ನ್ಯೂಯಾರ್ಕ್: ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಆಗರ್ಭ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪ್ರತಿ ಷೇರಿಗೆ 54.20 ಡಾಲರ್ (₹4149) ನಂತೆ ಸುಮಾರು 44 ಬಿಲಿಯನ್ ಡಾಲರ್, ಅಂದರೆ ₹ 3.37 ಲಕ್ಷಕೋಟಿ ಮೊತ್ತಕ್ಕೆ ಟ್ವಿಟರ್ ಖರೀದಿ ಮಾಡಿದ್ದಾರೆ.
ಎಲಾನ್ ಮಸ್ಕ್ ಅವರು ತಾವು ಹೇಳಿದಂತೆ ಟ್ವಿಟ್ಟರ್ ಎಂಬ ಜನಪ್ರಿಯ ಸೋಷಿಯಲ್ ಮೀಡಿಯಾ ಕಂಪನಿಯನ್ನು ಖರೀದಿಸಿದ್ದಾರೆ. ಟೆಸ್ಲಾ, ಸ್ಪೇಸ್‌ಎಕ್ಸ್ ಮೊದಲಾದ ಕಂಪನಿಗಳ ಮಾಲೀಕರಾದ ಎಲಾನ್ ಏಪ್ರಿಲ್ 14ರಂದೇ ತಾನು ಟ್ವಿಟ್ಟರ್ ಖರೀದಿಸುವುದಾಗಿ ಹೇಳಿಕೊಂಡಿದ್ದರು. ಅವರು, 43 ಬಿಲಿಯನ್ ಡಾಲರ್ ಮೊತ್ತ ನಿಗದಿಪಡಿಸಿದ್ದರು. ಆದರೆ, ಟ್ವಿಟ್ಟರ್ ಆಡಳಿತ ಮಂಡಳಿಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಟ್ವಿಟ್ಟರ್ ಖರೀದಿಸಿಲು ತಾನು ಮಾಡಿರುವ ಹಣದ ವ್ಯವಸ್ಥೆಯ ವಿವರವನ್ನು ಎಲಾನ್ ಮಸ್ಕ್ ಅಧಿಕೃತವಾಗಿ ಘೋಷಿಸಿದ ಬಳಿಕ ಟ್ವಿಟ್ಟರ್ ಆಡಳಿತ ಮಂಡಳಿ ಮಾತುಕತೆಗೆ ಮುಂದಾಗಿತ್ತು ಎನ್ನಲಾಗಿದೆ.
ಇದನ್ನು ಓದಿ: ಹೊಸ ಐಟಿ ನಿಯಮಗಳ ಉಲ್ಲಂಘನೆ: ಮಧ್ಯವರ್ತಿ ಮಾಧ್ಯಮ ಸ್ಥಾನ ಕಳೆದುಕೊಳ್ಳುವ ಟ್ವೀಟರ್
ಖರೀದಿಗೂ ಮುನ್ನ ತನ್ನ ಪ್ರಸ್ತಾವಕ್ಕೆ ಟ್ವಿಟ್ಟರ್ ಸರಿಯಾಗಿ ಸ್ಪಂದಿಸದಿದ್ದಾಗ ಎಲಾನ್ ಮಸ್ಕ್ ಟ್ವಿಟ್ಟರ್‌ನ ಇತರ ಪ್ರಮುಖ ಷೇರುದಾರರನ್ನು ಖಾಸಗಿಯಾಗಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರೆನ್ನಲಾಗಿದೆ. ಒಂದು ವೇಳೆ, ಇದಕ್ಕೂ ಟ್ವಿಟ್ಟರ್ ಆಡಳಿತ ಮಂಡಳಿ ಬಗ್ಗದಿದ್ದರೆ ವಿವಿಧ ಷೇರುದಾರರ ಮೂಲಕ ಒತ್ತಡ ಹಾಕಿಸುವುದು ಎಲಾನ್ ಮಸ್ಕ್ ಅವರ ತಂತ್ರವಾಗಿತ್ತು.
ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್ ನೀಡಿ ಪೂರ್ತಿ ಷೇರು ಖರೀದಿಸುವ ಎಲಾನ್ ಮಸ್ಕ್ ಪ್ರಸ್ತಾಪವನ್ನು ಟ್ವಿಟರ್ ಆಡಳಿತ ಮಂಡಳಿ ಒಪ್ಪಿದ್ದು, ಅದರಂತೆ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದರು. 2013ರಿಂದ ಟ್ವಿಟರ್ ಸಾರ್ವಜನಿಕ ಷೇರು ಮೂಲಕ ಹೂಡಿಕೆ ಕಂಪನಿಯಾಗಿ ಬದಲಾಗಿತ್ತು. ಆದರೆ ಈಗ ಪೂರ್ತಿ ಷೇರು ಮಾರಾಟವಾಗಿ, ಎಲಾನ್ ಮಸ್ಕ್ ತೆಕ್ಕೆಗೆ ಬಂದಿರುವುದರಿಂದ, ಮುಂದೆ ಖಾಸಗಿ ಕಂಪನಿಯಾಗಿ ಮುಂದುವರಿಯಲಿದೆ.
ಇದನ್ನು ಓದಿ: ಟ್ವಿಟ್ಟರ್ ಕಛೇರಿಗೆ ಧಾಳಿ ಮಾಡಿದ ಪೊಲೀಸರು
ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸಾರ್ವಜನಿಕ ವಲಯದಿಂದ ಹೊರತಂದು ಸಂಪೂರ್ಣ ಖಾಸಗಿ ಕಂಪನಿಯಾಗಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಈಗ ಎಲ್ಲಾ ಷೇರುಗಳನ್ನ ಮಸ್ಕ್ ಅವರೇ ಖರೀದಿ ಮಾಡಿರುವುದರಿಂದ ಇಡೀ ಕಂಪನಿ ಅವರೊಬ್ಬರ ಸುಪರ್ದಿಗೆ ಬರುತ್ತದೆ. ಹಾಗೆಯೇ, ಪ್ರಾಧಿಕಾರದ ಹಲವು ಕಟ್ಟುಪಾಡುಗಳು ಖಾಸಗಿ ಕಂಪನಿಗಳಿಗೆ ಅನ್ವಯ ಆಗುವುದಿಲ್ಲ. ಟ್ವಿಟ್ಟರ್‌ನಲ್ಲಿ ತಾನು ಅಂದುಕೊಂಡಂತೆ ಬದಲಾವಣೆ ತರಲು ಸಾಧ್ಯವಾಗುತ್ತದೆ. ಟ್ವಿಟ್ಟರ್ ಅನ್ನು ಖಾಸಗಿಗೆ ತರುವ ಮಸ್ಕ್ ಉದ್ದೇಶಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ.
ಕುತೂಹಲಕರ ಅಂಶವೆಂದರೆ, ಎಲಾನ್ ಮಸ್ಕ್ ಟ್ವಿಟ್ಟರ್‌ನ ಕಟು ಟೀಕಾಕಾರರಾಗಿದ್ದಾರೆ. ಟ್ವಿಟ್ಟರ್ ವೇದಿಕೆಯಲ್ಲಿ ಮುಕ್ತವಾದ ವಾಕ್‌ಸ್ವಾತಂತ್ರ್ಯ ಇಲ್ಲ ಎಂದು ಹಲವು ಬಾರಿ ಟೀಕಿಸಿದ್ದರು.
ವಾಕ್ ಸ್ವಾತಂತ್ರ್ಯವು ಕಾರ್ಯರೂಪದಲ್ಲಿರುವ ಯಾವುದೇ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಟ್ವಿಟರ್ ಎನ್ನುವ ಡಿಜಿಟಲ್ ಜಗಲಿಯಲ್ಲಿ ಮನುಷ್ಯತ್ವದ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತದೆ. ಟ್ವಿಟರ್‌ನ ಆಲ್ಗೊರಿದಂಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಷ್ಟೇ ಅಲ್ಲದೆ, ಎಲ್ಲರನ್ನೂ ತಲುಪುವಂತೆ ಮಾಡಬೇಕಿದೆ. ಟ್ವಿಟರ್ಗೆ ಅಗಾಧವಾಗಿ ಬೆಳೆಯುವ ಸಾಮರ್ಥ್ಯವಿದೆ. ಅದನ್ನು ಸಾಧ್ಯವಾಗಿಸಲು ಕಂಪನಿಯೊಂದಿಗೆ, ಬಳಕೆದಾರರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆಂದು ಹೇಳಿದ್ದಾರೆ.
ಅಲ್ಲದೆ, ನನ್ನನ್ನು ಕೆಟ್ಟದಾಗಿ ಟೀಕಿಸುವವರು ಕೂಡ ಟ್ವಿಟರ್ನಲ್ಲಿಯೇ ಉಳಿಯಬೇಕೆಂದು ಬಯಸುತ್ತೇನೆ. ವಾಕ್ ಸ್ವಾತಂತ್ರ್ಯ ಎಂದರೆ ಅದೇ ತಾನೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.