ಬೆಂಗಳೂರು: ಯಾವುದೇ ಕೆಲಸಕ್ಕೂ ಲಿಂಗಬೇಧವಿಲ್ಲ. ಕೆಲಸದಲ್ಲಿ ಕರ್ತವ್ಯ ಕೆಲಸವೊಂದೇ ಮುಖ್ಯವಾಗಿರುತ್ತದೆಯೇ ಹೊರತು ಲಿಂಗಬೇಧವಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ ನಾಗಾಂಬಿಕಾ ದೇವಿ ಸಲಹೆ ನೀಡಿದರು. ನಾಗಾಂಬಿಕಾ ದೇವಿ
ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ, ಪತ್ರಕರ್ತೆಯರು, ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಗಾಂಬಿಕಾ ದೇವಿ
ಅನಕ್ಷರಸ್ಥ ಹೆಣ್ಣು ಮಕ್ಕಳಿಗೆ ಇರುವ ಧೈರ್ಯ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಕಾಣುತ್ತಿಲ್ಲ. ವಿದ್ಯೆಯ ಜೊತೆಗೆ ಸಶಕ್ತರಾಗುವುದನ್ನು ಮಹಿಳೆಯರು ಕಲಿಯಬೇಕು.ಹೆಣ್ಮಕ್ಕಳನ್ನು ಓದಿಸುವುದು, ಅವರನ್ನು ಕೆಲಸಕ್ಕೆ ಕಳುಹಿಸುವುದೇ ಬಹಳ ದೊಡ್ಡ ಉಪಕಾರ ಎಂದು ಹೆಚ್ಚಿನ ಮನೆಗಳಲ್ಲಿ ಹಿರಿಯರು ತಿಳಿದುಕೊಂಡಿದ್ದಾರೆ. ಇಂಥ ಮನಃಸ್ಥಿತಿಯಿಂದ ಹೊರಬರಬೇಕು. ಐಎಎಸ್ ಅಧಿಕಾರಿಯಾಗಲಿ, ಪತ್ರಕರ್ತರಾಗಲಿ ಕೆಲಸದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಎಂಬುದಿಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಈ ತಾರತಮ್ಯ ಮತ್ಯಾಕೆ ಇರಬೇಕು ಎಂದು ಪ್ರಶ್ನಿಸಿದರು.
ದಾಸ್ಯ ಮನೋಭಾವದಿಂದ ಮಹಿಳೆಯರು ಹೊರಬರಬೇಕು. ಅವಕಾಶವನ್ನು ಬೇರೆಯವರು ನೀಡುವುದಲ್ಲ. ಅವಕಾಶ ಪಡೆಯುವುದು ನಿಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಅಡಿಗೆ ಮಾತನಾಡಿ, ‘ಎಲ್ಲ ಧರ್ಮಗಳ ಅಡಿಪಾಯ, ಮನೋಧರ್ಮ, ಚಿಂತನೆ ಪುರುಷ ಪ್ರಧಾನವಾಗಿದೆ. ಇದುವೇ ಜನರ ಯೋಚನೆ, ವರ್ತನೆ ಮತ್ತು ಭಾಷೆಯಲ್ಲಿ ವ್ಯಕ್ತವಾಗುತ್ತಿದೆ. ಬೈಗುಳದ ಭಾಷೆ ನೋಡಿದರೂ ಸ್ತ್ರೀ ನಿಂದನೆಯ ಭಾಷೆಯನ್ನೇ ಬಳಸಾಗುತ್ತದೆ. ಭಾಷೆಯ ಬಳಕೆಯ ರೀತಿ ಬದಲಾಗಬೇಕು. ಜಾತಿ ತಾರತಮ್ಯ ನಿಲ್ಲಬೇಕು. ತಿನ್ನುವ ಆಹಾರ, ಉಡುವ ಬಟ್ಟೆಯ ಕಾರಣಕ್ಕೆ ಮಾಡುವ ತಾರತಮ್ಯ ನಿಲ್ಲಬೇಕು’ ಎಂದು ತಿಳಿಸಿದರು. ನಾಗಾಂಬಿಕಾ ದೇವಿ
ಇದನ್ನು ಓದಿ : ಕೇಂದ್ರ ಬಿಜೆಪಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು; ಬರ ಪರಿಹಾರ ನೀಡದೆ ಸುಳ್ಳು ಹೇಳಿದ ಅಮಿತ್ ಶಾ
ಕೆಲಸ ಮಾಡುವ ಮಹಿಳೆಯರು ಮಧ್ಯೆ ವಿಶ್ರಾಂತಿ ಪಡೆಯುವುದನ್ನು ಕಲಿಯಬೇಕು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಮಾನಸಿಕ ಆರೋಗ್ಯ ಕೂಡಾ ಬಹಳ ಮುಖ್ಯ ಎಂದು ಹೇಳಿದರು. ನಾಗಾಂಬಿಕಾ ದೇವಿ
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಮಾತನಾಡಿ, ‘ಮಾನಸಿಕ ಸಂಕೋಲೆಯಲ್ಲಿ ಎಲ್ಲರೂ ಸಿಲುಕಿದ್ದೇವೆ. ಈ ಸಂಕೋಲೆಯಿಂದ ಬಿಡುಗಡೆಯಾಗದೇ ಸಶಕ್ತರಾಗಲು ಸಾಧ್ಯವಿಲ್ಲ. ಇದು ಪುರುಷ ಮತ್ತು ಮಹಿಳೆ ಎರಡೂ ಕಡೆಯಿಂದ ಆಗಬೇಕು. ವೈಚಾರಿಕತೆ ಮತ್ತು ಪ್ರಜಾಸತ್ತಾತ್ಮಕ ಚಿಂತನೆಯಿಂದ ಸಮಾನತೆ ಸಾಧ್ಯ’ ಎಂದು ತಿಳಿಸಿದರು.
ದೂರದರ್ಶನದ ಹಿರಿಯ ಪತ್ರಕರ್ತೆ ಗಾಯತ್ರಿ ಚಂದ್ರಶೇಖರ್, ಪ್ರಜಾವಾಣಿ ಉಪಸಂಪಾದಕಿ ಅನಿತಾ ಎಚ್., ಚಂದ್ರಯಾನ–3 ಇಸ್ರೊ ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್ ರೂಪಾ ಎಂ.ವಿ., ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಕಾತ್ಯಾಯಿನಿ ಚಾಮರಾಜ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಟಿ. ಜವರೇಗೌಡ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಎನ್. ನರಸಿಂಹಮೂರ್ತಿ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ಉಪಾಧ್ಯಕ್ಷೆ ವಾಣಿಶ್ರೀ ಜೆ.ಎನ್., ಸಹಕಾರ್ಯದರ್ಶಿ ಗೊರೂರು ಪಂಕಜ, ಖಜಾಂಚಿ ಹಲೀಮತ್ ಸಾದಿಯಾ, ಪದಾಧಿಕಾರಿಗಳಾದ ಚೇತನಾ ಬೆಳಗೆರೆ, ಶೀಲಾ ಸಿ. ಶೆಟ್ಟಿ, ಶಾಂತಾ ತಮ್ಮಯ್ಯ,ಮಾಜಿ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಮಾಜಿ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್ ಉಪಸ್ಥಿತರಿದ್ದರು.
ಇದನ್ನು ನೋಡಿ : 2024ರ ಚುನಾವಣೆಯಲ್ಲಿ BJP ಸೋಲಲಿದೆ, INDIA ಕೂಟ ಅಧಿಕಾರಕ್ಕೆ ಬರುತ್ತದೆ- ಬಿ ಕೆ ಹರಿಪ್ರಸಾದ್ Janashakthi Media