2022 ಏಪ್ರಿಲ್ 16-17ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜರುಗಿದ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಜನತೆಯ ಸಂಕಷ್ಟಗಳಿಗೆ ಸರಕಾರ ಸ್ಪಂದಿಸುವಂತೆ ಮಾಡುವಲ್ಲಿ ಬೆನ್ನು ತೋರಿಸಿರುವುದು ಸ್ಪಷ್ಟ. ಜನತೆಯ ಯಾವ ಪ್ರಶ್ನೆಗಳೂ ಅಲ್ಲಿ ಚರ್ಚೆಗೆ ಬರಲಿಲ್ಲ. ಮುಂದಿನ ವರ್ಷದಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯ ತಂತ್ರಗಳನ್ನು ಜಾರಿಗೊಳಿಸುವುದಷ್ಟನ್ನೇ ಮುಖ್ಯ ಅಜೆಂಡಾವಾಗಿಸಿಕೊಂಡ ಈ ಕಾರ್ಯಕಾರಿಣಿ ಜನತೆಯ ಜೀವನದ ಪ್ರಶ್ನೆಗಳನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ. ಮಾತ್ರವಲ್ಲ, ದಿನ ದಿನವೂ ಬಯಲಾಗುತ್ತಿರುವ ಭಾರೀ ಭ್ರಷ್ಟಾಚಾರ, ಹಗರಣಗಳು, ವೈಫಲ್ಯಗಳು, ಬಿಜೆಪಿ ಸರಕಾರ ಅನುಸರಿಸುತ್ತಿರುವ ದಿವಾಳಿಖೋರ ನೀತಿಗಳಿಗೆ ಬಂದಿರುವ ಟೀಕೆಗಳಿಗೆ, ಆರೋಪಗಳಿಗೆ ಉತ್ತರದಾಯಿತ್ವ ತೋರಲಿಲ್ಲ. ಬದಲಾಗಿ ಇವೆಲ್ಲವನ್ನೂ ಮರೆ ಮಾಚಲು ರಾಜ್ಯದಲ್ಲಿ ಈಗಾಗಲೇ ಸಂಘಪರಿವಾರ ನಡೆಸಿರುವ ಕೋಮುವಾದೀ ಫ್ಯಾಶಿಸ್ಟ್ ಆಕ್ರಮಣಗಳಿಗೆ ಅನುಮೋದನೆಯನ್ನು ಈ ಕಾರ್ಯಕಾರಿಣಿ ನೀಡಿದೆ. ಅಂದರೆ ಸಂವಿಧಾನ, ಕಾನೂನು ಬದ್ಧ ಆಡಳಿತ ಕಾಯ್ದುಕೊಳ್ಳಬೇಕಿದ್ದ ಸರಕಾರ ಅದನ್ನು ಉಲ್ಲಂಘಿಸುವ ಕೃತ್ಯಗಳನ್ನು ಬೆಂಬಲಿಸಿದೆ.
ಕಾರ್ಯಕಾರಿಣಿ ಆರಂಭಗೊಳ್ಳುವ ಹೊತ್ತಿಗೆ ಸಚಿವ ಈಶ್ವರಪ್ಪ ಮತ್ತವರ ಆಪ್ತರು ಭಾಗಿಯಾದ, ಗುತ್ತಿಗೆದಾರ ಸಂತೋಷ್ ಪಾಟೀಲ ರ ಆತ್ಮಹತ್ಯೆಯ ಪ್ರಕರಣ ಘಟಿಸಿ ಈಶ್ವರಪ್ಪನವರನ್ನು ಬಂಧಿಸಲು ಹಾಗೂ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ತೀಕ್ಷ್ಣ ಕ್ರಮ ವಹಿಸಲು ಆಗ್ರಹವಿತ್ತು. ಇಂತಹುದೇ ಹಲವು ಭ್ರಷ್ಟಾಚಾರದ ಪ್ರಕರಣಗಳು ಹೊರ ಬಂದು 40 ಪರ್ಸೆಂಟ್ ಲಂಚದ ಸರಕಾರ ಎನ್ನುವುದು ಕೆಂದ್ರ ವಿಷಯವಾಗಿ ಹೋಗಿತ್ತು. ಮಠಗಳಿಗೆ ನೀಡಿದ ಅನುದಾನ ಪಡೆಯಲು ಶೇ. 30ರಷ್ಟು ಲಂಚ ನೀಡಬೇಕೆಂದು ಪೀಡಿಸುವ, ಅಳುಕಿಲ್ಲದೇ ಕಿತ್ತುಕೊಳ್ಳುವ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿಯವರೇ ಬಹಿರಂಗವಾಗಿ ಆರೋಪಿಸಿದ್ದರು. ರಾಜ್ಯದಲ್ಲಿ ಸಂಘಪರಿವಾರ ಮತ್ತು ಇದಕ್ಕೆ ಪೂರಕವಾಗಿ ಕೆಲವು ಮತೀಯ ಮೂಲಭೂತವಾದಿಗಳು ರಾಜ್ಯದಲ್ಲಿ ಉಂಟು ಮಾಡಿದ ಕೋಮುದ್ವೇಷ, ಅಶಾಂತಿ, ಗಲಭೆಗಳು ಸಾಮರಸ್ಯಕ್ಕೆ ಹಾನಿ ಮಾಡುತ್ತಿದ್ದ ನಿರಂತರ ದುರ್ಘಟನೆಗಳು ಹಾಗೂ ಅದಕ್ಕೆ ಸರಕಾರದ ನೇರ ಬೆಂಬಲ ಕಣ್ಣೆದುರೇ ಇದ್ದವು. ಪರಿಣಾಮವಾಗಿ, ರಾಜ್ಯದಲ್ಲಿ ಬಂಡವಾಳದ ಹೂಡಿಕೆ, ಅಭಿವೃದ್ದಿಗೆ ಆಗುತ್ತಿದ್ದ ಹಿನ್ನೆಡೆ, ಇತ್ಯಾದಿ ನಕಾರಾತ್ಮಕ ಪರಿಣಾಮಗಳ ಬಗ್ಗೆ ಉದ್ಯಮಿಗಳಿಂದ ತೀವ್ರ ಟೀಕೆಗಳು ವ್ಯಕ್ತಗೊಂಡಿದ್ದವು. ದೇಶ ವಿದೇಶಗಳಲ್ಲಿ ಕರ್ನಾಟಕದ ಇಮೇಜ್ ಗೆ ಮುಕ್ಕಾಗುತ್ತಿತ್ತು. ಬೆಲೆ ಏರಿಕೆಯ ಬಾಧೆಯಲ್ಲಿ ಜನ ತತ್ತರಿಸುತ್ತಿದ್ದುದು, ನಿರುದ್ಯೋಗದ ಹೆಚ್ಚಳ ಇಂತಹವುಗಳು ಕಾಡುತ್ತಿದ್ದವು, ಕಾಡುತ್ತಿವೆ. ತಾನೇ ಕೊಟ್ಟ ಭರವಸೆಯಂತೆ ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳಿಗೆ ಮೀಸಲಾತಿಯ ಶೇಕಡವಾರು ಹೆಚ್ಚಳದ ಬಗ್ಗೆ 70 ದಿನಗಳನ್ನು ದಾಟಿ ವಾಲ್ಮೀಕಿ ಪೀಠದ ಸ್ವಾಮೀಜಿ ಹಾಗೂ ವಿವಿಧ ಸಮುದಾಯಗಳು ಆಗ್ರಹಿಸುತ್ತಿರುವುದಕ್ಕೆ ಖಚಿತ ಭರವಸೆ ನೀಡಲಿಲ್ಲ. ಹೀಗಿರುವಾಗ ಜನತೆಯನ್ನು ಆಧರಿಸಿದ, ಜನಹಿತಕ್ಕೆ ನಿಜವಾಗಲೂ ಬದ್ದವಾದ ಉತ್ತರದಾಯಿತ್ವವುಳ್ಳ ಯಾವುದೇ ರಾಜಕೀಯ ಪಕ್ಷ ಇಂತಹ ಪ್ರಶ್ನೆಗಳಿಗೆ ಬೆನ್ನು ತೋರಿಸಲಾದೀತೆ? ಅನೈತಿಕ ಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿ ಕನಿಷ್ಠ ಚುನಾವಣೆಗೆ ಸಿದ್ಧವಾಗುವ ಮುನ್ನವಾದರೂ ಚುನಾವಣಾ ಪ್ರಣಾಳಿಕೆಯ ಜಾರಿಯ ಬಗ್ಗೆ ಸರಕಾರದ ಕ್ರಮಗಳನ್ನು ವಿಮರ್ಶಿಸಿ ಚರ್ಚಿಸಬೇಕಿತ್ತು. ಆದರೆ ಬಿಜೆಪಿ ಕಾರ್ಯಕಾರಿಣಿ ಇವೆಲ್ಲವನ್ನೂ ಪೂರ್ಣವಾಗಿ ನಿರ್ಲಕ್ಷಿಸಿತು.
ಎಲ್ಲಾ ರಂಗಗಳಲ್ಲಿ ಸಂಪೂರ್ಣ ವೈಫಲ್ಯವಾಗಿರುವ ಈ ಸರಕಾರಕ್ಕೆ ಮುಖ್ಯಮಂತ್ರಿ, ಮಂತ್ರಿಗಳಿಗೆ, ಪಕ್ಷದ ಅದ್ಯಕ್ಷ, ಪದಾಧಿಕಾರಿಗಳಿಗೆ ಚಾಟಿ ಬೀಸಬೇಕಾದ ರಾಷ್ಟ್ರೀಯ ಅದ್ಯಕ್ಷರೇ ಹದಗೆಟ್ಟು ಹಳ್ಳ ಹಿಡಿದಿರುವ `ಬೊಮ್ಮಾಯಿ ಸರಕಾರದ್ದು ಸುವರ್ಣ ಆಡಳಿತ’ ಎಂದು ಹಾಡಿ ಹರಸಿದ್ದು ಭ್ರಷ್ಟತೆಯಲ್ಲಿ ಶಾಮೀಲುತನದ ದಿಗ್ದರ್ಶನ ಹಾಗೂ ನೈತಿಕ, ತಾತ್ವಿಕ ದಿವಾಳಿತನದ ಪರಮಾವಧಿ. ಬಿಜೆಪಿ ಪಕ್ಷಕ್ಕೆ ಉತ್ತಮ ಆಡಳಿತ ಕೊಡಬೇಕೆನ್ನುವ ಕಾಳಜಿ, ಬದ್ಧತೆಗಿಂತ ಸಾರ್ವಜನಿಕ ಸಂಪತ್ತಿನ ಲೂಟಿ, ಕಾರ್ಪೋರೇಟ್ ಕಂಪನಿಗಳ ನಿಷ್ಠ ಸೇವೆ, ಜನರನ್ನು ಹಾದಿ ತಪ್ಪಿಸುವ, ಜನ ವಿಭಜಕ ವರಸೆಗಳೇ ಪ್ರಧಾನ ಲಕ್ಷ್ಯ ಎನ್ನುವುದನ್ನು ಯಾವುದೇ ಅಳುಕಿಲ್ಲದೇ ಕಾರ್ಯಕಾರಿಣಿ ಪ್ರತಿಪಾದಿಸಿತು. ಅದರೆ ಸಿ.ಟಿ. ರವಿಯಂತಹ `ರಾಷ್ಟ್ರೀಯ ನಾಯಕರು’ ಸರಕಾರದ ವೈಫಲ್ಯಗಳನ್ನು ವಿಮರ್ಶಿಸಿದ ವಿರೋಧ ಪಕ್ಷಗಳ ಮೇಲೆ ಧಾಳಿ ಮಾಡಿದರೇ ಹೊರತು ಆತ್ಮವಿಮರ್ಶೆಯತ್ತ ತಿರುಗಿಯೂ ನೋಡಲಿಲ್ಲ.
ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಅಖಿಲ ಭಾರತ ಅದ್ಯಕ್ಷ ಜೆ.ಪಿ. ನಡ್ಡಾ ರವರು ಗೃಹ ಸಚಿವ ಅಮಿತ್ ಶಾ ಹೇಳಿ ಹೋಗಿದ್ದ ಮಿಷನ್ 150 ರ ಯೋಜನೆಯನ್ನೇ ಪುನಃ ಪಾಠ ಹೇಳಿ ಹೋದರು.
ಮಾತ್ರವಲ್ಲ, ಹೈಕಮಾಂಡ್ ಹೇಳಿದಂತೆ ಪದಾಧಿಕಾರಿಗಳು ಕೇಳಬೇಕೆಂದೂ ತಾಕೀತು ಮಾಡಿದರು. ವಿಚಿತ್ರವೆಂದರೆ ಯಾವ ಪದಾಧಿಕಾರಿಯಾಗಲೀ, ಸಚಿವರಾಗಲೀ ಜನರ ಪ್ರಶ್ನೆಗಳು, ಸರಕಾರದ ಕಾರ್ಯ ವೈಖರಿ ಬಗ್ಗೆ ಚರ್ಚೆ ಇರಲಿ ಚಕಾರವನ್ನೇ ಎತ್ತಲಿಲ್ಲ. ಬದಲಾಗಿ ಮಂತ್ರಿಮಂಡಲದ ವಿಸ್ತರಣೆ, ಮಂತ್ರಿಯಾಗಲು ಲಾಬಿ, ಹಪಾಹಪಿತನಕ್ಕೆ ಈ ಸಂದರ್ಭ ಅವರಿಗೆ ವೇದಿಕೆಯಾದುದು ಮತ್ತೊಂದು ರಾಜಕೀಯ ವ್ಯಂಗ್ಯ. ಹೊಸಪೇಟೆಯಲ್ಲಿ ಕಾರ್ಯಕಾರಿಣಿಯನ್ನು ಭಾರೀ ಅದ್ಧೂರಿಯಾಗಿ ನಡೆಸುವ ಮೂಲಕ ಸಚಿವ ಆನಂದ್ ಸಿಂಗ್ ಮುನಿಸಿಕೊಂಡಿರುವ ಕೇಂದ್ರ ಹಾಗೂ ರಾಜ್ಯ ನಾಯಕರನ್ನು ಸಂತುಷ್ಟಗೊಳಿಸಲು ಒಂದು ಸಂದರ್ಭವಾಗಿ ಬಳಸಿಕೊಂಡಿದ್ದಾರೆ ಎನ್ನುವುದೂ ಒಂದು ವಾಸ್ತವ. ಒಟ್ಟಾರೆ ಬಿಜೆಪಿ ಒಂದು ಹೊಣೆಗೇಡಿ, ವಂಚಕ ಜನವಿರೋಧಿ ಹಾಗೂ ಆಂತರಿಕವಾಗಿಯೂ ಅಪ್ರಜಾಸತ್ತಾತ್ಮಕ ಎನ್ನುವುದನ್ನು ಈ ಸಂದರ್ಭದಲ್ಲೂ ತೋರಿಸಿತು.