ಬೆಂಗಳೂರು: ಶಾಲೆಗಳನ್ನು ಆರಂಭ ಮಾಡುವ ಕುರಿತು ಸೋಮವಾರ ನಿರ್ಧಾರಿಸಲಾಗುವುದು ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ‘ಶಾಲೆಗಳನ್ನು ಆರಂಭ ಮಾಡಬೇಕೆಂಬ ಬೇಡಿಕೆ ಇದೆ. ಇತ್ತೀಚಿಗೆ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ತಜ್ಞರ ಸಮಿತಿ ಕೂಡ ತನ್ನ ಶಿಫಾರಸುಗಳನ್ನು ನೀಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಸೋಮವಾರ ಉನ್ನತಮಟ್ಟದ ಸಭೆ ನಡೆಯಲಿದೆ’ ಎಂದು ಹೇಳಿದರು.
ಇದನ್ನು ಓದಿ: ಹಂತಹಂತವಾಗಿ ಶಾಲೆಗಳನ್ನು ಆರಂಭಿಸಲು ತಜ್ಞರ ಸಮಿತಿ ಶಿಫಾರಸ್ಸು
ವಿದ್ಯಾಗಮ ಯೋಜನೆ ಜಾರಿಯಲ್ಲಿದೆ. ಕಲಿಕಾ ದಿನಚರಿಯ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. ಶಾಲಾ ತರಗತಿ ಆರಂಭದ ಕುರಿತು ನಿರ್ಧಾರ ಕೈಗೊಳ್ಳುವುದು ಬಾಕಿ ಇದೆ ಎಂದರು.
ಕಳೆದ 15 ತಿಂಗಳಿಂದ ಶಾಲಾ ತರಗತಿಗಳು ನಡೆದಿಲ್ಲ. ತರಗತಿ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಇದೆ. ಆದಷ್ಟು ಬೇಗ ಇದರ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಸಚಿವರ ಮುಂದೆ ಬೇಡಿಕೆ ಇಟ್ಟಿದ್ದಾರೆ.