ಯುವಜನತೆ ಉದ್ಯೋಗದ ಹಕ್ಕಿಗಾಗಿ ಬೀದಿಗಿಳಿಯಬೇಕಾಗಿದೆ- ಮುನೀರ್ ಕಾಟಿಪಳ್ಳ

ಬಂಟ್ವಾಳ : ಯುವಜನತೆ ಉದ್ಯೋಗದ ಹಕ್ಕಿಗಾಗಿ ಬೀದಿಗಿಳಿಯಬೇಕಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕರೆ ನೀಡಿದ್ದಾರೆ.

“ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ನೀಡುವಂತೆ ಉದ್ಯೋಗ ಸೃಷ್ಟಿಸಿ ,ಸ್ಥಳೀಯರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿ ನಡೆದ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಯುವಜನತೆ ಉದ್ಯೋಗದ ಹಕ್ಕಿಗಾಗಿ ಬೀದಿಗಿಳಿಯಬೇಕಾಗಿದೆ ಆದರೆ ಯುವಜನತೆಯನ್ನು ಧರ್ಮ ಜಾತಿಯ ಹೆಸರಿನಲ್ಲಿ ದಾರಿ ತಪ್ಪಿಸಿ ಅವರು ಬದುಕನ್ನೇ ನಿರ್ನಾಮ ಮಾಡಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿದ್ದು ಯುವಜನತೆ ಎಚ್ಚರಗೊಂಡು ತಮ್ಮ ನಿಜವಾದ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತರಾಗಬೇಕೆಂದು ಕರೆ ನೀಡಿದರು.

ಶಿಕ್ಷಣ, ಆರೋಗ್ಯದ ವ್ಯಾಪರೀಕರಣದಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದು , ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ ಮೋದಿ ಸರಕಾರದ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಅತೀ ಹೆಚ್ಚಾಗಿದೆ ಎಂದು ಆರೋಪಿಸಿದರು. ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಮಾತನಾಡಿ ನಮ್ಮನ್ನಾಳುವ ಸರಕಾರಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಕಾರಣ ಸಾಮಾನ್ಯ ಜನತೆಗೆ ಜೀವನ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಆರೋಪಿಸಿದರು. ಸಾರ್ವಜನಿಕ ರಂಗದ ಎಲ್ಲಾ ಉದ್ದಿಮೆಗಳನ್ನು ಖಾಸಗೀಕರಣ ಮಾಡಿದ್ದರಿಂದ  ಉದ್ಯೋಗ ಕಡಿತಗೊಂಡು ಯುವ ಜನತೆ ಬೀದಿಪಾಲಾಗುತ್ತಿದ್ದಾರೆ. ಆದರೆ ಸರಕಾರವು ಅಚ್ಚೇ ದಿನದ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದೆ ಎಂದು ಆರೋಪಿಸಿದರು. ಯುವಜನತೆ ಒಗ್ಗಟ್ಟಾಗಿ ಸರಕಾರದ ನೀತಿಗಳ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು.

ಡಿ.ವೈ.ಎಫ್‌.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ನಿರುದ್ಯೋಗದ ಪ್ರಮಾಣ ಅತಿಯಾಗಿ ಯುವ ಜನತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಸರಕಾರದ ಹಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದು ಇದನ್ನು ಭರ್ತಿ ಮಾಡಲು ಸರಕಾರ ಮುಂದಾಗುತ್ತಿಲ್ಲ. ನಿರುದ್ಯೋಗಿ ಯುವಜನತೆಯನ್ನು ರಾಜಕೀಯ ಲಾಭಕ್ಕಾಗಿ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು. ಡಿ.ವೈ.ಎಫ್.ಐ ಈ ನಿಟ್ಟಿನಲ್ಲಿ ಉದ್ಯೋಗದ ಹಕ್ಕಿಗಾಗಿ ದೇಶದಾದ್ಯಂತ ಹೋರಾಟ ನಡೆಸುತ್ತಿದ್ದು ಬಂಟ್ವಾಳ ತಾಲೂಕಿನಲ್ಲಿ ಡಿ.ವೈ.ಎಫ್.ಐ ಸಂಘಟನೆಯನ್ನು ಬಲಿಷ್ಠ ಗೊಳಿಸಬೇಕಾಗಿ ಕರೆ ನೀಡಿದರು. ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅದ್ಯಕ್ಷರಾದ ಸುರೇಂದ್ರ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಂದಿಸಿದರು. ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ ಆರಂಭದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು.

ಸಮಾವೇಶದಲ್ಲಿ ಬಂಟ್ವಾಳ ತಾಲೂಕು ಸಮಿತಿಯನ್ನು ಪುನರ್ ರಚಿಸಲಾಯಿತು.ಸಮಿತಿಯ ಸಲಹೆಗಾರರಾಗಿ ರಾಜ ಚೆಂಡ್ತಿಮಾರ್. ಅಧ್ಯಕ್ಷರಾಗಿ ಸುರೇಂದ್ರ ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ ಪುನರ್ ಆಯ್ಕೆಯಾದರು. ಉಪಾಧ್ಯಕ್ಷರು ಗಳಾಗಿ ಸಲ್ಮಾನ್ .ಪಿ.ಬಿ, ಸಾಧಿಕ್ ಬಂಟ್ವಾಳ. ಜೊತೆ ಕಾರ್ಯದರ್ಶಿಗಳಾಗಿ ಶಹೀದ್ ಶೈನ್, ಶೆರೀಫ್ ಮೈಂದಾಳ, ಕೋಶಧಿಕಾರಿಗಳಾಗಿ ಉಮೇಶ್ ವಾಮದಪದವು. ಹಾಗೂ ಹತ್ತು ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

Donate Janashakthi Media

Leave a Reply

Your email address will not be published. Required fields are marked *