ದಾಂಡೇಲಿ: ಜಗತ್ತಿನಲ್ಲಿಯೇ ನಮ್ಮ ಭಾರತದ ಜಿಡಿಪಿಯಲ್ಲಿ ದಾಖಲೆ ಸೃಷ್ಠಿಸಿದ್ದೇವೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೇಳುತ್ತವೆ. ಅಲ್ಲದೆ ಈ ಹೇಳಿಕೆಯನ್ನು ಪತ್ರಿಕೆಗಳಲ್ಲಿ ಯಾವುದೇ ವಿಮರ್ಶೆ ಇಲ್ಲದೆ ಪ್ರಕಟಿಸಿ ನಿಜವೆಂದು ಜನರನ್ನು ನಂಬಿಸುವ ಕೆಲಸ ಮಾಡುತ್ತಿವೆ. ಇಷ್ಟು ಅಭಿವೃದ್ಧಿಯ ವೇಗ ನಿಜವಾಗಿಯೂ ಇದೆಯಾ ಎಂಬುದನ್ನು ವಿಮರ್ಶಿಸಬೇಕಿದೆ. ನಿಜವಾಗಿ ನಮ್ಮ ದೇಶದ ಜಿಡಿಪಿ ಪ್ರಮಾಣ ಬೆಳೆದಿದೆ ಅನ್ನೋದು ನಿಜವಾಗಿದ್ರೆ, ಯಾಕೆ ನಮ್ಮ ಯುವಜನರಿಗೆ ಉದ್ಯೋಗ ಸೃಷ್ಠಿಯಾಗುತ್ತಿಲ್ಲ? ಯಾಕೆ ಹಸಿವಿನಿಂದ ಮಕ್ಕಳು ಸಾಯುತ್ತಿದ್ದಾರೆ, ಯಾಕೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ ಎಂಬುದನ್ನು ಪ್ರಶ್ನಿಸಬೇಕು ಎಂದು ಪ್ರೊ. ರಾಜೇಂದ್ರ ಚೆನ್ನಿ ಅವರು ಹೇಳಿದರು.
ಶನಿವಾರ ದಾಂಡೇಲಿ ನಗರದ ಹಾರ್ನ್ ಬಿಲ್ ಭವನದಲ್ಲಿ ನಡೆದ ಡಿವೈಎಫ್ಐ ನ ಎರಡು ದಿನಗಳ ರಾಜ್ಯ ಸಂಘಟನಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ಮೇಲೆ ಹುಟ್ಟಿ ಬದುಕಿ ಬಾಳಬೇಕಿದ್ದ ಮಾನವರನ್ನು ಅಸಮಾನತೆಯಿಂದಾಗಿ ಕೊಲೆ ಮಾಡಲಾಗುತ್ತಿದೆ. ಸ್ವಾತಂತ್ರ ನಂತರದಿಂದ ಇಲ್ಲಿವರೆಗೆ ಆಳಿದ ಸರ್ಕಾರಗಳು ಬಂಡವಾಳಿಗರ ಬಂಟರಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಶೇಖರಣೆಯಾಗುತ್ತಿದೆ. ಇದರ ಪರಿಣಾಮ ನಮ್ಮ ದೇಶದ ಜನರು ಹಸಿವು ಬಡತನ ನಿರುದ್ಯೋಗ, ರೋಗರುಜಿನಗಳಿಂದ ಸಾಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಆಳುವ ಸರ್ಕಾರಗಳು ಯುವಜನತೆಯನ್ನು ಇಂದು ಜಾತಿ, ಧರ್ಮ, ಭಾಷೆ, ಪ್ರಾಂತ್ಯಗಳಂತಹ ಭಾವನಾತ್ಮಕ ವಿಚಾರಗಳ ಮೇಲೆ ಹೊಡೆದಾಟಕ್ಕೆ ಇಳಿಸಿ ನಿಜವಾದ ಬದುಕಿನ ಪ್ರಶ್ನೆಗಳನ್ನು ಮರೆಮಾಚುತ್ತಿದ್ದಾರೆ ಎಂದು ಸರ್ಕಾಗಳ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ. ಬಸವರಾಜ ಪೂಜಾರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಜಿಲ್ಲಾಧ್ಯಕ್ಷ ಡಿ. ಸ್ಯಾಮ್ ಸನ್, ಡಬ್ಲ್ಯೂಸಿಎಫ್ಐ ನ ಉಪಾಧ್ಯಕ್ಷ ಜಗದೀಶ್ ನಾಯ್ಕ, ಡಿವೈಎಫ್ ಐ ರಾಜ್ಯ ಮುಖಂಡರಾದ ಅಶಾ ಬೋಳೂರ್, ಇಮ್ರಾನ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಗಣೇಶ್ ರಾಥೋಡ್ ನಿರೂಪಿಸಿದರು. ಸಲೀಂ ಸೈಯದ್ ವಂದಿಸಿದರು.
ಕಾರ್ಯಾಗಾರ ಆರಂಭಕ್ಕೂ ಮುನ್ನ ಡಿವೈಎಫ್ಐ ಶ್ವೇತ ಪತಾಕೆಯನ್ನು ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಆರೋಹಣ ಮಾಡಿದರು.
ವರದಿ: ರಮೇಶ ವೀರಾಪುರ