ಕೊಪ್ಪಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ವ್ಯಾಪ್ತಿಯಲ್ಲಿ ಬರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೂರನೇ ಮತ್ತು ಐದನೇ ಸೆಮಿಸ್ಟರ್ ನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಪ್ರಾರಂಭ ಮಾಡಿದ್ದು, ಈ ದಾಖಲಾತಿಯಲ್ಲಿ ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಳೆದ ವರ್ಷಕ್ಕಿಂತ ಈ ವರ್ಷ 10,000 ಹೆಚ್ಚಳ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ ವಿರೋಧ ಮಾಡುತ್ತಿದೆ ಮತ್ತು ಆ ಹೆಚ್ಚಳ ಹಣವನ್ನು ವಿಶ್ವವಿದ್ಯಾಲಯವು ಕೂಡಲೇ ಕೈ ಬಿಡಬೇಕೆಂದು ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುವುದರ ಮೂಲಕ ಮನಬಂದಂತೆ ಶುಲ್ಕ ವಸಲಿ ಮಾಡುವುದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತೇದೆ. ಕಳೆದ ವರ್ಷ ಮೂರನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೆ ಕೇವಲ ರೂ.17,000 ಮಾತ್ರ ಶುಲ್ಕ ಇತ್ತು ಈ ವರ್ಷ ದಿಢೀರನೆ ರೂ.27000 ಶುಲ್ಕ ಮಾಡಿರುವುದು ಸರಿಯಲ್ಲ, ಹೆಚ್ಚಳ ಮಾಡಿರುವ 10,000 ಶುಲ್ಕವನ್ನು ವಿಶ್ವವಿದ್ಯಾಲಯವು ಕೈಬಿಡಬೇಕು ಮತ್ತು ದಾಖಲಾತಿಯ ದಿನಾಂಕವನ್ನು ವಿಸ್ತರಣೆ ಮಾಡಬೇಕು ಎಂದರು.
ಇದೇ ಶೈಕ್ಷಣಿಕ ವರ್ಷದ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 17000 ಮಾತ್ರ ಶುಲ್ಕ ಪಡೆಯುತ್ತಿದ್ದು ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 27,000 ಏಕೆ ಎಂದು ಅಮರೇಶ ಕಡಗದ ವಿಶ್ವವಿದ್ಯಾಲಯವನ್ನು ಪ್ರಶ್ನೆಸಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯ ಮಂಡವರ್ತನ ಕೈ ಬಿಟ್ಟು ಕೂಡಲೇ ಒಂದು ನಿರ್ಧಾರಕ್ಕೆ ಬರಬೇಕು ಇಲ್ಲದಿದ್ದರೆ ನವೆಂಬರ್ 28ರಂದು ವಿಶ್ವವಿದ್ಯಾಲಯ ಮತ್ತು ಶಾಸಕರ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗ್ಯಾನೇಶ ಕಡಗದ ಕಾರ್ಯದರ್ಶಿ ಶಿವುಕುಮಾರ, ಪ್ರಮುಖರಾದ ವಿರೇಶ, ಸೋಮನಾಥ, ಮೌನೇಶ, ಶರೀಫ್, ರಾಜಭಕ್ಷಿ ಇತರರು ಇದ್ದರು.