ವಿಪಕ್ಷ ನಾಯಕನ ಆಯ್ಕೆ : ಕೇಂದ್ರದ ವೀಕ್ಷಕರನ್ನು ನೇಮಿಸಿದ ಬಿಜೆಪಿ

ಬೆಂಗಳೂರು: ರಾಜ್ಯ ವಿಧಾನಸಭೆ, ಪರಿಷತ್ ವಿಪಕ್ಷ ನಾಯಕ ಆಯ್ಕೆ, ಪ್ರತಿಪಕ್ಷಗಳ ನಾಯಕ ಆಯ್ಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ರಾಜ್ಯ ಬಿಜೆಪಿ ನಾಯಕರು ಹಾಗೂ ಹೈಕಮಾಂಡ್ ಚರ್ಚೆ ನಡೆಸಿದ್ದು, ಆದರೂ, ಇನ್ನೂ ಈ ಕುರಿತು ಯಾವುದೇ ರೀತಿಯ ಅಂತಿಮ ನಿರ್ಧಾರವಾಗಿಲ್ಲ ಎಂದು ಮಾಹಿತಿ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ.ನಡ್ಡಾ ಅವರು ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಕೇಂದ್ರದ ವೀಕ್ಷಕರಾಗಿ ವಿನೋದ್ ತಾವೆ, ಮನ್ಸೂಖ್ ಮಾಂಡವೀಯ ಅವರನ್ನು ಆಯ್ಕೆ ಮಾಡಿದ್ದು, ಇಬ್ಬರೂ ನಾಯಕರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ:ವಿರೋಧ ಪಕ್ಷದ ನಾಯಕರು ತುರ್ತಾಗಿ ಬೇಕಾಗಿದ್ದಾರೆ: ಬಿಜೆಪಿ ಕುರಿತು ಕಾಂಗ್ರೆಸ್‌ ವ್ಯಂಗ್ಯ

ವೀಕ್ಷಕರು ರಾಜ್ಯ ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಹೈಕಮಾಂಡ್ ಗೆ ಮಾಹಿತಿ ನೀಡಲಿದ್ದು, ವರದಿ ಪರಿಶೀಲಿಸಿದ ಬಳಿಕ ವಿಪಕ್ಷ ನಾಯಕರು ಯಾರು ಎಂಬುದರ ಕುರಿತು ನಿರ್ಧಾರವಾಗಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ಇನ್ನೂ 2-3 ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪಕ್ಷದ ನೂತನ ಅಧ್ಯಕ್ಷರ ನೇಮಕ ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾನುವಾರ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಪಕ್ಷದ ಹೈಕಮಾಂಡ್ ಕೇಂದ್ರ ಸಚಿವರಾದ ವಿನೋದ್ ತಾವ್ಡೆ ಮತ್ತು ಮನ್ಸುಖ್ ಮಾಂಡವಿಯಾ ಅವರನ್ನು ವೀಕ್ಷಕರನ್ನಾಗಿ ಕಳುಹಿಸಲಿದ್ದು, ಅವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ವೇಳೆ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಬಹುತೇಕ ಮಂಗಳವಾರ ನಿರ್ಧಾರವಾಗಲಿದೆ ಎಂದು ಹೇಳಿದರು.

ಇದರೊಂದಿಗೆ ಇಂದು ಬಜೆಟ್ ಅಧಿವೇಶನ ಆರಂಭವಾದರೂ, ವಿಪಕ್ಷ ನಾಯಕನಿಲ್ಲದೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಗುರಿ ಮಾಡಲು ಬಿಜೆಪಿ ಸಜ್ಜಾಗಿದೆ. ಯಡಿಯೂರಪ್ಪ ಅವರು ವಿಪಕ್ಷ ನಾಯಕನ ಸ್ಥಾನಕ್ಕೆ ವೀರಶೈವ ಲಿಂಗಾಯತರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸ್ಪರ್ಧೆಯಲ್ಲಿದ್ದಾರೆ, ಆದರೆ ಇದಕ್ಕೆ ಯಡಿಯೂರಪ್ಪ ಅವರ ವಿರೋಧವಿದೆ ಎಂದು ಹೇಳಲಾಗುತ್ತಿದೆ.

ಯತ್ನಾಳ್ ಅವರ ಜೊತೆಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ.ಒಂದು ವೇಳೆ ವಿಪಕ್ಷ ನಾಯಕನ ಸ್ಥಾನ ವೀರಶೈವ-ಲಿಂಗಾಯತರಿಗೆ ಬಂದಿದ್ದೇ ಆದರೆ, ಆರ್‌ಎಸ್‌ಎಸ್‌ನಲ್ಲಿ ಬೇರೂರಿರುವ ಒಕ್ಕಲಿಗ ನಾಯಕರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *