸಲು ಕಳೆದ ೩೦-೩೫ವರ್ಷಗಳಿಂದಲೂ ಶ್ರಮಿಸುತ್ತಿದೆ; ಅದು ಪರಿಸರ, ವಿಜ್ಞಾನ, ಆರೋಗ್ಯಗಳ ಕುರಿತು ಅತ್ಯಂತ ವೈಜ್ಞಾನಿಕವಾದ ವಿವರಣೆ, ಮಾಹಿತಿ ಹಾಗೂ ಪ್ರಯೋಗಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಗಮನಿಸುತ್ತಿದ್ದೇನೆ ಅದು ನಿಜಕ್ಕೂ ಅನುಕರಣಿಯ ಎಂದು ನುಡಿದು ಪರಿಸರದ ಉಳಿವು ಮತ್ತು ರಕ್ಷಣೆಗೆ ಬದ್ಧರಾಗಿ ನಿಲ್ಲುವುದು ಇಂದಿನ ತುರ್ತು ಕಾರ್ಯ, ಇಲ್ಲದೆ ಹೋದರೆ ಮುಂದಿನ ಐದು ವರ್ಷಗಳಲ್ಲಿ ಪರಿಸರ ವಿಕೋಪ ನಾವು ಮಾಡುವ ಯಾವುದೇ ಚಟುವಟಿಕೆಯಿಂದ ನಿರ್ವಹಿಸಲಾಗುವುದಿಲ್ಲ ಹಾಗಾಗಿ ಪರಿಸರ ಜ್ಞಾನ ಮತು ಅದನ್ನು ಕಡ್ಡಾಯ ಕಾಪಾಡುವ ಜೀವನ ಶೈಲಿ ರೂಪಿಸಿಕೊಳ್ಳಲು ಮನವಿ ಮಾಡಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಬಿಜಿವಿಎಸ್ ಹಾಸನ ತಾಲ್ಲೂಕು ಕಾರ್ಯದರ್ಶಿ ಬಿ.ಎಸ್.ವನಜಾಕ್ಷಿ ಮಾತನಾಡಿ ಜನಗಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಿ ಅವರ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲು ಭಾರತ ಜ್ಞಾನ ವಿಜ್ಞಾನ ಸಮಿತಿ ಕಳೆದ ೩೬ವರ್ಷಗಳಿಂದಲೂ ದೇಶದ್ಯಾಂತ ದುಡಿಯುತ್ತಿದೆ. ಸಾಕ್ಷರತೆ, ಪರಿಸರ, ವೈಜ್ಞಾನಿಕ ಮನೋಭಾವ, ಜನಾರೋಗ್ಯ ಹಾಗೂ ಮಹಿಳಾ ಸಬಲತೆ ಬಿಜಿವಿಎಸ್‌ನ ಆದ್ಯತಾ ಚಟುವಟಿಕೆಗಳು ಈ ನಿಟ್ಟಿನಲ್ಲಿ ಒಂದು ಜನಾಂದೋಲನವನ್ನೇ ರೂಪಿಸಬೇಕು ಎಂದು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಸದಸ್ಯತ್ವ ಆಂದೋಲನ ನಡೆಸುತ್ತದೆ. ಅದರ ಭಾಗವಾಗಿ ಜಿಲ್ಲೆಯಲ್ಲಿ ಸಾವಿರಾರು ಜನ ಸದಸ್ಯತ್ವ ನೋಂದಾಯಿಸಿ ಬಿಜಿವಿಎಸ್ ಚಟುವಟಿಕೆಗಳ ಜೊತೆಯಾಗಿದ್ದಾರೆ ಎಂದು ನುಡಿದು ಇಂದಿನ ಸಂದರ್ಬದಲ್ಲಿ ಪರಿಸರದ ಉಳಿವು ಇಡಿ ಮನುಕುಲದ ಉಳಿವಿನ ಅನಿವಾರ್ಯ ಸೃಷ್ಠಿಯಾಗಿಬಿಟ್ಟಿದೆ ಹಾಗಾಗಿ ಪರಿಸರಾಂದೋಲನ ಸಣ್ಣ ಸಣ್ಣ ಮಟ್ಟದಲ್ಲಿ ಕೈಗೊಳ್ಳಲು ಇಂದು ನಗರ ಕೇಂದ್ರ ಗ್ರಥಾಲಯದ ಆವರಣದಲ್ಲಿ ಗ್ರಂಥಾಲಯ ಇಲಾಖೆ, ಸ್ಕೌಟ್ ಅಂಡ್ ಗೈಡ್ಸ್ನ ತಾಲ್ಲೂಕು ಘಟಕ, ರೆಡ್‌ಕ್ರಾಸ್ ಹಾಗೂ ನಾವು ಪ್ರತಿಷ್ಠಾನದ ಸಹಯೋದಲ್ಲಿ ಪ್ರೂಟ್ ಗಾರ್ಡನ್ ನಿರ್ಮಿಸುವ ಮೂಲಕ ಸದಸ್ಯತ್ವ ಆಂದೋಲನ ಉದ್ಘಾಟನೆಯಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ: ಮಂಜುನಾಥ್ ಮಾತನಾಡಿ ಈಗಾಗಲೇ ೪೦೦ ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ಉತ್ಪತ್ತಿಯಾಗುತ್ತಿದೆ ಅದರಲ್ಲಿ ೫೦ಶೇಕಡ ಏಕಬಳಕೆ ಪ್ಲಾಸ್ಟಿಕ್‌ಗಳೆ ಆಗಿವೆ ಇದರಲ್ಲಿ ಕೇವಲ ೧೦ಶೇಕಡ ಮಾತ್ರವೇ ನವೀಕರಣ ಪ್ರಕ್ರಿಯೆಗೆ ಒಳಪಡುತ್ತಿವೆ ಮಿಕ್ಕವೆಲ್ಲವೂ ಭೂಮಿಯಮೇಲೆ, ನದಿ-ಸಾಗರದೊಳಗೆ ಸೇರಿ ಭೂಮಾಲಿನ್ಯ ಹೆಚ್ಚು ಮಾಡಿವೆ ಇದನ್ನು ನಿಯಂತ್ರಿಸದಿದ್ದರೆ ೨೦೪೦ ರ ವೇಳೆಗೆ ಪ್ರತಿ ವರ್ಷಕ್ಕೆ ೨೩ ರಿಂದ ೩೭ ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವು ಸಾಗರಗಳನ್ನು ಸೇರಬಹುದು ಮತ್ತು ೨೦೬೦ ರ ವೇಳೆಗೆ ೧೫೫ ರಿಂದ ೨೬೫ ಮಿಲಿಯನ್ ಟನ್‌ಗಳ ನಡುವೆ ಪರಿಸರಕ್ಕೆ ಬಿಡುಗಡೆಯಾಗಬಹುದು. ಎಂದು ಅತಂಕ ವ್ಯಕ್ತಪಡಿಸಿದ ಅವರು ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ನಿರಂತರ ಇಳಿಕೆ, ಹಾಗೂ ಗ್ರಾಹಕರ ಬೇಡಿಕೆಯನ್ನು ಪರಿಸರ ಬಂದಿಯಾಗಿಸಲು ಈ ವರ್ಷದ ಪರಿಸರ ದಿನವನ್ನು ವಿಶ್ವ ಸಂಸ್ಥೆ “ಪ್ಲಾಸ್ಟಿಕ್ ಕಸರಕ್ಕಸನನ್ನು ಸೋಲಿಸೋಣ ಮತ್ತು ಪ್ಲಾಸಿಕ್ ಮಾಲಿನ್ಯ ನಿಯಂತ್ರಣಕ್ಕೆ ವೈಜ್ಞಾನಿಕ ಮಾರ್ಗ ಕಂಡುಕೊಳ್ಳೋಣ” ಎನ್ನುವ ಘೋಷಣೆ ನೀಡಿದೆ. ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಕಸ ಬೀದಿಗೆ ಬಿದ್ದು ಮೈಕ್ರೋ ಕಸವಾಗಿ ಮನುಷ್ಯನ ಮತ್ತು ಭೂಮಿಯ ಆರೋಗ್ಯವನ್ನು ಹದಗೆಡಿಸದಂತೆ ಮಾಡಲು ವೈಯುಕ್ತಿಕ ಮಟ್ಟದಲ್ಲಿ ಆರ್.ಆರ್.ಆರ್ ಚಿಂತನೆ ಮೈಗೂಡಿಸಕೊಳ್ಳುವ ಚಟುವಟಿಕೆ ನಿತ್ಯವೂ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಬಿಜಿವಿಎಸ್ ಕಳೆದ ದಶಕಗಳಿಂದಲೂ ಶಾಲಾ ಇಕೋಕ್ಲಬ್‌ಗಳ, ಇಕೋಬಾಟಲ್‌ಬ್ರಿಕ್ ತಯಾರಿಸಿ ಕಸದಿಂದ ರಸ ಚಟುವಟಿಕೆ ನಡೆಸುತ್ತಾ ಬರುತ್ತಿದೆ ಇದನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲರೂ ಬಿಜಿವಿಎಸ್ ಸದಸ್ಯತ್ವ ಆಂದೋಲನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲಾವಿದ ಗ್ಯಾರಂಟಿ ರಾಮಣ್ಣ ಪರಿಸರ ಗೀತೆಗಳನ್ನು ಹಾಡಿದರು, ಕ್ಲಿರ್‌ಇನ್ ಸಂಸ್ಥೆಯ ಚಂದ್ರಶೇಖರ್, ಸ್ಕೌಟ್ ಆಂಡ್ ಗೈಡ್ಸ್ನ ಗಿರಿಜಾಂಬಿಕ, ನಾವು ಪ್ರತಿಷ್ಠಾನದ ಸುಮನಗೌತಮ್, ನಗರ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಮೀರಾ, ಕಾರ್ಲೆ ವೈದ್ಯಾಧಿಕಾರಿ ತೇಜಸ್ವಿ, ರೋಟರಿ ಸಂಸ್ಥೆಯ ರಮಾನಂದ್ ಬಿಜಿವಿಎಸ್ ಜಿಲ್ಲಾ ಉಪಾದ್ಯಕ್ಷೆ ಪ್ರಮೀಳಾ, ಜಿಲ್ಲಾ ಸಹಕಾರ್ಯದರ್ಶಿ ನಾಗೇಶ್, ಖಜಾಂಚಿ ಗೋಪಾಲಕೃಷ್ಣ, ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಸುಮಾರು ೨೦ಕ್ಕೂ ಅಧಿಕ ವಿವಿಧ ಹಣ್ಣಿನ ಗಿಡಗಳನ್ನು ಗ್ರಂಥಾಲಯದ ಆವರಣದಲ್ಲಿ ನೆಡಲಾಯಿತು. ಹಾಸನ ತಾಲ್ಲೂಕು ಬಿಜಿವಿಎಸ್ ಸದಸ್ಯರುಗಳಾದ ಜಾನಕಿ, ಮೋನಿಕಾ, ಸುರೇಶ್ ಬಿಜಿವಿಎಸ್ ಸದಸ್ಯತ್ವ ನೋಂದಣೀಕರಣ ನಡೆಸಿದರು.
ಭಾರತೀಯ ರೆಡ್‌ಕ್ರಾಸ್‌ನ ಕಾರ್ಯದರ್ಶಿ ಚಿನ್ನೇನಹಳ್ಳಿಸ್ವಾಮಿ ಮೊದಲಿಗೆ ಸ್ವಾಗತ ಮಾಡಿದರು, ಬಿಜಿವಿಎಸ್ ತಾಲ್ಲೂಕು ಸಮಿತಿ ಸದ್ಯಸೆ ಆಶಾ ಕಾರ್ಯಕ್ರಮ ನಿರೂಪಿಸಿದರು, ಕಡೆಯಲ್ಲಿ ಖಜಾಂಚಿ ಶೇಖರ್ ವಂದಿಸಿದರು.