ನವದೆಹಲಿ: ಉತ್ತರ ಪ್ರದೇಶ ರಾಜ್ಯದ ಬಿಜೆಪಿ ಸರ್ಕಾರವು ಪ್ರತಿಭಟನಾಕಾರರ ಮೇಲಿನ ಪ್ರತಿಕಾರವಾಗಿ ಮನೆಗಳ ಧ್ವಂಸಗೊಳಿಸಿ ಹಲವರನ್ನು ಬಂಧಿಸುತ್ತಿರುವ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು 12 ಮಂದಿ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಿರಿಯ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಬಿಜೆಪಿ ವಕ್ತಾರರು ನೀಡಿದ ಹೇಳಿಕೆ ವಿರುದ್ಧ ಎದ್ದಿರುವ ವಿವಾದ ಮತ್ತು ಪ್ರತಿರೋಧದಿಂದಾಗಿ ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಹೇಗೆ ಇಂಬು ನೀಡಿತು ಎಂಬುದನ್ನು ಪತ್ರದಲ್ಲಿ ತಿಳಿಸಲಾಗಿದೆ.
ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವ ಬದಲು, ಉತ್ತರಪ್ರದೇಶ ಆಡಳಿತ ಅವರ ವಿರುದ್ಧ ಹಿಂಸಾತ್ಮಕ ಕ್ರಮ ಕೈಗೊಳ್ಳಲು ಮುಂದಾದಂತಿದೆ. ಭವಿಷ್ಯದಲ್ಲಿ ಯಾರೂ ತಪ್ಪು ಮಾಡದಂತೆ ಅಥವಾ ಕಾನೂನನ್ನು ಕೈಗೆತ್ತಿಕೊಳ್ಳದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಗಳು ಪ್ರತಿಭಟನಾಕಾರರ ವಿರುದ್ಧ ಅತ್ಯಂತ ಕ್ರೂರವಾಗಿ-ನಿರ್ದಾಕ್ಷ್ಯಣವಾಗಿ ನಡೆಸಿಕೊಳ್ಳಲು ಮತ್ತು ಅಕ್ರಮವಾಗಿ ಹಿಂಸಿಸಲು ಪೊಲೀಸರಿಗೆ ಧೈರ್ಯ ನೀಡಿವೆ. ಆಡಳಿತ ನಡೆಸುವವರಿಂದ ಇಂತಹ ಕ್ರೂರ ನಿಗ್ರಹವು ಕಾನೂನಾತ್ಮಕ ಆಡಳಿತವನ್ನು ಬುಡಮೇಲು ಮಾಡುವ ಹಾಗೂ ನಾಗರಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. “ಪ್ರಭುತ್ವವು ಖಾತರಿ ಪಡಿಸಿರುವ ಸಂವಿಧಾನ ಮತ್ತು ಮೂಲಭೂತ ಹಕ್ಕುಗಳನ್ನು ಇದು ಅಪಹಾಸ್ಯ ಮಾಡುತ್ತದೆ” ಎಂದು ಆರೋಪಿಸಲಾಗಿದೆ.
ಇಂತಹ ಕ್ರೂರ ದಾಳಿಗಳು ನ್ಯಾಯಾಂಗದ ಸ್ಥೈರ್ಯವನ್ನು ಪರೀಕ್ಷೆಗೊಳಪಡಿಸುವಂತದ್ದಾಗಿದ್ದು, ಈ ಹಿಂದೆ ಇಂತಹ ಘಟನೆಗಳು ಜರುಗಿದಾಗ ನ್ಯಾಯಾಂಗವು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದೆ. ವಲಸೆ ಕಾರ್ಮಿಕರು ಹಾಗೂ ಪೆಗಸಸ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದನ್ನು ಪತ್ರದಲ್ಲಿ ನೆನಪಿಸಲಾಗಿದೆ.
ಇಂದಿನ ನಿರ್ಣಾಯಕ ಕಾಲಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಮರ್ಥವಾಗಿ ಸ್ಪಂದಿಸುತ್ತದೆ ಮತ್ತು ನಾಗರಿಕರು ಹಾಗೂ ಸಂವಿಧಾನವನ್ನು ನಿರಾಸೆಗೊಳಿಸುವುದಿಲ್ಲ ಎಂಬುದಾಗಿ ನಾವು ಭಾವಿಸುತ್ತೇವೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಬಿ ಸುದರ್ಶನ ರೆಡ್ಡಿ, ವಿ ಗೋಪಾಲ ಗೌಡ, ಎ ಕೆ ಗಂಗೂಲಿ, ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ ಪಿ ಶಾ, ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಶಾಂತಿಭೂಷಣ್, ಇಂದಿರಾ ಜೈಸಿಂಗ್, ಚಂದರ್ ಉದಯ್ ಸಿಂಗ್, ಪ್ರಶಾಂತ್ ಭೂಷಣ್, ಆನಂದ್ ಗ್ರೋವರ್ ಹಾಗೂ ಮದ್ರಾಸ್ ಹೈಕೋರ್ಟ್‌ನ ಹಿರಿಯ ವಕೀಲ ಶ್ರೀರಾಂ ಪಂಚು ಪತ್ರಕ್ಕೆ ಸಹಿ ಮಾಡಿದ್ದಾರೆ.