ಗಂಗಾವತಿ : ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ಮೊಟ್ಟೆಯನ್ನು ವಿರೋಧಿಸುವುದಕ್ಕೆ ನೀವು ಯಾರು? ನಮ್ಮ ಆಹಾರದ ಹಕ್ಕನ್ನು ಯಾಕೆ ಕಸಿದುಕೊಳ್ತೀರಾ?
ಮೊಟ್ಟೆ ಕೊಡಬೇಡಿ ಎಂದು ಸರಕಾರಕ್ಕೆ ಒತ್ತಡ ಹಾಕಿದ್ರೆ ನಾವು ನಿಮ್ಮ ಮಠಕ್ಕೆ ಬಂದು ಕುಳಿತು ಮಠದಲ್ಲಿಯೇ ಮೊಟ್ಟೆ ತಿಂತೀವಿ. ಏನ್ಮಾಡ್ತಿರೋ ನೋಡ್ತಿವಿ ಎಂದು ವಿದ್ಯಾರ್ಥಿಗಳು ಮಠಾದೀಶರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೌದ ಭಾರತ ವಿದ್ಯಾರ್ಥಿ ಫೆಡರೇಶನ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮಠಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಶಾಲಾ ವಿದ್ಯಾರ್ಥಿನಿಯೊಬ್ಬಳು ನಮ್ಮ ಮೊಟ್ಟೆ ಮ್ಯಾಲೆ ನಿಮಗ್ಯಾಕೆ ಕಣ್ಣು, ಮೊಟ್ಟೆ ತಿನ್ಬ್ಯಾಡ್ರಿ ಅಂತಾ ಹೇಳಕ ನೀವ್ಯಾರ್ರಿ, ನೀವು ಹಿಂಗ ವಿರೋಧ ಮಾಡಿದ್ರ ನಿಮ್ಮ ಮಟ್ಟದ ಅಂಗಳಕ್ಕ ಬಂದ್ ಮೊಟ್ಟಿ ತಿಂತಿವಿ ನಾವು ಎಂದು ಖಡಕ್ ಆಗಿ ಹೇಳಿರುವ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗಿದೆ.
SFI ಪ್ರತಿಭಟನೆ : ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ಮಾಡುವ ಬಗ್ಗೆ ಕೆಲವು ಮಠದ ಸ್ವಾಮೀಜಿಗಳು ಜಾತಿ ಮತ್ತು ಧಾರ್ಮೀಕತೆ, ನಂಬಿಕೆಯ ಹೆಸರಿನಲ್ಲಿ ಸರ್ಕಾರದ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ, ಮೊಟ್ಟೆಯನ್ನು ತಿನ್ನುವುದು ಹಾಗೂ ತಿನ್ನದಿರುವುದನ್ನು ಮಕ್ಕಳ ಆಯ್ಕೆಯಾಗಿರುತ್ತದೆ ಇದನ್ನೇ ತಿನ್ನಬೇಕು, ಇದನ್ನೇ ತಿನ್ನಬಾರದೆಂದು ಆಹಾರದ ಹಕ್ಕಿನ ಮೇಲೆ ಸ್ವಾಮೀಜಿಗಳು ದಾಳಿ ಮಾಡುತ್ತಿರುವುದು ಸರಿಯಾದ ವಿಧಾನ ಅಲ್ಲ ಎಂದು SFI ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಆಗ್ರಹಿಸಿದ್ದಾರೆ.
ಗಂಗಾವತಿಯಲ್ಲಿ SFI ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಕೊಪ್ಪಳ, ಬೀದರ್, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ 1 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಮೊಟ್ಟೆ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೀಕ್ಷಾ ವರದಿಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ರಾಜ್ಯ ಸಮಿತಿ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದರು.
ಗಂಗಾವತಿ ತಾಲ್ಲೂಕ ಅಧ್ಯಕ್ಷ ಗ್ಯಾನೇಶ್ .ಕೆ ಮಾತನಾಡುತ್ತ, ರಾಜ್ಯದ ಅತೀ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್ ಕರ್ನಾಟಕದ ಈಗೀನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಠಿಕತೆಯ ಪ್ರಮಾಣ ಯಾದಗಿರಿ- ಶೇ. 74, ಕಲಬುರಗಿ- ಶೇ. 72.4, ಬಳ್ಳಾರಿ- ಶೇ. 72.3, ಕೊಪ್ಪಳ- ಶೇ. 70.7, ರಾಯಚೂರು- ಶೇ. 70.6, ಬೀದರ್- ಶೇ. 69.1, ಬಿಜಾಪುರ- ಶೇ. 68ರಷ್ಟು ಈ ರೀತಿಯಲ್ಲಿದೆ, ಈ ಸಮಸ್ಯೆ ನಿವಾರಣೆಗೆ ಸ್ವಾಮೀಜಿಗಳು ಶ್ರಮವಹಿಸಲಿ ಅದನ್ನು ಬಿಟ್ಟು ಜಾತಿ, ಧರ್ಮದ ಹೆಸರಿನಲ್ಲಿ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಠಿ ಮಾಡುವ ಸ್ವಾಮೀಜಿಗಳ ಕ್ಷುಲ್ಲಕ ಮನಸ್ಥಿತಿಯನ್ನು ಎಸ್‌ಎಫ್‌ಐ ಸಂಘಟನೆ ವಿರೋಧಿಸುತ್ತದೆ ಎಂದರು.
ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ ನಂತರ ಇದೇ ತಿಂಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇ.10 ರಿಂದ 12ರಷ್ಟು ಏರಿಕೆ ಕಂಡುಬಂದಿದೆ. 80ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಸುಮಾರು 14,44,000 ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಮೊಟ್ಟೆ ಸಹಾಯವಾಗಲಿದೆ ಶೇಕಡ 20ರಷ್ಟು ಮಕ್ಕಳಿಗೆ ಬಾಳೇಹಣ್ಣು ವಿತರಣೆ ಮಾಡುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಬೇಧಭಾವ ತಾರತಮ್ಯ ಮಾಡುವ ಅವಕಾಶವಿರುವುದಿಲ್ಲ ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಲಿ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ SFI ತಾಲ್ಲೂಕ ಕಾರ್ಯದರ್ಶಿ ಶಿವಕುಮಾರ ಪ್ರಮುಖರಾದ ಶಂಕರ,ಶರೀಫ್, ಸೋಮನಾಥ, ನಾಗರಾಜ,ಅಲ್ಲಭಕ್ಷಿ ಹಾಗು ನೂರಾರು ವಿದ್ಯಾರ್ಥಿಗಳು ಇದ್ದರು.