ಸುಳ್ಳು ಮೊಕದ್ದಮೆ ವಾಪಸ್ ಪಡೆಯಲು ಒತ್ತಾಯ: ಬೀದಿಬದಿ ವ್ಯಾಪಾರಿಗಳಿಂದ ಮಂಗಳೂರು ಮಹಾನಗರ ಪಾಲಿಕೆ ಚಲೋ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಪಟ್ಟಣ ವ್ಯಾಪಾರ ಸಮಿತಿಯ ಸಭೆಯನ್ನು ನಡೆಸದೆ ಧಾಳಿ ನಡೆಸಿರುವ ಕ್ರಮಗಳನ್ನು ಪ್ರಶ್ನಿಸಿದ್ದಕ್ಕೆ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಝ್ ಹಾಗೂ ಮುಖಂಡರ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆ ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತ್ರತ್ವದಲ್ಲಿ ನಗರ ಪಾಲಿಕೆ ಚಲೋ ಪ್ರತಿಭಟನೆ ನಡೆಯಿತು.

ಡಿವೈಎಫ್‌ಐ ರಾಜ್ಯ ಅಧ್ಯಕ್ಷರಾಗಿರುವ ಮುನೀರ್ ಕಾಟಿಪಳ್ಳ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಾ,  ಶಾಸಕ ವೇದವ್ಯಾಸ್ ಕಾಮತ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಅಧಿಕಾರಿಗಳನ್ನು ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ.ಅಧಿಕಾರಿಗಳು ಕಾನೂನು ಬದ್ಧವಾಗಿ ಜನರ‌ ಸೇವೆ ಮಾಡಬೇಕೇ ಹೊರತು ರಾಜಕೀಯ ಮರ್ಜಿಗೆ ತಕ್ಕಂತೆ ವರ್ತಿಸಬಾರದು ಎಂದು ಅವರು ಬೀದಿ ವ್ಯಾಪಾರಿಗಳ ಮುಖಂಡರ ಮೇಲೆ ಕೇಸು ದಾಖಲಿಸಿದ ಕೂಡಲೇ ಅವರ ಬದುಕುವ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನಂತರ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ ಬಿಜೆಪಿಯ ನಗರಾಡಳಿತ ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕುಗಳ ಮೇಲೆ ಧಾಳಿ ನಡೆಸಿ ಬಡವರ ಬದುಕನ್ನು ನಾಶ ಮಾಡುತ್ತಿದೆ. ಬಿಜೆಪಿ ಶ್ರೀಮಂತರ ಪರವಾಗಿದೆ ಹೊರತು ಬಡವರ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲ ಎಂದು ಆರೋಪಿಸಿದರು.

ಸಂಘದ ಗೌರವಾಧ್ಯಕ್ಷ ಬಿ. ಕೆ.ಇಮ್ತಿಯಾಝ್ ಮಾತನಾಡುತ್ತಾ ದೇಶದಲ್ಲಿ ಬೀದಿಬದಿ ವ್ಯಾಪಾರಕ್ಕೆ ಕಾನೂನಿನ ಮಾನ್ಯತೆ ಇದ್ದರೂ ಮಂಗಳೂರಿನಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ ಕಳೆದ ಒಂದು ವರ್ಷಗಳಿಂದ ಪಟ್ಟಣ ವ್ಯಾಪಾರ ಸಮಿತಿಯ ಸಭೆಯನ್ನೇ ಕರೆದಿಲ್ಲ ಅಧಿಕಾರಿಗಳು ರಾಜಕಾರಣಿಗಳ ಒತ್ತಡದಲ್ಲಿ ಕಾನೂನು ಅನುಷ್ಠಾನ ಮಾಡಲು ಹೆದರುತ್ತಿದ್ದಾರೆ. ಪಾಲಿಕೆಯ ಅಧಿಕಾರಿಗಳಿಗೆ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆಯ ಬಗ್ಗೆ ಜ್ಞಾನವೇ ಇಲ್ಲದೆ ಅಕ್ರಮ ಕಾರ್ಯಾಚರಣೆಗಿಳಿದಿದ್ದಾರೆ ಎಂದು ಆರೋಪಿಸಿದರು ಪೊಲೀಸ್ ಕೇಸುಗಳಿಂದ ಹೋರಾಟದಿಂದ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಬಡ ಬೀದಿ ವ್ಯಾಪಾರಿಗಳ ಹಕ್ಕುಗಳಿಗಾಗಿ ಎಂತಹ ಬಲಿದಾನಕ್ಕೂ ಸಿದ್ದ ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡರಾದ ಯಾದವ ಶೆಟ್ಟಿ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ ಮಾತನಾಡಿದರು .

ಡಿವೈಎಫ್ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರ್,ರಝಾಕ್ ಮೊಂಟೆಪದವು, ರಫೀಕ್ ಹರೇಕಳ, ಶ್ರೀನಾಥ್ ಕಾಟಿಪಳ್ಳ ,ತಯ್ಯೂಬ್ ಬೆಂಗರೆ,ನೌಷದ್ ಬೆಂಗರೆ,ಸಾಮಾಜಿಕ ಕಾರ್ಯಕರ್ತೆಯರಾದ ಪ್ರಮೀಳಾ ದೇವಾಡಿಗ ,ಅಸುಂತ ಡಿಸೋಜ ,ಯೋಗಿತಾ ಸುವರ್ಣ,ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಆಸೀಫ್ ಬಾವ ಉರುಮನೆ,ನೌಷದ್ ಉಳ್ಳಾಲ ,ರಹಿಮಾನ್ ಅಡ್ಯಾರ್,ರೂಪೇಶ್ ,ಗಜಾನಂದ ,ಗೋಪಾಲ ಕಂಕನಾಡಿ,ಆನಂದ ಲೇಡಿಹಿಲ್,ಅನಿಲ್ ಕಂದಕ,ಶ್ರೀನಿವಾಸ್ ಕಾವೂರು,ಧನಂಜಯ ಸುರತ್ಕಲ್ ,ಮೇರಿ ಡಿಸೋಜ, ಮೇಬಲ್ ಡಿಸೋಜ, ಶೌಕತ್ ,ನವಾಝ್ ಕಣ್ಣೂರು, ಇಸ್ಮಾಯಿಲ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.

ನಗರದ ಸಬ್ ಜೈಲ್ ಬಳಿಯಿಂದ ಜಮಾಯಿಸಿದ 500ಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮನವಿ ಸ್ವೀಕರಿಸಲು ಆಯುಕ್ತರ ಆಗಮನಕ್ಕೆ ಪಟ್ಟು: ಆಯುಕ್ತರ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಲು ಬಂದ ಉಪ ಆಯುಕ್ತರಿಗೆ ಮನವಿ ನೀಡುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಉಪ ಆಯುಕ್ತರಿಗೆ ಮನವಿ ನೀಡದೆ ವಾಪಾಸ್ ಕಳುಹಿಸಿದರು ಆಯುಕ್ತರು ಸ್ಥಳಕ್ಕೆ ಬಂದು ಪಟ್ಟಣ ವ್ಯಾಪಾರ ಸಮಿತಿ ಸಭೆಗೆ ದಿನ ನಿಗದಿಗೊಳಿಸಬೇಕೆಂದು ಪಟ್ಟು ಹಿಡಿದ ಬೀದಿ ವ್ಯಾಪಾರಿಗಳ ಘೋಷಣೆ ಕೂಗುತ್ತಾ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದಾಗ ಪೋಲಿಸರು ಪಾಲಿಕೆ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ ಜಂಟಿ ಆಯುಕ್ತರ ಮೂಲಕ ಜೂನ್ 17 ಕ್ಕೆ ಪಟ್ಟಣ ವ್ಯಾಪಾರ ಸಮಿತಿ ಸಭೆ ನಡೆಸುವುದಾಗಿ ಅಧಿಕೃತ ಘೋಷಣೆ ಮಾಡಿದ ಪ್ರತಿಭಟನೆ ಹಿಂಪಡೆಯಲಾಯಿತು ಎಂದು ಮುಖಂಡರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *