ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಂಸ್ಥೆಯಲ್ಲಿ ಬಹಳ ದೊಡ್ಡ ಬದಲಾವಣೆಯಾಗಿದ್ದು, ಇದೀಗ ಅಧಿಕೃತವಾಗಿ ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್ ಟ್ವಿಟರ್‌ನ ಮಾಲೀಕರಾಗಿದ್ದಾರೆ. ಸಂಸ್ಥೆ ಹಸ್ತಾಂತರದ ಬಳಿಕ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಮತ್ತು ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಪರಾಗ್ ಅಗ್ರವಾಲ್ ಅವರನ್ನು ಕಂಪೆನಿಯಿಂದ ವಜಾಗೊಳಿಸಿದ್ದಾರೆ.
ಟ್ವಿಟ್ಟರ್ ಸಂಸ್ಥೆಯನ್ನು ಟೆಸ್ಲಾ ಕಂಪನಿಯ ಮುಖ್ಯಸ್ಥರು ತನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಕೂಡಲೇ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಪರಾಗ್ ಅಗರ್‌ವಾಲ್ ಜೊತೆ ಕಾನೂನು, ನೀತಿ ಮತ್ತು ಟ್ರಸ್ಟ್ ಮುಖ್ಯಸ್ಥರಾದ ವಿಜಯ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಸೇರಿದಂತೆ ಪ್ರಮುಖರನ್ನು ವಜಾ ಮಾಡಲಾಗಿದೆ. ಅಷ್ಟೇ ಅಲ್ಲ, ಕಂಪನಿಯ ಪ್ರಧಾನ ಕಚೇರಿಯಿಂದಲೂ ಅವರನ್ನು ಹೊರಹಾಕಲಾಗಿದೆ. ಈ ಮೂಲಕ ಎಲೋನ್ ಮಸ್ಕ್ ಕಂಪೆನಿಯ ಹಿಡಿತ ಸಾಧಿಸಿದ್ದಾರೆ ಎಂದು ವರದಿಯಾಗಿದೆ.
ಎಲೋನ್ ಮಸ್ಕ್ ಕಳೆದ ಏಪ್ರಿಲ್ ಅವಧಿಯಲ್ಲಿ ಟ್ವಿಟ್ಟರ್ ಸಂಸ್ಥೆತನ್ನು 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದರು. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಸಹ ಮಾಡಿದ್ದರು.
ನಿತ್ಯದ ಟ್ವಿಟ್ಟರ್ ಬಳಕೆದಾರರ ಪೈಕಿ ಶೇ.5 ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್ ಖಾತೆಗಳಿರುವುದಾಗಿ ಟ್ವಿಟ್ಟರ್ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು. ಆದರೆ ಸ್ಪ್ಯಾಮ್ ಬಾಟ್ಸ್ (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ)ಯನ್ನು ಮೊದಲು ತೆರವುಗೊಳಿಸುವಂತೆ ಮಸ್ಕ್ ಬೇಡಿಕೆ ಇಟ್ಟಿದ್ದರು. ತನ್ನ ಬೇಡಿಕೆಗೆ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಜಟಿಲಗೊಂಡಿತು.
ಖರೀದಿ ಪ್ರಸ್ತಾಪದ ಅವಧಿಯಲ್ಲಿಯೇ, ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣ, ಸಾಕಷ್ಟು ಚರ್ಚೆಗಳು ಏರ್ಪಟ್ಟಿದ್ದವು ಮತ್ತು ಖರೀದಿ ಒಪ್ಪಂದವನ್ನು ಸ್ಥಗಿತಗೊಳಿಸಿವುದಾಗಿಯೂ ಘೋಷಣೆಯಾಗಿದ್ದವು. ಇದಾದ ಬಳಿಕ ಜುಲೈ 8ರಂದು, ಮಸ್ಕ್ ಖರೀದಿ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು.
ಅಗರ್‌ವಾಲ್ ಕಂಪನಿಯ ಹಿಡಿತ ಸಾಧಿಸಲು ಟೆಸ್ಲಾ ಮುಖ್ಯಸ್ಥರನ್ನು ಹಿಡಿದಿಟ್ಟುಕೊಳ್ಳಲು ನ್ಯಾಯಾಲಯಕ್ಕೆ ಮೊರೆಹೋಗಿದ್ದರು. ಟ್ವಿಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಕ್ಟೋಬರ್ ಆರಂಭದಲ್ಲಿ, ಮಸ್ಕ್ ತನ್ನ ನಿಲುವನ್ನು ಬದಲಿಸಿ ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು. ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಆದೇಶಿಸಿತು. ಎಲೋನ್ ಮಸ್ಕ್ ಒಂದು ದಿನ ಮುಂಚಿತವಾಗಿ ಟ್ವಿಟ್ಟರ್ ಕಚೇರಿಗೆ ತಲುಪುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಪ್ರಧಾನ ಕಚೇರಿಯಲ್ಲಿ ಕಾಫಿ ಬಾರ್‌ನಲ್ಲಿ ಸಾಮಾಜಿಕವಾಗಿ ಬೆರೆಯುತ್ತಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದರು. ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಟ್ವಿಟರ್‌ನಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸಲು ಬಾಕಿ ಉಳಿದಿರುವ ಆದೇಶವನ್ನು ಪೋಸ್ಟ್ ಮಾಡಿದೆ.
ಕಂಪನಿಯ ಸಿಇಒ ಜಾಕ್ ಡೋರ್ಸೆ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ಆ ಸ್ಥಾನಕ್ಕೆ ಏರಿದರು. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಗೇಟ್‌ಪಾಸ್ ನೀಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಜಯ ಗದ್ದೆ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಟ್ವಿಟ್ಟರ್ ಕಂಪನಿ ತಮ್ಮ ತೆಕ್ಕೆಗೆ ಬಂದ ಬೆನ್ನಲ್ಲೇ ಎಲೋನ್ ಮಸ್ಕ್ ಹಕ್ಕಿ ಈಗ ಮುಕ್ತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.