ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಮಾರ್ಚ್ 2 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ಕೆಲಸ ಕೊಡಿಸುತ್ತೇನೆಂದು ಯುವತಿಗೆ ರಮೇಶ್ ಜಾರಕಿಹೊಳಿ ವಂಚಿಸಿದ್ದಾರೆ ಎಂದು ಕಲ್ಲಹಳ್ಳಿ ದೂರು ನೀಡಿದ್ದರು. ಅದಲ್ಲದೇ ಯುವತಿಯ ಜೊತೆ ರಮೇಶ್ ಇದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋ ಬಹಿರಂಗವಾಗಿ, ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ತಮ್ಮ ವಕೀಲರ ಮೂಲಕ ಪೊಲೀಸ್ ಠಾಣೆಗೆ ದೂರು ಹಿಂತೆಗೆದುಕೊಳ್ಳಲು ಅರ್ಜಿ ಸಲ್ಲಿಸಿದ್ದು, ಕೇವಲ ಆರೇ ದಿನಗಳಲ್ಲಿ ದಿನೇಶ್ ಕಲ್ಲಹಳ್ಳಿ ಯೂಟರ್ನ್ ತೆಗೆದುಕೊಂಡಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಈ ಕೇಸ್‌ನ್ನು ದಿನೇಶ್ ಕಲ್ಲಹಳ್ಳಿ ಅವರು ದಿಢೀರ್ ವಾಪಸ್ ಪಡೆದುಕೊಂಡಿದ್ದೇಕೆ? ಏನಾದ್ರೂ ಒತ್ತಡಗಳಿಂದ ಕೇಸ್ ವಿತ್ ಡ್ರಾ ಮಾಡಿಕೊಂಡ್ರಾ? ಬೆದರಿಕೆಗಳಿಗೆ ಹೆದರಿದ್ರಾ..? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ದೂರು ಹಿಂಪಡೆದ ಬಗ್ಗೆ ಸ್ವತಃ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ. ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನಮ್ಮ ವಕೀಲರು ಹೋಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದರಿಂದ ನನಗೆ ತುಂಬ ಆಘಾತವಾಗಿದ್ದು, ಜನರಿಗೆ ನನ್ನ ಮೇಲೆ ಅನುಮಾನಗಳು ಹುಟ್ಟಿಕೊಂಡಿವೆ. ಹಾಗಾಗಿ ನಾನು ದೂರನ್ನು ವಾಪಸ್ ಪಡೆಯುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.