ಹಾಸನ : ಈಗಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮನನೊಂದು, ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಲ್ಲೆಯ ಹೊರವಲಯದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿ ನಡೆದಿದೆ.
ಅರಸೀಕೆರೆಯ ಹಿರಿಯಾಳು ಗ್ರಾಮದ ನಿವಾಸಿ ಹೇಮಾಂತ್ ಗೌಡ (20) ಮೃತ ವಿದ್ಯಾರ್ಥಿ. ತೌಪೇಗೌಡ ಮತ್ತು ಜಯಂತಿ ದಂಪತಿ ಪುತ್ರನಾಗಿರುವ ಹೇಮಾಂತ್ ಗೌಡ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಈಗಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮನನೊಂದ ಹೇಮಾಂತ್ ತಾನು ತಂಗಿದ್ದ ಹಾಸ್ಟೆಲ್ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಯುವ ಮುನ್ನ ವಿಡಿಯೋ ಮಾಡಿರುವ ಹೇಮಾಂತ್, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಿ. ಈಗಿನ ಎಜುಕೇಶನ್ ಸಿಸ್ಟಮ್ ಇದ್ದರೂ ಇಲ್ಲದಂತಾಗಿದೆ. ಸಿಎಂ, ವಿಸಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಈ ಸಿಸ್ಟಮ್ ಬದಲಾವಣೆಗೆ ಬೆಂಬಲ ಕೊಡಿ. ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
“ನನ್ನ ಸಾವಿನ ನಂತರ ಅಂಗಾಂಗ” ದಾನ ಮಾಡಿ. ನನ್ನ ಅಂತ್ಯಕ್ರಿಯೆಯಲ್ಲಿ ಸಿಎಂ, ಶಿಕ್ಷಣ ಸಚಿವರು, ಆದಿ ಚುಂಚನಗಿರಿ ಶ್ರೀಗಳು ಬಾಗಿ ಆಗಬೇಕು ಎಂದು 13 ನಿಮಿಷದ ವಿಡಿಯೊದಲ್ಲಿ ಹೇಮಂತ್ ಮನವಿ ಮಾಡಿದ್ದಾರೆ.
ಹಿಂದಿನ ಶಿಕ್ಷಣ ವ್ಯವಸ್ಥೆ ಸರಿ ಇತ್ತು : ನನ್ನಪ್ಪ ಶಿಕ್ಷಕ, ಅವರ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅದು ಸಾಧ್ಯವಿತ್ತು. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸಾದ್ಯವೇ ಇಲ್ಲ. ಸಿಎಂ, ಶಿಕ್ಷಣ ಇಲಾಖೆ, ವಿಟಿಯು ವಿಸಿ ಎಲ್ಲರೂ ಚಿಂತಿಸಿ. ಎಲ್ಲಾ ರಾಜಕೀಯ ಪಕ್ಷದ ಗಣ್ಯ ನಾಯಕರು ಶಿಕ್ಷಣ ಸುಧಾರಣೆಗೆ ಸಹಕರಿಸಿ ಅಂತ ಕೋರಿದ್ದಾನೆ.
ನನ್ನ ಸಾವು ವ್ಯರ್ಥ ಆಗಲ್ಲ. ಯಾರಾದರು ಒಬ್ಬರ ಬಲಿದಾನ ಆಗಲೇ ಬೇಕಿದೆ. ಇದರಿಂದ ನಾನು ಬದಲಾವಣೆಗೆ ಬುನಾದಿ ಹಾಕುವ ಕೆಲಸ ಮಾಡಿದ್ದೇನೆ. ಅಪ್ಪ ಅಮ್ಮ ಐ ಲವ್ ಯೂ, ನಾನು ನಿಮ್ಮನ್ನ ಮಿಸ್ ಮಾಡಿಕೊಳ್ತೀನಿ. ಈ ವಿಡಿಯೋವನ್ನು ನ್ಯೂಸ್ ಚಾನಲ್ನಲ್ಲಿ ಪ್ರಸಾರ ಮಾಡಿ. ಎಲ್ಲರೂ ಈ ವಿಡಿಯೋವನ್ನು ನೋಡಲಿ ಅಂತ ವಿದ್ಯಾರ್ಥಿ ಹೇಮಂತ್ ಮನವಿ ಮಾಡಿದ್ದಾನೆ.
ಇತ್ತೀಚೆಗೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಮಾನಸಿಕ ದೈರ್ಯ ನೀಡುತ್ತಿಲ್ಲ ಎಂಬುದು ಇದರಿಂದ ಗೊತ್ತಾಗುತ್ತಿದೆ. ಅಂಕಗಳಿಕೆ, ಖಾಸಗಿ ಶಾಲೆಗಳ ಹಣ ಸುಲಿಗೆ, ಒತ್ತಡ, ಸರಕಾರದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಸಾವನ್ನುಪ್ಪುತ್ತಿದ್ದಾರೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.