ಬೆಂಗಳೂರು: ಚುನಾವಣಾ ಆಯೋಗದ ಸ್ಟಾಟಿಕ್ ಸರ್ವೆಲೆನ್ಸ್ ತಂಡ (ಎಸ್‌ಎಸ್‌ಟಿ ತಂಡ) ರಾಜ್ಯದ ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುವ ಕೆಲ ದಿನಗಳ ಮೊದಲು ಏ. 20 ರಂದು ಚಾಮರಾಜಪೇಟೆ ಪೊಲೀಸರೊಂದಿಗೆ ಸೇರಿ ಬಿಜೆಪಿಗೆ ಸೇರಿದ 2 ಕೋಟಿ ರೂ ಜಪ್ತಿ ಮಾಡಿದ್ದಾರೆ.
ಚುನಾವಣಾ ಆಯೋಗದ ಸಿಬ್ಬಂದಿಗಳು ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ರಾಜಕೀಯ ಪಕ್ಷಗಳಿಗೆ ಸೇರಿದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತದಾರರಿಗೆ ಹಂಚಲು ಕೊಂಡೊಯ್ಯುವ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಚುನಾವಣಾ ಸಿಬ್ಬಂದಿಗೆ ಸಿಕ್ಕ ದೊಡ್ಡ ಮೊತ್ತ ಇದಾಗಿದೆ.
“ಚಾಮರಾಜಪೇಟೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ವೇಳೆ ಕಾರಿನಲ್ಲಿ ಕೊಂಡೊಯ್ಯತ್ತಿದ್ದ ಎರಡು ಕೋಟಿ ರೂ. ನಗದು ಹಣವು ಮತದಾರರ ಮೇಲೆ ಅನಗತ್ಯವಾಗಿ ಪ್ರಭಾವ ಬೀರುವ ಮತ್ತು ಲಂಚ ನೀಡುವ ಪ್ರಯತ್ನದಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಇದು ಜನಪ್ರತಿನಿಧಿ ಕಾಯ್ದೆ 1951 ಹಾಗೂ ವಿವಿಧ ಭಾರತೀಯ ದಂಡ ಸಂಹಿತೆ ಅಪರಾಧಗಳನ್ನು ಒಳಗೊಂಡಿವೆ. ಅದರಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಆದೇಶದ ನಂತರ ಭಾನುವಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಪ್ರಕರಣ ದಾಖಲಿಸಲಾಗಿದೆ ಮತ್ತು ಪ್ರಸ್ತುತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಶಪಡಿಸಿಕೊಂಡ ನಗದು ಹಣವನ್ನು ಬಿಡುಗಡೆ ಮಾಡಿಲ್ಲ” ಎಂದು ಬೆಂಗಳೂರು ನಗರ ಜಿಲ್ಲೆ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಮೋದಿ ಕಳಂಕ – ಜಾಗೃತ ನಾಗರಿಕ ಕರ್ನಾಟಕ ಆರೋಪ
ಚಾಮರಾಜಪೇಟೆ ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಎಸ್ ಎಸ್ ಟಿ ತಂಡದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ , ರವಿಅಸ್ತಿ ಪರಿಶೀಲನೆ ವೇಳೆ KA-09-MB-2412 ಕಾರಿನಲ್ಲಿ 2 ಕೋಟಿ ರೂ. ನಗದು ಹಣ ಪತ್ತೆಯಾಗಿತ್ತು. ಈ ಬಗ್ಗೆ ಅವರು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಏಪ್ರಿಲ್.21ರಂದು ದೂರು ನೀಡಿದ್ದರು. ಕಾರಿನಲ್ಲಿ ಸಿಕ್ಕ 2 ಕೋಟಿ ರೂ ಹಣದ ವಿಷಯದ ಬಗ್ಗೆ ಕಾರಿನಲ್ಲಿದ್ದವರನ್ನು ಪ್ರಶ್ನಿಸಿದಾಗ, “ಇದು ಬಿಜೆಪಿ ಪಕ್ಷದ ಹಣವಾಗಿದ್ದು, ಕೋದಂಡರಾಮಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಚಾಲ್ತಿ ಖಾತೆಯಿಂದ ಮಾ.27 ರಂದು ಒಟ್ಟು 5 ಕೋಟಿ ನಗದು ಹಣವನ್ನು ಬ್ಯಾಂಕಿನಿಂದ ಹಿಂಪಡೆಯಲಾಗಿತ್ತು.” ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
“ಈ ಬಗ್ಗೆ ಸೂಕ್ತ ದಾಖಲೆಗಳನ್ನು ಕಾರಿನಲ್ಲಿದ್ದವರು ನೀಡಿದರು. ಆ ಪೈಕಿ ಈ ಎರಡು ಕೋಟಿ ರೂ. ಹಣವನ್ನು ಮೈಸೂರು-ಕೊಡಗು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿನ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಾಗೂ ಪಕ್ಷದ ಕಾರ್ಯಗಳಿಗೆ ಬಳಸಲು ವೆಂಕಟೇಸ್ ಪ್ರಸಾದ್ ಎಂಬುವರು ಕೊಂಡೊಯ್ಯುತ್ತಿದ್ದರು” ಎಂದು ರವಿಅಸ್ತಿ ದೂರಿನಲ್ಲಿ ತಿಳಿಸಿದ್ದಾರೆ.
“ಸಮಾನಾಂತರವಾಗಿ ಆದಾಯ ತೆರಿಗೆ ಅಧಿಕಾರಿಗಳು ಯಾವುದೇ ಆದಾಯ ತೆರಿಗೆ ಕಾನೂನುಗಳ ಉಲ್ಲಂಘನೆಗಾಗಿ ತಮ್ಮದೇ ಆದ ತನಿಖೆಯನ್ನು ಮಾಡಿದ್ದಾರೆ. ಇದರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಆದಾಯ ತೆರಿಗೆ ಕಾನೂನು ಉಲ್ಲಂಘನೆಯಾಗಿಲ್ಲ. ಹಾಗಾಗಿ ಹಣವನ್ನು ವಶಪಡಿಸಿಕೊಳ್ಳಲು ಆಧಾರ ಕಂಡುಕೊಂಡಿಲ್ಲ” ಎಂದು ಅವರು ತಿಳಿಸಿದ್ದರು.
ಬೆಂಗಳೂರು ನಗರ ಜಿಲ್ಲೆ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್, ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳು ಮತ್ತು ಐಪಿಸಿಯ ಸೆಕ್ಷನ್ 171 ಬಿ, 171 ಸಿ, 171 ಇ, 171 ಎಫ್ ಮತ್ತು ಆರ್‌ಪಿ ಕಾಯ್ದೆಯ ಸೆಕ್ಷನ್ 123 ರ ಪ್ರಾಥಮಿಕ ಉಲ್ಲಂಘನೆಯ ಕಾರಣದಿಂದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಪ್ರಕರಣವು ತನಿಖೆಯಲ್ಲಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಬಿಜೆಪಿ ರಾಜ್ಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ವಾಹನ ಚಾಲಕ ಲೋಕೇಶ್ ಪ್ರಸಾದ್ ಹಾಗೂ ಜೊತೆಯಲ್ಲಿದ್ದ ಗಂಗಾಧರ್ ಮತ್ತಿತರರ ವಿರುದ್ಧ ಚುನಾವಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿಲಾಗಿದೆ. ತನಿಖೆ ಮುಂದುವರೆದಿದೆ.
ಇದನ್ನೂ ನೋಡಿ: ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!