ಉರುಂದಾಡಿ ಕ್ರೈಸ್ತರ ಪ್ರಾರ್ಥನಾಲಯ ಧ್ವಂಸದ ರೂವಾರಿ ಶಾಸಕ ಭರತ್ ಶೆಟ್ಟಿ : ಮುನೀರ್ ಕಾಟಿಪಳ್ಳ ಅರೋಪ

ಮಂಗಳೂರು : ಅಭಿವೃದ್ದಿ ಕಾರ್ಯಗಳಲ್ಲಿ ದಯನೀಯ ವೈಫಲ್ಯ ಖಂಡಿರುವ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ತನ್ನ ವಿಫಲತೆಯನ್ನು ಮುಚ್ಚಿ ಹಾಕಲು ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಗಂಭೀರ ಆರೋಪ‌ ಮಾಡಿದರು.

ಅವರು ಕಾವೂರು ಜಂಕ್ಷನ್ ನಲ್ಲಿ ಉರುಂದಾಡಿ ಕ್ರೈಸ್ತರ ಪ್ರಾರ್ಥನಾಲಯ ಧ್ವಂಸ ವಿರೋಧಿಸಿ ಡಿವೈಎಫ್ಐ ಕಾವೂರು ವಲಯ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಎಮ್ ಆರ್ ಪಿ ಎಲ್ ಉದ್ಯೋಗದ ಪ್ರಶ್ನೆ, ಸುರತ್ಕಲ್ ಅಕ್ರಮ ಟೋಲ್ ಗೇಟ್, ಸುರತ್ಕಲ್ ಮಾರುಕಟ್ಟೆ ನಿರ್ಮಾಣ ಮುಂತಾದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭರತ್ ಶೆಟ್ಟಿ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ. ಬದಲಿಗೆ ಬೃಹತ್ ಕೈಗಾರಿಕೆಗಳು, ಟೋಲ್ ಮಾಫಿಯಾಗಳೊಂದಿಗೆ ಶಾಮೀಲಾಗಿ ಕ್ಷೇತ್ರದ ಜನರಿಗೆ ಅನ್ಯಾಯ ಎಸಗಿದರು. ಇದೀಗ ಚುನಾವಣೆ ಹತ್ತಿರ ಬರುತ್ತಿರುವಾಗ ಮತ್ತೆ ಕೋಮು ವಿಭಜನೆಯ ರಕ್ತ ರಾಜಕಾರಣದ ಮೊರೆ ಹೋಗುತ್ತಿದ್ದಾರೆ. ಉರುಂದಾಡಿ ಕ್ರೈಸ್ತರ ಪ್ರಾರ್ಥನಾಲಯ ಧ್ವಂಸದ ರೂವಾರಿ ಶಾಸಕ ಭರತ್ ಶೆಟ್ಟಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ  ಎಂದು ಆರೋಪಿಸಿದರು.

ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಪರಿಸರದಲ್ಲಿ ಹಲವು ಅಕ್ರಮ ವಾಣಿಜ್ಯ ಕಟ್ಟಡಗಳಿದ್ದರೂ ಅವುಗಳ ವಿರುದ್ದ ಧ್ವನಿ ಎತ್ತದ ಶಾಸಕ ಭರತ್ ಶೆಟ್ಟಿ ನಾಲ್ಕು ದಶಕಗಳಿಂದ ಇರುವ ಕ್ರೈಸ್ತರ ಆರಾಧನಾಲಯದ ಕುರಿತು ಕಾನೂನು ಮಾತನಾಡುವುದು ಅವರ ಅಪ್ರಾಮಾಣಿಕತೆ, ಕೋಮು ಪಕ್ಷಪಾತಕ್ಕೆ ಸಾಕ್ಷಿ, ಸ್ಥಳೀಯ ಬಿಹೆಪಿ ಪುಡಾರಿಗಳ ಕುಮ್ಮಕ್ಕಿನಿಂದಲೆ ಇದೆಲ್ಲ ನಡೆಯುತ್ತಿದೆ. ಕಾವೂರು ಪೊಲೀಸರು ನ್ಯಾಯ ಪಾಲಿಸುವ ಬದಲಿಗೆ ಬಿಜೆಪಿ ಪುಢಾರಿಗಳ ಮಾತಿಗೆ ಗೋಣು ಅಲ್ಲಾಡಿಸುವ ಮೂಲಕ ಪೊಲೀಸರ ಮೇಲಿನ ಜನತೆಯ ನಂಬಿಕೆಗೆ ಚ್ಯುತಿ ತಂದಿದ್ದಾರೆ ಎಂದು ಹೇಳಿದರು. ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬಿಜೆಪಿಯ ಮತೀಯವಾದಿ ರಾಜಕಾರಣಕ್ಕೆ ಎಲ್ಲಾ ಧರ್ಮದ ಶಾಂತಿ ಪ್ರಿಯ ಜನತೆಯನ್ನು ಒಟ್ಟು ಸೇರಿಸಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

ಬಹಿರಂಗ ಸಭೆಗೂ ಮುನ್ನ ವಿದ್ಯಾ ನಗರದಿಂದ ಕಾವೂರು ಜಂಕ್ಷನ್ ವರಗೆ ಬೃಹತ್ ಐಕ್ಯತಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ , ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ಥಳೀಯ ಗಣ್ಯರಾದ ಶ್ರೀಮತಿ ನೇಬಲ್ ಬೆನ್ನಿಸ್, ಕನಕದಾಸ ಕೂಳೂರು, ಜಾನ್ ಕೂಳೂರು, ಅರುಣ್, ವಿನ್ಸೆಂಟ್ ಪಿರೇರಾ, ಪ್ರೇಮ್, ಸಿಪಿಎಂ ಮಖಂಡರಾದ ಅಹ್ಮದ್ ಬಶೀರ್, ಅನಿಲ್ ಡಿಸೋಜ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಪಂಜಿಮೊಗರು, ಸೌಮ್ಯ, ಲತಾ, ಕ್ಲವಿಟಾ, ಡಿವೈಎಫ್ಐ ಮುಖಂಡರಾದ ನೌಷದ್ ಬಾವ, ನವೀನ್ ಕೊಂಚಾಡಿ, ಶೆರೀಫ್ ಕುಲ, ಹನುಮಂತ್, ಖಲೀಲ್ ಪಂಜಿಮೊಗರು ಮತ್ತಿತರರು ಉಪಸ್ಥಿತರಿದ್ದರು. ಡಿವೈಎಫ್ಐ ಪಂಜಿಮೊಗರು ವಲಯ ಅಧ್ಯಕ್ಷ  ಚರಣ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಡಿಸೋಜ ವಂದಿಸಿದರು.

 

Donate Janashakthi Media

Leave a Reply

Your email address will not be published. Required fields are marked *