ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರಗಳನ್ನು ಹೆಚ್ಚಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮೋದನೆ ನೀಡಿದೆ.
ವಿದ್ಯುತ್ ವಿತರಣಾ ಕಂಪನಿಗಳು ₹1.35 ರಷ್ಟು ಬೆಲೆ ಏರಿಕೆ ಕೋರಿ ಕೆಇಆರ್ಸಿಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದರ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಇದನ್ನು ಓದಿ: ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಕಛೇರಿಗಳ ಮುಂದೆ ಪ್ರತಿಭಟನೆ: ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕರೆ
ಪರಿಷ್ಕೃತ ದರಗಳು ಏಪ್ರಿಲ್ 1, 2021ರ ನಂತರದಲ್ಲಿ ಜಾರಿಗೊಳಿಸಲು ಅನುಮತಿ ನೀಡಲಾಗಿದೆ. ಮೀಟರ್ ಓದುವ ದಿನಾಂಕದಿಂದ ಬಳಕೆ ಮಾಡುವ ವಿದ್ಯುಚ್ಛಕ್ತಿಗೆ ಅನ್ವಯವಾಗುತ್ತದೆ. ಏಪ್ರಿಲ್, ಮೇ ತಿಂಗಳ ದರ ಪರಿಷ್ಕರಣೆಯ ಬಾಕಿಯನ್ನು ಯಾವುದೇ ಬಡ್ಡಿಯಿಲ್ಲದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ವಸೂಲಿ ಮಾಡಬೇಕೆಂದು ಆದೇಶ ನೀಡಲಾಗಿದೆ.
ರಾಜ್ಯದ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆ, ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆ ಘೋಷಣೆ ಕಾರಣ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ದರ ಪರಿಷ್ಕರಣೆ ಆದೇಶ ಹೊರಡಿಸುವುದು ವಿಳಂಬವಾಯಿತು. ಕೋವಿಡ್ ಸೋಂಕು ತಡೆಯಲು ಲಾಕ್ಡೌನ್ ನಿರ್ಬಂಧ ಹೇರಿದ ಕಾರಣ ಆಯೋಗದ ನಿತ್ಯದ ಕಾರ್ಯಚಟುವಟಿಕೆಗಳಲ್ಲಿ ತೊಂದರೆಯಾಯಿತು ಎಂದು ಆಯೋಗ ಕಾರಣ ನೀಡಿದೆ.
ಇದನ್ನು ಓದಿ: ಇಂಧನ ಬೆಲೆ ಏರಿಕೆ ಖಂಡಿಸಿ ಸಾಂಕೇತಿಕ ಪ್ರತಿಭಟನೆಗೆ ಕಾಂಗ್ರೆಸ್ ಕರೆ
ಇದರ ಜೊತೆಗೆ ಎಚ್ಟಿ ಕೈಗಾರಿಕೆಗಳಲ್ಲಿ ಬೆಳಿಗ್ಗೆ 6 ರಿಂದ 10ರ ಅವಧಿಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ ವಿಧಿಸುತ್ತಿದ್ದ ₹ 1ರ ದಂಡವನ್ನು ಹಿಂಪಡೆಯಲಾಗಿದೆ. ಎಲ್ಟಿ ಮಂಜೂರಾತಿ ಮಿತಿಯನ್ನು 150 ಕಿಲೋವ್ಯಾಟ್ಗೆ ಹೆಚ್ಚಿಸಲಾಗಿದೆ. ಗೃಹಬಳಕೆ ವಿಭಾಗದಲ್ಲಿ ಮೊದಲ ಹಂತವನ್ನು 30 ಯೂನಿಟ್ಗಳಿಂದ 50 ಯೂನಿಟ್ಗಳಿಗೆ ಹೆಚ್ಚಿಸಲಾಗಿದೆ. ಸಾರ್ವಜನಿಕ ಬೀದಿದೀಪಗಳಲ್ಲಿ ಎಲ್ಇಡಿ ಬಲ್ಬ್ ಬಳಕೆಗೆ ಪ್ರತಿ ಯೂನಿಟ್ಗೆ ₹1.05 ರಿಯಾಯ್ತಿ ಮುಂದುವರಿಸಲಾಗುವುದು ಎಂದು ಆಯೋಗವು ಸ್ಪಷ್ಟಪಡಿಸಿದೆ.