ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ‘ನಮ್ಮ ಕಾಲದಲ್ಲಿ ತಪ್ಪು ಆಗಿದ್ದರೆ ಅದನ್ನು ನಮ್ಮ ವೈಫಲ್ಯ ಎಂದು ಒಪ್ಪಿಕೊಳ್ತೀವಿ. ನಿಮ್ಮದನ್ನು ನೀವು ಒಪ್ಪಿಕೊಳ್ತೀರಾ. ಎಲ್ಲದಕ್ಕೂ ನಿಮ್ಮ ಕಾಲದಲ್ಲಿ ಹೀಗಾಗಿತ್ತು ಎನ್ನುವುದೇ ನಿಮ್ಮ ಉತ್ತರವಾಗಿದ್ದರೆ, ನೀವು ಅಲ್ಲಿರುವುದೇಕೆ? ನಾವು ಇಲ್ಲಿರುವುದೇಕೆ’ ಎಂದು ಎದಿರೇಟು ನೀಡಿದರು.
ಸಿದ್ಧರಾಮಯ್ಯ, ‘ಕಾಸು ಕೊಟ್ಟರೆ ಅಷ್ಟೇ ಪೊಲೀಸ್ ಬಾಸು’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಸ್ತಾಪಿಸಿ ಇಲ್ಲಿಯವರೆಗೆ ಇದನ್ನ ನೀವಾಗಲಿ, ಮುಖ್ಯಮಂತ್ರಿ ಆಗಲಿ ತಳ್ಳಿ ಹಾಕಿಲ್ಲ’ ಎಂದರು.
ನಿಯಮ-69ರಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಸುವ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಪೊಲೀಸ್ ಇಲಾಖೆಯಲ್ಲಿ ಹೊಟೇಲಿನಲ್ಲಿ ತಿಂಡಿಗಳ ದರವಿದ್ದಂತೆ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹವರಿಂದ ಕಾನೂನು ಕಾಪಾಡುವ ನಿರೀಕ್ಷೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಇದನ್ನು ಓದಿ: 40% ಕಮಿಷನ್ ವ್ಯವಹಾರ ನಿಯಮ 60ರಡಿ ಚರ್ಚೆಯಾಗಲೇಬೇಕು: ಸಿದ್ದರಾಮಯ್ಯ ಆಗ್ರಹ
ಸಿದ್ದರಾಮಯ್ಯ ಮಾತಿಗೆ ಆಕ್ಷೇಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ‘ನಿಮ್ಮ ಕಾಲದಲ್ಲಿ ಎನಾಗಿತ್ತು’ ಎಂದು ಪ್ರಶ್ನಿಸಿದರು. ʻಏಜೆಂಟರನ್ನು ದೂರ ಇಟ್ಟಿದ್ದೇವೆ. ವರ್ಗಾವಣೆ ಭ್ರಷ್ಟಾಚಾರದ ಲೇಖನ ಪ್ರಕಟಿಸಿದ ಪತ್ರಿಕೆಯಿಂದ ಮಾಹಿತಿ ಕೇಳಿದ್ದೇವೆ. ಅವರೆಲ್ಲ ನನ್ನ ಕಾಲದಲ್ಲಿ ನೇಮಕವಾದವರಲ್ಲ, ನಿಮ್ಮ ಕಾಲದಲ್ಲಿ ಎಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಇತ್ತು ಎಂಬುದನ್ನು ಹೇಳುತ್ತೇವೆʼ ಎಂದರು.
‘ಪೊಲೀಸ್ ಇಲಾಖೆಯಲ್ಲಿ ಇಂಥದ್ದೆಲ್ಲಾ ಯಾವಾಗಿನಿಂದ ಆರಂಭವಾಯಿತು ಸ್ವಾಮಿ? ಹಿಂದೆ ಏಜೆಂಟರನ್ನು ಇಟ್ಟುಕೊಂಡಿದ್ದರು. ನಾವು ಹತ್ತಿರ ಸೇರಿಸಿಲ್ಲ. ಹಿಂದಿನ ಸರ್ಕಾರದಲ್ಲಿ ಇರಲಿಲ್ಲವಾ? ಹೊಸ ಸವಾರ ಬಂದ ತಕ್ಷಣ ಹಳೇ ಕುದುರೆ ತನ್ನ ಚಾಳಿ ಬಿಡುವುದಿಲ್ಲ. ತನಗೆ ಬೇಕಾದ ಕಡೆಗೆ ಎಳೆದುಕೊಂಡು ಹೋಗುತ್ತದೆ’ ಎಂದರು. ‘ಕೊಟ್ಟ ಕುದುರೆಯನ್ನು ಏರದವನು ಶೂರನು ಅಲ್ಲ ವೀರನೂ ಅಲ್ಲ’ ಎಂದು ಸಿದ್ದರಾಮಯ್ಯ ಅಲ್ಲಮಪ್ರಭು ಅವರ ವಚನ ಉದಾಹರಿಸಿದರು.
ಭಾರತದಲ್ಲಿ ಶಾಂತಿ ಕದಡಿದರೆ, ಯಾವುದೇ ಅಭಿವೃದ್ಧಿ ಆಗಲ್ಲ. ರಾಜ್ಯದ ಪರಿಸ್ಥಿತಿ ಕೂಡ ಹಾಗೆ ಆಗಿದೆ. ಗ್ರಾಸ್ ಎನ್ರೋಲ್ಮೆಂಟ್ ರೇಷಿಯೋದಲ್ಲಿ ರಾಜ್ಯ ಹಿಂದೆ ಉಳಿದಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜಕೀಯದಲ್ಲಿ ಧರ್ಮ ಬೆರೆಸುವುದರಿಂದ ದೇಶ ಅಭಿವೃದ್ಧಿಯಾಗಲ್ಲ. ಬಹು ಸಂಸ್ಕೃತಿ, ಸಂವಿಧಾನ ಮರೆತರೆ ದೇಶ ಅಭಿವೃದ್ಧಿ ಆಗಲ್ಲ. ಅಭಿವೃದ್ಧಿಗೂ ಶಾಂತಿ ಸುವ್ಯವಸ್ಥೆಗೆ ನೇರ ಸಂಬಂಧ ಇದೆ. ಪ್ರತಿಯೊಬ್ಬರು ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಾನೂನು, ತಿದ್ದುಪಡಿಗಳ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. 2 ವರ್ಷದಿಂದ ಹೂಡಿಕೆ ಬಂದಿಲ್ಲ, ಉದ್ಯೋಗ ಸೃಷ್ಟಿ ಆಗಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.