ನವದೆಹಲಿ : ಎನ್ಸಿಇಆರ್ಟಿ ಪಠ್ಯ ಪುಸ್ತಕಗಳ ಮೂಲಕ ಇತಿಹಾಸದ ಪಠ್ಯಕ್ರಮವನ್ನು ಬದಲಾಯಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.
ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲು ಮತ್ತು ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡಲು ಇದನ್ನು ಮಾಡಲಾಗಿದೆ ಎಂಬ ಎನ್ಸಿಇಆರ್ಟಿ ಮುಖ್ಯಸ್ಥರ ತೋರಿಕೆಯ ವಾದವು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವಂತಿದೆ .ಇದು ಕೋಮುವಾದದ ಹಾದಿಯಲ್ಲಿ ಇತಿಹಾಸವನ್ನು ಪುನಃ ಬರೆಯುವ ಯೋಜನೆಯ ಭಾಗವಾಗಿದೆ. ಕೋಮುವಾದೀ ಪೂರ್ವಾಗ್ರಹದ ಆಧಾರದ ಮೇಲೆ ನಮ್ಮ ಹಿಂದಿನ ವಿವಿಧ ಕಾಲಾವಧಿಗಳನ್ನು ಅಳಿಸಿ ಹಾಕಿ ಬಿಡಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರವು ಕಡೆಗಣಿಸುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದು ಮೊಘಲ್ ಸಾಮ್ರಾಜ್ಯದ ಸಮಸ್ತ ಅಧ್ಯಾಯಗಳನ್ನು ಕೈಬಿಡುವ ಮೂಲಕ ಇತಿಹಾಸವನ್ನೇ ವಿರೂಪಗೊಳಿಸುವ ಬಹುಸಂಖ್ಯಾಕವಾದೀ ಮನೋ ಭಾವವನ್ನು ಎತ್ತಿ ತೋರಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ : 12ನೇ ತರಗತಿ ಪಠ್ಯ : ಮಹಾತ್ಮ ಗಾಂಧಿ, ಹಿಂದೂ-ಮುಸ್ಲಿಂ ಏಕತೆ, ಆರ್ಎಸ್ಎಸ್ ನಿಷೇಧ ವಿಚಾರ ಕೈಬಿಟ್ಟ ಎನ್ಸಿಇಆರ್ಟಿ
ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವ ಪ್ರಸ್ತುತ ಪ್ರಯತ್ನಗಳು ವಾಸ್ತವವಾಗಿ ಆರ್ಎಸ್ಎಸ್ನ ವಿಭಜಕ ಮತ್ತು ಹಿಂಸಾತ್ಮಕ ಪಾತ್ರವನ್ನು ಮರೆಮಾಚುವ ಉದ್ದೇಶವನ್ನು ಹೊಂದಿವೆ ಎಂಬುದು ಆ ಸಂಘಟನೆಯ ನಿಷೇಧಕ್ಕೆ ಕಾರಣವಾದ ಮಹಾತ್ಮ ಗಾಂಧಿಯವರ ಹತ್ಯೆಗೆ ಸಂಬಂಧಿಸಿದಂತೆ ನಿರ್ಣಾಯಕ ವಾಕ್ಯಗಳನ್ನು ತೆಗೆದು ಹಾಕಿರುವ ರೀತಿಯಲ್ಲಿ ಸ್ಪಷ್ಟವಾಗಿದೆ.
ಸರ್ಕಾರ ಈ ಅಸಹ್ಯಕರ ಕ್ರಮಗಳನ್ನುಹಿಂದಕ್ಕೆ ಪಡೆಯಲು ಮತ್ತು ಹಳೆಯ ಪಠ್ಯ ಪುಸ್ತಕಗಳನ್ನು ಮರುಸ್ಥಾಪಿಸಲು ತಕ್ಷಣ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿರುವ ಪೊಲಿಟ್ಬ್ಯುರೊ ನಮ್ಮ ಹಿಂದಿನ ಕಾಲದ ವಸ್ತುನಿಷ್ಠ ಅಧ್ಯಯನವನ್ನು ಸಮರ್ಥಿಸಲು ಆಸಕ್ತಿ ಹೊಂದಿರುವ ಎಲ್ಲಾ ಭಾರತೀಯ ದೇಶಪ್ರೇಮಿಗಳು ತಮ್ಮ ಪ್ರತಿಭಟನೆಯ ಧ್ವನಿಯನ್ನು ಎತ್ತಬೇಕು ಎಂದೂ ಆಗ್ರಹಿಸಿದೆ.