ಬೆಂಗಳೂರು: ಕರ್ನಾಟಕ ಮತ್ತೊಮ್ಮೆ ಕೋವಿಡ್-19ರ ಎರಡನೇ ಅಲೆಯಿಂದ ಇಡೀ ರಾಜ್ಯ ತೀವ್ರವಾಗಿ ಬಾಧಿತರಾಗಿರುವುದು ಸಂಗತಿಯಾಗಿದೆ. ಈಗ ಮತ್ತೆ ಲಾಕ್‌ಡೌನ್ ಘೋಷಣೆಯಿಂದಾಗಿ ರಾಜ್ಯದ ಸಮಸ್ತ ಜನತೆ ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಡವರು, ಮಹಿಳೆಯರು ಮತ್ತು ದೇವದಾಸಿ ಮಹಿಳೆಯರು ಅವರ ಕುಟುಂಬಗಳು ತೀವ್ರವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ಪರಿಹಾರದ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಮಂತ್ರಿಗಳಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಮುಖ ಹತ್ತೊತ್ತಾಯಗಳ ಸಲ್ಲಿಸುವ ಮೂಲಕ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಗೌರವಾಧ್ಯಕ್ಷರಾದ ಯು.ಬಸವರಾಜು, ಅಧ್ಯಕ್ಷರಾದ ಟಿ.ವಿ.ರೇಣುಕಾ, ಪ್ರಧಾನ ಕಾರ್ಯದರ್ಧಿ ಬಿ.ಮಾಳಮ್ಮ ಅವರು ಮನವಿಯನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿ: ನಿರ್ದಯಿ………….. ನಿಷ್ಕರುಣಿ!
ಕೋವಿಡ್-19 ಎರಡನೇ ಅಲೆಯ ಸೋಂಕಿನ ಬೆಳವಣಿಗೆಯ ಅಪಾಯದ ಕುರಿತು ತಜ್ಞರು ಮಾಹಿತಿ ನೀಡಿದ್ದರೂ ಸಹ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಕಾಲಿಕ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೇ ಉದಾಸೀನ ಮಾಡಿದುದು ತೀವ್ರ ಖಂಡನೀಯವಾಗಿದೆ. ಸರಕಾರಗಳ ನಿರ್ಲಕ್ಷ್ಯದಿಂದಾಗಿ ರಾಜ್ಯದ ಜನತೆ ಈ ಸಾಂಕ್ರಾಮಿಕಕ್ಕೆ ವ್ಯಾಪಕವಾಗಿ ಬಲಿಯಾಗುವಂತಾಗಿದೆ. ಅದರ ಹೊಣೆಗಾರಿಕೆ ಸರಕಾರದ್ದೆ ಆಗಿರುತ್ತದೆ.
ಆಳುವ ಸರಕಾರವು ಕೇವಲ ತೋರಿಕೆಯ ಆತಂಕವನ್ನು ಕಪಟತನದಿಂದ ವ್ಯಕ್ತಪಡಿಸುತ್ತಿರುವುದನ್ನು ಬಿಟ್ಟರೇ, ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೈಗೊಂಡ ಕ್ರಮಗಳು ಏನೇನು ಇಲ್ಲವಾಗಿದೆ. ಜಗತ್ತಿನ ಅನುಭವದಂತೆ ಮಾರ್ಪಾಟುಗೊಂಡ ಅಥವಾ ಎರಡನೇ ಅಲೆಯ ವೈರಾಣು ಧಾಳಿ ನಿಯಂತ್ರಿಸಲು, ಅದನ್ನು ಎದುರಿಸಲು ಬೇಕಾದ ಸಿದ್ಧತೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿಕೊಳ್ಳಲಿಲ್ಲವೆಂದು ಹೇಳಲೇಬೇಕಾಗಿದೆ ಎಂದು ಸಂಘವು ಆರೋಪಿಸಿದೆ.
ಕಳೆದ ವರ್ಷದ ಕೋವಿಡ್ ಧಾಳಿಯ ಅನುಭವವನ್ನು ಕ್ರೋಢೀಕರಿಸಿಕೊಂಡು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿಲ್ಲವೇಕೆ ಎಂದು ಜನತೆಗೆ ಸರಕಾರ ನಡೆಸುತ್ತಿರುವ ಬಿಜೆಪಿ ಪಕ್ಷವು ಉತ್ತರಿಸಬೇಕೆಂದು ಕೇಳಿದ್ದಾರೆ.
ಇದನ್ನು ಓದಿ: ಕಣ್ಣೆದುರಿನ ವಾಸ್ತವಕ್ಕೆ ಕುರುಡಾಗುವುದು ಬೇಡ
ತೀವ್ರರೀತಿಯಲ್ಲಿ ಬೆಳೆಯುತ್ತಿರುವ ಸೋಂಕಿತರ ಸಂಖ್ಯೆಗೆ ಅನುಸಾರವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ವೆಂಟಿಲೇಟರ್ ಗಳು, ಆಮ್ಲಜನಕ, ಔಷಧಿಗಳು ಮತ್ತು ಶೂಶೃಕರು ದೊರೆಯುತ್ತಿಲ್ಲವೆಂಬುದು ಸೋಂಕಿತರ ಹಾಗೂ ಅವರ ಕುಟುಂಬದ ಸದಸ್ಯರ ಅಳಲಾಗಿದೆ. ಇದರಿಂದಾಗಿ ಹಲವು ಸೋಂಕಿತರು ಮರಣ ಹೊಂದಿದ್ದಾರೆ. ಖಾಸಗೀ ಆಸ್ಪತ್ರೆಗಳು, ಜನಗಳ ಈ ದುಸ್ಥಿತಿಯನ್ನು ಬಳಸಿಕೊಂಡು ಸುಲಿಗೆಗೆ ಇಳಿದಿವೆ. ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟಮಾಡಲು ಬಿಡಲಾಗಿದೆ ಎಂದು ವಸ್ತುಸ್ಥಿತಿಯನ್ನು ಮನವಿಯಲ್ಲಿ ತಿಳಿಸಿದ್ದಾರೆ.
ಮೊದಲೇ ರಾಜ್ಯವು ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಜೊತೆಗೆ ಕಳೆದ ಎರಡು- ಮೂರು ವರ್ಷಗಳ ಬರಗಾಲ ಮತ್ತು ಪ್ರವಾಹಗಳು ಇನ್ನಷ್ಟು ಸಂಕಷ್ಟಗಳನ್ನು ಜನತೆಯ ಮೇಲೆ ಅದಾಗಲೇ ಹೇರಿದ್ದವು. ಕಳೆದ ವರ್ಷದಿಂದ ಈ ಕೋವಿಡ್ ಬಾಧೆ, ಅವೈಜ್ಞಾನಿಕ ಲಾಕ್‌ಡೌನ್ ಅದರ ದುಷ್ಪರಿಣಾಮಗಳು ಮತ್ತು ಇದೀಗ ಮುಂದುವರೆದ ವೈರಸ್ ದಾಳಿ ಅದನ್ನೆದಿರಿಸಲು ಮತ್ತೊಮ್ಮೆ ಮುಂಜಾಗ್ರತಾ ಕ್ರಮಗಳಿಲ್ಲದ ಲಾಕ್‌ಡೌನ್ ಘೋಷಣೆ ರಾಜ್ಯವನ್ನು ಮತ್ತಷ್ಟು ನಲುಗುವಂತೆ ಮಾಡಿದೆ ಎಂದು ಸರಕಾರದ ಕ್ರಮವನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಖಂಡಿಸಿದೆ.
ಇದನ್ನು ಓದಿ: ಕೋವಿಡ್ ಬಿಕ್ಕಟ್ಟು: ಜನವಾದಿಯಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ
ಜನತೆಯ ಸಂಕಷ್ಟಗಳಿಗೆ ಕಿವಿಗೊಡದ ಸರಕಾರವು ಜನತೆಯೇ ಪರಿಹರಿಸಿಕೊಳ್ಳುವಂತೆ ಅವರ ಮೇಲೆಯೇ ನಿರ್ಧಯಿಯಾಗಿ ವರ್ತಿಸುತ್ತಿವೆ. ಸಾಮಾನ್ಯರು, ಬಡವರು, ತಮ್ಮ ಬಳಿ ಇದ್ದ ಸಣ್ಣ ಪುಟ್ಟ ಆಸ್ತಿಗಳನ್ನು ಉಳ್ಳವರಿಗೆ ದುಬಾರಿ ಬಡ್ಡಿಯ ಸಾಲಕ್ಕಾಗಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಮತ್ತು ಸಾಲಬಾಧಿತರಾಗಿದ್ದಾರೆ. ಇದರಿಂದ ಶ್ರೀಮಂತರು ಭಾರೀ ಶ್ರೀಮಂತರಾದರು, ಬಡವರು ಮತ್ತಷ್ಟು ಕಡುಬಡವರಾಗುತ್ತಿದ್ದಾರೆ. ಈಗ ರಾಜ್ಯವು ಮರಳಿ ಮತ್ತಷ್ಟು ದುಸ್ಥಿತಿಯ ಕಡೆ ಚಲಿಸುವಂತಾಗಿದೆ.
ಒಂದೆರಡು ತಿಂಗಳಿನಿಂದ ಉದ್ಯೋಗ ಹರಸಿ ಹೊರಟಿದ್ದ ವಲಸೆ ಕಾರ್ಮಿಕರು, ಬೆಳೆಯುತ್ತಿರುವ ಸೋಂಕಿನ ಕಾರಣದಿಂದ ಆತಂಕಗೊಂಡು ಮರಳಿ ಸ್ವಂತ ಊರುಗಳ ಕಡೆ ಮುಖ ಮಾಡುತ್ತಿದ್ದಾರೆ. ಈಗಿನ ಲಾಕ್‌ಡೌನ್ ಕಾರಣದಿಂದ ನಿರುದ್ಯೋಗ ಮತ್ತೊಮ್ಮೆ ಬೃಹದಾಕಾರವಾಗಿ ಬೆಳೆಯಲಿದೆ. ಇವರಿಗೆ ಯಾವುದೇ ಪರಿಹಾರವನ್ನು ಘೋಷಿಸಿಲ್ಲ.
ಮತ್ತೊಂದು ಕಡೆ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿ ಮಾಡುತ್ತಿರುವ ಲೂಟಿ ಕೋರ ಕಾರ್ಪೋರೇಟ್ ಪರವಾದ ನೀತಿಗಳು, ಜನತೆಯನ್ನು ಇನ್ನಷ್ಠು ಆತಂಕಿತರನ್ನಾಗಿಸಿ ಇಂತಹ ವೈರಾಣು ಧಾಳಿಯ ನಡುವೆಯೂ ಅವರು ಬೀದಿಗಿಳಿಯುವಂತೆ ಬಲವಂತ ಮಾಡಿದೆ.
ಇದನ್ನು ಓದಿ: ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ
ಆದ್ದರಿಂದ, ರಾಜ್ಯವನ್ನು ಇಂತಹ ದುಸ್ಥಿತಿಯಿಂದ ಮತ್ತು ತೀವ್ರತರವಾದ ಆತಂಕಗಳಿಂದ ಮೇಲೆತ್ತಲು ಮತ್ತು ಈ ಸಂಕಷ್ಟಗಳನ್ನು ಜನತೆ ಐಕ್ಯತೆಯಿಂದ ಎದುರಿಸುವಂತಾಗಲು, ಈ ಕೂಡಲೇ, ರಾಜ್ಯದಲ್ಲಿ ಕೋವಿಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಕೆಳಕಂಡ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಒತ್ತಾಯಿಸುತ್ತದೆ.
ಹಕ್ಕೊತ್ತಾಯಗಳು:
- ರೈತರು ಹಾಗೂ ಕಾರ್ಮಿಕರ ಮತ್ತು ನಾಗರೀಕರ ವಿರೋಧಿಯಾದ ಕಾಯ್ದೆಗಳು, ಭೂಸುಧಾರಣಾ ತಿದ್ದುಪಡಿ ಕಾಯ್ದೆ – 2020, ಏಪಿಎಂಸಿ ತಿದ್ದುಪಡಿ ಕಾಯ್ದೆ- 2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಮತ್ತು ಕಾರ್ಮಿಕ ಸಂಹಿತೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಗಳನ್ನು ತಕ್ಷಣ ವಾಪಾಸು ಪಡೆಯಬೇಕು.
- ಕೋವಿಡ್ ಸೋಂಕಿತರಿಗೆ ಉಚಿತ ಶೂಶೃಷೆ ಒದಗಿಸಲು ಮತ್ತು ಖಾಸಗೀ ಆಸ್ಪತ್ರೆಗಳ ಸುಲಿಗೆಗಳಿಂದ ರಕ್ಷಿಸಲು ಎಲ್ಲಾ ಖಾಸಗೀ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಸರಕಾರದ ವಶಕ್ಕೆ ಪಡೆಯಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಅರ್ಧದಷ್ಠು ಹಾಸಿಗೆಗಳನ್ನು ಕೋವಿಡ್ ಬಾಧಿತರಿಗೆ ಮೀಸಲಿಡಬೇಕು. ಮುಂಜಾಗ್ರತೆಯ ಕ್ರಮವಾಗಿ, ಶಾಲಾ ಕಾಲೇಜ್, ಹಾಸ್ಟೆಲ್ ಹಾಗೂ ಕಲ್ಯಾಣ ಮಂಟಪ, ಹೋಟೆಲ್ ಮುಂತಾದವುಗಳನ್ನು ಆಸ್ಪತ್ರೆಗಳಾಗಿ ಬಳಸಲು ಅಗತ್ಯ ಸಿದ್ಧತೆಯನ್ನು ಕೈಗೊಳ್ಳಬೇಕು. ಈ ಎಲ್ಲದರ ನಿರ್ವಹಣೆಗೆ ಅಗತ್ಯ ಸಿಬ್ಬಂದಿ, ಔಷಧಿ ಹಾಗೂ ಅದಕ್ಕಾಗಿ ಹಣಕಾಸು ನೆರವನ್ನು ಘೋಷಿಸಬೇಕು. ರಾಜ್ಯದ ಎಲ್ಲ ವಯೋಮಾನದವರಿಗೆ ಕೇಂದ್ರ ಸರಕಾರ ಉಚಿತವಾಗಿ ಲಸಿಕೆಯನ್ನು ಒದಗಿಸಬೇಕು.
- ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳಿಗೆ ಮತ್ತು ದೇವದಾಸಿ ಮಹಿಳೆಯರ ಕುಟುಂಬಗಳಿಗೆ ಮಾಸಿಕ 10,000 ರೂ.ಗಳ ನೆರವು ಒದಗಿಸಬೇಕು. ಈ ಎಲ್ಲರಿಗೆ ತಲಾ 10 ಕೆಜಿ ಸಮಗ್ರ ಆಹಾರಧಾನ್ಯಗಳನ್ನು ಮತ್ತು ಕೋವಿಡ್ ಸುರಕ್ಷಿತ ಕ್ರಮಗಳನ್ನು ಕನಿಷ್ಟ ಮುಂದಿನ ಆರು ತಿಂಗಳವರೆಗೆ ಒದಗಿಸಬೇಕು. ನ್ಯಾಯಬೆಲೆ ಅಂಗಡಿಗಳ ಬಿಪಿಎಲ್ ಕಾರ್ಡದಾರರ ತಲಾ ಪಡಿತರವನ್ನು 2 ಕೆಜಿಗೆ ಕಡಿತ ಮಾಡಿರುವುದನ್ನು ವಾಪಾಸು ಪಡೆಯಬೇಕು.
- ಎಲ್ಲಾ ದೇವದಾಸಿ ಮಹಿಳೆಯರ ಸಾಮಾಜಿಕ ಪಿಂಚಣಿದಾರರ ಬಾಕಿ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಈ ಮಾಸಿಕ ಸಹಾಯಧನವನ್ನು ಕನಿಷ್ಠ 3,000 ರೂಗಳಿಗೆ ಹೆಚ್ಚಿಸಬೇಕು.
- ಗಣತಿಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಎಲ್ಲಾ ವಯೋಮಾನದ ದೇವದಾಸಿ ಮಹಿಳೆಯರನ್ನು ಕೂಡಲೇ ಗಣತಿ ಪಟ್ಟಿಗೆ ಸೇರ್ಪಡೆ ಮಾಡಿ ನೆರವು ನೀಡಬೇಕು.
- ದೇವದಾಸಿ ಮಹಿಳೆಯರಿಗೆ ಇದುವರೆಗೆ ನೀಡಲಾಗಿತ್ತಿದ್ದ ಸಾಲದ ಸಹಾಯಧನದಲ್ಲಿ 50 ಸಾವಿರ ರೂಗಳು ಕಡಿತ ಮಾಡಿರುವುದನ್ನು ವಾಪಾಸು ಪಡೆಯಬೇಕು ಮತ್ತು ಹಿಂದಿನಂತೆ ಒಂದು ಲಕ್ಷ ರೂ ಸಹಾಯಧನದಂತೆ ಮಗದೊಮ್ಮೆ ಎಲ್ಲಾ ದೇವದಾಸಿ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ಮುಂದುವರೆಸಬೇಕು. ದೇವದಾಸಿ ಮಹಿಳೆಯರ ಮಕ್ಕಳ ನಡುವಿನ ವಿವಾಹಕ್ಕೂ ಪ್ರೋತ್ಸಾಹ ಧನವನ್ನು ವಿತರಿಸಬೇಕು.
- ಉದ್ಯೋಗ ಖಾತ್ರಿ ಕೆಲಸವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಕನಿಷ್ಠ 200 ದಿನಗಳ ಕಾಲ ಶ್ರಮದಿನ ಹಾಗೂ ರೂ. 424 ಗಳ ಕನಿಷ್ಠ ಕೂಲಿಯಂತೆ ಕೋವಿಡ್ ಸುರಕ್ಷತೆಯೊಂದಿಗೆ ಜಾರಿಗೊಳಿಸಲು ಕ್ರಮವಹಿಸಬೇಕು. ಅಗತ್ಯ ಹಣಕಾಸು ಒದಗಿಸಬೇಕು.
- ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ನೀಡಿ ಸರಕಾರವೇ ನೇರವಾಗಿ ಖರೀದಿಸಬೇಕು. ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯ ಪ್ರಸ್ಥಾಪವನ್ನು ವಾಪಾಸಾಗುವಂತೆ ಕ್ರಮವಹಿಸಬೇಕು.
- ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಉತ್ಪಾದಕ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಬೇಕು. ಅಗತ್ಯ ಸೇವೆಯಲ್ಲೂ ಶೇ 50 ರಷ್ಟು ಸಿಬ್ಬಂದಿಯನ್ನು ಸುರಕ್ಷತಾ ಕ್ರಮಗಳೊಂದಿಗೆ ಬಳಸಬೇಕು.
- ವೃದ್ಧರು ಅಂಗವಿಕಲರು, ಒಂಟಿ ಜೀವನ ನಡೆಸುವ ಅಸಹಾಯಕರುಗಳನ್ನು ಗುರುತಿಸಿ ಅವರಿಗೆ ನೇರ ಊಟದ ಪಾಕೇಟ್ ಗಳನ್ನು ವಹಿಸಲು ಕ್ರಮಕೈಗೊಳ್ಳಬೇಕು.
- ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳ ಎಲ್ಲ ರೀತಿಯ ಸಾಲಗಳನ್ನು ಕೂಡಲೇ ಮನ್ನಾ ಮಾಡಬೇಕು.
- ಕೋವಿಡ್ ಮರಣಗಳಿಗೆ ಕನಿಷ್ಠ 10 ಲಕ್ಷ ರೂಗಳ ಪರಿಹಾರವನ್ನು ಘೋಷಿಸಬೇಕು.
ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.