ಮಾವಳ್ಳಿ ಶಂಕರ್
ಈಗ ಆರ್ಥಿಕವಾಗಿ ಹಿಂದುಳಿದ ವರ್ಗ ಎಂದು ಹೇಳುವ ಸಮುದಾಯ ಹುಟ್ಟುತ್ತಲೇ ಮೀಸಲಾತಿಯನ್ನು ಪಡೆದುಕೊಂಡೇ ಬಂದಿದೆ. ಜನ್ಮತಃ ಮೀಸಲಾತಿ ಪಡೆಯುತ್ತಾ ಬಹುಜನರ ಸಮುದಾಯಗಳ ಮೇಲೆ ಶ್ರೇಷ್ಟತೆಯನ್ನು ಹೇರಿಕೊಂಡು ಬರುತ್ತಿದೆ.
ಆ ಮೂಲಕ ಇಡೀ ಶೋಷಿತ ಸಮುದಾಯಗಳನ್ನು ಬ್ರಾಹ್ಮಣ್ಯದ ಸಾಮಾಜಿಕ ವ್ಯವಸ್ಥೆಯ ಅಡಿಯಲ್ಲಿ ಸಂಪೂರ್ಣ ದಮನ ಮಾಡಿದ್ದಾರೆ. ವಿದ್ಯೆ, ಸಾಮಾಜಿಕ ಗೌರವ ಹಾಗೂ ಆಸ್ತಿಪಾಸ್ತಿಗಳನ್ನು ಹೊಂದುವುದು ಸೇರಿದಂತೆ ಎಲ್ಲ ಸೌಲಭ್ಯಗಳಿಂದ ದಮನಿತ ಸಮುದಾಯಗಳನ್ನು ದೂರ ಇಟ್ಟಿದ್ದಾರೆ. ವೈದಿಕ ಕಾಲಗಟ್ಟದಿಂದ ಈವರೆಗೂ ಅದೇ ಶೋಷಣೆಯನ್ನೇ ಅನುಸರಿಸುತ್ತಾ, ಜತನವಾಗಿ ಕಾಪಿಟ್ಟುಕೊಂಡು ಬಂದಿರುವುದು ಒಂದು ರೀತಿಯಲ್ಲಿ ಆಶ್ಚರ್ಯ ಮೂಡಿಸುವ ಜತೆಗೆ ಆತಂಕವನ್ನೂ ಹುಟ್ಟುಹಾಕಿದೆ…
ಇದನ್ನು ಓದಿ: ಇಡಬ್ಲ್ಯೂಎಸ್ ಮೀಸಲಾತಿಯಿಂದ ಎಸ್‌ಸಿ/ಎಸ್‌ಟಿ, ಒಬಿಸಿ ವರ್ಗ ಹೊರಗಿಟ್ಟರೆ ಹೊಸದಾಗಿ ಅನ್ಯಾಯ ಮಾಡಿದಂತೆ: ನ್ಯಾ. ಎಸ್ ರವೀಂದ್ರ ಭಟ್
ಸಂವಿಧಾನ ಜಾರಿಯಾದ ಮೇಲೆ ನಮಗೆ ಮೀಸಲಾತಿ ಸಿಕ್ಕಿರುವುದು ಬಾಬಾ ಸಾಹೇಬರ ಹೋರಾಟದ ಫಲ. ಮೀಸಲಾತಿಯನ್ನು ನಾವು ಕೇಳಿದ್ದಲ್ಲ; ಅದು ಅವರಾಗೇ ಮಧ್ಯಮ ಮಾರ್ಗದ ಮೂಲಕ ಕೊಟ್ಟಿದ್ದು. ದಲಿತ ಸಮುದಾಯಕ್ಕೆ ಬಾಬಾ ಸಾಹೇಬರು ಕೇಳಿದ್ದು ಪ್ರತ್ಯೇಕವಾದ ಮತಕ್ಷೇತ್ರ ಹಾಗೂ ದ್ವಿಮತದ ಹಕ್ಕನ್ನು. ದಲಿತರ ರಾಜಕೀಯವಾಗಿ ತುಂಬಾ ಬಲಿಷ್ಟರಾಗುತ್ತಾರೆ ಎನ್ನುವ ಕಾರಣಕ್ಕೆ ನಮ್ಮ ಮೇಲೆ ಅಂದಿನ ವೈದಿಕರು ಹುನ್ನಾರ ನಡೆಸಿದರು. ದ್ವಿಮತದ ಹಕ್ಕನ್ನು ತಡೆಯುವುದಕ್ಕಾಗಿಯೇ ಮಹಾತ್ಮ ಗಾಂಧಿಯನ್ನು ಗುರಾಣಿಯಾಗಿ ಬಳಸಿದರು. ಗಾಂಧಿಯನ್ನು ಮುಂದೆ ಇಟ್ಟುಕೊಂಡು ರಾಜಕೀಯವಾಗಿ ಎಷ್ಟು ದಮನ ಮಾಡಬೇಕೋ ಅಷ್ಟನ್ನು ಅವರು ಮಾಡಿ ತೋರಿಸಿದ್ದಾರೆ…
ಉದಾಹರಣೆಗೆ ಮಂಡಲ್ ವರದಿ ಜಾರಿಯಾಗಬೇಕೆಂದಾಗ, ಅದೇ ಸಮುದಾಯದ ಫಲಾನುಭವಿಗಳನ್ನೇ ವೈದಿಕರು ಎತ್ತಿಕಟ್ಟಿದ್ದರು. ಸಂಪೂರ್ಣವಾಗಿ ಜಾರಿಯಾಗದ ರೀತಿ ನೋಡಿಕೊಂಡು ಅನೇಕ ಅಮಾಯಕರನ್ನು ಬಲಿಕೊಟ್ಟರು. ಮಂಡಲ್ ವರದಿಯ ಅನೇಕ ಶಿಪಾರಸ್ಸುಗಳು ಇಂದಿಗೂ ಜಾರಿಯಾಗಿಲ್ಲ. ಕೆಲವೇ ಕೆಲವು ಹಿಂದುಳಿದ ಜಾತಿಗಳಿಗೆ 27% ಕೊಟ್ಟು ತೃಪ್ತಿಪಟ್ಟುಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಅದೇ ಇಡಬ್ಲ್ಯೂಎಸ್ ಜಾರಿಯಾದಾಗ ಯಾವುದೇ ಪಕ್ಷಗಳು ಕನಿಷ್ಠ ಚರ್ಚೆ ಮಾಡಲೂ ಮುಂದಾಗಲಿಲ್ಲ. ತಮಿಳುನಾಡಿನ ಡಿಎಂಕೆ ಸರ್ಕಾರ ಹೊರತುಪಡಿಸಿ, ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳು ಹಾಗೂ ರಾಷ್ಟ್ರೀಯ ಪಕ್ಷಗಳು ಸ್ವಾಗತ ಮಾಡಿದವು. ಇಡಬ್ಲ್ಯೂಎಸ್‌ನ ಆಗುಹೋಗುಗಳ ಬಗ್ಗೆ ಕನಿಷ್ಠ ಚರ್ಚೆ ನಡೆಸದೇ ಹೋದದ್ದು ನಿಜಕ್ಕೂ ಪ್ರಜಾಪ್ರಭುತ್ವದ ದೊಡ್ಡ ದುರಂತ…
ಇದನ್ನು ಓದಿ: ಇಡಬ್ಲ್ಯುಎಸ್ ಮೀಸಲಾತಿ ಕುರಿತು
ಸದಾಶಿವ ಆಯೋಗದ ವರದಿ ವಿಚಾರದಲ್ಲಿ ದೊಡ್ಡಮಟ್ಟದ ಹೋರಾಟ ನಡೆಯುತ್ತಿದೆ. ಸುಮಾರು 30 ವರ್ಷಗಳಿಂದ ಅದರ ಬಗ್ಗೆ ಅನೇಕ ರೀತಿಯ ಹೋರಾಟಗಳು ನಡೆಯುತ್ತಿದ್ದು ಈಗಲೂ ಜೀವಂತವಾಗಿದೆ. ದಲಿತರ ಒಳಗೇ ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ನೀವು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಎಲ್ಲ ಸಮುದಾಯಗಳಿಗೆ ಅವರವರ ಪಾಲು ಕೊಡುವುದಕ್ಕೆ ನಿಮಗೇನು ಕಷ್ಟ?…
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಇಡಬ್ಲ್ಯೂಎಸ್ ಎನ್ನುವುದು ಕೇವಲ ಮೀಸಲಾತಿ ಪ್ರಶ್ನೆಯಲ್ಲ. ನಮ್ಮ ಸಮಾಜ ಹಾಗೂ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆ. ನಮ್ಮ ಮುಂದೆ ಪ್ರತಿಯೊಂದನ್ನೂ ಸವಾಲನ್ನಾಗಿ ಒಡ್ಡುತ್ತಿದ್ದಾರೆ. ನೀವು ಏನು ಮಾಡುತ್ತೀರೋ ನೋಡೋಣ ಎಂಬ ದಾರ್ಷ್ಟ್ಯ ತೋರುತ್ತಿದ್ದಾರೆ. ಅದಕ್ಕೆ ಸರಿಯಾದ ಉತ್ತರ ನಾವು ಕೊಡಬೇಕಾಗಿದೆ. ಇಡಬ್ಲ್ಯೂಎಸ್ ಸಂಪೂರ್ಣವಾಗಿ ಮರುಪರಿಶೀಲನೆ ಆಗಬೇಕು…
(ʻʻಇಡಬ್ಲ್ಯೂಎಸ್ 10% ಮಹಾವಂಚನೆʼʼ ಪುಸ್ತಕದ ಅಧ್ಯಾಯದಿಂದ ಆಯ್ದ ಭಾಗ.)
- ಮಾವಳ್ಳಿ ಶಂಕರ್, ಬಿ. ಶ್ರೀಪಾದ್ ಭಟ್ ಮತ್ತು ವಿಕಾಸ್ ಆರ್ ಮೌರ್ಯ ಸಂಪಾದಿಸಿರುವ ಇಡಬ್ಲ್ಯೂಎಸ್ 10% ಮಹಾವಂಚನೆ ಪುಸ್ತಕವು ನಾಳೆ(28 ಜನವರಿ 2023) ಸಂಜೆ 5 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜಿನ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ.
- ಪುಸ್ತಕ ಬಿಡುಗಡೆ ಹಾಗೂ ಉದ್ಘಾಟನೆಯನ್ನು ಪ್ರೊ. ರವಿವರ್ಮ ಕುಮಾರ್ ನೆರವೇರಿಸಲಿದ್ದಾರೆ. ಪುಸ್ತಕದ ಕುರಿತು ಡಿ. ಉಮಾಪತಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಬು ಮಾಥ್ಯೂ, ಅಶ್ವಿನಿ ಓಬುಳೇಶ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಮಾವಳ್ಳಿ ಶಂಕರ್ ವಹಿಸಿ ನಡೆಸಿಕೊಡಿದ್ದು, ರವಿಕುಮಾರ್ ಬಾಗಿ ನಿರ್ವಹಣೆ ಮಾಡಲಿದ್ದಾರೆ.
- ಪುಸ್ತಕಗಳಿಗಾಗಿ ಬಾಲಕೃಷ್ಣ-98444 56713 ಇವರನ್ನು ಸಂಪರ್ಕಿಸಬಹುದು.