ಹಣ ಕಳ್ಳತನ ಪ್ರಕರಣ : ದೂರು ಕೊಟ್ಟವನೇ ಆರೋಪಿ

ಬೆಂಗಳೂರು: ದೂರು ನೀಡಲು ಹೋದವನನ್ನೇ ಆರೋಪಿಯೆಂದು ಪೋಲೀಸರು ಜೈಲಿಗಟ್ಟಿದ್ದಾರೆ.ಈ ಘಟನನೆ ಬೆಂಗಳೂರಿನ ಹೊರವಲಯ ಆನೇಕಲ್‌ ತಾಲೂಕಿನ ಬನ್ನೇರುಘಟ್ಟದಲ್ಲಿ ನಡೆದಿದೆ.

ಬನ್ನೇರುಘಟ್ಟದ  ನಿವಾಸಿ ಶಂಕರಪ್ಪ  ಮನೆಯಲ್ಲಿ ಇಟ್ಟಿದ್ದ ತನ್ನ ಸ್ನೇಹಿತನ 24 ಲಕ್ಷ ಹಣ ಕಳುವಾಗಿದೆ ಎಂದು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ (Police station) ದೂರು ನೀಡಿದ್ದಾನೆ‌. ಮಾಟ ಮಂತ್ರ ಮಾಡಿ ಮನೆಯಲ್ಲಿದ್ದ ಸ್ನೇಹಿತನ ಹಣ ಕಳ್ಳತನ ಮಾಡಿದ್ದಾರೆಂದು ಶಂಕರಪ್ಪ ದೂರು ನೀಡಿರುತ್ತಾನೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು  ಶಂಕ್ರಪ್ಪ ಮತ್ತು ಹೆಂಡತಿ ಮಕ್ಕಳನ್ನು ವಿಚಾರಣೆ ನಡೆಸಿದಾಗ ಮಾಟ ಮಂತ್ರದ  ಜೊತೆಗೆ  ಈ ವಿಚಾರವನ್ನು ಯಾರಿಗಾದರು ತಿಳಿಸಿದರೆ ಒಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಸಾವು ನೋವುಗಳು ಸಂಭವಿಸುತ್ತವೆ ಎಂದು ಚೀಟಿ ಸಿಕ್ಕಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಪೋಲೀಸರು ತನಿಖೆ ಶುರು ಮಾಡಿದಾಗ ಕಳ್ಳತನವಾದ ಸಮಯದಲ್ಲಿ ಬಾಗಿಲು ಬೀಗ ಒಡೆದಿಲ್ಲವೆಂದು, ಮನೆ ಮಂದಿ ಬಿಟ್ಟು ಹೊರಗಿನವರು ಬಂದ  ಕುರುಹು ಇಲ್ಲವೆಂದು ಗೊತ್ತಾಗಿದೆ. ಶಂಕರಪ್ಪನ ಮೇಲೆ ಅನುಮಾನ ಬಂದ ಪೋಲೀಸರು, ಮೊಬೈಲ್ ಸಿಡಿಆರ್ ಮತ್ತು ಲೋಕೆಷನ್ ಅಧಾರದ ಮೇಲೆ ತನಿಖೆ ನಡೆಸಿದಾಗ ಆರೋಪಿ ಶಂಕರಪ್ಪನ ನಿಜ ಬಣ್ಣ ಬಯಲಾಗಿದೆ.

ಕ್ಯಾಬ್  ಚಾಲಕನಾಗಿದ್ದ ಆರೋಪಿ ಶಂಕರಪ್ಪ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದು, ಜೊತೆಗೆ ಸಾಕಷ್ಟು ಸಾಲಗಳನ್ನು ಮಾಡಿದ್ದರಿಂದ ಸಾಲಗಾರರ ಕಾಟ ಹೆಚ್ಚಾಗಿತ್ತು. ಆಗ ತನ್ನ ಸ್ನೇಹಿತ ಗುರುಪ್ರಸಾದ್ ಈತನ ಮನೆಯಲ್ಲಿಟ್ಟಿದ್ದ 24 ಲಕ್ಷ ಹಣವನ್ನು  ಚೀಟಿಯವರಿಗೆ ಮತ್ತು ಸಾಲಗಾರರಿಗೆ ನೀಡಿ ಸಾಲ ತೀರಿಸಿಕೊಂಡಿರುತ್ತಾನೆ . ಬಳಿಕ ಸ್ನೇಹಿತನಿಗೆ ಹಣ ಕಳುವಾಗಿದೆ ಎಂದು  ನಂಬಿಸಲು ತಡರಾತ್ರಿ ತಾನೇ ಮನೆ ಬಳಿ ಬಂದು ತೆಂಗಿನಕಾಯಿ ಹೊಡೆದು ಅದಕ್ಕೆ ಅರಿಶಿನ ಕುಂಕುಮ ಹಚ್ಚಿ, ಬಾಳೆಹಣ್ಣು ಚಿಪ್ಪು ಜೊತೆ ಖಾಲಿಯಾದ  ಹಣದ ಚೀಲ ಮತ್ತು ಚೀಟಿಯನ್ನು ಇಟ್ಟು ಕಾರು ಬಾಡಿಗೆಗೆ ಹೊರಟು ಹೋಗುತ್ತಾನೆ.

ಬೆಳಗ್ಗೆ ಮಾಟ ಮಂತ್ರ ಕಂಡು ಹೆದರಿದ  ಮನೆಯವರು  ಶಂಕರಪ್ಪನಿಗೆ ತಿಳಿಸಿದಾಗ, ತನಗೆ  ಏನು ತಿಳಿಯದಂತೆ ನಟಿಸಿರುತ್ತಾನೆ. ಆದರೆ ಪೊಲೀಸರ ತನಿಖೆ ವೇಳೆ ಹಣಕ್ಕಾಗಿ ಶಂಕರಪ್ಪ ಮಾಟ ಮಂತ್ರದ ನಾಟಕವಾಡಿ ತಾನೇ ಹಣವನ್ನು ನುಂಗಿಯಾಕಿರುವುದು ಪತ್ತೆಯಾಗಿದೆ. ಕೊನೆಗೆ ಹಣವನ್ನು ಜಪ್ತಿ ಮಾಡಿರುವ ಬನ್ನೇರುಘಟ್ಟ ಪೊಲೀಸರು ಆರೋಪಿ ಶಂಕರಪ್ಪನನ್ನು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *