ಹೈಕೋರ್ಟ್ ತೀರ್ಪಿನಂತೆ ಶೈಕ್ಷಣಿಕ ಸಹಾಯಧನ ಬಿಡುಗಡೆ: ಡಾ.ಭಾರತಿ

ಬೆಂಗಳೂರು :  ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡುವ ಸಂಬಂಧ ರಾಜ್ಯ ಹೈಕೋರ್ಟ್ ನೀಡಿದ ತೀರ್ಪಿನಂತೆ ಸಹಾಯಧನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ” ಎಂದು ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಡಾ.ಭಾರತಿ ಹೇಳಿದರು. ಹೈಕೋರ್ಟ್

ಬುಧವಾರ ನಗರ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ.) ಆಯೋಜಿಸಿದ್ದ ಕಟ್ಟಡ ಕಾರ್ಮಿಕರ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮನವಿ ಸ್ವೀಕರಿಸಿ ಮಾತನಾಡಿದರು.

ಇದನ್ನು ಓದಿ :-ಕುಡಿದು ಕಿರುಕುಳ ನೀಡಿದ ಆರೋಪ: ಚಾಲಕನ ಮೇಲೆ ಹಲ್ಲೆ ನಡೆಸಿದ ಅಸ್ಸಾಂ ಮಾಜಿ ಸಿಎಂ ಮಗಳು, ವಿಡಿಯೋ ವೈರಲ್

ಮೂರು ವರ್ಷಗಳ ಬಾಕಿ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಲು ಕಾರ್ಮಿಕ ಸಚಿವರು ಒಪ್ಪಿಗೆ ಸೂಚಿಸಿದ್ದು, ಅರ್ಜಿಗಳ ಪರಿಶೀಲನೆ ನಡೆದಿದ್ದು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.

“ಸಹಜ ಮರಣ ಪರಿಹಾರವನ್ನು 2 ಲಕ್ಷಕ್ಕೆ ಹಾಗೂ ಅಪಘಾತ ಮರಣ ಪರಿಹಾರ ಧನವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದ್ದು, ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ” ಎಂದರು.

ವೈದ್ಯಕೀಯ ಸಹಾಯಧನ ಕಾರ್ಯಕ್ರಮದಡಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆ ತರಲಾಗುತ್ತಿದೆ. ಸದ್ಯ ವಿಕ್ಟೋರಿಯಾ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಪೈಲಟ್ ಯೋಜನೆ ಜಾರಿ ಮಾಡಿದ್ದೇವೆ, ಇದರ ಸಾಧಕ ಬಾಧಕಗಳನ್ನು ನೋಡಿ, ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.

ಅಪಘಾತ ಆದ ವೇಳೆ ಸಿಜಿಹೆಚ್ ಆಸ್ಪತ್ರೆಗಳ ಮಿತಿಯನ್ನು ಕಡ್ಡಾಯಗೊಳಿಸದೇ ಚಿಕಿತ್ಸೆಗಾಗಿ ಯಾವುದೇ ಆಸ್ಪತ್ರೆಗೆ ದಾಖಲಾದರೂ ಪರಿಹಾರ ಧನಕ್ಕೆ ಪರಿಗಣಿಸಲಾಗುವುದು ಎಂದರು.

ಮಹಿಳಾ ಕಾರ್ಮಿಕರ ಹೆರಿಗೆ ಭತ್ಯೆ ಸೌಲಭ್ಯವನ್ನು ನೀಡುವಾಗ 90 ದಿನಗಳ ಕೆಲಸದ ದಿನಗಳ ಕಡ್ಡಾಯ ಮಿತಿಯನ್ನು ತೆಗೆದುಹಾಕಲಾಗುವುದು, ಹಾಗೆಯೇ, ಪಿಂಚಣಿ ಬಾಕಿ, ಸೌಲಭ್ಯಗಳಿಗಾಗಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಪ್ರಯತ್ನಿಸಲಾಗುವುದು, ನೋಂದಣಿ & ಮರು ನೋಂದಣಿ ಅರ್ಜಿಗಳನ್ನು ಪರಿಶೀಲನೆ ತರುವಾಯ 45 ದಿನದಲ್ಲಿ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹದಿನೈದು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ಇದೇ ವೇಳೆ ಸಲ್ಲಿಸಲಾಯಿತು.

ಇದಕ್ಕೂ ಮೊದಲು ಬೆಳಿಗ್ಗೆ ಅಹೋರಾತ್ರಿ ಧರಣಿಯನ್ನು ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್.ವರಲಕ್ಷ್ಮಿ ಉದ್ಘಾಟಿಸಿ ಮಾತನಾಡಿದರು. ಅಹೋರಾತ್ರಿ ಧರಣಿಯಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು.

CWFI ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ CWFI ಖಜಾಂಚಿ ಲಿಂಗರಾಜು, ಕಾರ್ಯದರ್ಶಿ ಸುರೇಶ್ ಕಲ್ಲಾಗರ ಇತರರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *