ನವದೆಹಲಿ: ವಿಧಾನಸಭಾ ಹಾಗೂ ಲೋಕಸಭೆ ಉಪಚುನಾವಣೆಯ ಮತ ಎಣಿಕೆ ಮೇ 2ರಂದು ನಡೆಯಲಿದ್ದು ಮತ ಎಣಿಕೆಗೆ ಮೊದಲು ಅಥವಾ ನಂತರ ವಿವಿಧ ಪಕ್ಷಗಳು ಅಥವಾ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪರವಾಗಿ ಹಮ್ಮಿಕೊಳ್ಳುವ ಎಲ್ಲಾ ಬಗೆಯ ವಿಜಯೋತ್ಸವಗಳನ್ನು ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದು, ಸೋಂಕು ಪ್ರಕರಣಗಳು ಅಧಿಕಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಫಲಿತಾಂಶ ದಿನದಂದು ನಡೆಯುವ ವಿಜಯೋತ್ಸವ ಅಥವಾ ಯಾವುದೇ ಸಂಭ್ರಮಾಚರಣೆ ನಡೆಸಕೂಡದೆಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನು ಓದಿ: ಎರಡನೇ ಅಲೆಗೆ ಚುನಾವಣಾ ಆಯೋಗವೇ ನೇರ ಹೊಣೆ, ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕಾಗಬಹುದು : ಮದರಾಸು ಹೈ ಕೋರ್ಟು
ಐದು ರಾಜ್ಯಗಳು ಮತ್ತು ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭೆ, ಲೋಕಸಭೆಯ ಚುನಾವಣಾ ಫಲಿತಾಂಶವು ಇದೇ ಭಾನುವಾರದ ದಿನವಾದ ಮೇ 2ರಂದು ಹೊರ ಬೀಳಲಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ರೀತಿಯ ವಿಜಯದ ಮೆರವಣಿಗೆ ನಡೆಸುವಂತಿಲ್ಲ. ಮತ ಏಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಸೇರುವಂತಿಲ್ಲ ಎಂದು ಆಯೋಗ ತಿಳಿಸಿದೆ.
ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚಾಗಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಕೊರೊನಾ ದಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕಾಗಬಹುದೆಂದು ನ್ಯಾಯಾಲಯ ತಿಳಿಸಿತ್ತು. ಇದರ ನಡುವೆ ಇಂದು ಚುನಾವಣಾ ಆಯೋಗ ಫಲಿತಾಂಶ ದಿನ ವಿಜಯೋತ್ಸವಕ್ಕೆ ಕಡಿವಾಣ ಹಾಕಿದೆ.
ಇದನ್ನು ಓದಿ: ಕಸಾಪ ಸೇರಿದಂತೆ ಎಲ್ಲ ಚುನಾವಣೆಗಳನ್ನು 6 ತಿಂಗಳು ಮುಂದೂಡಿದ ಸರಕಾರ
ಕರ್ನಾಟಕದ ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಸೇರಿದಂತೆ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿಯ ವಿಧಾನಸಭೆ ಚುನಾವಣಾ ಫಲಿತಾಂಶ ಅಂದು ಹೊರಬೀಳಲಿದೆ.
ಈಗಾಗಲೇ 7 ಹಂತಗಳ ಮತದಾನ ಮುಕ್ತಾಯವಾಗಿದ್ದು ಏಪ್ರಿಲ್ 29ರಂದು ನಡೆಯಲಿರುವ ಕೊನೆಯ ಹಂತದ ಮತದಾನ ಬಾಕಿ ಮಾತ್ರ ಬಾಕಿ ಉಳಿದಿದೆ.