ತಕ್ಷಣ ಮಧ್ಯಪ್ರವೇಶಿಸುವಂತೆ ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ
ತ್ರಿಪುರಾದಲ್ಲಿ ಆಳುವ ಪಕ್ಷ ಬಿಜೆಪಿಯು ಸಿಪಿಐ(ಎಂ) ಮತ್ತು ಎಡರಂಗದ ವಿರುದ್ಧ ಹಿಂಸಾಚಾರವನ್ನು ಹರಿಯಬಿಟ್ಟಿದೆ, ಇದನ್ನು ಬಲವಾಗಿ ಖಂಡಿಸುವುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ಒಂದು ಪೂರ್ವ-ನಿಯೋಜಿತ ರೀತಿಯಲ್ಲಿ ಸಿಪಿಐ(ಎಂ)ನ ರಾಜ್ಯಸಮಿತಿ ಕಚೇರಿಯೂ ಸೇರಿದಂತೆ ವಿವಿಧ ಕಚೇರಿಗಳ ಮೇಲೆ ಬಿಜೆಪಿಯ ಮಂದಿ ದೊಂಬಿ, ಹಲ್ಲೆ ನಡೆಸಿದ್ದಾರೆ. ಹೀಗೆ ಹಾಳುಗೆಡವಿದ ಅಥವ ಸುಟ್ಟು ಹಾಕಿದ ಕಚೇರಿಗಳಲ್ಲಿ ಉದಯಪುರ ಸಬ್ ಡಿವಿಜನಲ್ ಸಮಿತಿ ಕಚೇರಿ, ಗೋಮತಿ ಜಿಲ್ಲಾ ಸಮಿತಿ ಕಚೇರಿ, ಸೆಪಾಹಿಜಾಲ ಜಿಲ್ಲಾ ಸಮಿತಿ ಕಚೇರಿ, ಬಿಶಾಲ್‌ಗಡ್ ಸಬ್ ಡಿವಿಜನಲ್ ಸಮಿತಿ ಕಚೇರಿ, ಪಶ್ಚಿಮ ತ್ರಿಪುರಾ ಜಿಲ್ಲಾ ಸಮಿತಿ ಕಚೇರಿ ಮತ್ತು ಸದರ್ ಸಬ್ ಡಿವಿಜನಲ್ ಸಮಿತಿ ಕಚೇರಿಯೂ ಸೇರಿದೆ.
ಅತ್ಯಂತ ನಿರ್ಲಜ್ಜ ಹಲ್ಲೆ ಅಗರ್ತಲಾದಲ್ಲಿರುವ ರಾಜ್ಯ ಸಮಿತಿ ಕಚೇರಿಯ ಮೇಲೆ ನಡೆದಿದೆ. ಕಚೇರಿಯ ನೆಲಮಹಡಿ ಮತ್ತು ಮೊದಲನೇ ಮಹಡಿಯನ್ನು ಲೂಟಿ ಮಾಡಿದ್ದಾರೆ, ಎರಡು ಕಾರುಗಳನ್ನು ಸುಟ್ಟು ಹಾಕಿದ್ದಾರೆ ಮತ್ತು ತ್ರಿಪುರಾದ ಜನತೆಯ ಅತ್ಯಂತ ಗೌರವಪಾತ್ರ ನೇತಾರ ದಶರಥ್ ದೇಬ್ ಅವರ ಪ್ರತಿಮೆಯನ್ನು ಒಡೆದು ಹಾಕಿದ್ದಾರೆ.
ಇದನ್ನು ಓದಿ: ಸಿಪಿಐಎಂ ಕಚೇರಿಗೆ ಬೆಂಕಿ ಇಟ್ಟ ಬಿಜೆಪಿ ಕಾರ್ಯಕರ್ತರು
ಮಾಧ್ಯಮಗಳನ್ನೂ ಈ ಮಂದಿ ಬಿಟ್ಟಿಲ್ಲ ಎಂದು ಪೊಲಿಟ್ ಬ್ಯುರೊ ಹೇಳಿದೆ. ಇಲೆಕ್ಟ್ರಾನಿಕ್ ಮಾಧ್ಯಮಗಳ ಕಚೇರಿಗಳ ಮೇಲೆಯೂ ಹಲ್ಲೆಗಳು ನಡೆದಿವೆ, ‘ಪಿಎನ್-24 ನ್ಯೂಸ್’ ವಾಹಿನಿ ಮತ್ತು ‘ಪ್ರತಿಬಾದಿ ಕಲಮ್’ ಎಂಬ ವಾರ್ತಾಪತ್ರಿಕೆಯ ಮೇಲೆ ಹಲ್ಲೆ ನಡೆದಿದೆ. ಸಿಪಿಐ(ಎಂ) ಬೆಂಬಲಿತ ದಿನಪತ್ರಿಕೆ ‘ದೇಶೇರ್ ಕಥಾ’ದ ಕಚೇರಿಯನ್ನೂ ಹಾಳುಗೆಡವಲಾಗಿದೆ.
ಈ ಸ್ಥಳಗಳಲ್ಲಿ ಇದ್ದ ಪೋಲೀಸರು ಹೆಚ್ಚಿನ ಕಡೆಗಳಲ್ಲಿ ಮೂಕಪ್ರೇಕ್ಷಕರಾಗಿ ನಿಂತಿದ್ದರು ಎಂಬುದು ಗಮನಾರ್ಹ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ರಾಜ್ಯಸಮಿತಿ ಕಚೇರಿಯ ಮುಂದೆ ಕೆಲವು ಸಿ.ಆರ್.ಪಿ.ಎಫ್. ಜವಾನರು ಇದ್ದರು. ಅವರನ್ನೂ ಹಲ್ಲೆಗಳು ಆರಂಭವಾಗುವ ಒಂದು ಗಂಟೆಯ ಮೊದಲು ಹಿಂತೆಗೆದು ಕೊಳ್ಳಲಾಯಿತು.
ಬಿಜೆಪಿ ಗ್ಯಾಂಗ್‌ಗಳು ಎಂತಹ ಹಮ್ಮಿನಿಂದ ಈ ದುಷ್ಕೃತ್ಯಗಳಲ್ಲಿ ತೊಡಗಿದ್ದರೆಂಬುದು ಇದರಲ್ಲಿ ರಾಜ್ಯ ಸರಕಾರದ ಶಾಮೀಲನ್ನು ತೋರಿಸುತ್ತದೆ; ರಾಜ್ಯದಲ್ಲಿನ ಪ್ರಮುಖ ಪ್ರತಿಪಕ್ಷದ ಚಟುವಟಿಕೆಗಳನ್ನು ದಮನ ಮಾಡಲು ಆಳುವ ಪಕ್ಷ ಪ್ರಯತ್ನಿಸಿ ವಿಫಲವಾದ್ದರಿಂದ ಈ ಹಲ್ಲೆಗಳು ನಡೆದಿವೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಪ್ರಜಾಪ್ರಭುತ್ವದ ಮೇಲೆ ಮತ್ತು ಪ್ರತಿಪಕ್ಷದ ಮೇಲೆ ಈ ಆಕ್ರೋಶಕಾರೀ ದಾಳಿಗಳನ್ನು ಎಲ್ಲ ಪ್ರಜಾಪ್ರಭುತ್ವ-ಪ್ರೇಮಿಗಳು ಮತ್ತು ಪಕ್ಷಗಳು ಖಂಡಿಸಬೇಕಾಗಿದೆ. ಕೇಂದ್ರ ಸರಕಾರ, ನಿರ್ದಿಷ್ಟವಾಗಿ ಗೃಹ ಮಂತ್ರಾಲಯ, ತ್ರಿಪುರಾದಲ್ಲಿ ಕಾನೂನು ಆಳ್ವಿಕೆಯನ್ನು ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸಲು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದಿರುವ ಪೊಲಿಟ್ ಬ್ಯುರೊ ರಾಜ್ಯದಲ್ಲಿ ಸಿಪಿಐ(ಎಂ) ಮೇಲೆ ದಾಳಿಗಳು ಕೊನೆಗೊಳ್ಳಬೇಕು ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಬೇಕು ಎಂದು ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ.
ತಕ್ಷಣ ಮಧ್ಯಪ್ರವೇಶಿಸುವಂತೆ ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ
ತ್ರಿಪುರಾದಲ್ಲಿ ಸೆಪ್ಟಂಬರ್ 8ರಂದು ಸಿಪಿಐ(ಎಂ) ಮತ್ತು ಎಡರಂಗದ ವಿರುದ್ಧ ಹರಿಯಬಿಟ್ಟ ಹಿಂಸಾಚಾರದತ್ತ ಪ್ರಧಾನ ಮಂತ್ರಿಗಳ ಗಮನ ಸೆಳೆಯಲು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಪತ್ರ ಬರೆದಿದ್ದಾರೆ.
ಈ ಹಿಂಸಾತ್ಮಕ ದಾಳಿಗಳನ್ನು ನಿಲ್ಲಸಲು ವಿಳಂಬ ಮಾಡದೆ ಮಧ್ಯಪ್ರವೇಶಿಸಬೇಕು ಎಂದು ಪ್ರಧಾನ ಮಂತ್ರಿಗಳನ್ನು ಆಗ್ರಹಿಸಿರುವ ಯೆಚುರಿ, ಈ ಹಲ್ಲೆಗಳು ನಡೆದಿರುವ ರೀತಿಯನ್ನು ನೋಡಿದರೆ, ರಾಜ್ಯ ಸರಕಾರ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡುವ ಹಾಗೂ ಶಾಂತಿಯುತವಾಗಿ ರಾಜಕೀಯ ಚಟುವಟಿಕೆಗಳನ್ನು ಸಂಘಟಿಸುವ ಪ್ರತಿಪಕ್ಷಗಳ ಸಂವಿಧಾನಿಕ ಹಕ್ಕುಗಳನ್ನು ತುಳಿದು ಹಾಕುವುದನ್ನು ತಡೆಯುವ ತನ್ನ ಸಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದಿದ್ದಾರೆ.
ಪೋಲೀಸರು ಈ ಹಿಂಸಾಚಾರದಲ್ಲಿ ಶಾಮೀಲಾಗಿದ್ದಾರೋ ಇಲ್ಲವೋ, ಅದನ್ನು ತಡೆಯುವಲ್ಲಿ ಮತ್ತು ಅಪರಾಧಿಗಳನ್ನು ಹಿಡಿಯುವಲ್ಲಿ ವಿಫಲರಂತೂ ಆಗಿರುವುದರಿಂದ ಕೇಂದ್ರ ಸರಕಾರ ಸಂವಿಧಾನಿಕ ನೀತಿಗಳನ್ನು ಜಾರಿಗೊಳಿಸಲು ಮಧ್ಯಪ್ರವೇಶಿಸಲೇ ಬೇಕಾಗಿದೆ ಎಂದು ಯೆಚುರಿ ತಮ್ಮ ಪತ್ರದಲ್ಲಿ ಹೇಳುತ್ತ ಇದಕ್ಕೆ ಪ್ರಧಾನಿಗಳಿಂದ ತುರ್ತು ಸ್ಪಂದನೆಯನ್ನು ನಿರೀಕ್ಷಿಸುವುದಾಗಿ ಬರೆದಿದ್ದಾರೆ.